ಮಳೆಯಿಂದಾಗಿ ಹಾನಿ; ಸೆ.7ರಂದು ರಾಜ್ಯಕ್ಕೆ ಕೇಂದ್ರ ಅಧ್ಯಯನ ತಂಡ ಆಗಮನ: ಸಚಿವ ಆರ್.ಅಶೋಕ್
ಬೆಂಗಳೂರು, ಸೆ.5: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸತತವಾಗಿ ಸುರಿಯುತ್ತಿರುವ ಭಾರೀ ಪ್ರಮಾಣದ ಮಳೆಯಿಂದಾಗಿ ಆಗಿರುವ ಹಾನಿ ಕುರಿತು ಅಧ್ಯಯನ ನಡೆಸಲು ಕೇಂದ್ರ ಸರಕಾರದ ಹಿರಿಯ ಅಧಿಕಾರಿಗಳ ತಂಡವು ಸೆ.7 ರಿಂದ 9ರವರೆಗೆ ಪ್ರವಾಸ ಕೈಗೊಳ್ಳಲಿದೆ ಎಂದು ಕಂದಾಯ ಇಲಾಖೆ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರಕಾರದ ಹಿರಿಯ ಅಧಿಕಾರಿಗಳ ಮೂರು ತಂಡಗಳು ರಾಜ್ಯಕ್ಕೆ ಆಗಮಿಸಲಿದ್ದು, ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ಮಳೆ ಹಾಗೂ ನೆರೆಹಾವಳಿಯಿಂದಾಗಿ ಆಗಿರುವ ಬೆಳೆ ನಷ್ಟ ಹಾಗೂ ಮೂಲಸೌಕರ್ಯಗಳ ಹಾನಿ ಕುರಿತು ಅಧ್ಯಯನ ನಡೆಸಿ ಕೇಂದ್ರ ಸರಕಾರಕ್ಕೆ ವರದಿ ಸಲ್ಲಿಸಲಿವೆ ಎಂದರು.
ಕೇಂದ್ರ ಗೃಹ ಇಲಾಖೆ ಜಂಟಿ ಕಾರ್ಯದರ್ಶಿ ಆಶಿಶ್ ಕುಮಾರ್, ಕೇಂದ್ರ ಜಲ ಆಯೋಗದ ಹಿರಿಯ ಅಧಿಕಾರಿ ಅಶೋಕ್ ಕುಮಾರ್ ಮತ್ತು ಕೃಷಿ ಹಾಗೂ ರೈತರ ಕಲ್ಯಾಣ ಇಲಾಖೆ ನಿರ್ದೇಶಕ ಡಾ.ಕೆ.ಮನೋಹರನ್ ನೇತೃತ್ವದಲ್ಲಿ ಈ ಅಧ್ಯಯನ ತಂಡಗಳು ಆಗಮಿಸಲಿವೆ. ಆಶಿಶ್ ಕುಮಾರ್ ನೇತೃತ್ವದ ತಂಡ ಚಿತ್ರದುರ್ಗ, ಚಿಕ್ಕಮಗಳೂರು, ಹಾಸನ, ಅಶೋಕ್ ಕುಮಾರ್ ತಂಡ ಧಾರವಾಡ, ಗದಗ ಮತ್ತು ಹಾವೇರಿ ಹಾಗೂ ಕೆ.ಮನೋಹರನ್ ತಂಡ ಬೀದರ್, ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಲಿವೆ ಎಂದು ಅಶೋಕ್ ಮಾಹಿತಿ ನೀಡಿದರು.
ಐದು ನಿಮಿಷಗಳಲ್ಲಿ ನೋಂದಣಿ: ರಾಜ್ಯದಾದ್ಯಂತ ಆಸ್ತಿ ನೋಂದಣಿಗಾಗಿ ಜನರು ಉಪ ನೋಂದಣಾಧಿಕಾರಿಗಳ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಕೇವಲ ಐದೇ ನಿಮಿಷಗಳಲ್ಲಿ ನೋಂದಣಿ ಮಾಡುವ ಕಾವೇರಿ-2 ಕಾರ್ಯಕ್ರಮವನ್ನು ನ.1 ರಿಂದ ಜಾರಿಗೊಳಿಸಲಾಗುವುದು ಎಂದು ಅಶೋಕ್ ತಿಳಿಸಿದರು.
ಈ ಕಾರ್ಯಕ್ರಮದಡಿ ಜನರು ತಮ್ಮ ಆಸ್ತಿ ನೋಂದಣಿ ಮಾಡಿಸಲು ಉಪನೋಂದಣಾಧಿಕಾರಿಗಳ ಕಚೇರಿಗೆ ಅಲೆಯುವಂತಿಲ್ಲ. ಬದಲಿಗೆ ತಮ್ಮ ಮನೆಯಲ್ಲೆ ಕುಳಿತು ಆನ್‍ಲೈನ್ ಮೂಲಕ ಆಸ್ತಿ ನೋಂದಣಿ ಪ್ರಕ್ರಿಯೆಗೆ ಅರ್ಜಿ ಸಲ್ಲಿಸಬಹುದು. ಅರ್ಜಿಯ ಜತೆ ಅಗತ್ಯ ದಾಖಲೆಗಳನ್ನು ಸಲ್ಲಿಸಿದರೆ ಉಪನೋಂದಣಾಧಿಕಾರಿಗಳು ಅದನ್ನು ಪರಿಶೀಲಿಸುತ್ತಾರೆ ಎಂದು ಅವರು ಹೇಳಿದರು.
ಅರ್ಜಿಯಲ್ಲಿ ಏನಾದರೂ ಕೊರತೆ ಅಥವಾ ತಪ್ಪುಗಳಿದ್ದಲ್ಲಿ ಉಪ ನೋಂದಣಾಧಿಕಾರಿಗಳು ಅರ್ಜಿದಾರರಿಗೆ ಅಗತ್ಯ ಮಾಹಿತಿ ನೀಡುತ್ತಾರೆ. ಆನಂತರ ದಾಖಲೆ ಪತ್ರದ ನೋಂದಣಿಗೆ ಸಮಯಾವಕಾಶವನ್ನು ನಿಗದಿಪಡಿಸಲಾಗುತ್ತದೆ. ನಿಗದಿತ ಸಮಯಕ್ಕೆ ಸರಿಯಾಗಿ ಅರ್ಜಿದಾರರು ಉಪನೋಂದಣಾಧಿಕಾರಿ ಕಚೇರಿಗೆ ಹೋದರೆ ಅವರ ಬಯೋಮೆಟ್ರಿಕ್ ಹಾಗೂ ಸಹಿ ಪಡೆದು ನೋಂದಣಿ ಪ್ರಕ್ರಿಯೆಯನ್ನು ಐದೇ ನಿಮಿಷಗಳಲ್ಲಿ ಮುಗಿಸಲಾಗುತ್ತದೆ ಎಂದು ಅಶೋಕ್ ವಿವರಿಸಿದರು.
ಆಸ್ತಿ ನೋಂದಣಿ ಪ್ರಕ್ರಿಯೆ ಪೂರ್ಣಗೊಂಡ ತಕ್ಷಣ ಅರ್ಜಿದಾರರ ಡಿ.ಜಿ.ಲಾಕರ್‍ಗೆ ನೋಂದಾಯಿತ ಆಸ್ತಿಯ ಪ್ರತಿ ರವಾನೆಯಾಗುತ್ತದೆ. ಇದರಿಂದ, ಆಸ್ತಿ ನೋಂದಣಿ ನಂತರ ಅರ್ಜಿದಾರರು ಅದರ ಪ್ರತಿಯನ್ನು ಪಡೆಯಲು ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಕಾಯುವ ಅಗತ್ಯವಿರುವುದಿಲ್ಲ ಎಂದು ಅವರು ಹೇಳಿದರು.
ಮನೆ, ಕಟ್ಟಡ, ನಿವೇಶನ ಮತ್ತು ಭೂಮಿಯ ಖರೀದಿಯಲ್ಲಿ ಯಾರೂ ಮೋಸ ಹೋಗದಂತೆ ತಡೆಯಲು ರಾಜ್ಯ ಸರಕಾರವೆ ಏಜೆನ್ಸಿಗಳನ್ನು ಪ್ರಾರಂಭಿಸಲು ಉದ್ದೇಶಿಸಿದ್ದು, ಇದಕ್ಕೆ ಸಂಬಂಧಿಸಿದ ರೂಪುರೇಷೆಗಳು ಸಿದ್ಧವಾಗುತ್ತಿವೆ. ಆಸ್ತಿಗಳ ಖರೀದಿಯಲ್ಲಿ ಯಾವುದಾದರೂ ಸಮಸ್ಯೆ ಇದೆಯೇ? ಅಥವಾ ಸಮಸ್ಯೆ ಇಲ್ಲವೇ? ಎಂಬುದನ್ನು ಈ ಏಜೆನ್ಸಿ ಮಾಹಿತಿ ಒದಗಿಸುತ್ತದೆ ಎಂದು ಅಶೋಕ್ ತಿಳಿಸಿದರು.
ಆಸ್ತಿ ನೋಂದಣಿ ಮಾಡಿಸಲು ಶೇ.10ರಷ್ಟು ರಿಯಾಯ್ತಿ ನೀಡಿದ ಪರಿಣಾಮವಾಗಿ ಕಳೆದ ಮೂರು ತಿಂಗಳಲ್ಲಿ 6,700 ಕೋಟಿ ರೂ.ಗಳಿಗೂ ಅಧಿಕ ಹಣ ಸಂಗ್ರಹವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಅವಧಿಯಲ್ಲಿ 1,900 ಕೋಟಿ ರೂ.ಹೆಚ್ಚುವರಿ ಆದಾಯ ಸಂಗ್ರಹವಾಗಿದೆ. ಇದೊಂದು ಐತಿಹಾಸಿಕ ದಾಖಲೆ ಎಂದು ಅವರು ಹೇಳಿದರು.
ಕೊಡಗು, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಲ್ಲಿ ರೈತರು ಸುಮಾರು ಒಂದು ಲಕ್ಷ ಎಕರೆಗಳಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಒತ್ತುವರಿ ಮಾಡಿಕೊಂಡಿರುವ ಭೂಮಿಯನ್ನು ಆಯಾ ರೈತರಿಗೆ ಗುತ್ತಿಗೆ ಆಧಾರದ ಮೇಲೆ ಮಂಜೂರು ಮಾಡುವ ನಿಟ್ಟಿನಲ್ಲಿ ಮಸೂದೆಯನ್ನು ಸಿದ್ಧಪಡಿಸಲಾಗಿದ್ದು, ಸೆ.12ರಿಂದ ಆರಂಭವಾಗಲಿರುವ ವಿಧಾನಮಂಡಲದ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ಅಶೋಕ್ ಹೇಳಿದರು.
ಕೇಂದ್ರ ಸರಕಾರದಿಂದ 13,654 ಕೋಟಿ ರೂ. ಬಿಡುಗಡೆಯಾಗಿದ್ದು, 12,642 ಕೋಟಿ ರೂ.ಗಳನ್ನು ವಿಪತ್ತು ನಿರ್ವಹಣೆಗಾಗಿ ಖರ್ಚು ಮಾಡಲಾಗಿದೆ. ಸತತ ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆ, ಪ್ರಾಣ ಹಾನಿ ಹಾಗೂ ಮೂಲಭೂತ ಸೌಕರ್ಯ ಹಾನಿಯಾಗಿದೆ.
ಆರ್.ಅಶೋಕ್, ಕಂದಾಯ ಸಚಿವ