ಪಂಪರಸ್ತೆ ಹೆಸರನ್ನು ಬದಲಿಸುತ್ತಿರುವ ಕಸಾಪ ಅಧ್ಯಕ್ಷರಿಗೆ ಸಾಹಿತ್ಯದ ಅರಿವಿದೆಯೇ: ಪ್ರೊ.ಎಸ್.ಜಿ.ಸಿದ್ದರಾಮಯ್ಯ ಪ್ರಶ್ನೆ
ಬೆಂಗಳೂರು: ‘ಆದಿಕವಿ ಪಂಪ ಕನ್ನಡಿಗರ ಹೆಮ್ಮೆಯ ಪ್ರತೀಕ. ಆದರೆ, ಅವರ ಹೆಸರಿನ ರಸ್ತೆಯ ಹೆಸರನ್ನು ಬದಲಾಯಿಸುತ್ತಿರುವ ಪರಿಷತ್ತಿನ ಅಧ್ಯಕ್ಷರಿಗೆ ಕನ್ನಡ ಸಾಹಿತ್ಯ, ಪರಂಪರೆಯ ಅರಿವು ಇದೆಯೇ?' ಎಂದು ಹಿರಿಯ ಸಾಹಿತಿ ಪ್ರೊ.ಎಸ್.ಜಿ.ಸಿದ್ಧರಾಮಯ್ಯ ಪ್ರಶ್ನಿಸಿದ್ದಾರೆ.
ರವಿವಾರ ಕಸಾಪ ಕುವೆಂಪು ಸಭಾಂಗಣದಲ್ಲಿ ಕುವೆಂಪು ಸಾಂಸ್ಕೃತಿಕ ವೇದಿಕೆಯು ಆಯೋಜಿಸಿದ್ದ ವಿಶ್ವಚೇತನ ಪ್ರಶಸ್ತಿ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಸಾಹಿತ್ಯಕ್ಕೆ ಪ್ರವೇಶವನ್ನು ಪಂಪನ ಸಾಹಿತ್ಯದ ಮೂಲಕ ಪಡೆಯುತ್ತೇವೆ. ಈ ನಿಟ್ಟಿನಲ್ಲಿ ಪರಿಷತ್ತಿನ ರಸ್ತೆಗೆ ಪಂಪಕವಿ ರಸ್ತೆ ಎಂಬ ಹೆಸರು ಸಮಂಜಸ. ಸಾಹಿತ್ಯ ಈ ವಿವೇಕ ಕಸಾಪ ಅಧ್ಯಕ್ಷರಿಗೆ ಇರಲಿ, ಹೆಸರು ಬದಲಾಯಿಸುವ ದುಸ್ಸಾಹವನ್ನು ಮಾಡಬೇಡಿ, ಒಂದು ವೇಳೆ ಹೆಸರು ಬದಲಾಯಿಸಿದರೆ, ಸಾಹಿತ್ಯದ ವಿವೇಕ ಇಲ್ಲದವರು ಮಾಡುವ ಕೆಲಸ ಇದಾಗುತ್ತದೆ. ಪರಿಷತ್ತಿಗೆ ಅದರದ್ದೇ ಆದ ಘನತೆ ಇದೆ. ರಸ್ತೆಗೆ ಈಗಿರುವ ಹೆಸರನ್ನು ಬದಲಾಯಿಸಿದರೆ ದ್ರೋಹದ ಕೆಲಸ' ಎಂದು ಎಚ್ಚರಿಕೆ ನೀಡಿದರು.
ಕಾರ್ಯಕ್ರಮದಲ್ಲಿ ಕಣ್ವ ಆಸ್ಪತ್ರೆಯ ಡಾ.ಎಚ್.ಎಂ.ವೆಂಕಟಪ್ಪ, ಸಾಹಿತಿ ಡಾ.ಬೈರಮಂಗಲ ರಾಮೇಗೌಡ, ಪೊಲೀಸ್ ಉಪ ಆಯುಕ್ತ ಡಾ.ಭೀಮಾಶಂಕರ ಗುಳೇದ, ಸಮಾಜ ಸೇವಕ ಸೂರಿ ಮೀರಡೆ ಅರಿಗೆ ಈ ವರ್ಷದ ವಿಶ್ವಚೇತನ ಪ್ರಶಸ್ತಿ ನೀಡಿ ಗೌರವಿಸಲಾಯಿತು. 2021-22ನೇ ಎಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯ ಕನ್ನಡ ವಿಷಯದಲ್ಲಿ ಗರಿಷ್ಟ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.