ಗುರುಕುಲ ಪದ್ಧತಿಯ ಶಿಷ್ಯನು ಸಮರ್ಥನಾಗುತ್ತಾನೆ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
ಬೆಂಗಳೂರು, ಸೆ.8:ಪ್ರಾಚೀನ ಕಾಲದಲ್ಲಿ ಭಾರತದಲ್ಲಿ ಗುರುಕುಲ ಪದ್ಧತಿಯ ಮೂಲಕ ಶಿಕ್ಷಣ ನೀಡಲಾಗುತ್ತಿತ್ತು. ಈ ವಿಧಾನದಿಂದ ಕಲಿತ ಜ್ಞಾನವನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಶಿಷ್ಯನು ಸಮರ್ಥನಾಗಿದ್ದಾನೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಭಿಪ್ರಾಯಪಟ್ಟರು.
ರಾಜ್ಯ ಕಾಲೇಜು ಶಿಕ್ಷಕರ ಸಂಘ ಮತ್ತು ಕರ್ನಾಟಕ ರಾಜ್ಯ ತಾಂತ್ರಿಕ ಕಾಲೇಜು ಅಸೋಸಿಯೇಷನ್, ಅಖಿಲ ಭಾರತ ರಾಷ್ಟ್ರೀಯ ಶಿಕ್ಷಕರ ಫೆಡರೇಶನ್, ಬೆಂಗಳೂರು ನಗರ ವಿಶ್ವವಿದ್ಯಾಲಯ, ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಏರ್ಪಡಿಸಿದ್ದ "ಉನ್ನತ ಶಿಕ್ಷಣ, ಉನ್ನತ ಭಾರತ" ಎಂಬ ವಿಷಯ ಕುರಿತು ವಿಚಾರ ಸಂಕಿರಣವನ್ನುದ್ದೇಶಿಸಿ ಅವರು ಮಾತನಾಡಿದರು.
ತಕ್ಷಶಿಲಾ ಹಾಗೂ ನಳಂದ ವಿಶ್ವವಿದ್ಯಾಲಯಗಳು ಸಾವಿರಾರು ವರ್ಷಗಳ ಹಿಂದೆ ಸ್ಥಾಪಿಸಲಾಯಿತು. ಈ ವಿಶ್ವವಿದ್ಯಾನಿಲಯ ವಿಜ್ಞಾನ, ತಂತ್ರಜ್ಞಾನ, ಗಣಿತ, ಖಗೋಳಶಾಸ್ತ್ರ ಸೇರಿ ಮುಂತಾದ ಹಲವು ವಿಷಯಗಳಿಗೆ ಪ್ರಸಿದ್ಧವಾಗಿದೆ. ಪ್ರಪಂಚದಾದ್ಯಂತದ ವಿದ್ಯಾರ್ಥಿಗಳು ಈ ವಿಶ್ವವಿದ್ಯಾಲಯಕ್ಕೆ ಅಧ್ಯಯನ ಮಾಡಲು ಬರುತ್ತಿದ್ದರು. ಚರಕ, ಸುಶ್ರುತ, ಆರ್ಯಭಟ, ಚಾಣಕ್ಯ ಮುಂತಾದವರು ಜ್ಞಾನವನ್ನು ಪಡೆದು ವಿವಿಧ ಕ್ಷೇತ್ರಗಳಲ್ಲಿ ನೀಡಿದ ಪ್ರಮುಖ ಕೊಡುಗೆಯಿಂದಾಗಿ ನಾವು ವಿಶ್ವಗುರು ಎಂದು ಪರಿಗಣಿಸಲ್ಪಟ್ಟಿದ್ದೇವೆ ಎಂದು ತಿಳಿಸಿದರು.
ಭಾರತವು ಸಾವಿರಾರು ವರ್ಷಗಳಿಂದ ಬೌದ್ಧಿಕ ಆಸ್ತಿಯಲ್ಲಿ ಶ್ರೀಮಂತವಾಗಿದೆ. ಜ್ಞಾನ ಮತ್ತು ವಿಜ್ಞಾನದ ಶ್ರೇಷ್ಠ ಸಂಪ್ರದಾಯವನ್ನು ಹೊಂದಿದೆ. ಪ್ರಾಚೀನ ಭಾರತವು ಋಷಿಗಳು ಮತ್ತು ಸಂತರ ನಾಡು ಮತ್ತು ಮಹಾನ್ ಸಂಶೋಧಕರು ಮತ್ತು ವಿಜ್ಞಾನಿಗಳ ಕಾರ್ಯದ ಸ್ಥಳವಾಗಿದೆ.
ಪ್ರಾಚೀನ ವೇದಕಾಲದಿಂದ ಇಂದಿನವರೆಗೆ ಭಾರತೀಯರು ಎಲ್ಲಾ ಕ್ಷೇತ್ರಗಳಲ್ಲಿ ಅನುಪಮವಾದ ಜ್ಞಾನವನ್ನು ಗಳಿಸಿದ್ದಾರೆ. ಖಗೋಳಶಾಸ್ತ್ರದಿಂದ ಭೂವಿಜ್ಞಾನ, ಗಣಿತ, ವೈದ್ಯಕೀಯ ಮತ್ತು ಇತರ ಹಲವು ಕ್ಷೇತ್ರಗಳಲ್ಲಿ ಭಾರತೀಯರ ಕೊಡುಗೆ ಜಗತ್ತಿಗೆ ಮಹತ್ವದ್ದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಅಖಿಲ ಭಾರತ ರಾಷ್ಟ್ರೀಯ ಶಿಕ್ಷಕರ ಒಕ್ಕೂಟದ ಸಂಸ್ಥಾಪಕ ಪ್ರೊ.ಕೆ. ನರಹರಿ, ಸಂಘಟನಾ ಕಾರ್ಯದರ್ಶಿ, ಮಹೇಂದ್ರ ಕಪೂರ್, ಜಂಟಿ ಸಂಘಟನಾ ಕಾರ್ಯದರ್ಶಿ ಸೇರಿದಂತೆ ಪ್ರಮುಖರಿದ್ದರು.