ಮರುಸ್ಥಾಪನೆ ಬಳಿಕ ಮೊದಲ ಬಾರಿಗೆ ಲೋಕಾಯುಕ್ತ ದಾಳಿ: ಬಿಬಿಎಂಪಿ ಜಂಟಿ ಆಯುಕ್ತ ಸೇರಿ ಇಬ್ಬರ ಬಂಧನ

Update: 2022-09-12 18:48 GMT

ಬೆಂಗಳೂರು, ಸೆ.12: ಬಿಬಿಎಂಪಿ ವ್ಯಾಪ್ತಿಯ ಆಸ್ತಿಗೆ ಸಂಬಂಧಿಸಿದಂತೆ ಖಾತೆ ಬದಲಾವಣೆ ಮಾಡಲು ಬರೋಬ್ಬರಿ 4 ಲಕ್ಷ ರೂ. ಲಂಚ ಪಡೆಯುತ್ತಿದ್ದ ಆರೋಪದಡಿ ಇಲ್ಲಿನ ಪಶ್ಚಿಮ ವಲಯದ ಜಂಟಿ ಆಯುಕ್ತ ಸೇರಿ ಇಬ್ಬರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ಸೋಮವಾರ ಲೋಕಾಯುಕ್ತ ಎಸ್ಪಿ ಶ್ರೀನಾಥ್ ಜೋಶಿ ನೇತೃತ್ವದ ಪೊಲೀಸ್ ಅಧಿಕಾರಿಗಳ ತಂಡ ಈ ದಾಳಿ ನಡೆಸಿದ್ದು, ಕೆಎಎಸ್ ಅಧಿಕಾರಿ ಎಸ್.ಎಂ. ಶ್ರೀನಿವಾಸ್ ಮತ್ತು ಅವರ ಆಪ್ತ ಸಹಾಯಕ ಉಮೇಶ್ ಎಂಬಾತನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. 

ತಮ್ಮ ಆಸ್ತಿಯ ಖಾತೆ ಬದಲಾವಣೆಗಾಗಿ ಬಿಬಿಎಂಪಿ ಕಚೇರಿಗೆ ವ್ಯಕ್ತಿಯೊಬ್ಬರು ಅರ್ಜಿ ಸಲ್ಲಿಸಿದ್ದರು. ಈ ಪ್ರಕ್ರಿಯೆ ಪೂರ್ಣಗೊಳಿಸಲು 4 ಲಕ್ಷ ಲಂಚ ನೀಡುವಂತೆ ಆರೋಪಿಗಳು ಬೇಡಿಕೆಯಿಟ್ಟಿದ್ದರು. ಆ ನಂತರ, ಬೆಂಗಳೂರು ನಗರ ಲೋಕಾಯುಕ್ತ ಪೊಲೀಸ್ ವಿಭಾಗಕ್ಕೆ ದೂರು ಸಲ್ಲಿಸಲಾಗಿತ್ತು.

ದೂರಿನ್ವಯ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು, ನಗದು ಸಮೇತ ಆರೋಪಿಗಳನ್ನು ಹಿಡಿದಿದ್ದಾರೆ. ತದನಂತರ, ಬಿಬಿಎಂಪಿ ಪಶ್ಚಿಮ ವಿಭಾಗದ ಕಚೇರಿಯಲ್ಲೇ ವಿಚಾರಣೆ ನಡೆಸಿ ಪರಿಶೀಲನೆ ನಡೆಸಿದ್ದಾರೆ. 

ಇನ್ನೂ, ಇತ್ತೀಚಿಗೆ ಹೈಕೋರ್ಟ್ ಎಸಿಬಿ ರದ್ದುಗೊಳಿಸಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ತನಿಖೆ ನಡೆಸುವ ಅಧಿಕಾರವನ್ನು ಲೋಕಾಯುಕ್ತ ಪೊಲೀಸ್ ವಿಭಾಗಕ್ಕೆ ಮರುಸ್ಥಾಪಿಸಿ ಆದೇಶಿಸಿತ್ತು. ಇದರ ಬೆನ್ನಲ್ಲೇ ಲೋಕಾಯುಕ್ತ ಪೊಲೀಸರು ನಡೆಸಿದ ಮೊದಲ ಕಾರ್ಯಾಚರಣೆ ಇದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News