ಕೃಷಿ ಕಾಯ್ದೆ ಹಿಂಪಡೆಯಲು ಪಟ್ಟು: ರೈತರಿಂದ ವಿಧಾನಸೌಧ ಮುತ್ತಿಗೆ ಯತ್ನ
ಬೆಂಗಳೂರು, ಸೆ.12: ಕೃಷಿ ಕಾಯ್ದೆ ಹಿಂಪಡೆಯುವಂತೆ ಹಾಗೂ ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಿರೋಧಿಸಿ ಬೃಹತ್ ಪ್ರತಿಭಟನೆ ನಡೆಸಿದ ರೈತರು ವಿಧಾನಸೌಧ ಮುತ್ತಿಗೆ ಯತ್ನ ನಡೆಸಿದರು.
ಸೋಮವಾರ ನಗರದ ಫ್ರೀಡಂ ಪಾರ್ಕಿನಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಜಮಾಯಿಸಿದ ರೈತರು, ರಾಜ್ಯ ಸರಕಾರ ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ಸು ಪಡೆಯಬೇಕೆಂದು ಘೋಷಣೆ ಕೂಗಿ ವಿಧಾನಸೌಧ ಮುತ್ತಿಗೆ ಹಾಕಲು ಯತ್ನಿಸಿದರು. ಆಗ ಮಧ್ಯಪ್ರವೇಶಿಸಿದ ಪೊಲೀಸರು ಹಲವರನ್ನು ವಶಕ್ಕೆ ಪಡೆದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್, ದೇಶದಲ್ಲಿ ಬಿಜೆಪಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ನಂತರ ನಿರಂತರವಾಗಿ ರೈತರ ಮೇಲೆ ಶೋಷಣೆ ಮಾಡುತ್ತಿದೆ. ಈ ಹಿಂದೆ ಮೂರು ಕೃಷಿ ಕಾಯ್ದೆಗಳನ್ನು ಜಾರಿಗೆ ತರಲಾಗಿತ್ತು. ರೈತರ ಭಾರೀ ವಿರೋಧದಿಂದ ಕೇಂದ್ರ ಸರಕಾರ ಅದನ್ನು ಹಿಂಪಡೆಯಿತು. ಆದರೆ, ರಾಜ್ಯದಲ್ಲಿ ಹಿಂಪಡೆದಿಲ್ಲ ಎಂದರು.
ಈಗ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಗೊಳಿಸಿ, ಪಂಪ್‍ಸೆಟ್‍ಗಳಿಗೆ ಮೀಟರ್ ಅಳವಡಿಸಿ ರೈತರನ್ನು ಒಕ್ಕಲುತನದಿಂದ ಹೊರದಬ್ಬಲು ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿದರು.
ಕೇಂದ್ರ ಮತ್ತು ರಾಜ್ಯ ಸರಕಾರದಿಂದ ‘ಕಿಸಾನ್ ಸಮ್ಮಾನ್’ ಬೇಕಿಲ್ಲ. ರೈತರು ಬೆಳೆಯುವ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಕೊಡಬೇಕು. ಬೆಳೆ ನಷ್ಟದ ಪರಿಹಾರ ಧನ ಹೆಚ್ಚಿಸಬೇಕು. ಸಾಲ ಮನ್ನಾ ಮಾಡಬೇಕು. ಕುಟೀರ ಜ್ಯೋತಿ, ಭಾಗ್ಯ ಜ್ಯೋತಿ ಯೋಜನೆಗಳನ್ನು ಯಥಾವತ್ತಾಗಿ ಮುಂದುವರೆಸಬೇಕೆಂದು ಆಗ್ರಹಿಸಿದರು.