ಭಾರತದಲ್ಲಿ ಸಂತಾನೋತ್ಪತ್ತಿ ದರದಲ್ಲಿ ಇಳಿಕೆ!

Update: 2022-09-09 04:45 GMT

ಭಾರತದಲ್ಲಿ ಒಟ್ಟು ಸಂತಾನೋತ್ಪತ್ತಿ ದರ- ಟೋಟಲ್ ಫರ್ಟಿಲಿಟಿ ರೇಟ್ (ಟಿಎಫ್‌ಆರ್) ಪ್ರತೀ ಮಹಿಳೆಗೆ 2.0 ಮಕ್ಕಳು ಎಂದು ಇತ್ತೀಚೆಗೆ ಬಿಡುಗಡೆಗೊಂಡಿರುವ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 2019-21 (ಎನ್‌ಎಫ್‌ಎಚ್‌ಎಸ್-5) ತಿಳಿಸಿದೆ. ಗ್ರಾಮೀಣ ಮಹಿಳೆಯರು ನಗರವಾಸಿ ಮಹಿಳೆಯರಿಗಿಂತ ಸರಾಸರಿ ಅಧಿಕ ಸಂತಾನೋತ್ಪತ್ತಿ ದರವನ್ನು ಹೊಂದಿದ್ದಾರೆ. ಗ್ರಾಮೀಣ ಮಹಿಳೆಯರ ಒಟ್ಟು ಸಂತಾನೋತ್ಪತ್ತಿ ದರವು 2.1 ಆದರೆ, ನಗರವಾಸಿ ಮಹಿಳೆಯರದ್ದು 1.6.

ವರ್ಷಗಳುರುಳಿದಂತೆ ಇಳಿಕೆ

ಭಾರತದಲ್ಲಿ ಒಟ್ಟು ಸಂತಾನೋತ್ಪತ್ತಿ ದರ (ಟಿಎಫ್‌ಆರ್)ವು ವರ್ಷಗಳು ಉರುಳಿದಂತೆ ಗಣನೀಯವಾಗಿ ಕಡಿಮೆಯಾಗಿದೆ. 1992-93 ಮತ್ತು 2019-21ರ ನಡುವಿನ ಅವಧಿಯಲ್ಲಿ ಅದು 3.4 ಮಕ್ಕಳಿಂದ 2.0 ಮಕ್ಕಳಿಗೆ ಇಳಿದಿದೆ (ಅಂದರೆ ಪ್ರತೀ ಮಹಿಳೆಯ ಮಕ್ಕಳ ಸಂಖ್ಯೆಯಲ್ಲಿ 1.4 ಕಡಿಮೆಯಾಗಿದೆ).

ಗ್ರಾಮೀಣ ಪ್ರದೇಶಗಳಲ್ಲಿ, ಮಹಿಳೆಯರ ಒಟ್ಟು ಸಂತಾನೋತ್ಪತ್ತಿ ದರವು 1992-93ರಲ್ಲಿದ್ದ 3.7ರಿಂದ 2019-21ರ ಅವಧಿಯಲ್ಲಿ 2.1ಕ್ಕೆ ಇಳಿದಿದೆ. ನಗರವಾಸಿ ಮಹಿಳೆಯರಲ್ಲಿ ಈ ದರವು 1992-93ರಲ್ಲಿದ್ದ 2.7 ಮಕ್ಕಳಿಂದ 2019-21ರಲ್ಲಿ 1.6ಕ್ಕೆ ಇಳಿದಿದೆ.

ಎಲ್ಲ ಎನ್‌ಎಫ್‌ಎಚ್‌ಎಸ್ ಸಮೀಕ್ಷೆಗಳಲ್ಲಿ, ಗ್ರಾಮೀಣ ಪ್ರದೇಶವಾಗಲಿ, ನಗರ ಪ್ರದೇಶವಾಗಲಿ ಮಹಿಳೆಯರ 20-24ರ ವಯಸ್ಸಿನಲ್ಲಿ ಸಂತಾನೋತ್ಪತ್ತಿ ದರವು ಗರಿಷ್ಠ ಮಟ್ಟ ಮುಟ್ಟುತ್ತದೆ. ಬಳಿಕ ಅದು ನಿರಂತರವಾಗಿ ಕಡಿಮೆಯಾಗುತ್ತದೆ.

ಗರಿಷ್ಠ ಸಂಪತ್ತು ವರ್ಗದಲ್ಲಿ  ಇಂಟರ್‌ನೆಟ್ ಬಳಕೆದಾರರೂ ಗರಿಷ್ಠ

ಹದಿಹರೆಯದ ತಾಯಂದಿರ ಸಂಖ್ಯೆಯಲ್ಲಿ ಇಳಿಕೆ

*ಹದಿಹರೆಯದ ತಾಯಂದಿರ ಸಂಖ್ಯೆಯು 2015-16 (ಶೇ.8) ಮತ್ತು 2019-21 (ಶೇ.7)ರ ನಡುವಿನ ಅವಧಿಯಲ್ಲಿ ಕೊಂಚ ಇಳಿಕೆಯಾಗಿದೆ.

*ನಗರ ಪ್ರದೇಶಗಳಿಗೆ ಹೋಲಿಸಿದರೆ ಗ್ರಾಮೀಣ ಪ್ರದೇಶಗಳಲ್ಲಿ ಹದಿಹರೆಯ ದವರು ಗರ್ಭಿಣಿಯಾಗುವ ಪ್ರಕರಣಗಳು ಹೆಚ್ಚು. ಗ್ರಾಮೀಣ ಪ್ರದೇಶಗಳಲ್ಲಿ, 15-19 ವಯೋಗುಂಪಿನ ಮಹಿಳೆಯರಲ್ಲಿ ಶೇ.8 ಮಂದಿ ತಾಯಂದಿರಾಗಿದ್ದಾರೆ. *ಶಾಲಾ ಶಿಕ್ಷಣದ ಅವಧಿ ಹೆಚ್ಚಿದಂತೆಲ್ಲಾ ಹದಿಹರೆಯದ ತಾಯ್ತನ ಪ್ರಕರಣಗಳು ಕಡಿಮೆಯಾಗಿವೆ.

*ಶಾಲೆಗೆ ಹೋಗದ 15-19 ವಯೋಗುಂಪಿನ ಮಹಿಳೆಯರ ಪೈಕಿ ಶೇ.18 ತಾಯಂದಿರಾಗಿದ್ದಾರೆ. 12 ಮತ್ತು ಅದಕ್ಕಿಂತ ಹೆಚ್ಚಿನ ವರ್ಷ ಶಾಲೆಗೆ ಹೋಗಿರುವ ಇದೇ ವಯೋಗುಂಪಿನ ಮಹಿಳೆಯರ ಪೈಕಿ ಕೇವಲ ಶೇ.4 ತಾಯಂದಿರಾಗಿದ್ದಾರೆ.

*ಸಂಪತ್ತು ಹೆಚ್ಚಿದಂತೆ, 15-19 ವಯೋಗುಂಪಿನ ಮಹಿಳೆಯರು ತಾಯಂದಿರಾಗುವ ಪ್ರಕರಣಗಳು ಕಡಿಮೆಯಾಗುತ್ತವೆ. ಸಂಪತ್ತಿನ ಪ್ರಮಾಣವನ್ನು ಐದು ವಿಭಾಗಗಳಲ್ಲಿ ವಿಂಗಡಿಸಿದರೆ, ಗರಿಷ್ಠ ಸಂಪತ್ತಿನ ಗುಂಪಿನಲ್ಲಿ ಬರುವ 15-19 ವಯೋಗುಂಪಿನ ಮಹಿಳೆಯರ ಪೈಕಿ ತಾಯಂದಿರಾಗುವವರ ಪ್ರಮಾಣ ಕೇವಲ ಶೇ.2. ಆದರೆ, ಕನಿಷ್ಠ ಸಂಪತ್ತು ಹೊಂದಿರುವವರ ಗುಂಪಿನಲ್ಲಿ ಬರುವ 15-19 ವಯೋ ಗುಂಪಿನ ಮಹಿಳೆಯರಲ್ಲಿ ಈ ಪ್ರಮಾಣ ಶೇ.10.

ತಾಯಂದಿರ ಶಿಕ್ಷಣಕ್ಕೂ ಸಂತಾನೋತ್ಪತ್ತಿ ದರಕ್ಕೂ ನೇರ ಸಂಬಂಧ

*ಮಹಿಳೆಯೊಬ್ಬರ ಸರಾಸರಿ ಮಕ್ಕಳ ಸಂಖ್ಯೆಯು ಅವರ ಶಾಲಾ ಶಿಕ್ಷಣದ ಮಟ್ಟದೊಂದಿಗೆ ನೇರ ಸಂಬಂಧವನ್ನು ಹೊಂದಿದೆ. ಶಿಕ್ಷಣದ ಮಟ್ಟ ಹೆಚ್ಚಿದಂತೆ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತದೆ.

*ಶಾಲೆಗೆ ಹೋಗದ ಮಹಿಳೆಯರು ಸರಾಸರಿ 2.8 ಮಕ್ಕಳನ್ನು ಹೊಂದಿದ್ದಾರೆ. 12 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಅವಧಿಯ ಶಿಕ್ಷಣವನ್ನು ಹೊಂದಿದ ಮಹಿಳೆಯರು ಸರಾಸರಿ 1.8 ಮಕ್ಕಳನ್ನು ಹೊಂದಿದ್ದಾರೆ.

*ಸಂಪತ್ತಿನ ಪ್ರಮಾಣವನ್ನು ಐದು ಭಾಗಗಳಲ್ಲಿ ವಿಂಗಡಿಸಿದರೆ, ಕನಿಷ್ಠ ಸಂಪತ್ತು ಗುಂಪಿನಲ್ಲಿ ಬರುವ ಮಹಿಳೆಯರು ಗರಿಷ್ಠ ಸಂಪತ್ತು ಗುಂಪಿನಲ್ಲಿ ಬರುವ ಮಹಿಳೆಯರಿಗಿಂತ ಸರಾಸರಿ ಒಂದು ಮಗುವನ್ನು ಹೆಚ್ಚಾಗಿ ಹೊಂದಿದ್ದಾರೆ (ಅಂದರೆ ಕನಿಷ್ಠ ಸಂಪತ್ತು ಹೊಂದಿರುವ ಮಹಿಳೆಯರ ಒಟ್ಟು ಸಂತಾನೋತ್ಪತ್ತಿ ದರ 2.6 ಮಕ್ಕಳಾದರೆ, ಗರಿಷ್ಠ ಸಂಪತ್ತನ್ನು ಹೊಂದಿರುವ ಮಹಿಳೆಯರ ಒಟ್ಟು ಸಂತಾನೋತ್ಪತ್ತಿ ದರವು 1.6 ಮಕ್ಕಳಾಗಿವೆ.)

*ರಾಜ್ಯಗಳ ಪೈಕಿ, ಬಿಹಾರ ಮಹಿಳೆಯರ ಒಟ್ಟು ಸಂತಾನೋತ್ಪತ್ತಿ ದರವು ಗರಿಷ್ಠ (ಪ್ರತೀ ಮಹಿಳೆಗೆ 3.0 ಮಕ್ಕಳು) ಆಗಿದ್ದರೆ, ಸಿಕ್ಕಿಮ್ ಮಹಿಳೆಯರ ಒಟ್ಟು ಸಂತಾನೋತ್ಪತ್ತಿ ದರವು ಕನಿಷ್ಠ (ಪ್ರತೀ ಮಹಿಳೆಗೆ 1.1 ಮಕ್ಕಳು)ವಾಗಿದೆ.

ಹದಿಹರೆಯದ ತಾಯಂದಿರು ಯಾರಲ್ಲಿ ಹೆಚ್ಚು?

 ಇತರ ಮೂರು ಜಾತಿ/ಪಂಗಡ ಗುಂಪುಗಳಿಗೆ ಹೋಲಿಸಿದರೆ, 15-19ರ ವಯೋಗುಂಪಿನ ಮಹಿಳೆಯರು ತಾಯಂದಿರಾಗುವ ಸಂಖ್ಯೆ ಪರಿಶಿಷ್ಟ ಪಂಗಡದ ಮಹಿಳೆಯರಲ್ಲಿ ಅಧಿಕ (ಶೇ.9). ಇತರ ಧಾರ್ಮಿಕ ಗುಂಪುಗಳಿಗೆ ಹೋಲಿಸಿದರೆ, 15-19ರ ವಯೋಗುಂಪಿನ ಮಹಿಳೆಯರು ತಾಯಂದಿರಾಗುವ ಸಂಖ್ಯೆ ಮುಸ್ಲಿಮ್ ಮಹಿಳೆಯರಲ್ಲಿ ಹೆಚ್ಚು (ಶೇ.8).15-19 ವಯೋಗುಂಪಿನಲ್ಲಿ ಮದುವೆಯಾಗಿರುವ ಮಹಿಳೆಯರ ಪೈಕಿ ಅರ್ಧಕ್ಕೂ ಹೆಚ್ಚು, ಅಂದರೆ ಶೇ.53 ಮಂದಿ ಈಗಾಗಲೇ ಮಕ್ಕಳನ್ನು ಹೊಂದಿದ್ದಾರೆ.

 ಇತರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹೋಲಿಸಿದರೆ, ತ್ರಿಪುರಾ (ಶೇ.22), ಪಶ್ಚಿಮ ಬಂಗಾಳ (ಶೇ.16), ಆಂಧ್ರಪ್ರದೇಶ (ಶೇ.13), ಅಸ್ಸಾಮ್ (ಶೇ.12), ಬಿಹಾರ (ಶೇ.11) ಮತ್ತು ಜಾರ್ಖಂಡ್ (ಶೇ.10) ರಾಜ್ಯಗಳಲ್ಲಿ ಹದಿಹರೆಯದ ತಾಯಂದಿರ ಸಂಖ್ಯೆ ಅತಿ ಹೆಚ್ಚಾಗಿವೆ.

Writer - ಆರ್.ಎಚ್

contributor

Editor - ಆರ್.ಎಚ್

contributor

Similar News