ರಾಜಕಾಲುವೆ ಒತ್ತುವರಿ; ಕೆಲವು ಅಪಾರ್ಟ್‍ಮೆಂಟ್‍ಗಳಿಗೆ ಬಿಬಿಎಂಪಿಯಿಂದ ನೋಟಿಸ್
ಬೆಂಗಳೂರು, ಸೆ.8: ಮಳೆ ನೀರಿನಿಂದ ಅನಾಹುತಕ್ಕೆ ಒಳಗಾಗಿರುವ ಪ್ರದೇಶವಾದ ಯಮಲೂರು ಬಳಿ ರಾಜಕಾಲುವೆ ಒತ್ತುವರಿ ಮಾಡಿ ನಿರ್ಮಿಸಿಕೊಂಡಿದ್ದ ಅಪಾರ್ಟ್‍ಮೆಂಟ್ ಭಾಗವನ್ನು ತೆರವುಗೊಳಿಸಲು ಮಾಲಕರಿಗೆ ಬಿಬಿಎಂಪಿ ನೋಟಿಸ್ ನೀಡಿದೆ ಎಂದು ವರದಿಯಾಗಿದೆ.
ಸುಮಾರು 400 ಮೀ ಒತ್ತುವರಿ ತೆರವುಗೊಳಿಸಲಾಗಿದೆ. ಇದರಿಂದ ಸುತ್ತಲಿನ ಪ್ರದೇಶಗಳಲ್ಲಿ ನಿಂತಿದ್ದ 4 ಅಡಿಯಷ್ಟು ನೀರು ಹರಿದು ಹೋಗಿದೆ. ಒತ್ತುವರಿ ಸ್ಥಳದಲ್ಲಿ ಗಟ್ಟಿ ಗೋಡೆಗಳನ್ನು ನಿರ್ಮಿಸಿದ್ದರಿಂದ ತೆರವು ಸವಾಲಾಗಿತ್ತು. ವೆಚ್ಚವನ್ನು ಅಪಾರ್ಟ್‍ಮೆಂಟ್ ಮಾಲಕರಿಂದಲೇ ವಸೂಲಿ ಮಾಡಲಾಗುವುದು ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಅದೇ ರೀತಿ, ಹಾಲನಾಯಕನಹಳ್ಳಿ ಕೆರೆಯ ನೀರು ಹರಿಯುವ ಪ್ರದೇಶ ಒತ್ತುವರಿ ಮಾಡಿಕೊಂಡು ನಿರ್ಮಿಸಲಾಗಿರುವ ರೈನ್‍ಬೋ ಡ್ರೈವ್ ಬಡಾವಣೆಯ 32 ಮನೆಗಳನ್ನು ತೆರವುಗೊಳಿಸಲು ನೋಟಿಸ್ ಜಾರಿಗೊಳಿಸಲಾಗಿದೆ. ಮನೆಗಳ ತೆರವು ಮಾಡಿ ನೀರು ಸರಾಗವಾಗಿ ಹರಿಯಲು ದೊಡ್ಡ ಕೊಳವೆ ಮಾದರಿ ಕಾಲುವೆ ನಿರ್ಮಿಸಬೇಕಿದೆ. ಶೀಘ್ರ ಡಿಪಿಆರ್ ಸಿದ್ಧಪಡಿಸಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಪಾಲಿಕೆ ಮೂಲಗಳು ತಿಳಿಸಿವೆ.