ಮಹಿಳೆಯರಿಗೆ ನ್ಯಾಯ ದೊರೆಯದ ಪರಿಸ್ಥಿತಿ ಉಲ್ಬಣ: ತೀಸ್ತಾ ಸೆಟಲ್ವಾಡ್

Update: 2022-09-05 17:12 GMT
ತೀಸ್ತಾ ಸೆಟಲ್ವಾಡ್

ಬೆಂಗಳೂರು, ಸೆ.5: ಬಿಲ್ಕಿಸ್ ಬಾನು ಪ್ರಕರಣ ಒಳಗೊಂಡಂತೆ ಯಾವುದೇ ಗಂಭೀರ ಪ್ರಕರಣಗಳಲ್ಲಿ ದೇಶದ ಮಹಿಳೆಯರಿಗೆ ನ್ಯಾಯ ದೊರೆಯದ ಪರಿಸ್ಥಿತಿ ಉಲ್ಬಣಗೊಂಡಿದೆ ಎಂದು ಗೌರಿ ಲಂಕೇಶ್ ಮೆಮೋರಿಯಲ್ ಟ್ರಸ್ಟ್ ಅಧ್ಯಕ್ಷೆಯೂ ಆದ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಬೇಸರ ವ್ಯಕ್ತಪಡಿಸಿದರು. 

ಸೋಮವಾರ ನಗರದ ಅರಮನೆ ರಸ್ತೆಯ ಕೊಂಡಜ್ಜಿ ಸಭಾಂಗಣದಲ್ಲಿ ಗೌರಿ ಲಂಕೇಶ್ ಮೆಮೋರಿಯಲ್ ಟ್ರಸ್ಟ್ ಏರ್ಪಡಿಸಿದ್ದ ಹಿರಿಯ ಪತ್ರಕರ್ತೆ ದಿ.ಗೌರಿ ಲಂಕೇಶ್ ಅವರ ನುಡಿ ನಮನ ಕಾರ್ಯಕ್ರಮಕ್ಕೆ ಕಳುಹಿಸಿದ್ದ ವಿಡಿಯೊ ಸಂದೇಶದಲ್ಲಿ ಅವರು ಉಲ್ಲೇಖಿಸಿದರು. 

ಜೂ.26ರಂದು ನನ್ನನ್ನು ಬಂಧಿಸಿ ಇಲ್ಲಿನ ಸಬರಮತಿ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿತ್ತು. ಆದರೆ, ಈ ಕಾರಾಗೃಹದಲ್ಲಿ ನೋಡಿದರೆ, ಮಹಿಳೆಯರು ಧ್ವನಿ ಎತ್ತದ ಪರಿಸ್ಥಿತಿಯಲ್ಲಿ ಇದ್ದಾರೆ. ಅವರಿಗೆ ನ್ಯಾಯ ದೊರೆಯಲಿದೆ ಎನ್ನುವ ವಿಶ್ವಾಸವೇ ಇಲ್ಲ. ಕುಟುಂಬಸ್ಥರು ಹೊರತುಪಡಿಸಿದರೆ, ಯಾರು ನೋಡದಂತೆ ಇಡಲಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಈ ಪ್ರಕರಣ ಉದಾಹರಣೆ ಅಷ್ಟೇ ಆಗಿದೆ. ದೇಶದ ನಾನಾ ಕಡೆ ಮಹಿಳೆಯೂ ಸಂಕಷ್ಟದಲ್ಲಿ ಸಿಲುಕಿದ್ದಾಳೆ ಎಂದ ಅವರು, ಬಿಲ್ಕಿಸ್ ಬಾನು ಪ್ರಕರಣದಲ್ಲಿ ಉದ್ದೇಶಪೂರ್ವಕವಾಗಿಯೇ ಅಪರಾಧಿಗಳನ್ನು ಬಿಡುಗಡೆ ಮಾಡಲಾಗಿದೆ. ಇಂತಹ ಘಟನೆ ಯಾವ ದೇಶದಲ್ಲಿಯೂ ನಡೆದಿರುವುದಿಲ್ಲ ಎಂದು ತಿಳಿಸಿದರು.

ಬಹುಭಾಷ ನಟ, ಚಿಂತಕ ಪ್ರಕಾಶ್ ರಾಜ್ ಮಾತನಾಡಿ, ಗೌರಿ ಲಂಕೇಶ್ ಅವರನ್ನು ಕೊಂದವರು ರಾಜ್ಯ ಹಾಗೂ ದೇಶವನ್ನು ಆಳುತ್ತಿದ್ದಾರೆ. ಇನ್ನು ಬಿಲ್ಕಿಸ್ ಬಾನು ಅತ್ಯಾಚಾರಿಗಳ ಬಿಡುಗಡೆ ಆಗಿದ್ದು, ಇದರ ಹಿಂದಿನ ಭಾವವನ್ನು ಅರ್ಥಮಾಡಿಕೊಳ್ಳಿ ಎಂದರು.

ಸಮಸ್ಯೆಗಳ ಕುರಿತು ಹೆಣ್ಣು ಮಗು ಮಾತನಾಡವುದೇ ತಪ್ಪಾಗಲಿದೆ ಎಂದು ಪ್ರಶ್ನಿಸಿದ ಅವರು, ಬಿಜೆಪಿ, ಸಂಘ ಪರಿವಾರ ಬಲಗೊಳ್ಳಲು, ನಮ್ಮಲ್ಲಿರುವ ದೂರವೇ ಕಾರಣವಾಗಿದೆ. ಹೀಗಾಗಿ, ಮುಂದಿನ ದಿನಗಳಲ್ಲಿ ಎಲ್ಲರೂ ಒಂದಾಗಬೇಕು. ಆಗ ಕೋಮುವಾದಿ ಶಕ್ತಿಗಳನ್ನು ತಡೆಯಬಹುದಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಬೂಕರ್ ಪ್ರಶಸ್ತಿ ವಿಜೇತೆ, ಖ್ಯಾತ ಲೇಖಕಿ ಅರುಂಧತಿ ರಾಯ್, ಗೌರಿ ಲಂಕೇಶ್ ಅವರ ತಾಯಿ ಇಂದಿರಾ ಲಂಕೇಶ್, ನಿರ್ದೇಶಕಿ ಕವಿತಾ ಲಂಕೇಶ್, ಹಿರಿಯ ಪತ್ರಕರ್ತರಾದ  ಡಿ.ಉಮಾಪತಿ, ಗುರುಪ್ರಸಾದ್, ಗಣೇಶ್ ಹೆಗಡೆ, ದೀಪು, ವಿ.ಎಸ್.ಶ್ರೀಧರ್, ಪಲ್ಲವಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ಇದನ್ನೂ ಓದಿ:  ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್‌ ಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದ ಸುಪ್ರೀಂಕೋರ್ಟ್‌

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News