×
Ad

ಉಡುಪಿ ಜಿಲ್ಲಾ ಸಮುದಾಯ ಆರೋಗ್ಯ ಅಧಿಕಾರಿಗಳಿಗೆ ತರಬೇತಿ ಕಾರ್ಯಗಾರ

Update: 2022-09-07 19:45 IST

ಮಣಿಪಾಲ, ಸೆ.7: ಮಣಿಪಾಲ ಕೆಎಂಸಿಯ ಸಮುದಾಯ ವೈದ್ಯಕೀಯ ವಿಭಾಗ ಹಾಗೂ ಉಡುಪಿ ಜಿಲ್ಲಾ ರೋಗ ಸರ್ವೇಕ್ಷಣಾಧಿಕಾರಿಗಳ ಕಚೇರಿಯ ಜಂಟಿ ಆಶ್ರಯದಲ್ಲಿ ಅಸಾಂಕ್ರಾಮಿಕ ರೋಗಗಳಿಗಾಗಿ (ಡಯಾಬಿಟಿಕ್, ರಕ್ತದೊತ್ತಡ, ಕ್ಯಾನ್ಸರ್,ಉಪಶಮನ ಚಿಕಿತ್ಸೆಗಳು) ತಪಾಸಣೆ, ತಡೆಗಟ್ಟುವಿಕೆ ಮತ್ತು ಚಿಕಿತ್ಸೆ ಬಗ್ಗೆ ಉಡುಪಿ ಜಿಲ್ಲೆಯ ಸುಮಾರು 250ಕ್ಕೂ ಅಧಿಕ ಸಮುದಾಯ ಆರೋಗ್ಯ ಅಧಿಕಾರಿಗಳಿಗೆ 2 ದಿನಗಳ ತರಬೇತಿ ಕಾರ್ಯಾಗಾರವನ್ನು ಕೆಎಂಸಿ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗಭೂಷಣ್ ಉಡುಪ, ಸಮುದಾಯ ಆರೋಗ್ಯ ಅಧಿಕಾರಿಗಳ ಕರ್ತವ್ಯ ಮತ್ತು ಜವಾಬ್ದಾರಿಗಳ ಬಗ್ಗೆ ಹಾಗೂ ಅವರ ಕಾರ್ಯವ್ಯಾಪ್ತಿಯಲ್ಲಿರುವ ಜನರ ಆರೋಗ್ಯದ ಬಗ್ಗೆ ಸಂಪೂರ್ಣ ಅರಿವು ಇರಬೇಕೆಂದು ಸೂಚಿಸಿದರು. 

ಕೆಎಂಸಿಯ ಡೀನ್ ಡಾ.ಶರತ್ ಕೆ ರಾವ್ ಮಾತನಾಡಿ, ಸಮುದಾಯದಲ್ಲಿ ಡಯಾಬಿಟಿಸ್, ರಕ್ತದೊತ್ತಡ, ಕ್ಯಾನ್ಸರ್‌ ನಂಥ ರೋಗಗಳ ನಿರ್ವಹಣೆಗೆ  ಇಂತಹ ನಿರಂತರ ಕಾರ್ಯಗಾರಗಳ ಅಗತ್ಯತೆಯ ಮಹತ್ವ ವಿವರಿಸಿದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಾಗರತ್ನ ಶಾಸ್ತ್ರಿ, ಸಮುದಾಯದಲ್ಲಿ ಕಂಡುಬರುವ ವಿವಿಧ ಅಸಾಂಕ್ರಾಮಿಕ ಕಾಯಿಲೆಗಳ ಕುರಿತು ವಿವರಿಸಿ ಅವುಗಳನ್ನು ನಿರ್ವಹಿಸುವ ಬಗ್ಗೆ ಸೂಚನೆಗಳನ್ನು ನೀಡಿದರು.

ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ.ಅಶ್ವಿನಿ ಕುಮಾರ್ ಅವರು ಸಮುದಾಯ ಆರೋಗ್ಯ ಅಧಿಕಾರಿಗಳ ಕಾರ್ಯವ್ಯಾಪ್ತಿಯಲ್ಲಿರುವ ಸುಮಾರು  5000 ಜನರಲ್ಲಿ ಕಂಡುಬರುವ ರೋಗಗಳನ್ನು ಪತ್ತೆ ಹಚ್ಚುವ ಬಗ್ಗೆ ಹಾಗೂ ಆ ಮೂಲಕ ಎಲ್ಲರಿಗೂ ಆರೋಗ್ಯ ಎನ್ನುವ  ಸರಕಾರದ ಆಶಯಗಳನ್ನು ನೆರವೇರಿಸಬೇಕೆಂದು ತಿಳಿಸಿದರು.

ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ಟಿಎಂಎ ಪೈ ಆಸ್ಪತ್ರೆಯ ವೈದ್ಯಕೀಯ ಅಧಿಕ್ಷಕ ಡಾ. ಶಶಿಕಿರಣ್, ಡಾ. ಸಹನಾ ಶೆಟ್ಟಿ, ಡಾ.ಸೀಮಾ ಶೆಟ್ಟಿ, ಡಾ.ನವೀನ್ ಸಲಿನ್ಸ್, ಡಾಕೃತಿಕಾ, ಡಾ.ರಂಜಿತಾ ಶೆಟ್ಟಿ, ಡಾ.ಚೈತ್ರಾರಾವ್, ಡಾ. ಸಂಜಯ್ ಕಿಣಿ , ಡಾ.ದೀಕ್ಷಿತ್ ಶೆಟ್ಟಿ, ಡಾ. ಸ್ನೇಹಾ ದೀಪಕ್ ಮಲ್ಯ, ಡಾ.ಈಶ್ವರಿ ಕೆ, ಸುವರ್ಣಾ ಹೆಬ್ಬಾರ್ ಭಾಗವಹಿಸಿದರು.

ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಸ್ವಾಗತಿಸಿದರು. ಡಾ. ಮುರಳೀಧರ್ ಕುಲಕರ್ಣೆ, ಡಾ.ಅಫ್ರಾಜ್ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News