×
Ad

ಇಂದಿನಿಂದ ವಿಧಾನ ಮಂಡಲ ಮಳೆಗಾಲದ ಅಧಿವೇಶನ

Update: 2022-09-12 09:34 IST
ಫೈಲ್ ಚಿತ್ರ

ಬೆಂಗಳೂರು, ಸೆ.12: ವಿಧಾನ ಮಂಡಲ ಉಭಯ ಸದನಗಳ ಮಳೆಗಾಲದ ಅಧಿವೇಶನ ಇಂದು (ಸೆ.12) ಆರಂಭವಾಗಲಿದ್ದು, ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಕಾವೇರಿದ ಚರ್ಚೆ, ವಾಗ್ವಾದಕ್ಕೆ ವೇದಿಕೆ ಸಜ್ಜುಗೊಂಡಿದೆ.

ಪೂರ್ವಾಹ್ನ 11 ಗಂಟೆಗೆ ಸದನ ಸಮಾವೇಶಗೊಳ್ಳಲಿದ್ದು, ಸಚಿವ ಉಮೇಶ್ ಕತ್ತಿ ಸೇರಿದಂತೆ ಮೊದಲ ದಿನ ಇತ್ತೀಚೆಗೆ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಿದ್ದಾರೆ. ಸೆ.13ರಿಂದ ಸೆ.23ರವರೆಗೆ ಒಟ್ಟು 10 ದಿನಗಳ ಕಾಲ ಕಲಾಪ ಮುಂದುವರಿಯಲಿದೆ. ಆಡಳಿತಾರೂಢ ಬಿಜೆಪಿ ಸರಕಾರದ ವಿರುದ್ಧ ಮುಗಿಬೀಳಲು ಪ್ರತಿಪಕ್ಷವಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಸನ್ನದ್ಧಗೊಂಡಿವೆ.

ಗುತ್ತಿಗೆ ಕಾಮಗಾರಿಯಲ್ಲಿ ಶೇ.40 ಲಂಚದ ಆರೋಪ, ಇತ್ತೀಚಿನ ಮಳೆ ಮತ್ತು ಪ್ರವಾಹದಿಂದ ಜನರಿಗಾದ ಸಂಕಷ್ಟ, ಪಠ್ಯ ಪುಸ್ತಕ ಪರಿಷ್ಕರಣೆ ಅವಾಂತರ ಸೇರಿದಂತೆ ಹಲವು ವಿಷಯಗಳನ್ನು ಪ್ರಸ್ತಾಪಿಸಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಉಭಯ ಪಕ್ಷಗಳು ಸಜ್ಜಾಗಿವೆ. ಜೊತೆಗೆ ‘ಪಿಎಸ್ಸೈ, ಕೆಪಿಟಿಸಿಎಲ್, ಉಪನ್ಯಾಸಕರ ನೇಮಕಾತಿ ಅಕ್ರಮಗಳು ಸೇರಿದಂತೆ ಗುತ್ತಿಗೆದಾರರ ಸಂಘ ಆರೋಪಿಸಿರುವ ಶೇ.40ರಷ್ಟು ಕಮಿಷನ್ ದೂರುಗಳು ಈ ಬಾರಿ ಸದನಗಳಲ್ಲಿ ಪ್ರತಿಧ್ವನಿಸಲಿವೆ.  ಇದಕ್ಕೆ ತಿರುಗೇಟು ನೀಡಲು ಬಿಜೆಪಿಯೂ ಸಿದ್ಧತೆ ನಡೆಸಿದೆ. 2023ರ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಈ ಅಧಿವೇಶನವು ಜಿದ್ದಾಜಿದ್ದಿಗೆ ವೇದಿಕೆಯಾಗಲಿದೆ.

ಇದನ್ನೂ ಓದಿ: ಯುವತಿ ಮೇಲೆ ಅತ್ಯಾಚಾರ: ಆರೋಪಿ, ತಾಯಿ ವಿರುದ್ಧ ಪ್ರಕರಣ ದಾಖಲು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News