ಮಂಗಳೂರು ಮನಪಾ ನೂತನ ಮೇಯರ್ ಆಗಿ ಜಯಾನಂದ ಅಂಚನ್ ಆಯ್ಕೆ

Update: 2022-09-09 09:11 GMT

ಮಂಗಳೂರು, ಸೆ.9: ಮಂಗಳೂರು ಮಹಾನಗರ ಪಾಲಿಕೆಯ (Mangaluru city corporation) 23ನೇ ಅವಧಿಯ ಮೇಯರ್ ಆಗಿ ಬಿಜೆಪಿಯ ಹಿರಿಯ ಕಾರ್ಪೊರೇಟರ್ ಜಯಾನಂದ ಅಂಚನ್ ಆಯ್ಕೆಯಾಗಿದ್ದಾರೆ. ಉಪ ಮೇಯರ್ ಆಗಿ ಬಿಜೆಪಿಯ ಕಾರ್ಪೊರೇಟರ್ ಪೂರ್ಣಿಮಾ ಆಯ್ಕೆಯಾದರು.

ಇಂದು ಮಧ್ಯಾಹ್ನ ನಡೆದ ಚುನಾವಣೆಯಲ್ಲಿ ಇಬ್ಬರು ಶಾಸಕರು ಸೇರಿದಂತೆ ಉಪಸ್ಥಿತರಿದ್ದ ಒಟ್ಟು ಮತದಾರರಲ್ಲಿ 46 ಮಂದಿ ಜಯಾನಂದ ಪರ ಮತ ಚಲಾಯಿಸಿದರು. ಅವರ ಪ್ರತಿಸ್ಪರ್ಧಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಹಿರಿಯ ಕಾರ್ಪೊರೇಟರ್, ದೇರೇಬೈಲ್(ದಕ್ಷಿಣ) ವಾರ್ಡ್ ಸದಸ್ಯ ಶಶಿಧರ ಹೆಗ್ಡೆ 14 ಮತಗಳನ್ನಷ್ಟೇ ಗಳಿಸಿದರು.

ಉಪ ಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ಸ್ಪರ್ಧಿಸಿದ್ದ ಸೆಂಟ್ರಲ್ ಮಾರ್ಕೆಟ್ ವಾರ್ಡ್ ಸದಸ್ಯೆ ಪೂರ್ಣಿಮಾ 46  ಮತಗಳನ್ನು ಗಳಿಸಿ ಚುನಾಯಿತರಾದರು. ಅವರ ವಿರುದ್ಧ ಕಾಂಗ್ರೆಸ್ ನಿಂದ ಕಣಕ್ಕಿಳಿದಿದ್ದ ಬಂದರ್ ವಾರ್ಡ್ ಸದಸ್ಯೆ ಝೀನತ್ ಶಂಸುದ್ದೀನ್ 14 ಮತಗಳನ್ನು ಗಳಿಸಿದರು.

ಸದಸ್ಯರು ಕೈಯೆತ್ತುವ ಮೂಲಕ ಪರ-ವಿರೋಧ ಮತಗಳನ್ನು ಚಲಾಯಿಸಿದರು.

ಎಸ್ ಡಿಪಿಐ ಪಕ್ಷದ ಇಬ್ಬರು ಸದಸ್ಯರು ಚುನಾವಣಾ ಪ್ರಕ್ರಿಯೆಯಲ್ಲಿ ತಟಸ್ಥವಾಗಿದ್ದರು.

ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತ ಜಿ.ಸಿ.ಪ್ರಕಾಶ್ ನೇತೃತ್ವದಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಿತು. ಪಾಲಿಕೆ ಆಯುಕ್ತ ಅಕ್ಷಯ ಶ್ರೀಧರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News