ಮಾರತ್‍ಹಳ್ಳಿ, ಬೆಳ್ಳಂದೂರು, ವರ್ತೂರು, ಮಹದೇವಪುರ ರಸ್ತೆಗಳತ್ತ ಸಾಗಬೇಡಿ: ವಾಹನ ಸವಾರರಿಗೆ ಪೊಲೀಸರ ಎಚ್ಚರಿಕೆ
Update: 2022-09-06 18:33 IST
ಬೆಂಗಳೂರು, ಸೆ.6: ಮಳೆ ನೀರಿನ ಹಿನ್ನೆಲೆ ಕೆಲ ಭಾಗದ ವಾಹನ ಸವಾರರು ಎಂದಿನಂತೆ ಸಂಚರಿಸುವ ಮಾರ್ಗಗಳನ್ನು ಬಳಕೆ ಮಾಡಬೇಡಿ ಎಂದು ಸಂಚಾರ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಪ್ರಮುಖವಾಗಿ ಐಟಿ-ಬಿಟಿ ಕಂಪೆನಿಗಳಿರುವ ಮಾರತ್‍ಹಳ್ಳಿ, ಬೆಳ್ಳಂದೂರು ಸುತ್ತಮುತ್ತ ರಸ್ತೆಯಲ್ಲಿ ಮಳೆ ನೀರು ನಿಂತಿದೆ. ಈ ಭಾಗದ ನಿವಾಸಿಗಳು ಹಾಗೂ ಕೆಲಸ ಮಾಡುವ ಐಟಿ ಉದ್ಯೋಗಿಗಳು ಎಚ್ಚರವಹಿಸಬೇಕು ಎಂದು ತಿಳಿಸಲಾಗಿದೆ.
ಬೆಳ್ಳಂದೂರಿನ ಇಕೋಸ್ಪೇಸ್ ಬಳಿ ಮಳೆ ನೀರು ತುಂಬಿ ಸರಾಗವಾಗಿ ಹರಿಯಲು ಜಾಗವಿಲ್ಲದೆ ಜಲಾವೃತ್ತಗೊಂಡಿದೆ. ಹಾಗಾಗಿ, ಕೆ.ಆರ್.ಪುರಂ, ಮಾರತ್‍ಹಳ್ಳಿ ಸಂಪರ್ಕ ಕಲ್ಪಿಸುವ ಹೊರವರ್ತುಲ ರಸ್ತೆಯಲ್ಲಿ ಸಂಚರಿಸಬೇಡಿ. ಹೀಗಾಗಿ ಮಾರತ್‍ಹಳ್ಳಿ, ವರ್ತೂರು, ಮಹದೇವಪುರ ಕಡೆ ಹೋಗುವ ವಾಹನ ಸವಾರರು ಮಡಿವಾಳ, ಸೋನಿ ಸಿಗ್ನಲ್, ಕೋರಮಂಗಲ ಹಾಗೂ ದೊಮ್ಮಲೂರು ಮೂಲಕ ತೆರಳುವಂತೆ ಟ್ರಾಫಿಕ್ ಪೊಲೀಸರು ಮೈಕ್ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡುತ್ತಿರುವ ದೃಶ್ಯ ಕಂಡಿತು.