‘ಆವರ್ತ’ ಹೊಸ ಫ್ಯಾಂಟಸಿಯ ನಂಬಿದ ಕಾದಂಬರಿ: ಡಾ.ಎಚ್.ಎಸ್. ಸತ್ಯನಾರಾಯಣ

Update: 2022-09-10 17:21 GMT

ಬೆಂಗಳೂರು, ಸೆ.10: ಐತಿಹಾಸಿಕ ಕಥಾ ಎಳೆಯನ್ನು ಇಟ್ಟುಕೊಂಡು ಬರೆಯುವವರಿಗೆ ಬೇಕಾದಷ್ಟು ಇತಿಹಾಸದ ದಾಖಲೆಗಳಿರುತ್ತವೆ. ಆದರೆ ಅದೇನೂ ಇಲ್ಲದೆ ಒಂದು ಹೊಸ ಫ್ಯಾಂಟಸಿಯನ್ನು ನಂಬಿಕೊಂಡು ಇಷ್ಟು ಸುದೀರ್ಘವಾದ ಕಾದಂಬರಿಯನ್ನು ಆಶಾ ರಘು ಬರೆದಿದ್ದಾರೆ. ಐದು ವರ್ಷಗಳ ಕಾಲ ಹೀಗೆ ಧ್ಯಾನಸ್ಥ ಸ್ಥಿತಿಯಲ್ಲಿ ಕುಳಿತು ಬರೆದಿರುವುದು ಸುಲಭದ ಮಾತಲ್ಲ ಡಾ. ಎಚ್.ಎಸ್. ಸತ್ಯನಾರಾಯಣ ಎಂದು ಅಭಿಪ್ರಾಯಪಟ್ಟರು. 

ಶನಿವಾರ ನಗರದ ಗಾಂಧಿ ಭವನದಲ್ಲಿ ಸಾಹಿತ್ಯಲೋಕ ಪಬ್ಲಿಕೇಶನ್ಸ್ ವತಿಯಿಂದ ಲೇಖಕಿ ಆಶಾ ರಘು ಅವರ ʻಆವರ್ತʼ ಮತ್ತು ʻಪೂತನಿ ಮತ್ತಿತರ ನಾಟಕಗಳುʼ ಹಾಗೂ ದೀಪು ಶೆಟ್ಟಿ ದೊಡ್ಡಮನೆ ಅವರ ʻಆವರ್ತ-ಮಂಥನʼ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಆಶಾ ಅವರ ಆವರ್ತ ಕಾದಂಬರಿಯಲ್ಲಿ ಅರಿಷಡ್ವರ್ಗಗಳನ್ನು ಬಳಸಿಕೊಳ್ಳಲಾಗಿದೆ. ಈ ಕೃತಿಯಲ್ಲಿ ಬರುವ ಪಾತ್ರಗಳು ಬಹಳ ವಿಭಿನ್ನವಾಗಿದ್ದು, ಪುರಾಣ ಕಾಲದ ಪಾತ್ರಗಳೋ ಎನ್ನುವ ರೀತಿಯಲ್ಲಿ ಪಾತ್ರವನ್ನು ವರ್ಣಿಸಲಾಗಿದೆ. ಕನ್ನಡ ಸಾಹಿತ್ಯಕ್ಕೆ ಇದು ಹೊಸ ಪರ್ವವಾಗಿದೆ. ಆಶಾ ಅವರು ಕಾದಂಬರಿಗೆ ಮಾತ್ರ ಸೀಮಿತವಾಗಿರದೆ, ಅವರು ನಾಟಕ ಪ್ರಕಾರಕ್ಕೂ ವಿಸ್ತರಿಸಿಕೊಂಡಿದ್ದಾರೆ’ ಎಂದರು. 

ರಂಗಕರ್ಮಿ ಬಿ. ಮಲ್ಲಿಕಾರ್ಜುನಸ್ವಾಮಿ ಮಹಾಮನೆ ಮಾತನಾಡಿ, ‘ಪೂತನಿ ಎಂಬುದು ಒಂಭತ್ತು ನಾಟಕಗಳನ್ನು ಒಳಗೊಂಡ ಕೃತಿಯಾಗಿದೆ. ಇದರಲ್ಲಿ ಬರುವಂತಹ ಬಟಚಾರಿ ನಾಟಕವು ಬಹಳ ವಿಭಿನ್ನ ಕಥಾಹಂದರವನ್ನು ಹೊಂದಿದೆ. ಒಬ್ಬ ಹೆಣ್ಣು ಮಗಳು ತನ್ನ ಮನೆ, ಬದುಕು, ಗಂಡ ಎಲ್ಲವನ್ನು ಕಳೆದುಕೊಂಡಾಗ ಆಕೆ ಹೇಗೆ ಹೊಸ ಬೆಳಕನ್ನು ಕಾಣುತ್ತಾಳೆ ಎಂಬುದನ್ನು ಈ ನಾಟಕದಲ್ಲಿ ಕಾಣಬಹುದು. ಸ್ವಾಭಿಮಾನಿ ಬದುಕನ್ನು ಕಟ್ಟಿಕೊಳ್ಳುವ ಬಗೆಯನ್ನು ಈ ಕೃತಿಯಲ್ಲಿ ಬಹಳ ವಿಭಿನ್ನವಾಗಿ ವಿವರಿಸಲಾಗಿದೆ. ಹಾಗೆಯೇ ಇಂದಿನ ಮಾಧ್ಯಮ, ನ್ಯಾಯಾಲಯಗಳ ವಿಚಾರಗಳನ್ನು ನಾಟಕದಲ್ಲಿ ಪ್ರಸ್ತಾಪಿಸಲಾಗಿದೆ. ಇದನ್ನು ರಂಗಭೂಮಿಯ ಮೂಲಕ ತರುವ ಪ್ರಯತ್ನವನ್ನು ಮಾಡುತಿದ್ದೇನೆ’ ಎಂದರು.

ಲೇಖಕಿ ಆಶಾ ರಘು ಮಾತಾನಾಡಿ, ‘ಆವರ್ತ ಎಂಬುದು ಯೋಗಭೋಗ ತತ್ವವನ್ನು ಇಟ್ಟುಕೊಂಡು ರಚಿಸಿದ ಕಾದಂಬರಿಯಾಗಿದೆ. ಈ ಕಾದಂಬರಿಯನ್ನು ಬರೆದ ಮೇಲೆ ಸುಮಾರು ಆರು ವರ್ಷಗಳ ಕಾಲ ನನ್ನಿಂದ ಏನೂ ಬರೆಯಲು ಸಾಧ್ಯವಾಗಲಿಲ್ಲ. ಆವರ್ತ ನನ್ನಲ್ಲಿನ ಸಾರವನ್ನೆಲ್ಲ ಹೀರಿಕೊಂಡುಬಿಟ್ಟಿತೋ ಏನೋ ಎಂದು ತಮ್ಮ ಅನುಭವವನ್ನು ಹಂಚಿಕೊಂಡರು. 

ಆವರ್ತ-ಮಂಥನ ಕೃತಿಯ ಸಂಪಾದಕ ದೀಪು ಶೆಟ್ಟಿ ದೊಡ್ಡಮನೆ ಮಾತನಾಡಿ, ‘ಆವರ್ತ ಕಾದಂಬರಿ ವಿಭಿನ್ನತೆಯನ್ನು ಹೊಂದಿದೆ. ಈ ಕಾದಂಬರಿಯಲ್ಲಿ ನಗರ ಹಾಗೂ ಹಳ್ಳಿಯ ಜನರ ಜೀವನವನ್ನು ಬಿಂಬಿಸಲಾಗಿದೆ’ ಎಂದರು.

ಕಾರ್ಯಕ್ರಮದಲ್ಲಿ ಸಾಹಿತ್ಯ ಲೋಕ ಪಬ್ಲಿಕೇಶನ್ಸ್ ರಘು ವೀರ್ ಸಮರ್ಥ್, ಕವಿ ಬಿ.ಆರ್. ಲಕ್ಷ್ಮಣರಾವ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News