ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ದ.ಕ., ಮೈಸೂರು, ಕೊಡಗಿನ 33 ಸ್ಥಳಗಳಲ್ಲಿ ಎನ್‌ಐಎ ಶೋಧ
ಮಂಗಳೂರು: ಬೆಳ್ಳಾರೆಯಲ್ಲಿ ಇತ್ತೀಚೆಗೆ ನಡೆದ ಬಿಜೆಪಿಯ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವ ರಾಷ್ಟ್ರೀಯ ತನಿಖಾ ದಳ(NIA)ವು ಮಂಗಳವಾರ ದ.ಕ., ಕೊಡಗು ಹಾಗೂ ಮೈಸೂರು ಜಿಲ್ಲೆಗಳಲ್ಲಿ ಶೋಧ ಕಾರ್ಯ ನಡೆಸಿತು.
ಈ ಬಗ್ಗೆ ಪತ್ರಿಕಾ ಪ್ರಕಟನೆ ಹೊರಡಿಸಿರುವ ಎನ್‌ಐಎ, ಮೂರು ಜಿಲ್ಲೆಗಳಲ್ಲಿ ಪ್ರಕರಣದ ಆರೋಪಿಗಳು ಮತ್ತು ಶಂಕಿತರಿಗೆ ಸಂಬಂಧಿಸಿದ 33 ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ. ಈ ವೇಳೆ ಡಿಜಿಟಲ್ ಉಪಕರಣಗಳು, ಮದ್ದು ಗುಂಡುಗಳು, ಸುಧಾರಿತ ಶಸ್ತ್ರಾಸ್ತ್ರಗಳು, ನಗದು, ಕರಪತ್ರಗಳು, ಸಾಹಿತ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದೆ.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(PFI) ಸಕ್ರಿಯ ಸದಸ್ಯರಾಗಿರುವ ಆರೋಪಿಗಳು ಸಮಾಜದ ಒಂದು ವರ್ಗದ ಸದಸ್ಯರಲ್ಲಿ ಭಯ ಸೃಷ್ಟಿಸುವ ದೊಡ್ಡ ಪಿತೂರಿಯ ಭಾಗವಾಗಿ ಪ್ರವೀಣ್ ನೆಟ್ಟಾರು ಹತ್ಯೆಯನ್ನು ಯೋಜಿಸಿದ್ದಾರೆ ಮತ್ತು ಮಾಡಿದ್ದಾರೆ ಎಂದು ತನಿಖೆಯಿಂದ ಬಹಿರಂಗವಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಎನ್ಐಎ ಪ್ರಕಟನೆಯಲ್ಲಿ ತಿಳಿಸಿದೆ.
ಜು.26ರಂದು ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರುರನ್ನು ದುಷ್ಕರ್ಮಿಗಳು ಹತ್ಯೆಗೈದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಹತ್ತು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.