ಬೆಂಗಳೂರು: ಪೊಲೀಸರಿಗೆ ಪಿಸ್ತೂಲು ತೋರಿಸಿ ಪರಾರಿಯಾಗಿದ್ದ ಆರೋಪಿ ಸೆರೆ
ಬೆಂಗಳೂರು, ಸೆ.8: ಮಾದಕ ವಸ್ತು ಸರಬರಾಜು ಆರೋಪ ಪ್ರಕರಣ ಸಂಬಂಧ ವಶಕ್ಕೆ ಪಡೆಯಲು ಬಂದಿದ್ದ ಪಿಎಸ್ಸೈಗೆ ಪಿಸ್ತೂಲ್ ತೋರಿಸಿ ಪರಾರಿಯಾಗಿದ್ದ ಆರೋಪಿಯನ್ನು ಎಚ್‍ಎಸ್‍ಆರ್ ಲೇಔಟ್ ಹಾಗೂ ಕೇರಳ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಕೇರಳ ಮೂಲದ ಝಫರ್ ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ಕೇರಳದ ಕುರತಿಕಾಡ್ ಠಾಣೆಯಲ್ಲಿ ದಾಖಲಾಗಿದ್ದ ಎನ್‍ಡಿಪಿಎಸ್ ಪ್ರಕರಣದ ಆರೋಪಿಯಾಗಿದ್ದ ಝಾಫರ್‍ನನ್ನು ಅಲ್ಲಿನ ಪೊಲೀಸರು ವಶಕ್ಕೆ ಪಡೆಯಲು ಬಂದಿದ್ದ ಆ.24ರ ರಾತ್ರಿ ಆರೋಪಿ ಎಚ್‍ಎಸ್‍ಆರ್ ಲೇಔಟ್ ವ್ಯಾಪ್ತಿಯಲ್ಲಿದ್ದ.
ಈ ವೇಳೆ ಪಿಎಸ್ಸೈ ಸುನುಮಾನ್ ಅವರಿಗೆ ಪಿಸ್ತೂಲ್ ತೋರಿಸಿ ಆರೋಪಿ ತನ್ನ ಸಹಚರನೊಂದಿಗೆ ಕಾರಿನಲ್ಲಿ ಪರಾರಿ ಆಗುವಲ್ಲಿ ಯಶಸ್ವಿಯಾಗಿದ್ದ.ಘಟನೆ ಸಂಬಂಧ ಕುರತಿಕಾಡ್ ಠಾಣಾ ಪಿಎಸ್ಸೈ ಸುನುಮಾನ್ ಎಚ್‍ಎಸ್‍ಆರ್ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಶಸ್ತ್ರಾಸ್ತ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು, ಕೇರಳ ಪೊಲೀಸರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿದ ಎಚ್‍ಎಸ್‍ಆರ್ ಲೇಔಟ್ ಪೊಲೀಸರು ಕೋಲಾರ ಬಳಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.