ಮಠಗಳ ಮೇಲಿನ ಆರೋಪಗಳು: ಹೊಣೆ ಯಾರು?

Update: 2022-09-06 06:56 GMT

ಒಂದು ಕಾಲಕ್ಕೆ ಪೂರ್ತಿಯಾಗಿ ಆಧ್ಯಾತ್ಮಿಕ ಸಾಧನೆಗಾಗಿ ಮೀಸಲಿದ್ದ ಮಠಗಳಂಥ ಧಾರ್ಮಿಕ ಕೇಂದ್ರಗಳು ಕ್ರಮೇಣ ಸಾಮಾಜಿಕ ಆಯಾಮ ಪಡೆದವೆಂಬುದು ಈಗ ಇತಿಹಾಸ. ಈಗ ಒಂದೆಡೆ ರಾಜಕೀಯವಾಗಿ ಪ್ರಭಾವಶಾಲಿಯಾಗಿರುವ ಮಠಗಳು ಮತ್ತೊಂದೆಡೆ ಅಕ್ರಮಗಳ, ಅವ್ಯವಹಾರಗಳ ಕೇಂದ್ರಗಳೂ ಆಗುತ್ತಿವೆಯೆಂಬ ಆರೋಪಗಳು ಬಹುಕಾಲದಿಂದ ಕೇಳಿಬರುತ್ತಿವೆ. ಕರ್ನಾಟಕದ ಪ್ರಭಾವಿ ಮಠವೊಂದು ಈಗ ಇಂಥದೇ ಕಾರಣಕ್ಕೆ ಸುದ್ದಿಯಲ್ಲಿದೆ. ಮಠಗಳ ನೆಲೆ, ಹಿನ್ನೆಲೆ, ಅವುಗಳ ರಾಜಕೀಯ ಶಕ್ತಿ ಇವನ್ನೆಲ್ಲ ಚರ್ಚಿಸುವುದಕ್ಕೆ ಇದೊಂದು ಸೂಕ್ತ ಕಾಲ.

ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಹೈಸ್ಕೂಲು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಗಂಭೀರ ಆರೋಪಕ್ಕೆ ಗುರಿಯಾಗಿದ್ದಾರೆ. ಅವರ ವಿರುದ್ಧ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದರೂ ಬಂಧಿಸಲು ಸರಕಾರ ಹಿಂದೆಮುಂದೆ ನೋಡಿತು. ಈ ಮಧ್ಯೆ ನಿರೀಕ್ಷಣಾ ಜಾಮೀನಿಗೂ ಮುರುಘಾ ಶರಣರು ಯತ್ನಿಸಿದ್ದರು. ಕಡೆಗೂ ಅವರ ಬಂಧನವಾಗಿದೆ. ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯದಂಥ ಘಟನೆ ಮಠದೊಳಗೆ ನಡೆದಿದೆ ಎಂಬುದು ತೀವ್ರ ಕಳವಳ ಮತ್ತು ಆತಂಕದ ಸಂಗತಿ. ಸ್ವಾಮೀಜಿಯಂಥ ಪ್ರಭಾವಶಾಲಿ ವ್ಯಕ್ತಿಯ ಮೇಲೆಯೇ ಆರೋಪವಿದ್ದು, ದೂರು ಕೊಟ್ಟಿರುವ ಸಂತ್ರಸ್ತ ಬಾಲಕಿಯರ ಭವಿಷ್ಯವೇನಾದೀತು ಎಂಬುದನ್ನು ಯೋಚಿಸಿದರೆ ಇನ್ನೂ ದಿಗಿಲಾಗುತ್ತದೆ. ಯಾಕೆಂದರೆ ಮಠಗಳಂಥ ಕೇಂದ್ರಗಳು ರಾಜಕೀಯ ಶಕ್ತಿಯಾಗಿಯೂ ಬೆಳೆದಿರುವುದು, ಸರಕಾರಗಳು ಅವುಗಳೆದುರು ತಲೆಬಾಗಿ ನಿಲ್ಲುವುದು ನಮ್ಮ ವ್ಯವಸ್ಥೆಯಲ್ಲಿ ಹೊಸದೇನಲ್ಲ. ಧರ್ಮ ಮತ್ತು ರಾಜಕಾರಣ ತಮ್ಮದೇ ಆದ ಪಾವಿತ್ರತೆಯನ್ನು ಉಳಿಸಿಕೊಂಡಿರದ ಈ ಕಾಲಘಟ್ಟವಿದು. ಧಾರ್ಮಿಕ ಕೇಂದ್ರಗಳು ರಾಜಕಾರಣದ ಹೆಬ್ಬಾಗಿಲಿಗೇ ಬಂದು ಬಹುಕಾಲವಾಗಿಬಿಟ್ಟಿದೆ. ಧಾರ್ಮಿಕ ಮುಖಂಡರು, ಮಠಾಧೀಶರು ರಾಜಕಾರಣಿಗಳಂತೆ ವರ್ತಿಸುವುದು ಒಂದೆಡೆಯಾದರೆ, ಕಾವಿ ತೊಟ್ಟಿರುವವರೇ ಪ್ರಭುತ್ವದಲ್ಲಿ ನಾಯಕರಾಗಿರುವ, ಪಾಲುದಾರರಾಗಿರುವ ಉದಾಹರಣೆಗಳೂ ನಮ್ಮಲ್ಲೇ ಇವೆ. ಇಂದು ಹಲವಾರು ಪ್ರಮುಖ ಮಠಗಳು ಸಾವಿರಾರು ಕೋಟಿಗಳ ಆಸ್ತಿಯ ಒಡೆತನ ಹೊಂದಿವೆ. ಜೊತೆಗೆ ಜಾತಿ, ಸಮುದಾಯದ ಬಲ. ಸರಕಾರಗಳನ್ನೇ ಅಲುಗಾಡಿಸಬಲ್ಲಷ್ಟು, ಉರುಳಿಸಬಲ್ಲಷ್ಟು ಅವು ಪ್ರಭಾವಶಾಲಿಯೂ ಹೌದು. ಕರ್ನಾಟಕದ ಮಟ್ಟಿಗೂ ಮಠಗಳು ಮತ್ತು ರಾಜಕಾರಣದ ಸಂಬಂಧಕ್ಕೆ ಹಲವು ದಶಕಗಳ ಇತಿಹಾಸವೇ ಇದೆ. ಇದನ್ನು ನೋಡುವುದಕ್ಕೂ ಮೊದಲು, ಮಠಗಳು ಎಲ್ಲಿಂದ ಯಾವ ಸ್ವರೂಪದಿಂದ ಎಲ್ಲಿಗೆ ಬಂದು ಮುಟ್ಟಿವೆ ಎಂಬುದನ್ನೊಮ್ಮೆ ನೋಡಬೇಕು.

ಇಂತಹವರೂ ಇದ್ದಾರೆ

ಮಠಗಳು, ಮಠಾಧೀಶರು ಸಂವಿಧಾನ ಮತ್ತು ಕಾನೂನಿಗೆ ಅತೀತರಲ್ಲ. ಹಾಗಾಗಿ, ಮಠಗಳನ್ನೂ ಕಾನೂನಿನ ಚೌಕಟ್ಟಿನೊಳಗೆ ತರಬೇಕು ಎಂದು ಹೇಳುವ ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿಯವರಂಥ ಭಿನ್ನ ಧ್ವನಿಗಳೂ ಈ ಸಮಾಜದಲ್ಲಿವೆ. ಮಠಗಳಲ್ಲಿ ನಡೆಯುವ ಅವ್ಯವಹಾರ, ದುರುಪಯೋಗಗಳಿಗೆ ಕಡಿವಾಣ ಹಾಕಲು ಮತ್ತು ಸ್ವೇಚ್ಛಾಚಾರವನ್ನು ನಿಯಂತ್ರಿಸುವ ಅಧಿಕಾರ ಸರಕಾರಕ್ಕಿದೆ. ಮಠಗಳನ್ನು ಇದರಿಂದ ಹೊರಗಿಡುವ ಅಗತ್ಯವೇನಿದೆ ಎಂದು ಪ್ರಶ್ನಿಸಬಲ್ಲ ಅಂಥ ಪ್ರಗತಿಪರ ಮಠಾಧೀಶರ ಸಂಖ್ಯೆ ಹೆಚ್ಚಿಲ್ಲ ಮತ್ತು ರಾಜಕೀಯವಾಗಿ ಪ್ರಭಾವವಿರುವ ಮಠಗಳ ಮುಂದೆ ಅಂಥವರ ದನಿ ವೈಚಾರಿಕತೆಯ ಮಟ್ಟದಲ್ಲಷ್ಟೇ ಉಳಿದುಹೋಗುತ್ತದೆ.

ವೇದಾಧ್ಯಯನವೂ ಸೇರಿದಂತೆ ಶೈಕ್ಷಣಿಕ ಉದ್ದೇಶದ ಗುರುಕುಲ, ಆಶ್ರಮಗಳ ರೂಪದಲ್ಲಿ ಕುಟೀರಗಳೆಂದು ಕರೆಯಲಾಗುತ್ತಿದ್ದ ಗುಡಿಸಲುಗಳಲ್ಲಿ ಮಠಗಳ ಮೂಲ ಸ್ವರೂಪವಿತ್ತು. ಬೌದ್ಧ ಧರ್ಮದಲ್ಲಿ ಇವನ್ನೇ ವಿಹಾರ, ಸಂಘಗಳೆಂದು ಹೇಳಲಾಗುತ್ತಿತ್ತು. ಮಠಗಳ ವಿಚಾರವಾಗಿ ಮಹತ್ವದ ವಿವರಗಳು ಕ್ರಿ.ಶ.8ನೇ ಶತಮಾನದಿಂದ ಸಿಗುತ್ತವೆ. ಅದ್ವೈತ ವೇದಾಂತ ಮಠಗಳು ಅಥವಾ ಪೀಠಗಳು 14ನೇ ಶತಮಾನದಲ್ಲಿ ಮುನ್ನೆಲೆಗೆ ಬರುತ್ತವೆ. ಪುರಿಯ ಗೋವರ್ಧನಮಠ ಪೀಠ, ಕರ್ನಾಟಕದ ಶೃಂಗೇರಿಯ ಶಾರದಾ ಪೀಠ, ಗುಜರಾತ್‌ನ ದ್ವಾರಕಾ ಕಾಳಿಕಾ ಪೀಠ, ಬದರಿಯ ಜ್ಯೋತಿರ್ಮಾತಾ ಪೀಠ ಮತ್ತು ತಮಿಳುನಾಡಿನ ಕಂಚಿ ಕಾಮಕೋಟಿ ಪೀಠ ಇವು ಮುಖ್ಯವಾದವು. ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ದ್ವೈತ ವೇದಾಂತ ಮಠಗಳು ಅಥವಾ ಪೀಠಗಳೆಂದರೆ, ಉಡುಪಿಯ ಅಷ್ಟಮಠಗಳು, ಬೆಂಗಳೂರಿನ ಉತ್ತರಾದಿ ಮಠ, ಸೋಸಲೆ ವ್ಯಾಸರಾಜ ಮಠ, ಮಂತ್ರಾಲಯದ ರಾಘವೇಂದ್ರ ಮಠ. ಇವುಗಳಷ್ಟೇ ಪ್ರಭಾವಶಾಲಿಯಾಗಿರುವ ವೈಷ್ಣವ ಮತ್ತು ಶೈವ ಮಠಗಳೂ ಇವೆ. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ, ರಂಭಾಪುರಿ, ಬಾಳೆಹೊನ್ನೂರು ಮತ್ತು ಉಜ್ಜಿನಿ ಮಠಗಳು ಬಹು ಪ್ರಮುಖ ವೀರಶೈವ ಮಠಗಳಾಗಿವೆ. ಅನ್ನ, ಆಶ್ರಯ ಮತ್ತು ಶಿಕ್ಷಣ ಈ ತ್ರಿವಿಧ ದಾಸೋಹಕ್ಕೆ ಸಿರಿಗೆರೆಯ ತರಳಬಾಳು ಮಠ, ತುಮಕೂರು ಸಿದ್ಧಗಂಗಾ ಮಠ, ಚಿತ್ರದುರ್ಗದ ಮುರುಘಾ ಮಠ, ಸುತ್ತೂರಿನ ಶಿವರಾತ್ರೀಶ್ವರ ಮಠ ಹೆಸರಾಗಿವೆ. ಲಿಂಗಾಯತ ಸಮುದಾಯದ ಹಿತ ಕಾಯಲು ಹಲವಾರು ಶಾಖಾ ಮಠಗಳೂ ದೇಶಾದ್ಯಂತ ಇವೆ. ಶೈವ ಪಂಥದ ನಾಥ ಪರಂಪರೆಯ ಮಠವಾಗಿರುವ ಆದಿಚುಂಚನಗಿರಿ ಮಠ ಒಕ್ಕಲಿಗ ಸಮುದಾಯದ ಪ್ರಭಾವಿ ಮಠವಾಗಿ ಬೆಳೆದಿದೆ. ಧಾರ್ಮಿಕತೆ, ವಿದ್ಯಾದಾನದಂಥ ಮಠಗಳ ಮೂಲ ಉದ್ದೇಶ ಇಂದು ಬೇರೆಯದೇ ಸ್ವರೂಪ ಪಡೆದುಕೊಂಡಿರುವುದೂ ಕೂಡ ಮಠಗಳ ಮೂಲ ಸ್ವರೂಪವೇ ಬದಲಾಗಿರುವುದರ ಕಾರಣವೂ ಆಗಿದೆ. ಶಿಕ್ಷಣ ಇಂದು ಉದ್ಯಮವಾಗಿ ಬೆಳೆದಿದೆ ಮತ್ತು ಹಲವಾರು ಶಿಕ್ಷಣ ಸಂಸ್ಥೆಗಳು ವಿವಿಧ ಮಠಗಳ ಒಡೆತನದಲ್ಲಿಯೇ ಇವೆ. ಇದು ಕೂಡ ರಾಜಕಾರಣ ಮತ್ತು ಮಠಗಳ ಸಂಬಂಧ ಇನ್ನಷ್ಟು ಗಾಢವಾಗಿರುವುದರ ಹಿಂದಿನ ಗುಟ್ಟು. ಕೆಲವು ಮಠಗಳಂತೂ ರಾಜಕಾರಣಿಗಳು ಮತ್ತು ಉದ್ಯಮಿಗಳ ಕಪ್ಪು ಹಣಕ್ಕೆ ಸುರಕ್ಷೆ ನೀಡುವ ನೆಲೆಗಳಾಗಿವೆ ಎಂಬ ಮಾತುಗಳೂ ಇವೆ. ಈ ಅಪವಿತ್ರ ಮೈತ್ರಿಯೂ ರಾಜಕಾರಣದ ಮೇಲೆ ತಮ್ಮ ಹಿಡಿತ ಸಾಧಿಸಲು ಮಠಾಧೀಶರಿಗೆ ಅನುವು ಮಾಡಿಕೊಟ್ಟಿದೆ. ಹಾಗಾಗಿಯೇ ಪಕ್ಷ ರಾಜಕಾರಣದೊಳಗೆ ಕಾವಿಧಾರಿಗಳು ಮಧ್ಯಪ್ರವೇಶಿಸುವುದು, ತಮ್ಮ ಭಕ್ತರಾಗಿರುವ ರಾಜಕಾರಣಿಗಳ ಪರವಾಗಿ ಮಠಾಧೀಶರು ಲಾಬಿ ನಡೆಸುವುದು, ತಮ್ಮ ಸಮುದಾಯದವರೇ ಮಂತ್ರಿ, ಮುಖ್ಯಮಂತ್ರಿಯಾಗಬೇಕೆಂದು ಒತ್ತಡ ಹೇರುವುದು ಇವೆಲ್ಲವೂ ನಡೆಯುತ್ತಿದೆ. ಜಾತಿ ಮತ್ತು ಸಮುದಾಯಗಳು ಮಠಗಳ ಹಿಂದಿನ ಬಲವಾಗಿ ಹೇಗೆ ರಾಜಕಾರಣವನ್ನು ಮಣಿಸುತ್ತಿದೆ ಎಂಬುದನ್ನು ನೋಡುವುದಾದರೆ, ಈ ಹಿನ್ನೆಲೆಯಿಂದ ಪ್ರಭಾವಶಾಲಿಯಾಗಿರುವ ಮಠಗಳು: ಸಿದ್ಧಗಂಗಾ ಮಠ, ಸುತ್ತೂರು ಮಠ, ಆದಿಚುಂಚನಗಿರಿ ಮಠ, ಅಷ್ಟ ಮಠಗಳು, ಕನಕ ಗುರುಪೀಠ, ಮಾದಾರ ಗುರುಪೀಠ, ಮುರುಘಾರಾಜೇಂದ್ರ ಬೃಹನ್ಮಠ, ಸಿರಿಗೆರೆ ತರಳಬಾಳು ಬೃಹನ್ಮಠ, ಮೂರುಸಾವಿರ ಮಠ. ರಾಜ್ಯದಲ್ಲಿರುವ 500ಕ್ಕೂ ಹೆಚ್ಚು ಮಠಗಳಲ್ಲಿ ಸುಮಾರು 12 ಮಠಗಳು ರಾಜಕೀಯವಾಗಿ ಅತ್ಯಂತ ಪ್ರಭಾವಿಯಾಗಿವೆ. ಲಿಂಗಾಯತ ಪ್ರಾಬಲ್ಯದ ಹಿನ್ನೆಲೆಯಲ್ಲಿ ತುಮಕೂರಿನ ಸಿದ್ಧಗಂಗಾ ಮಠಕ್ಕೆ ವಿಶೇಷ ಮಹತ್ವ. ರಾಜ್ಯದ ಜನಸಂಖ್ಯೆಯ ಶೇ.19ರಷ್ಟಿರುವ ಲಿಂಗಾಯತರನ್ನು ಓಲೈಸಲು ಈ ಮಠದ ಕೃಪೆ ಬೇಕು. ಇದೇ ವೇಳೆ ಸಿರಿಗೆರೆ, ಮುರುಘಾ ಮತ್ತು ಸುತ್ತೂರು ಮಠಗಳೂ ಪ್ರಭಾವಿ ಲಿಂಗಾಯತ ಮಠಗಳಾಗಿವೆ. ಪಂಚಮಸಾಲಿ ಗುರುಪೀಠವೂ ಪ್ರಭಾವಿ ಮಠವೇ ಆಗಿದೆ. ರಾಜ್ಯದ ಜನಸಂಖ್ಯೆಯ ಶೇ.15ರಷ್ಟಿರುವ ಒಕ್ಕಲಿಗ ಸಮುದಾಯದ ಒಲವು ಗಳಿಸಲು ಆದಿಚುಂಚನಗಿರಿ ಮಠದ ಆಶೀರ್ವಾದ ಬೇಡುತ್ತಾರೆ ರಾಜಕಾರಣಿಗಳು. ಇನ್ನು ಕುರುಬ ಸಮುದಾಯವೂ ರಾಜ್ಯದಲ್ಲಿ ಅಷ್ಟೇ ದೊಡ್ಡದು. ಕಾಗಿನೆಲೆಯ ಕನಕ ಗುರುಪೀಠ ಈ ಕಾರಣಕ್ಕಾಗಿ ರಾಜ್ಯ ರಾಜಕಾರಣದಲ್ಲಿ ಹೆಚ್ಚು ಮಹತ್ವ ಪಡೆಯುತ್ತದೆ. ಒಂದೂವರೆ ಕೋಟಿಗೂ ಹೆಚ್ಚಿರುವ ಮಾದಿಗ ಸಮುದಾಯದ ಮತ ಪಡೆಯಲು ಚಿತ್ರದುರ್ಗದ ಮಾದಾರ ಗುರುಪೀಠವನ್ನು ಆಶ್ರಯಿಸುತ್ತಾರೆ ರಾಜಕಾರಣಿಗಳು. ಉಡುಪಿ ಕೃಷ್ಣಮಠದ ಆಶೀರ್ವಾದ ಬ್ರಾಹ್ಮಣ ಸಮುದಾಯದ ಓಲೈಕೆಗಾಗಿ ಅಗತ್ಯ. ಹಾಗಾಗಿ ಚುನಾವಣೆ ವೇಳೆ ರಾಜ್ಯ ಮತ್ತು ರಾಷ್ಟ್ರಮಟ್ಟದ ರಾಜಕೀಯ ನಾಯಕರು ಲೆಕ್ಕಾಚಾರ ಹಾಕಿ ಮಠಾಧೀಶರ ಭೇಟಿಗಾಗಿ, ಆಶೀರ್ವಾದಕ್ಕಾಗಿ ಪೈಪೋಟಿಗೆ ಬೀಳುವುದಿದೆ. ಮಠಗಳು ಮತ್ತು ರಾಜಕಾರಣಿಗಳ ಈ ಅಂತರ್ ಅವಲಂಬನೆಯ ಮತ್ತು ರಾಜಕೀಯದ ಮೇಲೆ ಮಠಗಳ ಪ್ರಭಾವದ ಇತಿಹಾಸ ನೋಡಹೊರಟರೆ 1960ರಷ್ಟು ಹಿಂದಕ್ಕೆ ಹೋಗುತ್ತದೆ. ಅದು ಎಸ್. ನಿಜಲಿಂಗಪ್ಪ ಮುಖ್ಯಮಂತ್ರಿಯಾಗಿದ್ದ ಕಾಲ. ಲಿಂಗಾಯತ ಸಮುದಾಯದ ಬಣಜಿಗ ಪಂಗಡದ ಅವರು ಸಾದರ ಲಿಂಗಾಯತ ಸಮುದಾಯದ ಸ್ಥಳೀಯ ಪ್ರಭಾವಿ ಸ್ವಾಮೀಜಿಯ ದ್ವೇಷ ಕಟ್ಟಿಕೊಂಡ ಪರಿಣಾಮವಾಗಿ 1962ರಲ್ಲಿ ಹೊಸದುರ್ಗ ಉಪಚುನಾವಣೆಯಲ್ಲಿ ಸೋಲನುಭವಿಸಬೇಕಾಯಿತು. ಕಡೆಗೆ ಅವರು ಚಿತ್ರದುರ್ಗದ ಹೊರಗೇ ಕ್ಷೇತ್ರವನ್ನು ನೋಡಿಕೊಳ್ಳಬೇಕಾದ ಪರಿಸ್ಥಿತಿ ತಲೆದೋರಿತು. ಎರಡು ತಿಂಗಳ ಬಳಿಕ ಬಾಗಲಕೋಟೆಯಿಂದ ಅವಿರೋಧವಾಗಿ ಆಯ್ಕೆಯಾದರು. ರಾಜಕಾರಣಿಗಳು ಮತ್ತು ಮಠಾಧೀಶರು ಸಾರ್ವಜನಿಕ ಸಮಾರಂಭಗಳಲ್ಲಿ ವೇದಿಕೆ ಹಂಚಿಕೊಳ್ಳುವ ಪದ್ಧತಿಯೊಂದು 1980ರ ಆರಂಭದಲ್ಲಿ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಅವರು ಮಠಗಳಿಗೆ ವೃತ್ತಿಪರ ಕಾಲೇಜುಗಳನ್ನು ಆರಂಭಿಸಲು ಭೂಮಿ ಮಂಜೂರು ಮಾಡಿದಾಗ ಶುರುವಾಯಿತು. ವರ್ಷಗಳು ಕಳೆಯುತ್ತಿದ್ದಂತೆ ಜನಪ್ರತಿನಿಧಿಗಳು ಮತ್ತು ಮಠಾಧೀಶರ ಸಖ್ಯ ಹೆಚ್ಚು ಪ್ರಬಲವಾಗತೊಡಗಿತು. ನಿರ್ದಿಷ್ಟಜಾತಿ, ಸಮುದಾಯಕ್ಕೆ ಸಂಬಂಧಿಸಿದ ಮಠಗಳು ತೆರೆಮರೆಯಲ್ಲಿದ್ದೇ ರಾಜಕೀಯವಾಗಿ ಮಹತ್ವದ ಪಾತ್ರ ವಹಿಸುವುದು, ರಾಜಕಾರಣಿಗಳು ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ಮಠಾಧೀಶರನ್ನು ಬಳಸಿಕೊಳ್ಳುವುದು ಇಂಥ ಕೊಡುಕೊಳ್ಳುವಿಕೆ ನಡೆದುಕೊಂಡು ಬಂತು. ಉತ್ತರ ಕರ್ನಾಟಕದ ಬಹುಪಾಲು ಮಠಗಳು ಲಿಂಗಾಯತ ಉಪಪಂಗಡಗಳಿಗೆ ಸೇರಿದವುಗಳಾಗಿದ್ದು ರಾಜಕೀಯದಲ್ಲಿ ಸಕ್ರಿಯವಾಗಿವೆ. ದಕ್ಷಿಣ ಕರ್ನಾಟಕದ ಮಠಗಳೂ ರಾಜಕೀಯದಲ್ಲಿ ತಮ್ಮ ಶಕ್ತಿಯೇನು ಎಂಬುದನ್ನು ಆಗೀಗ ಕಾಣಿಸುತ್ತಲೇ ಬಂದಿವೆ. 2019ರ ಜುಲೈನಲ್ಲಿ ಕುಮಾರಸ್ವಾಮಿ ಸರಕಾರಕ್ಕೆ ಆಪತ್ತು ಬಂದಿದ್ದಾಗ, ಅವರನ್ನು ಪದಚ್ಯುತಗೊಳಿಸುವ ನಡೆಯ ವಿರುದ್ಧ ಇಬ್ಬರು ಸ್ವಾಮೀಜಿಗಳು ಪರೋಕ್ಷ ಎಚ್ಚರಿಕೆ ನೀಡಿದ್ದರು. ಒಬ್ಬರು ಸ್ಪಟಿಕಪುರಿ ಮಠದ ಪೀಠಾಧಿಪತಿ ನಂಜಾವಧೂತ ಸ್ವಾಮಿಯಾದರೆ, ಇನ್ನೊಬ್ಬರು ವಿಶ್ವ ಒಕ್ಕಲಿಗ ಮಠದ ಪೀಠಾಧಿಪತಿಯಾಗಿದ್ದ ಚಂದ್ರಶೇಖರನಾಥ ಸ್ವಾಮಿ. ಹೀಗೆ ರಾಜಕೀಯ ಬಿಕ್ಕಟ್ಟುಗಳು ತಲೆದೋರಿದಾಗೆಲ್ಲ ಮಠಾಧೀಶರು ಸಕ್ರಿಯರಾಗುವುದು ಈಗ ಸಾಮಾನ್ಯವೇ ಆಗಿಬಿಟ್ಟಿದೆ. ಈಚಿನ ವರ್ಷಗಳ ಮೀಸಲಾತಿ ಹೋರಾಟಗಳಲ್ಲಿ ವಿವಿಧ ಸಮುದಾಯಗಳ ಸ್ವಾಮೀಜಿಗಳೇ ಮುಂದೆ ನಿಂತಿದ್ದರೆಂಬುದನ್ನು ಗಮನಿಸಬೇಕು. ಪಂಚಮಸಾಲಿ, ಕುರುಬ, ವಾಲ್ಮೀಕಿ ಮತ್ತು ಒಕ್ಕಲಿಗ ಸಮುದಾಯಗಳು ನಡೆಸಿದ ಮೀಸಲಾತಿ ಹೋರಾಟಗಳಲ್ಲಿ ಸ್ವಾಮೀಜಿಗಳಿದ್ದರು. ಪಂಚಮಸಾಲಿ ಲಿಂಗಾಯತ ಸಮುದಾಯವನ್ನು ಹಿಂದುಳಿದ 2-ಎ ವರ್ಗಕ್ಕೆ ಸೇರಿಸುವಂತೆ ಒತ್ತಾಯಿಸಿ ಕೂಡಲ ಸಂಗಮ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ 2021ರ ಜನವರಿಯಲ್ಲಿ ಬಸವಕಲ್ಯಾಣದಿಂದ ಬೆಂಗಳೂರಿನವರೆಗೆ ಆ ಸಮುದಾಯ ಪಾದಯಾತ್ರೆ ನಡೆಸಿತು. ಇದೇ ಅವಧಿಯಲ್ಲಿ ಕುರುಬ ಸಮುದಾಯದವರು ಪರಿಶಿಷ್ಟ ವರ್ಗಕ್ಕೆ ಸೇರಿಸುವಂತೆ ಆಗ್ರಹಿಸಿ ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದ ಸ್ವಾಮೀಜಿ ನೇತೃತ್ವದಲ್ಲಿ ಕಾಗಿನೆಲೆಯಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಕೈಗೊಂಡರು. ವಾಲ್ಮೀಕಿ ಸಮುದಾಯದ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲು ಒತ್ತಡ ಹೇರುವುದಕ್ಕಾಗಿ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಸತ್ಯಾಗ್ರಹ ನಡೆಸಿದ್ದರು. ಒಕ್ಕಲಿಗ ಸಮುದಾಯದ ಎಲ್ಲ 115 ಉಪ ಜಾತಿಗಳನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸುವಂತೆ ಒತ್ತಾಯಿಸಿ ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿಗಳ ನೇತೃತ್ವದಲ್ಲಿ ಹೋರಾಟ ನಡೆದಿತ್ತು. ತಮ್ಮ ಜಾತಿಗೆ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕೆಂಬ ಒತ್ತಾಯ ಮಾಡುವುದಕ್ಕೂ ಮಠಗಳು ಹಿಂಜರಿಯುತ್ತಿಲ್ಲ. ಹೀಗೆ ಸರಕಾರದ ನೀತಿ ನಿರೂಪಣೆಯಲ್ಲಿ ಪ್ರಭಾವ ಬೀರುವ ನಿಟ್ಟಿನಲ್ಲಿ ಎಷ್ಟೋ ಸಲ ಎಚ್ಚರಿಕೆ, ಬೆದರಿಕೆಗಳನ್ನೂ ಒಡ್ಡುವ ಮಟ್ಟಿಗೆ ಮಠಾಧೀಶರು ಹೋಗಿರುವ ಸಂದರ್ಭಗಳಿವೆ. ಮಠಗಳು ಹೀಗೆ ರಾಜಕಾರಣದ ಮೇಲೆ ಹಿಡಿತ ಸಾಧಿಸುತ್ತಿದ್ದರೆ, ರಾಜಕಾರಣಿಗಳು ಮಾತ್ರ ಮಠಗಳನ್ನು ಓಲೈಸುವ ಕಸರತ್ತನ್ನೇ ನಿರಂತರವಾಗಿ ನಡೆಸುತ್ತ ಬಂದರು. ಒಂದು ಹಂತದಲ್ಲಿ ಮಠಗಳನ್ನು ಓಲೈಸುವ ಮತ್ತೊಂದು ದಾರಿಯನ್ನೂ ರಾಜಕಾರಣಿಗಳು ಹಿಡಿದರು. 2008ರಲ್ಲಿ ಆಗ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರು ಮಠ, ಮಂದಿರಗಳಿಗೆ ಕೋಟ್ಯಂತರ ರೂ. ಅನುದಾನ ನೀಡಲು ಬಜೆಟ್‌ನಲ್ಲಿ ಹಣ ಒದಗಿಸಿದರು. ಆನಂತರ ಬಂದ ಮುಖ್ಯಮಂತ್ರಿಗಳೂ ಇದನ್ನು ಪಾಲಿಸಬೇಕಾದ ಅನಿವಾರ್ಯತೆ ತಲೆದೋರಿತು. ಯಡಿಯೂರಪ್ಪ 2008 ಮತ್ತು ಅನಂತರದ ಮೂರು ಬಜೆಟ್‌ಗಳಲ್ಲಿ ಮಠಗಳಿಗೆ ಅನುದಾನ ನೀಡುವಲ್ಲಿ ಇನ್ನಿಲ್ಲದಷ್ಟು ಉದಾರತೆ ಮೆರೆದಿದ್ದರು. 2008ರಿಂದ 2011ರ ಅವಧಿಯಲ್ಲಿ ಅವರು ನೆರೆರಾಜ್ಯದ ದೇವಾಲಯಗಳೂ ಸೇರಿದಂತೆ ಒಟ್ಟು 269 ದೇವಾಲಯಗಳು, ಹಿಂದೂ ಧಾರ್ಮಿಕ ಸಂಸ್ಥೆಗಳು, ಧಾರ್ಮಿಕ ಚಾರಿಟಬಲ್ ಟ್ರಸ್ಟ್‌ಗಳಿಗೆ ನೀಡಿದ ಒಟ್ಟು ಅನುದಾನದ ಮೊತ್ತ 110 ಕೋಟಿ ರೂ. ಯಡಿಯೂರಪ್ಪ ನಂತರ ಸಿಎಂ ಸ್ಥಾನಕ್ಕೆ ಬಂದ ಡಿ.ವಿ.ಸದಾನಂದಗೌಡ ಆ ಪರಂಪರೆ ಮುಂದುವರಿಸಿದರು. ಶೆಟ್ಟರ್ ಅವಧಿಯಲ್ಲೂ ಇದು ಅನಾಯಾಸವಾಗಿ ಮುಂದುವರಿಯಿತು. 2021ರಲ್ಲಿ ಮಠಗಳು ಮತ್ತು ವಿವಿಧ ಸಮುದಾಯಗಳಿಗೆ ರೂ. 80 ಕೋಟಿಗೂ ಹೆಚ್ಚು ಅನುದಾನ ಒದಗಿಸಲಾಗಿತ್ತು. 2022ರಲ್ಲಿಯೂ ವಿವಿಧ ಮಠ, ದೇಗುಲಗಳಿಗೆ ಒಟ್ಟು ರೂ. 143 ಕೋಟಿ ಅನುದಾನವನ್ನು ಸರಕಾರ ಮೀಸಲಿರಿಸಿದೆ. 178 ಮಠಗಳು, 59 ದೇವಸ್ಥಾನಗಳು ಈ ಪಟ್ಟಿಯಲ್ಲಿವೆ.

 ರಾಜಕಾರಣದಲ್ಲಿ ಮಠಗಳ ಪ್ರಭಾವ 

ಮಠಗಳ ಪ್ರಭಾವ ಎಷ್ಟರ ಮಟ್ಟಿಗೆ ರಾಜಕಾರಣ ದಲ್ಲಿದೆ ಎಂಬುದಕ್ಕೆ ಉದಾಹರಣೆಯಾಗಿ, ಸರಕಾರ ಗಳು ಕೆಲವು ನೀತಿ ನಿರ್ಧಾರಗಳನ್ನೇ ಕೈಬಿಡಬೇಕಾದ ಸ್ಥಿತಿ ಎದುರಿಸಿದ್ದನ್ನು ಗಮನಿಸಬಹುದು. 2014ರಲ್ಲಿ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಕರ್ನಾಟಕ ಹಿಂದೂ ಧಾರ್ಮಿಕ ಮತ್ತು ದತ್ತಿ ತಿದ್ದುಪಡಿ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಿತು. ಮಠಗಳು ಮತ್ತು ಇತರ ಧಾರ್ಮಿಕ ಸಂಸ್ಥೆಗಳಿಂದ ನಿಯಂತ್ರಿಸಲ್ಪಡುವ ಸಂಸ್ಥೆಗಳನ್ನು ಸರಕಾರದ ದತ್ತಿ ಇಲಾಖೆಯ ಅಡಿಯಲ್ಲಿ ತರುವ ಉದ್ದೇಶದ ಮಸೂದೆ ಅದಾಗಿತ್ತು. ಮಸೂದೆ ವಿರುದ್ಧ ಎಲ್ಲ ಮಠಗಳ ಮಠಾಧೀಶರು ಗದ್ದಲ ಎಬ್ಬಿಸಿದರು. ಅದೆಷ್ಟು ತೀವ್ರವಾಗಿತ್ತೆಂದರೆ, ವಿಚಾರ ಕಾಂಗ್ರೆಸ್ ಹೈಕಮಾಂಡ್‌ವರೆಗೂ ಹೋಯಿತು. ಸಿದ್ದರಾಮಯ್ಯ ಶಾಸನವನ್ನು ಕೈಬಿಡಬೇಕಾಯಿತು.

ಸರಕಾರ ಅತ್ಯಂತ ಅಗತ್ಯವಾಗಿ ಒದಗಿಸಬೇಕಾದದ್ದು ಆರೋಗ್ಯ ಮತ್ತು ಶಿಕ್ಷಣ. ಇಂದು ನಮ್ಮ ಸರಕಾರಿ ಆರೋಗ್ಯ ಕೇಂದ್ರಗಳು ಮತ್ತು ಸರಕಾರಿ ಶಾಲೆಗಳ ಸ್ಥಿತಿ ಯಾವ ಅವಸ್ಥೆಯಲ್ಲಿದೆ ಎಂಬುದನ್ನು ನೋಡಿಕೊಂಡರೆ ಸರಕಾರಗಳ ವೈಫಲ್ಯತೆ ಮನದಟ್ಟಾಗುತ್ತದೆ. ಸರಕಾರದ ಈ ವೈಫಲ್ಯ ಮತ್ತು ಈ ವಿಚಾರದಲ್ಲಿನ ಅವಲಂಬನೆಯ ಲಾಭವನ್ನು ಮಠಗಳಂಥ ಸಂಸ್ಥೆಗಳು ಸರಿಯಾಗಿಯೇ ಬಳಸಿಕೊಳ್ಳುತ್ತಿವೆ. ಅತ್ಯಂತ ಬಡ ಮತ್ತು ದುರ್ಬಲ ವರ್ಗದವರು ತಮ್ಮ ಮಕ್ಕಳನ್ನು ಮಠಗಳು ನಡೆಸುವ ಇಂಥ ವಸತಿ ಶಾಲೆಗಳಿಗೆ, ವಿದ್ಯಾರ್ಥಿನಿಲಯಗಳಿಗೆ ಕಳಿಸುವಂತಾಗಿರುವುದು ಈ ಹಿನ್ನೆಲೆಯಲ್ಲಿಯೇ. ಅಲ್ಲದೆ, ಮಠಗಳು ಮತ್ತಿತರ ಧಾರ್ಮಿಕ ಕೇಂದ್ರಗಳು ಆರೋಗ್ಯ ಮತ್ತು ಶಿಕ್ಷಣ ಸೇವೆಯ ಹೆಸರು ಮುಂದೆ ಮಾಡಿ ಸರಕಾರದ ಅನುದಾನಕ್ಕೆ ಲಾಬಿ ನಡೆಸುವುದು, ಸರಕಾರದಿಂದ ಹಣದ ಹೊಳೆ ಇವುಗಳ ಕಡೆ ಹರಿಯುವುದು ನಡೆಯುತ್ತಿದೆ. ಮಠಗಳು ಹೀಗೆ ರಾಜಕೀಯ ಬಲ ಮತ್ತು ಪ್ರಭಾವದಿಂದಾಗಿಯೇ, ತಮ್ಮ ವ್ಯವಹಾರದಲ್ಲಿ ಹಸ್ತಕ್ಷೇಪಕ್ಕೆ ಸರಕಾರಕ್ಕೆ ಹೆಚ್ಚು ಅವಕಾಶವಿಲ್ಲ ಎಂಬ ಕಾರಣಕ್ಕಾಗಿಯೇ ಹಲವು ಸಲ ಅವ್ಯವಹಾರಗಳಿಂದ ಸುದ್ದಿಯಾಗಿರುವುದೂ ಆಗುತ್ತಿರುವುದೂ ಇದೆ. ಯಾವುದೋ ಮಠದಲ್ಲಿನ ಅವ್ಯವಹಾರಗಳು ಬಯಲಾದ ಸಂದರ್ಭದಲ್ಲಿ ಸರಕಾರ ಆಡಳಿತಾಧಿಕಾರಿಗಳ ನೇಮಕಕ್ಕೆ ಮುಂದಾದಾಗ ಅದನ್ನು ಎಲ್ಲ ಮಠಗಳೂ ಒಟ್ಟಾಗಿ ನಿಂತು ವಿರೋಧಿಸಿದ್ದೂ ನಡೆದಿದೆ. ದೇಶಾದ್ಯಂತ ಹಲವಾರು ಮಠಗಳು ಕೊಲೆ, ಅತ್ಯಾಚಾರದಂಥ ಗಂಭೀರ ಅಪರಾಧಗಳಿಗಾಗಿ ಸುದ್ದಿಯಾಗುತ್ತಲೇ ಇರುತ್ತವೆ. ಸ್ವಯಂಘೋಷಿತ ದೇವಮಾನವರೇ ಮಾಡಬಾರದ ಕೆಲಸ ಮಾಡಿಕೊಂಡದ್ದೂ ಇದೆ. 1993ರಲ್ಲಿ ಪುಟ್ಟಪರ್ತಿಯ ಪ್ರಶಾಂತಿ ನಿಲಯಂನಲ್ಲಿ 6 ಮಂದಿಯ ಹತ್ಯೆಯಾದ ಪ್ರಕರಣದ ರಹಸ್ಯ ಇವತ್ತಿಗೂ ಬಯಲಾಗದೇ ಉಳಿದಿದೆ. ಆಸಾರಾಂನಂಥ ಸ್ವಯಂ ಘೋಷಿತ ದೇವಮಾನವ ಬಾಲಕಿಯ ಮೇಲೆ ಅತ್ಯಾಚಾರವೆಸಗುತ್ತಾನೆ. ಹರ್ಯಾಣದ ರಾಂಪಾಲ್ ಬಂಧನ ವಾರಂಟ್‌ನಿಂದ ತಪ್ಪಿಸಿಕೊಳ್ಳಲು ಸಾವಿರಾರು ಭಕ್ತರನ್ನೇ ಮುಂದಿಟ್ಟುಕೊಂಡು ಸರಕಾರವನ್ನು ಆಡಿಸಿಬಿಡುತ್ತಾನೆ. ಕರ್ನಾಟಕದಲ್ಲಿ ಕೂಡ ಈ ಹಿಂದೆಯೂ ಕೆಲ ಮಠಾಧೀಶರು ಅತ್ಯಾಚಾರ ಆರೋಪಗಳನ್ನು ಎದುರಿಸಿದ್ದಿದೆ. ಈಗ ಮುರುಘಾ ಮಠದ ಸ್ವಾಮೀಜಿ ಸರದಿ. ಇದೆಲ್ಲದರ ನಡುವೆಯೂ ಒಳ್ಳೆಯ ಕೆಲಸ ಮಾಡುತ್ತಿರುವ ಅನೇಕ ಮಠಗಳು, ಒಳ್ಳೆಯ ಮಠಾಧೀಶರು ಇಲ್ಲದೇ ಇಲ್ಲ. ಜಾತಿ ಧರ್ಮದ ಹಂಗಿಲ್ಲದೆ, ಸಮಾಜದ ಒಳಿತಿಗಾಗಿ, ಎಲ್ಲರ ಏಳಿಗೆಗಾಗಿ ದುಡಿವ ಮನಸ್ಸುಗಳು ಧಾರ್ಮಿಕ ಕೇಂದ್ರಗಳಲ್ಲೂ ಇವೆ. ಇಂಚಗೇರಿ ಮಠದ ಮಹಾದೇವರು ಎಪ್ಪತ್ತರ ದಶಕಕ್ಕೂ ಮೊದಲು ದಲಿತರು, ಅಲ್ಪಸಂಖ್ಯಾತರು ಮತ್ತು ಶೋಷಿತರ ಪರವಾಗಿ ರಾಜಕಾರಣಕ್ಕಿಳಿದು ಪ್ರಭುತ್ವದ ವಿರುದ್ಧ ಹೋರಾಡಿದ್ದಿದೆ. ಗದುಗಿನ ತೋಂಟದಾರ್ಯ ಸ್ವಾಮೀಜಿಗಳು ರೈತರಿಗೆ ಬೆಂಬಲವಾಗಿ ನಿಂತು ಬಹುರಾಷ್ಟ್ರೀಯ ಕಂಪೆನಿಗಳನ್ನು ಉತ್ತರ ಕರ್ನಾಟಕದಿಂದ ಓಡಿಸಿದ್ದು ಸಣ್ಣ ಹೋರಾಟವಲ್ಲ. ಸ್ವಾಮಿ ಅಗ್ನಿವೇಶ್‌ರಂಥವರು ಜೀತದಾಳುಗಳ ವಿಮೋಚನೆಗೆ ದುಡಿದ, ಕೋಮುವಾದಿ ಶಕ್ತಿಗಳ ವಿರುದ್ಧ ನಿಂತ ಉದಾಹರಣೆಗಳಿವೆ. ಅಬಲರಿಗೆ, ಬಡವರಿಗೆ ನೆರವಾಗಲು, ವಿದ್ಯೆ ನೀಡಲು ಜೋಳಿಗೆ ಹಾಕಿಕೊಂಡು ಹೊರಟ ಸ್ವಾಮೀಜಿಗಳಿದ್ದ ಧಾರ್ಮಿಕ ಕೇಂದ್ರಗಳ ಕಾಲ ಮುಗಿದು, ಮಠಗಳಿಗೆ ಕಾರ್ಪೊರೇಟ್ ಸ್ವರೂಪ ಬಂದಿರುವುದು ಮತ್ತು ಮಠಗಳು ಸ್ವತಃ ಕಾರ್ಪೊರೇಟ್ ವಲಯದೊಡನೆ ಸಖ್ಯದಲ್ಲಿರುವುದು ಇವತ್ತಿನ ವಾಸ್ತವ. ಸಂಪತ್ತು ಶೇಖರಣೆಯಾಗುತ್ತಿದ್ದಂತೆ ಸಂಪತ್ತಿನ ಜೊತೆಜೊತೆಗೇ ವಕ್ಕರಿಸಿಕೊಳ್ಳುವ ಎಲ್ಲವೂ ಮಠಗಳಂಥ ಕೇಂದ್ರಗಳೊಳಗೂ ವಕ್ಕರಿಸಿಯಾಗಿದೆ. ಮಠಗಳು ಮಾತ್ರವಲ್ಲ, ಮದ್ರಸಾ, ಚರ್ಚುಗಳಂಥ ಇನ್ನಾವುದೇ ಧಾರ್ಮಿಕ ಕೇಂದ್ರಗಳಿಗೂ ಈ ಮಾತು 

Writer - ಆರ್. ಜೀವಿ

contributor

Editor - ಆರ್. ಜೀವಿ

contributor

Similar News