×
Ad

ಶಿರೂರು ಕಳಿಹಿತ್ಲು ಪ್ರದೇಶಗಳಿಗೆ ಕೇಂದ್ರ ಅಧ್ಯಯನ ತಂಡ ಭೇಟಿ; ಮಳೆ ಹಾನಿ ಪರಿಶೀಲನೆ

Update: 2022-09-08 21:08 IST

ಕುಂದಾಪುರ, ಸೆ.8: ಕಳೆದ ತಿಂಗಳು ಮೇಘಸ್ಪೋಟದಿಂದ ದಿಢೀರ್ ಜಲಪ್ರಳಯ ಉಂಟಾದ ಮರವಂತೆ, ಉಪ್ಪುಂದ ಹಾಗೂ ಶಿರೂರು ಕಳಿಹಿತ್ಲು ಪ್ರದೇಶಕ್ಕೆ ಗುರುವಾರ ಆಂತರಿಕ ಸಚಿವರ ಕೇಂದ್ರ ತಂಡ (ಕೇಂದ್ರ ಮಳೆ ಹಾನಿ ಅಧ್ಯಯನ ತಂಡ) ಭೇಟಿ ನೀಡಿದ್ದು, ಹಾನಿಗೊಳಗಾದ ಪ್ರದೇಶಗಳ ಪರಿಶೀಲನೆ ನಡೆಸಿತು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಕೇಂದ್ರ ಆಂತರಿಕ ಸಚಿವರ ಕೇಂದ್ರ ತಂಡದ ಕಮಿಷನರ್ ಡಾ.ಮನೋಜ್‌ರಾಜನ್, ಕರ್ನಾಟಕ ರಾಜ್ಯದ ಒಟ್ಟು 27 ಜಿಲ್ಲೆಗಳಲ್ಲಿ ಮಳೆ ಹಾನಿ ಸಂಭವಿಸಿ ಅಪಾರ ಹಾನಿ ಉಂಟಾಗಿದೆ. ರಸ್ತೆ ಹಾನಿ, ಸೇತುವೆ ಸೇರಿದಂತೆ ಜೀವಹಾನಿ ಕೂಡ ಸಂಭವಿಸಿದೆ. ಕರ್ನಾಟಕ ಸರಕಾರ ಇದರಿಂದ ಅಂದಾಜು ಸಾವಿರದ ಹನ್ನೆರಡು ಕೋಟಿ ನಷ್ಟ ಸಂಭವಿಸಿರುವ ಬಗ್ಗೆ ಕೇಂದ್ರ ಸರಕಾರಕ್ಕೆ ವರದಿ ಸಲ್ಲಿಸಿತ್ತು ಎಂದರು.

ಈ ವರದಿ ಆಧಾರದ ಮೇಲೆ ವಸ್ತು ಸ್ಥಿತಿ ಮತ್ತು ಹಾನಿ ವಿವರ ಕಲೆಹಾಕಲು ಏಳು ಜನರ ಒಟ್ಟು ಮೂರು ತಂಡಗಳು ಕರ್ನಾಟಕಕ್ಕೆ ಆಗಮಿಸಿವೆ. ಹಾನಿಯಾದ ವಿವರಗಳನ್ನು ಪಡೆದು ಕೇಂದ್ರ ಸರಕಾರಕ್ಕೆ ವರದಿ ನೀಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಕೇಂದ್ರ ಮಳೆಹಾನಿ ಅಧ್ಯಯನ ತಂಡದ ಮುಖ್ಯಸ್ಥ ಹಾಗೂ ಕೇಂದ್ರ ಗ್ರಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಆಶೀಶ್ ಕುಮಾರ್, ಕೇಂದ್ರ ಹಣಕಾಸು ಇಲಾಖೆಯ ಉಪ ನಿರ್ದೇಶಕ ಮಹೇಶ ಕುಮಾರ್, ಕೇಂದ್ರ ಇಂಧನ ಇಲಾಖೆಯ ಸಹಾಯಕ ನಿರ್ದೇಶಕಿ ಭವ್ಯಾ ಪಾಂಡೆ, ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ, ಕುಂದಾಪುರ ಸಹಾಯಕ ಕಮಿಷನರ್ ರಾಜು, ಪೊಲೀಸ್ ವರಿಷ್ಠಾಧಿಕಾರಿ ಹಾಕೆ ಅಕ್ಷಯ್ ಮಚ್ಚಿಂದ್ರ, ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್, ಬೈಂದೂರು ತಹಶೀಲ್ದಾರ್ ಕಿರಣ ಗೌರಯ್ಯ, ಮೀನುಗಾರಿಕಾ ಸಹಾಯಕ ನಿರ್ದೇಶಕ ಶಿವಕುಮಾರ್, ಸಹಾಯಕ ನಿರ್ದೇಶಕಿ ಸುಮಲತಾ, ಮೀನುಗಾರಿಕಾ ಇಲಾಖೆಯ ಗಣೇಶ್, ಉಪ್ಪುಂದ ರಾಣಿಬಲೆ ಮೀನುಗಾರರ ಸಂಘದ ಅಧ್ಯಕ್ಷ ವೆಂಕಟರಮಣ ಖಾರ್ವಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News