'ದಿ ಬೆಂಗಳೂರು ಕೋ ಆಪರೇಟಿವ್ ಬ್ಯಾಂಕ್' ಸಭೆ ರದ್ದು: ಠೇವಣಿದಾರರ ಆಕ್ರೋಶ
ಬೆಂಗಳೂರು: 'ದಿ ಬೆಂಗಳೂರು ಕೋ ಆಪರೇಟಿವ್ ಬ್ಯಾಂಕ್' ಸರ್ವ ಸದಸ್ಯರ ಸಭೆ ರದ್ದುಗೊಳಿಸಿದಕ್ಕೆ ನೂರಾರು ಸದಸ್ಯರು ಬ್ಯಾಂಕಿನ ಮುಂಭಾಗದಲ್ಲಿ ಜಮಾವಣೆಗೊಂಡು ಆಕ್ರೋಶ ವ್ಯಕ್ತಪಡಿಸಿದರು.
ರವಿವಾರ ಚಾಮರಾಜಪೇಟೆಯ ಪಂಪಾ ಮಹಾಕವಿಯ ರಸ್ತೆ ಬ್ಯಾಂಕಿನ ಆವರಣದಲ್ಲಿ ಸರ್ವ ಸದಸ್ಯರ ಸಭೆ ನಡೆಯಲಿದೆ ಎಂದು ಮೂರು ದಿನಗಳ ಹಿಂದೆ ಎಲ್ಲ ಸದಸ್ಯರಿಗೆ ಮೊಬೈಲ್ ಮೂಲಕ ಸಂದೇಶ ಮತ್ತು ಪತ್ರ ಕಳುಹಿಸಿದ್ದರು. ಹಾಗಾಗಿ, ನಗರದ ಮೂಲೆ ಮೂಲೆಗಳಿಂದ ನೂರಾರು ಸದಸ್ಯರು ಬ್ಯಾಂಕಿನ ಕಚೇರಿಗೆ ಆಗಮಿಸಿದ್ದರು.
ಆದರೆ, ಭೌತಿಕ ಸಭೆ ಬದಲು ಆನ್‍ಲೈನ್‍ನಲ್ಲಿ ವರ್ಚುವಲ್ ಸಭೆ ನಡೆಸಲಾಗುವುದು ಎಂದು ಬ್ಯಾಂಕಿನ ಮುಂದೆ ಫಲಕ ಅಳವಡಿಸಿದ್ದರು. ಸದಸ್ಯರಿಗೆ ಆನ್‍ಲೈನ್‍ನಲ್ಲಿ ಸಭೆ ನಡೆಸುವ ಬಗ್ಗೆ ಮಾಹಿತಿ ನೀಡದರುವ ಬಗ್ಗೆ ಸದಸ್ಯರ ಬ್ಯಾಂಕಿನ ಮುಂದೆ ಬೇಸರ ವ್ಯಕ್ತಪಡಿಸಿದರು.
ಬ್ಯಾಂಕ್ ಅಧ್ಯಕ್ಷ ಅವಲಹಳ್ಳಿ ಚಂದ್ರಪ್ಪ ಮತ್ತು ಆಡಳಿತ ಮಂಡಳಿಯ ನಿರ್ದೇಶಕರ ನಡೆಯನ್ನು ತೀವ್ರವಾಗಿ ಖಂಡಿಸಿದ್ದ ಸದಸ್ಯರು, ಬ್ಯಾಂಕಿನ ಮುಂದೆ ಆಡಳಿತ ಮಂಡಳಿಯ ಸದಸ್ಯರು ಯಾರು ಬಂದು ನಮ್ಮ ನೋವು ಕೇಳಿಸುಕೊಳ್ಳುತ್ತಿಲ್ಲ. ದೂರದಿಂದ ತಮ್ಮ ಕೆಲಸಗಳನ್ನು ಬಿಟ್ಟು ಬಂದಿದ್ದೇವೆ. ಈಗ ಏಕಾಏಕಿ ಸಭೆ ರದ್ದುಪಡಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.