ಭೂಮಿ ಮಂಜೂರು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಮಾಜಿ ಸೈನಿಕರ ಆಗ್ರಹ; ಅಹೋರಾತ್ರಿ ಧರಣಿ ಆರಂಭ
ಬೆಂಗಳೂರು, ಸೆ.12: ನಿವೃತ್ತ ಸೈನಿಕರಿಗೆ ಭೂಮಿ ಮಂಜೂರು ಸೇರಿದಂತೆ ಇನ್ನಿತರೆ ಸವಲತ್ತುಗಳನ್ನು ಒದಗಿಸುವಂತೆ ಆಗ್ರಹಿಸಿ ಅಹೋರಾತ್ರಿ ಧರಣಿ ಆರಂಭಿಸಲಾಗಿದೆ.
ಸೋಮವಾರ ಇಲ್ಲಿನ ಫ್ರೀಡಂಪಾರ್ಕಿನ ಮೈದಾನದಲ್ಲಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ನೇತೃತ್ವದಲ್ಲಿ ಜಮಾಯಿಸಿದ ನಿವೃತ್ತ ಸೈನಿಕರು, ರಾಜ್ಯ ಸರಕಾರ ತಮ್ಮ ಬೇಡಿಕೆ ಈಡೇರಿಸುವರೆಗೂ ಹೋರಾಟ ಮುಂದುವರೆಸಿ ವಿಧಾನಸೌಧ ಚಲೋ ಚಳವಳಿ ನಡೆಸಲಾಗುವುದು ಎಂದು ತಿಳಿಸಿದರು.
ಧರಣಿಯನ್ನುದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷ ಡಾ.ಶಿವಣ್ಣ, ರಾಜ್ಯದ ಎಲ್ಲ ಮಾಜಿ ಸೈನಿಕರ ಸಂಘಟನೆಗಳು, ಅರೆಸೇನಾಪಡೆ ಸಂಘಟನೆಗಳು, ವೀರನಾರಿಯರ ಸಂಘಗಳು ಹಾಗೂ ಹುತಾತ್ಮ ಸೈನಿಕರ ಕುಟುಂಬಸ್ಥರು ಈ ಧರಣಿಯಲ್ಲಿ ಭಾಗವಹಿಸಲಿದ್ದಾರೆ. ಅಲ್ಲದೆ, ದೇಶದ ಸೈನ್ಯದಲ್ಲಿ ಸುಮಾರು ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿರುವ ನಮಗೆಲ್ಲರಿಗೂ ಸರಕಾರದ ಹಲವು ಸವಲತ್ತುಗಳಿಂದ ವಂಚನೆ ಮಾಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮಾಜಿ ಸೈನಿಕ ಕೋಟಾದಡಿ ರಾಜ್ಯದಲ್ಲಿ ಜಮೀನು ಮಂಜೂರು ಕೋರಿ ಅರ್ಜಿ ಸಲ್ಲಿಸಿದ್ದೇವೆ. ರಾಜ್ಯಪಾಲ ಮತ್ತು ಸರಕಾರದ ಆದೇಶವಿದ್ದರೂ ಸಹ ಇಲ್ಲಿಯವರೆಗೆ ನಮಗೆ ಒಂದಿಂಚೂ ಭೂಮಿಯನ್ನು ನೀಡಿಲ್ಲ ಎಂದು ಆರೋಪಿಸಿದರು.
ದಶಕಗಳಿಂದ ಕಾನೂನು ಪ್ರಕಾರ ಮಂಜೂರು ಮಾಡಬೇಕಾದ ಭೂಮಿಯನ್ನು ನೀಡಿಲ್ಲ ಎಂದ ಅವರು, 1969ರ ಭೂ ಕಾಯ್ದೆ ಪ್ರಕಾರ ಮಾಜಿ ಸೈನಿಕರಿಗೆ ಭೂಮಿ ನೀಡಬೇಕು, ಸರಕಾರಿ ಉದ್ಯೋಗದಲ್ಲಿರುವ ನಿವೃತ್ತ ಸೈನಿಕರ ಮೀಸಲಾತಿ ಕೋಟದಲ್ಲಿ ತಿದ್ದುಪಡಿ, ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಶುಲ್ಕ ವಿನಾಯಿತಿ, ಸರಕಾರಿ ಉದ್ಯೋಗದಲ್ಲಿ ವರ್ಗಾವಣೆಯಲ್ಲಿ ಮತ್ತು ಮುಂಭಡ್ತಿಯಲ್ಲಿ ವಿನಾಯತಿ ನೀಡುವಂತೆ ಆಗ್ರಹಿಸಿದರು.
ಅದೇ ರೀತಿ, ಮಾಜಿ ಸೈನಿಕರ ನಿಗಮ ಮಂಡಳಿ ರಚನೆ ಮಾಡಬೇಕು, ಚುನಾವಣೆಯಲ್ಲಿ ಸ್ಪರ್ಧಿಸಲು ಮೀಸಲಾತಿ, ಸರಕಾರದ ನಿವೇಶನ ಮತ್ತು ಮನೆ ಹಂಚಿಕೆ, ಮೃತ ಸೈನಿಕನ ಕುಟುಂಬಕ್ಕೆ ಆಧಾರವಾಗಿ ಪತ್ನಿಗೆ ಜಮೀನು ಮತ್ತು ನಿವೇಶನ ನೀಡಬೇಕು. ಈ ಎಲ್ಲ ಬೇಡಿಕೆಗಳನ್ನು ಈಡೇರಿಸುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡುತ್ತೇವೆ ಎಂದು ಅವರು ತಿಳಿಸಿದರು.