×
Ad

ಬೆಂಗಳೂರಿನಲ್ಲಿ 35 ವರ್ಷಗಳಲ್ಲೇ ಪ್ರಸಕ್ತ ವರ್ಷದಲ್ಲಿ ದಾಖಲೆ ಪ್ರಮಾಣದಲ್ಲಿ ಮಳೆಯಾಗಿದೆ: BBMP ಮಾಹಿತಿ

Update: 2022-09-05 20:48 IST

ಬೆಂಗಳೂರು, ಸೆ.5: ನಗರದಲ್ಲಿ ಕಳೆದ 35 ವರ್ಷಗಳಲ್ಲಿಯೇ ದಾಖಲೆ ಪ್ರಮಾಣದಲ್ಲಿ ಮಳೆಯಾಗಿದೆ. 1988ರಲ್ಲಿ 723 ಮಿ.ಮೀ. ಮಳೆಯಾಗಿತ್ತು. ಪ್ರಸ್ತಕ ವರ್ಷದಲ್ಲಿ 709 ಮಿ.ಮೀ. ಮಳೆಯಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ ಗಿರಿನಾಥ್ ತಿಳಿಸಿದ್ದಾರೆ. 

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಕಳೆದ 51 ವರ್ಷಗಳಲ್ಲಿಯೇ ಅಂದರೆ 1971ರಿಂದ 1988ನೇ ವರ್ಷವನ್ನು ಹೊರತುಪಡಿಸಿದರೆ, ಈ ವರ್ಷ ಅಧಿಕ ಮಳೆಯಾಗಿದೆ. 1988ರ ಜೂನ್‍ನಿಂದ ಸೆಪ್ಟೆಂಬರ್‍ವರೆಗೂ 723 ಮಿ.ಮೀ. ಮಳೆಯಾಗಿದೆ. ಈ ವರ್ಷದ ಜೂನ್‍ನಿಂದ ಸೆಪ್ಟೆಂಬರ್‍ವರೆಗೂ 709 ಮಿ.ಮೀ. ಮಳೆಯಾಗಿದೆ. ಎಂದಿಗಿಂತಲೂ ಈ ವರ್ಷ 2.75 ಪಟ್ಟು ಹೆಚ್ಚು ಮಳೆಯಾಗಿದೆ. ಪ್ರತಿ ವರ್ಷ ಸರಾಸರಿ 313 ಮಿ.ಮೀ. ಮಳೆಯಾಗುತ್ತಿತ್ತು. 2017ರಿಂದ ಇಲ್ಲಿಯವರೆಗೂ ಕೇವಲ ಸೆಪ್ಟೆಂಬರ್ ತಿಂಗಳನ್ನು ಮಾತ್ರ ಪರಿಗಣನೆಗೆ ತೆಗೆದುಕೊಂಡರೆ, ಈ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿಯೇ ಅಧಿಕ ಮಳೆಯಾಗಿದೆ. ಪ್ರಸಕ್ತ ವರ್ಷದ ಆಗಸ್ಟ್ ಕೊನೆಯ ವಾರ ಹಾಗೂ ಸೆಪ್ಟೆಂಬರ್ ಮೊದಲ ವಾರದಲ್ಲಿ ವಾಡಿಕೆಗಿಂತಲೂ 4 ಪಟ್ಟು ಹೆಚ್ಚು ಮಳೆಯಾಗಿದೆ ಎಂದರು. 

ಆ.30 ಮತ್ತು ಆ.31ರಂದು ನಗರದಲ್ಲಿ ಸುರಿದ ಮಳೆಯಿಂದಾಗಿ ಮಹದೇವಪುರ ಹಾಗೂ ಬೊಮ್ಮನಹಳ್ಳಿ ವಲಯದಲ್ಲಿ ಹೆಚ್ಚಿನ ಹಾನಿ ಸಂಭವಿಸಿದೆ. ಸೆ.4ರಂದು ಸುರಿದ ಮಳೆಯು ಇವೆರಡು ವಲಯವೂ ಸೇರಿ ಪೂರ್ವ ವಲಯದಲ್ಲೂ ಹಾನಿ ಸಂಭವಿಸಿದೆ. ಉಳಿದ ವಲಯಗಳಲ್ಲಿ ಅಷ್ಟೇನೂ ಹಾನಿ ಸಂಭವಿಸಿಲ್ಲ. ಮಹದೇವಪುರ ವಲಯದಲ್ಲಿ ಬಡಾವಣೆ, ವಸತಿ ಸಮುಚ್ಛಯ ಸೇರಿ 28 ಕಡೆ, ಬೊಮ್ಮನಹಳ್ಳಿಯಲ್ಲಿ 9 ಕಡೆ ಹಾನಿಯಾಗಿದೆ. ಪೂರ್ವ ವಲಯದಲ್ಲಿ 24 ಕಡೆ ನೀರು ನುಗ್ಗಿದ್ದು, ಬಹಳ ಬೇಗ ನೀರಿ ಹರಿದು ಹೋಗಿದೆ. ಇನ್ನು ದೊಮ್ಮಲೂರಿನ 100 ಅಡಿ ರಸ್ತೆಯಲ್ಲಿ ನಿಲ್ಲುವ ನೀರನ್ನು ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ಥೆ ಮಾಡಲಾಗುವುದು ಎಂದರು.

ಈಗಾಗಲೇ ಬೆಳ್ಳಂದೂರು ಕೆರೆ, ವಿಭೂತಿಪುರ ಕೆರೆ ತುಂಬಿದ್ದು, ಬೇಗೂರು ಕೆರೆ ತುಂಬುವ ಹಂತದಲ್ಲಿದೆ. ಔಟರ್ ರಿಂಗ್ ರೋಡ್‍ನಲ್ಲಿ ಈಗಲೂ ನೀರು ನಿಂತಿದೆ. ನಗರದಲ್ಲಿ ಹೆಚ್ಚು ಮಳೆಯಾಗುತ್ತಿರುವ ಕಾರಣ ಈಗ ಮನೆಗಳಿಗೆ ಹೋಗಿ ಹಾನಿಯ ಪ್ರಮಾಣವನ್ನು ತಿಳಿಯಲು ಸಾಧ್ಯವಿಲ್ಲ. ಬದಲಾಗಿ, ನೀರು ತುಂಬಿದ ಪ್ರದೇಶಗಳಲ್ಲಿನ ಜನರನ್ನು ರಕ್ಷಣೆ ಮಾಡಿ, ಅವರಿಗೆ ವಸತಿಯೂಟಕ್ಕೆ ವ್ಯವಸ್ಥೆ ಮಾಡಬೇಕಾಗಿದೆ. ನಂತರ ಪುನರ್ವಸತಿ ಕೆಲಸ ಮಾಡಲಾಗುತ್ತದೆ. ಇಡೀ ರಾಜ್ಯಕ್ಕೆ ಯಾವ ರೀತಿ ಪರಿಹಾರವನ್ನು ನೀಡಲಾಗುವುದೋ, ಹಾಗೆಯೇ ಬಿಬಿಎಂಪಿ ವ್ಯಾಪ್ತಿಯಲ್ಲಿ ಪರಿಹಾರ ನೀಡಲಾಗುವುದು ಎಂದು ಸ್ಪಷ್ಟಪಡಿಸಿದ ಅವರು, ಐಟಿಬಿಟಿ ಕಂಪನಿಗಳ ಸಂಘಟನೆಯು ತನ್ನ ಅಭಿಪ್ರಾಯವನ್ನು ಹಂಚಿಕೊಂಡಿದೆ. ಬಿಬಿಎಂಪಿಗೆ ಎಲ್ಲ ನಾಗರರಿಕರನ್ನು ಸಮಾನವಾಗಿ ಕಾಣುತ್ತದೆ ಎಂದರು. 

ಇದನ್ನೂ ಓದಿ:  ಬೆಂಗಳೂರು; ಜಲಾವೃತಗೊಂಡ ರಸ್ತೆಯಲ್ಲಿ ಸಿಲುಕಿದ್ದ ವ್ಯಕ್ತಿಯ ರಕ್ಷಣೆ

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News