×
Ad

'ಕಮಿಷನ್ ಕೊಡದೆ ಬಿಲ್ ಬರುತ್ತಿಲ್ಲ': ವೈದ್ಯಕೀಯ ಸರಬರಾಜು ನಿಗಮದ ವಿರುದ್ಧ ಸರಬರಾಜುದಾರರ ಆರೋಪ

Update: 2022-09-10 22:55 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಸೆ.10: ಕೋಟ್ಯಂತರ ರೂಪಾಯಿ ಔಷಧ ಪೂರೈಸಿ ಹಲವು ವರ್ಷಗಳು ಕಳೆದರೂ ಬಾಕಿ ಬಿಲ್‍ಗಳ ಪಾವತಿಗೆ ವಿಳಂಬ ಧೋರಣೆ ಅನುಸರಿಸುತ್ತಿರುವ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ(ಕೆಎಸ್‍ಎಂಎಸ್‍ಸಿಎಲ್) ವಿರುದ್ಧ ಸರಬರಾಜುದಾರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಔಷಧ ಬಿಲ್‍ಗಳ ವಿಲೇವಾರಿ ಮಾಡದಿದ್ದರೆ ನಾವು ಪೂರೈಸಿರುವ ಔಷಧಗಳನ್ನು ವಾಪಸ್ಸು ನೀಡಬೇಕು. ಹತ್ತಾರು ವರ್ಷಗಳಿಂದ ಬಾಕಿ ಉಳಿದಿರುವ ಔಷಧ ಬಿಲ್‍ಗಳು, ಇಎಂಡಿ ಮತ್ತು ಭದ್ರತಾ ಠೇವಣಿಯನ್ನು ವಿಲೇವಾರಿ ಮಾಡುವಂತೆ ನಿರಂತರವಾಗಿ ಮನವಿ ಮಾಡಿದ್ದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಕೋವಿಡ್ ಸಂದರ್ಭದಲ್ಲಿ ಪೂರೈಸಿರುವ ಔಷಧಗಳಿಗೂ ಹಣ ಪಾವತಿಸುತ್ತಿಲ್ಲ. ಈ ಸಮಸ್ಯೆಯನ್ನು ನಿಗಮ ಬಗೆಹರಿಸದಿದ್ದರೆ ಶೀಘ್ರ ಹೋರಾಟ ನಡೆಸಲಾಗುವುದು ಎಂದು ಸರಬರಾಜುದಾರರು ಎಚ್ಚರಿಕೆ ನೀಡಿದ್ದಾರೆ.

2021ರ ನ.29ರಂದು ನಿಗಮದಲ್ಲಿ ಇ-ಪೇಮೆಂಟ್ ಮಾಡಲ್ ಜಾರಿಯಾಗಿದರೂ ಶೇ.100 ಔಷಧ ಸರಬರಾಜು ಮಾಡಿರುವ ಕಂಪೆನಿಗಳಿಗೆ ಪೇಮೆಂಟ್ ಮಾಡಿಲ್ಲ. ಟೆಂಡರ್ ನಿಯಮಾನುಸಾರ 30 ದಿನದೊಳಗೆ ಔಷಧ ಬಿಲ್‍ಗಳಿಗೆ ಹಣ ಪಾವತಿಸಬೇಕೆಂಬ ನಿಯಮವಿದೆ ಹಾಗೂ ನೆರೆಯ ತಮಿಳುನಾಡು ಸೇರಿ ಇನ್ನಿತರ ರಾಜ್ಯಗಳಲ್ಲಿ ನಿಗದಿತ ಸಮಯದಲ್ಲಿ ಪೇಮೆಂಟ್ ಆಗುತ್ತಿದೆ. ಆದರೆ, ನಮ್ಮಲ್ಲಿ ವಿಳಂಬವಾಗುತ್ತಿದೆ. 

ಪ್ರತಿ ಟೆಂಡರ್ ಪ್ರಕ್ರಿಯೆಯಿಂದ ಹಿಡಿದು ಹಣ ಮಂಜೂರು ಆಗುವರೆಗೂ ಕೆಲ ಅಧಿಕಾರಿಗಳಿಗೆ ಕಮಿಷನ್ ಸಿಕ್ಕರಷ್ಟೇ ಮುಂದಿನ ಕೆಲಸಗಳು ನಡೆಯುತ್ತವೆ. ಇಲ್ಲದಿದ್ದರೆ, ಅನಗತ್ಯ ಕಾರಣ ಕೊಟ್ಟು ಟೆಂಡರ್ ಪ್ರಕ್ರಿಯೆ ನಡೆಯದಂತೆ ನೋಡಿಕೊಳ್ಳುತ್ತಾರೆ ಎಂದು ಹೆಸರು ಹೇಳಲು ಇಚ್ಛಿಸದ ಸರಬರಾಜುದಾರರೊಬ್ಬರು ಆಪಾದಿಸಿದರು.

ಎಚ್‍ಐವಿ ಪರೀಕ್ಷಾ ಕಿಟ್, ಡಿಸ್ಪೋಸಬಲ್ ಮಾಸ್ಕ್ ಟೆಂಡರ್‍ಗಳನ್ನು ಅಧಿಕಾರಿಗಳು ಕಮಿಷನ್ ಪಡೆದು ಅರ್ಹತೆ ಇಲ್ಲದ ಕಂಪನಿಗಳಿಗೆ ಕೊಟ್ಟಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News