×
Ad

2028ರೊಳಗೆ ಉಡುಪಿ ಜಿಲ್ಲೆಯನ್ನು ಮಲೇರಿಯಾ ಮುಕ್ತಗೊಳಿಸುವ ಗುರಿ: ಡಿಸಿ ಕೂರ್ಮಾರಾವ್

Update: 2022-09-07 20:33 IST

ಉಡುಪಿ, ಸೆ.7: ಜಿಲ್ಲೆಯಲ್ಲಿ  ಮಲೇರಿಯಾ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಾ ಬರುತ್ತಿದೆ. 2028ರೊಳಗೆ ಜಿಲ್ಲೆಯನ್ನು  ಮಲೇರಿಯ ಮುಕ್ತ ಜಿಲ್ಲೆಯನ್ನಾಗಿಸಬೇಕೆಂಬ ಗುರಿಯನ್ನು ಹಾಕಿಕೊಳ್ಳಲಾಗಿದೆ. ಆದರೆ  ಜಿಲ್ಲೆಯಲ್ಲಿ ಡೆಂಗಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿವೆ. ಇವುಗಳ ಹತೋಟಿಗೆ ಸ್ಥಳೀಯ ಸಂಸ್ಥೆಗಳು ಗ್ರಾಮ ಪಂಚಾಯತ್‌ಗಳ ಸಹಕಾರದೊಂದಿಗೆ ನಿಯಂತ್ರಣ ಕಾರ್ಯಕ್ರಮಕ್ಕೆ ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಹೇಳಿದ್ದಾರೆ.

ಮಣಿಪಾಲದ ಜಿಲಾಧಿಕಾರಿ ಕಚೇರಿ ಸಂಕೀರ್ಣದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬುಧವಾರ ನಡೆದ ಆರೋಗ್ಯ ಇಲಾಖೆಯ ವಿವಿಧ ಸಮಿತಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಸಾಮಾನ್ಯವಾಗಿ ಪ್ರತಿ ವರ್ಷವೂ ಮಳೆಗಾಲದಲ್ಲಿ ಅನೇಕ ಸಾಂಕ್ರಾಮಿಕ ರೋಗಗಳು ಹೆಚ್ಚಾಗಿ  ಕಂಡುಬರುತ್ತವೆ. ಕಾರಣ  ರೋಗವಾಹಕಗಳಾದ ಸೊಳ್ಳೆ ಸೇರಿದಂತೆ ವಿವಿಧ ಕೀಟಗಳು ಮಳೆಗಾಲದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತವೆ. ಇವುಗಳ ಹತೋಟಿಯ ಬಗ್ಗೆ ಜನಜಾಗೃತಿ ಮೂಡಿಸುವುದು ಅತ್ಯಗತ್ಯ. ಈ ಬಗ್ಗೆ  ಯೋಜನೆ ರೂಪಿಸಿ, ಅದಕ್ಕನುಗುಣವಾಗಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಂತೆ ಕೂರ್ಮಾರಾವ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜನ ಸಾಮಾನ್ಯರಿಗೆ ಆರೋಗ್ಯ ಶಿಕ್ಷಣದ ಬಗ್ಗೆ ಹೆಚ್ಚಿನ ಅರಿವು ಮೂಡಿಸು ವುದರಿಂದ ಜನರು ಯಾವುದೇ ರೋಗದ ಬಗ್ಗೆ ಮುಂಜಾಗ್ರತೆ ವಹಿಸಿ ಅವುಗಳಿಂದ ದೂರವಿರಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಕಾರ್ಯಪ್ರವೃತ್ತವಾಗಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾರ್ವಜನಿಕರು ಎಲ್ಲಾ ರೀತಿಯ ರೋಗಗಳ ಹರಡುವಿಕೆ,  ಅವುಗಳ ಲಕ್ಷಣ, ಮುಂಜಾಗ್ರತಾ ಕ್ರಮಗಳು, ಅವುಗಳಿಗೆ ಚಿಕಿತ್ಸೆ ಪಡೆಯುವ ಬಗ್ಗೆ ಮಾಹಿತಿ ಹೊಂದಿದಾಗ ಮಾತ್ರ ಸಾಧ್ಯ.  ಮುಂಜಾಗ್ರತೆ ಇದ್ದಲ್ಲಿ ಸಾಂಕ್ರಾಮಿಕ ರೋಗಗಳು ಹರಡುವುದನ್ನು ನಿಯಂತ್ರಿಸಬಹುದು ಎಂದರು.

ಬಾಣಂತಿಯರಿಗೆ ತಾಯಿ ಕಾರ್ಡ್: ಬಾಣಂತಿಯರಿಗೆ ಆರಂಭಿಕ ಹಂತದಲ್ಲೇ ತಾಯಿ ಕಾರ್ಡ್‌ನ್ನು ನೀಡುವ ಮೂಲಕ ಪ್ರತಿ ತಿಂಗಳು ಆರೋಗ್ಯ ತಪಾಸಣೆ ಯನ್ನು ನಿಯಮಿತವಾಗಿ ಮಾಡಿ. ಅವರು ಉತ್ತಮ ಆರೋಗ್ಯ ಕಾಯ್ದುಕೊಳ್ಳುವ  ಬಗ್ಗೆ ಸೂಚನೆಗಳನ್ನು ನೀಡುವುದರ ಜೊತೆಗೆ ಪೌಷ್ಠಿಕ ಆಹಾರ ಸೇವನೆಗೆ ಶಿಫಾರಸು ಮಾಡಬೇಕು. ಈ ಕಾರ್ಯವನ್ನು ಆಶಾ ಹಾಗೂ ಆಂಗನವಾಡಿ ಕಾರ್ಯಕರ್ತರು ಮತುವರ್ಜಿ ವಹಿಸಿ ಮಾಡಿದಾಗ ಮಾತ್ರ ಶಿಶು ಮತ್ತು ತಾಯಿ ಮರಣವನ್ನು ಕಡಿಮೆಗೊಳಿಸಲು ಸಾಧ್ಯಎಂದರು.

ಆಯುಷ್ಮಾನ್ ಆರೋಗ್ಯ ಕರ್ನಾಟಕ ಯೋಜನೆಯಡಿ ಚಿಕಿತ್ಸೆಗೆ ಬರುವ ಜಿಲ್ಲೆಯ ರೋಗಿಗಳಿಗೆ ಶೇ.50ರಷ್ಟು ಹಾಸಿಗೆಗಳನ್ನು ಮೀಸಲಿಡುವುದರೊಂದಿಗೆ ಚಿಕಿತ್ಸೆ ನೀಡಲು ಖಾಸಗಿ ಆರೋಗ್ಯ ಸಂಸ್ಥೆಗಳು ಮುಂದಾಗಬೇಕು ಎಂದು ಕೂರ್ಮಾರಾವ್ ಸೂಚನೆಗಳನ್ನು ನೀಡಿದರು.

703 ಕ್ಷಯರೋಗಿಗಳು ಪತ್ತೆ: ಕ್ಷಯರೋಗ ನಿಯಂತ್ರಣಕ್ಕೆ ಹೆಚ್ಚು ಹೆಚ್ಚು ಪರೀಕ್ಷೆಗಳನ್ನು ಮಾಡಬೇಕು. ಸಂಭಾವ್ಯ ಕ್ಷಯರೋಗ ಪ್ರಕರಣಗಳ ರೋಗಿಗಳಿಗೆ ಸೂಕ್ತ ಚಿಕಿತ್ಸೆಯನ್ನು ನೀಡಬೇಕು. ಇದರಿಂದ ಒಬ್ಬರಿಂದ ಒಬ್ಬರಿಗೆ ರೋಗ ಹರಡುವುದನ್ನು ತಡೆಯಬಹುದಾಗಿದೆ ಎಂದ ಅವರು, ಜಿಲ್ಲೆಯಲ್ಲಿ  ಪ್ರಸ್ತುತ ಸಾಲಿನಲ್ಲಿ 9540 ಜನರಿಗೆ ಕ್ಷಯಪರೀಕ್ಷೆ ನಡೆಸಿದಾಗ 703 ಪ್ರಕರಣಗಳು ಪತ್ತೆಯಾಗಿದ್ದು ಪ್ರತಿಯೊಬ್ಬರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ ತಂಬಾಕು ನಿಯಂತ್ರಣವನ್ನು ಎಲ್ಲಾ ಇಲಾಖಾಧಿಕಾರಿಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿ ಸಲು ಮುಂದಾಗಬೇಕು. ಹೆಚ್ಚು ಹೆಚ್ಚು  ದಾಳಿಗಳನ್ನು ನಡೆಸಿ ಕೋಟ್ಪಾ ಕಾಯ್ದೆಯನ್ನು ಉಲ್ಲಂಘಿಸಿರುವುದು ಕಂಡುಬಂದಲ್ಲಿ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಅಡಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಕೋವಿಡ್ ಮುನ್ನೆಚ್ಚರಿಕಾ ಡೋಸ್‌ನ್ನು ಆರೋಗ್ಯ ಕೇಂದ್ರಗಳಲ್ಲಿ ವಿತರಿಸಲಾಗುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದವರು ಮನವಿ ಮಾಡಿದರು. ಆಹಾರ ಉತ್ಪನ್ನಗಳ ತಯಾರಕರು ಸೂಕ್ತ ಪ್ರಾಧಿಕಾರದಿಂದ ಅನುಮತಿ ಪತ್ರವನ್ನು ಕಡ್ಡಾಯವಾಗಿ ಪಡೆಯುವುದರ ಜೊತೆಗೆ ಗುಣಮಟ್ಟದ ಆಹಾರ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಎಚ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗಭೂಷಣ ಉಡುಪ, ಜಿಲ್ಲಾ ಸರ್ಜನ್ ಡಾ.ಮಧುಸೂದನ್ ನಾಯಕ್ ಹಾಗೂ ವಿವಿಧ ಇಲಾಖೆಗಳ  ಮತ್ತು ಆರೋಗ್ಯ ಇಲಾಖೆಯ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.

217 ಹಂದಿ ಜ್ವರ ಪ್ರಕರಣ, ಓರ್ವ ಸಾವು

ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ 217 ಹಂದಿ ಜ್ವರದ ಪ್ರಕರಣಗಳು ಕಂಡುಬಂದಿದ್ದು, ಒಂದು ಸಾವು ಸಂಭವಿಸಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಮಂಕಿ ಫಾಕ್ಸ್ ಪ್ರಕರಣಕ್ಕೆ ಸಂಬಂದಿಸಿದಂತೆ 21 ಶಂಕಿತರ ಮೇಲೆ ನಿಗಾ ಇರಿಸಿ ಪರಿಶೀಲಿಸಲಾಗಿದ್ದು, ಯಾವುದೇ ಪಾಸಿಟಿವ್ ಪ್ರಕರಣಗಳು ಕಂಡು ಬಂದಿಲ್ಲ. ಒಂದು ವೇಳೆ ಪ್ರಕರಣ ಕಂಡುಬಂದಲ್ಲಿ ಇವುಗಳ ನಿಯಂತ್ರಣ ಹಾಗೂ ಚಿಕಿತ್ಸೆಗೆ ಮುಂದಾಗಬೇಕು ಎಂದರು.

ಕೋಡಿಬೆಂಗ್ರೆ ಗ್ರಾಮಸ್ಥರಿಗೆ ಪ್ರಮಾಣಪತ್ರ

ಜಿಲ್ಲೆಯಲ್ಲಿ ತಂಬಾಕು ಮುಕ್ತ ಗ್ರಾಮವೆಂದು  ಘೋಷಿಸಿದ ಕೋಡಿಬೆಂಗ್ರೆ ಗ್ರಾಮದ ಗ್ರಾಮಸ್ಥರಿಗೆ ಪ್ರಶಂಸನೀಯ ಪ್ರಮಾಣ ಪತ್ರವನ್ನು ನೀಡಿ ಮಾತನಾಡಿದ ಜಿಲ್ಲಾಧಿಕಾರಿ ಕೂರ್ಮಾರಾವ್, ಜಿಲ್ಲೆಯ ಇತರೆ ಗ್ರಾಮಗಳನ್ನು ಸಹ ತಂಬಾಕು ಹಾಗೂ ಮದ್ಯಮುಕ್ತ ಗ್ರಾಮವಾಗಿಸಲು ಮುಂದಾಗಬೇಕು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸಲಹೆ ನೀಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News