ಕನ್ನಡ ಬಳಸಿಕೊಳ್ಳಲು ಪ್ರತಿಯೊಬ್ಬರಿಗೂ ಹಕ್ಕಿದೆ: ಟಿ.ಎಸ್.ನಾಗಾಭರಣ

Update: 2022-09-12 18:08 GMT

ಬೆಂಗಳೂರು, ಸೆ.12: ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ. ಕನ್ನಡವನ್ನು ಬಳಸಿಕೊಳ್ಳಲು ಪ್ರತಿಯೊಬ್ಬರಿಗೂ ಹಕ್ಕಿದೆ. ಹಾಗೆಯೇ ಕನ್ನಡವನ್ನು ಬೆಳೆಸುವ ಕರ್ತವ್ಯವು ಇದೆ. ಈ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಮಹಮ್ಮದೀಯರ ಕನ್ನಡ ವೇದಿಕೆ ಹಾಗೂ ಫಲಾಹ್ ಉದ್ ದಾರೇನ್ ಮದ್ರಸಾ ಪ್ರಯತ್ನ ಶ್ಲಾಘನಿಯ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಟಿ.ಎಸ್.ನಾಗಾಭರಣ ಹೇಳಿದರು.

ಸೋಮವಾರ ನಗರದ ಎಚ್.ಬಿ.ಆರ್. ಲೇಔಟ್‍ನಲ್ಲಿರುವ ಫಲಾಹ್ ಉದ್ ದಾರೇನ್ ಮದ್ರಸಾದಲ್ಲಿ ಆಯೋಜಿಸಲಾಗಿದ್ದ ಕನ್ನಡ ಕಲಿಕಾ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಯಾವುದೆ ರಾಜ್ಯ ತನ್ನತನವನ್ನು ಕಾಪಾಡಿಕೊಳ್ಳಬೇಕಾದರೆ, ಪ್ರತಿಯೊಬ್ಬ ಪ್ರಜೆಯೂ ತನ್ನ ಹಕ್ಕನ್ನು ಚಲಾಯಿಸಬೇಕು. ಹಾಗೆಯೇ, ಕರ್ತವ್ಯವನ್ನು ನಿಭಾಯಿಸಬೇಕು. ಪ್ರತಿಯೊಬ್ಬ ಕನ್ನಡಿಗನೂ ತನ್ನತನವನ್ನು ಕನ್ನಡದ ಜೊತೆಯಲ್ಲಿಯೆ ಪ್ರದರ್ಶಿಸುತ್ತಾನೆ. ಅಖಿಲ ಕರ್ನಾಟಕ ಮಹಮ್ಮದೀಯರ ಕನ್ನಡ ವೇದಿಕೆ ಹಾಗೂ ಫಲಾಹ್ ಉದ್ ದಾರೇನ್ ಮದ್ರಸಾದಲ್ಲಿ ಆ ಕೆಲಸ ಆಗುತ್ತಿದೆ. ಇದು ಒಂದು ಮಾದರಿಯಾಗಿದೆ ಎಂದು ಅವರು ಹೇಳಿದರು.

ನಮ್ಮ ಮೂಲ ಮನಸ್ಸುಗಳನ್ನು ಒಗ್ಗೂಡಿಸುವ ಕೆಲಸವನ್ನು ಭಾಷೆ ಮಾಡುತ್ತದೆ. ‘ಸ್ಥಳೀಯ ಕನ್ನಡ ಭಾಷೆಯನ್ನು ಕಲಿಯೋಣ ಮತ್ತು ವಿವಿಧ ಧರ್ಮ ಮತ್ತು ಸಂಸ್ಕೃತಿಯ ಜನರ ನಡುವೆ ಸಾಮರಸ್ಯವನ್ನು ಬೆಳೆಸೋಣ’ ಎಂಬ ವಿಷಯದೊಂದಿಗೆ ಕನ್ನಡ ಕಲಿಕಾ ಅಭಿಯಾನ ಪ್ರಾರಂಭಿಸಿರುವುದು ಶ್ಲಾಘನೀಯ ಎಂದು ನಾಗಾಭರಣ ತಿಳಿಸಿದರು.

ಅಖಿಲ ಕರ್ನಾಟಕ ಮಹಮ್ಮದೀಯರ ಕನ್ನಡ ವೇದಿಕೆ ಅಧ್ಯಕ್ಷ ಸಮೀವುಲ್ಲಾ ಖಾನ್ ಮಾತನಾಡಿ, ಕೋಮು ಸೌಹಾರ್ದತೆಯನ್ನು ಹಾಳು ಮಾಡಲು ಅನೇಕ ಪ್ರಯತ್ನಗಳು ನಡೆಯುತ್ತಿವೆ. ಆದರೂ, ನಮ್ಮದು ಸೂಫಿ ಸಂತರ ನಾಡು. ಸಾಮರಸ್ಯ ಅನ್ನೋದು ಈ ನಾಡಿನ ಆಸ್ತಿಯಾಗಿದೆ. ಕನ್ನಡ ಕಲಿಕೆಯ ಮೂಲಕ ಮನಸ್ಸುಗಳನ್ನು ಬೆಸೆಯುವ ಕೆಲಸವನ್ನು ಮಾಡಲಾಗುತ್ತಿದೆ ಎಂದರು.

ಕನ್ನಡ ಕಲಿಕಾ ಕೋರ್ಸ್ ಪೂರ್ಣಗೊಳಿಸಿದ 30 ವಿದ್ಯಾರ್ಥಿನಿಯರಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ನಸೀರ್ ಅಹ್ಮದ್, ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News