ಕೋಮುವಾದದ ವಿರುದ್ಧ ಗೌರಿ ಮಾದರಿ ಹೋರಾಟ ನಡೆಸಬೇಕಾಗಿದೆ: ಅರುಂಧತಿ ರಾಯ್
ಬೆಂಗಳೂರು, ಸೆ.5: ಕೋಮುವಾದಿ, ಮೂಲಭೂತವಾದಿಗಳ ಕಾಲ ಇದಾಗಿದೆ. ಇವರು ಎಷ್ಟು ಮುಂದೆ ಸಾಗಿದ್ದಾರೆ ಎಂದರೆ, ಬೀದಿಗಳ ಜನರಲ್ಲೂ ವಿಷ ತುಂಬಿದ್ದಾರೆ. ಯಾವುದನ್ನೂ ಸಹ ಪ್ರಶ್ನೆ ಮಾಡಬಾರದು ಎನ್ನುವ ಮಟ್ಟಕ್ಕೆ ಬೆಳೆದಿದ್ದಾರೆ ಎಂದ ಅವರು, ಕಾಶ್ಮೀರದಲ್ಲಿ ಪ್ರಜಾಪ್ರಭುತ್ವವನ್ನೆ ನಾಶ ಮಾಡಿದ್ದಾರೆ. ಕೋಟ್ಯಾಂತರ ಜನರು ಧ್ವನಿಗೂಡಿಸದ ವ್ಯವಸ್ಥೆ ರೂಪಿಸಲಾಗಿದೆ. ಇದರ ವಿರುದ್ಧ ನಾವು ಗೌರಿ ಮಾದರಿ ಹೋರಾಟ ನಡೆಸಬೇಕಾಗಿದೆ ಎಂದು ಬೂಕರ್ ಪ್ರಶಸ್ತಿ ವಿಜೇತೆ, ಖ್ಯಾತ ಲೇಖಕಿ ಅರುಂಧತಿ ರಾಯ್ (Arundhati Roy) ಕರೆನೀಡಿದ್ದಾರೆ.
ಸೋಮವಾರ ನಗರದ ಅರಮನೆ ರಸ್ತೆಯ ಕೊಂಡಜ್ಜಿ ಸಭಾಂಗಣದಲ್ಲಿ ಗೌರಿ ಮೆಮೋರಿಯಲ್ ಟ್ರಸ್ಟ್ ಏರ್ಪಡಿಸಿದ್ದ ಹಿರಿಯ ಪತ್ರಕರ್ತೆ ದಿ.ಗೌರಿ ಲಂಕೇಶ್ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕೋಮುವಾದಿ ಶಕ್ತಿಗಳು ಈಗ 5 ಕೆಜಿ ಅಕ್ಕಿ, ಉಪ್ಪು ಸೇರಿದಂತೆ ಆಹಾರ ಧಾನ್ಯ ಕೊಡುವುದೇ ದೊಡ್ಡ ಅಪಾಯಕಾರಿ ಎಂದು ಬಿಂಬಿಸುತ್ತಿವೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಒಂದು ವೇಳೆ ಉಪ್ಪು ಉಚಿತವಾಗಿ ಹಂಚಿಕೆ ಮಾಡಿದರೆ, ’ಮತ ಕೊಟ್ಟು ಮೋದಿ ಉಪಕಾರ ತೀರಿಸಿ’ ಎಂದು ಹೇಳುವ ಮೂಲಕ ಇದನ್ನು ಮತಗಳಾಗಿ ಪರಿವರ್ತನೆ ಮಾಡುತ್ತಾರೆ ಎಂದು ಅರುಂಧತಿ ವಿಶ್ಲೇಷಣೆ ಮಾಡಿದರು.
ಜನರು ಅಭಿವೃದ್ಧಿ, ಬೆಲೆ ಏರಿಕೆ, ಶಿಕ್ಷಣ, ಆರೋಗ್ಯ ಸೇವೆಗಳಿಂದ ವಂಚಿತರಾದರೂ ಜಾತಿ ವ್ಯವಸ್ಥೆ, ಕೋಮುವಾದಿ ಚಿಂತನೆಗಳಿಂದ ಜನರು ಪುನಃ ಬಿಜೆಪಿ ಸರಕಾರವನ್ನು ಅಧಿಕಾರಕ್ಕೆ ತರುತ್ತಿದ್ದಾರೆ. ಹೀಗೆಯೇ ಮುಂದುವರೆದರೆ, ಭವಿಷ್ಯದಲ್ಲಿ ವಾಕ್ ಸ್ವಾತಂತ್ರ್ಯವೇ ಇಲ್ಲದಂತೆ ಆಗಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಖಂಡನೆ: ಬಿಲ್ಕಿಸ್ ಬಾನು ಅವರ ಪೂರ್ತಿ ಕುಟುಂಬ ಕೊಲೆಯಾಯಿತು. ಆಕೆ ಮೇಲೆ ಲೈಂಗಿಕ ದೌರ್ಜನ್ಯ ನಡೆಯಿತು. ಆನಂತರ, ನ್ಯಾಯಾಲಯ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ನೀಡಿದರೂ, ಅಪರಾಧಿಗಳನ್ನು ರಕ್ಷಣೆ ಮಾಡಲಾಗಿದೆ. ಇಂತಹ ವ್ಯವಸ್ಥೆಯ ಹಿಂದೆ ಪ್ರಪಂಚದ ಶ್ರೀಮಂತ ಪಕ್ಷ ಮತ್ತು ಬ್ರಾಹ್ಮಣರು ಇದ್ದಾರೆ ಎಂದು ಅರುಂಧತಿ ಆಪಾದಿಸಿದರು.
ಪ್ರಧಾನಿ ಮೋದಿಯವರು ನೋಟು ಅಮಾನ್ಯ ಮಾಡುವ ಮೂಲಕ ದೇಶದ ಮೇಲೆ ಆರ್ಥಿಕ ತುರ್ತು ಪರಿಸ್ಥಿತಿ ಹೇರಿದ್ದಾರೆ. ನೋಟು ಅಮಾನ್ಯ ಮಾಡುವುದರಿಂದ ಕಪ್ಪು ಹಣ ತಡೆ, ಖೋಟಾ ನೋಟು ತಡೆಯಲು ಸಾಧ್ಯವಾಗಿಲ್ಲ ಎಂದು ಅವರು ಹೇಳಿದರು.
ಇಂದಿನ ಸಮಾಜದಲ್ಲಿ ನಂಬಿಕೆಗಿಂತ ತಿಳಿವಳಿಕೆಯ ಆಧಾರದ ಮೇಲೆ ಬದುಕು ಸಾಗಿಸಬೇಕಾಗಿದೆ. ಜಾತಿ, ಧರ್ಮದ ಹೆಸರಿನಲ್ಲಿ ಒಡೆದಿರುವ ಸಮಾಜವನ್ನು ಒಗ್ಗೂಡಿಸುವ ಕಾರ್ಯವಾಗಬೇಕಿದೆ. ಸ್ವಾತಂತ್ರ ಕಿತ್ತುಕೊಂಡು ನಮ್ಮೊಂದಿಗೆ ಇರುವ ಮನುವಾದಿಗಳ ವಿರುದ್ಧ ಧ್ವನಿ ಎತ್ತುವುದರ ಮೂಲಕ ಪ್ರಜಾಪ್ರಭುತ್ವವನ್ನು ಉಳಿಸಬೇಕಿದೆ ಎಂದು ಅವರು ನುಡಿದರು.
ಮತ್ತೊಂದೆಡೆ ದೇಶದ ರೈತ ಮತ್ತಷ್ಟು ಸಂಕಷ್ಟಕ್ಕೆ ಗುರಿಯಾಗಿದ್ದಾನೆ. ಆತನ ಆಹಾರ ಧಾನ್ಯಗಳನ್ನು ಅಂಬಾನಿ ಸೇರಿದಂತೆ ಇನ್ನಿತರೆ ಶ್ರೀಮಂತರು ಖರೀದಿ ಮಾಡುವ ವ್ಯವಸ್ಥೆಯೂ ರೂಪುಗೊಳ್ಳುತ್ತಿದೆ. ಹೀಗೆ, ಎಲ್ಲೆಡೆಯೂ ಸಮಸ್ಯೆಗಳನ್ನು ಸೃಷ್ಟಿಸಿರುವ ಇಂತಹ ಸರಕಾರಕ್ಕೆ ಮುಂದಿನ ದಿನಗಳಲ್ಲಿ ಸೋಲಿನ ರುಚಿ ತೋರಿಸಬೇಕಾಗಿದೆ ಎಂದು ಅರುಂಧತಿ ಹೇಳಿದರು.