ʼಕೆಲವೊಮ್ಮೆ ನಾನು ಹತಾಶನಾಗುತ್ತೇನೆ, ಏಕಾಂಗಿಯೆನಿಸತೊಡಗುತ್ತದೆʼ: 2 ವರ್ಷಗಳ ಜೈಲು ವಾಸದ ಬಗ್ಗೆ ಉಮರ್ ಖಾಲಿದ್ ಪತ್ರ

Update: 2022-09-13 16:42 GMT

ಕೆಲವೊಮ್ಮೆ ಈ ಕತ್ತಲ ಸುರಂಗ ಎಷ್ಟು ದೀರ್ಘವಾಗಿದೆ ಎಂದುಕೊಳ್ಳುತ್ತೇನೆ. ಎಂದಾದರೂ ಈ ಸುರಂಗದ ಕೊನೆಯಲ್ಲಿ ಬೆಳಕು ಕಾಣಸಿಗಬಹುದೇ? ನಾನು ಸುರಂಗದ ಕೊನೆಯಲ್ಲಿದ್ದೇನೋ? ಅಥವಾ ನಡುವೆ ಸಿಲುಕಿದ್ದೇನೋ? ಅಥವಾ ನನ್ನ ಸುದೀರ್ಘ ಪ್ರಯಾಣವೇ ಇದೀಗ ಪ್ರಾರಂಭವಾಗಿದೆಯೋ?

ರೋಹಿತ್ ಕುಮಾರ್ ಎಂಬ ಜೈಲಿನ ಖೈದಿಗಳ ಆಪ್ತ ಸಮಾಲೋಚಕರು ಉಮರ್ ಖಾಲಿದ್ ಗೆ ಆಗಸ್ಟ್ 15 ರಂದು ಒಂದು ಪತ್ರ ಬರೆದಿದ್ದರು. ಜೈಲಿನಲ್ಲಿರುವ ಸಾಮಾಜಿಕ ಕಾರ್ಯಕರ್ತ ಉಮರ್ ಖಾಲಿದ್ ಬರೆದ ಪ್ರತ್ಯುತ್ತರವು ರೋಹಿತ್ ಅವರಿಗೆ  ಸೆಪ್ಟೆಂಬರ್ 12 ರಂದು ದೊರೆಯಿತು. ಅವರ ಸಮ್ಮತಿಯೊಂದಿಗೆ “ದ ವೈರ್” ಪತ್ರಿಕೆಯು ಉಮರ್ ಅವರ ಪತ್ರವನ್ನು ಪ್ರಕಟಿಸಿದೆ. 

ಇದು ಆ ಪತ್ರದ ಪೂರ್ಣ ಪಠ್ಯಾನುವಾದ.  

2020ರ ದೆಹಲಿ ಹಿಂಸಾಚಾರದ ಆರೋಪದ ಮೇಲೆ UAPA ಅಡಿ ಬಂಧಿತರಾಗಿರುವ  ಉಮರ್ ಖಾಲಿದ್ ಅವರ ತಿಹಾರ್ ಜೈಲುವಾಸಕ್ಕೆ ಇದೇ ಸೆಪ್ಟೆಂಬರ್ 13, 2022ಕ್ಕೆ  ಎರಡು ವರ್ಷವಾಗುತ್ತದೆ. ಅವರ ಪ್ರಕರಣದ ವಿಚಾರಣೆ ಇನ್ನೂ ಪ್ರಾರಂಭವಾಗಿಲ್ಲ.

ಪ್ರೀತಿಯ ರೋಹಿತ್,

ಹುಟ್ಟುಹಬ್ಬದ ಹಾಗೂ ಸ್ವಾತಂತ್ರ್ಯ ದಿನದ ಶುಭಾಶಯಗಳನ್ನು ಕಳಿಸಿದ್ದಕ್ಕೂ, ಮತ್ತು ನನಗೆ ಪ್ರತಗಳನ್ನು ಬರೆಯುತ್ತಿರುವುದಕ್ಕೂ ಧನ್ಯವಾದಗಳು. ನೀವು ಕ್ಷೇಮವಾಗಿದ್ದೀರೆಂದು  ಭಾವಿಸುತ್ತೇನೆ. ಈ ಸುತ್ತುವರೆದ ಬಂಧೀಖಾನೆಯ ಗೋಡೆಗಳ ನಡುವೆಯೂ ನಿಮ್ಮ ಬಹಿರಂಗ ಪತ್ರವನ್ನು ಓದಲು ಸಾಧ್ಯವಾಗುತ್ತಿರುವುದೇ ಒಂದು ಬಗೆಯ ಸಂತೋಷವಾಗಿದೆ. 

ನಿಮಗೆ ವಾಪಸ್ ಪತ್ರ ಬರೆಯಲು ಕೂತುಕೊಳ್ಳುತ್ತಿರುವಾಗಲೇ, ಜೈಲಿನ ಮೈಕಿನಲ್ಲಿ ಈ ರಾತ್ರಿ ಜೈಲಿನಿಂದ ಬಿಡುಗಡೆಯಾಗುತ್ತಿರುವವರ ಹೆಸರುಗಳನ್ನು ಸಾರುತ್ತಿರುವುದು ಕೇಳಿಸುತ್ತಿದೆ. ಪ್ರತಿ ದಿನ ಸೂರ್ಯ ಮುಳುಗಿದ ನಂತರ ಈ ಹೊತ್ತಿನಲ್ಲಿ ಜೈಲಿನ ಅಧಿಕಾರಿಗಳಿಗೆ ಕೋರ್ಟಿನಿಂದ- ರಿಹಾಯಿ ಪರಿಚಯ್- “ಬಿಡುಗಡೆ ಆದೇಶ”ಗಳು ತಲುಪುತ್ತವೆ. 

ಕತ್ತಲು ಕವಿಯುತ್ತಾ ರಾತ್ರಿಯು ಜೈಲನ್ನು ಆವರಿಸಿಕೊಳ್ಳುವಾಗಲೇ ಕೆಲವು ಖೈದಿಗಳಿಗೆ ಇನ್ನು ಸ್ವಲ್ಪ ಹೊತ್ತಿನಲ್ಲೇ ಸ್ವಾತಂತ್ರ್ಯದ ಬೆಳಕು ಸಿಗುತ್ತದೆ. ಅವರ ಮುಖಗಳು  ಆನಂದದ ಬೆಳಕಿನಿಂದ ಹೊಳೆಯುವುದು ದೂರದಿಂದಲೇ ಕಾಣುತ್ತದೆ. ಕಳೆದ ಎರಡು ವರ್ಷಗಳಿಂದ ಪ್ರತಿರಾತ್ರಿಯೂ ಜೈಲಿನ ಮೈಕುಗಳಿಂದ ಈ ಬಿಡುಗಡೆ ಪ್ರಕಟಣೆಗಳನ್ನು  ಕೇಳುತ್ತಲೇ ಇದ್ದೇನೆ- “ನಾಮ್ ನೋಟ್ ಕರೆ.. ಇನ್ ಬಂಧಿಯೋಂ ಕಿ ರಿಹಾಯಿ ಹೈ-“ ( “ ಹೆಸರಗಳನ್ನು ಬರೆದುಕೊಳ್ಳಿ. ಈ ಬಂಧಿಗಳು ಬಿಡುಗಡೆಯಾಗಿದ್ದಾರೆ.) 
 
ನಾನು ನನ್ನ ಹೆಸರು ಆ ಪಟ್ಟಿಯಲ್ಲಿ ಬರುವುದನ್ನೇ ಭರವಸೆಯಿಂದ ಕಾಯುತ್ತಲೇ ಇದ್ದೇನೆ. ಹಲವಾರು ಬಾರಿ, ಈ ಕಗ್ಗತ್ತಲ ಸುರಂಗ ಇನ್ನೆಷ್ಟು ದೀರ್ಘವಿರಬಹುದೆಂದು ಯೋಚಿಸುತ್ತೇನೆ. ಎಂದಾದರೂ ಈ ಸುರಂಗದ ಕೊನೆಯಲ್ಲಿ ಬೆಳಕು ಕಾಣಸಿಗಬಹುದೇ? ನಾನು ಸುರಂಗದ ಕೊನೆಯಲ್ಲಿದ್ದೇನೋ? ಅಥವಾ ನಡುವೆ ಸಿಲುಕಿದ್ದೇನೋ? ಅಥವಾ ನನ್ನ ಸುದೀರ್ಘ ಪ್ರಯಾಣವೇ ಇದೀಗ ಪ್ರಾರಂಭವಾಗಿದೆಯೋ?

ನಾವು ಆಜಾದಿಯ ಅಮೃತ ಕಾಲವನ್ನು ಪ್ರವೇಶಿಸಿದ್ದೇವೆ ಎಂದು ಅವರು ಹೇಳುತ್ತಾರೆ. ಆದರೆ ಸ್ವಾತಂತ್ರ್ಯವನ್ನು ರಕ್ಷಿಸಲು ಹೋರಾಡುತ್ತಿರುವವರ ಬದುಕುಗಳನ್ನು ನೋಡಿದರೆ  ವಾಪಸ್ ಬ್ರಿಟಿಷರ ಕಾಲಕ್ಕೆ ಮರಳುತ್ತಿರುವಂತೆ ಭಾಸವಾಗುತ್ತದೆ. 

ಇತ್ತೀಚಿನ ದಿನಗಳಲ್ಲಿ ವಸಾಹತುಶಾಹಿ ಗುಲಾಮಗಿರಿಯ ಎಲ್ಲಾ ಸಂಕೇತಗಳನ್ನು ನಿರ್ಮೂಲನೆ ಮಾಡುವ ಮಾತುಗಳು ಕೇಳಿಬರುತ್ತಿವೆ. ಆದರೆ ಅದೇ ಸಮಯದಲ್ಲಿ ವಸಾಹತುಶಾಹಿಯನ್ನು ನೆನಪಿಸುವ ಹಲವಾರು ಕಾನೂನುಗಳನ್ನು ಕಾರ್ಯಕರ್ತರನ್ನು, ವಿದ್ಯಾರ್ಥಿಗಳನ್ನು, ಭಿನ್ನಮತೀಯರನ್ನು, ಮತ್ತು ರಾಜಕೀಯ ವಿರೋಧಿಗಳನ್ನು ಬಗ್ಗುಬಡಿಯಲು ಬಳಸಿಕೊಳ್ಳಲಾಗುತ್ತಿದೆ. ಸ್ವಾತಂತ್ರ್ಯ ಹೋರಾಟಗಾರರನ್ನು ದಮನ ಮಾಡಲು ವಸಾಹತುಶಾಹಿ ಬ್ರಿಟಿಷರು ಬಳಸಿದ ರೌಲೆಟ್ ಕಾಯಿದೆಗೂ, ನಮ್ಮಂಥವರನ್ನು ಬಂಧಿಸಲಾಗಿರುವ UAPA ಕಾಯಿದೆಗೂ ಇರುವ ಸಾಮ್ಯತೆಯು ಜನರು ಗುರುತಿಸುತ್ತಿಲ್ಲವೇ? 

ವಸಾಹತುಶಾಹಿ ಕಾಲದ ಕಾಯಿದೆಗಳ ಮುಂದುವರೆಕೆಯಂತಿರುವ - ಜನರ ಹಕ್ಕುಗಳನ್ನು ಮತ್ತು ಸ್ವಾತಂತ್ರ್ಯಗಳನ್ನು ಕಬಳಿಸುವಂಥ- ಈ ಕಾಯಿದೆಗಳು ತೊಲಗಬೇಕಲ್ಲವೇ? ಹೀಗೆ ನಮ್ಮಂಥವರನ್ನು ಹಾಗೂ ನಮ್ಮಂಥ ಇತರೇ ಹಲವರನ್ನು ವಿಚಾರಣೆಯೇ ಇಲ್ಲದೆ ಮತ್ತು ವಿಚಾರಣೆಯು ಯಾವಾಗ ಶುರುವಾಗಬಹುದೆಂಬ ಸೂಚನೆಯೂ ಇಲ್ಲದೆ ಸುದೀರ್ಘ ಕಾಲ ಬಂಧನದಲ್ಲಿ ಕೊಳೆಹಾಕಿರುವುದು ನನ್ನನ್ನು ಆಗಾಗ ದಿಗ್ಭ್ರಾಂತನಾಗಿಸುತ್ತದೆ. 

ಸ್ವಾತಂತ್ರ್ಯೋತ್ಸವದ ದಿನ ನಾನು ಇತರರೊಡನೆ ಬಂಧೀಖಾನೆಯ ಹೊರಗಡೆ ಕೂತಿದ್ದೆ. ಜೈಲಿನ ಕಾಂಪೌಂಡಿನ ಮೇಲೆ ಹಲವಾರು ಗಾಳಿಪಟಗಳು ಹಾರಾಡುತ್ತಿದ್ದವು. ಅವು ನನಗೆ  ನಾವು ಹುಡುಗರಾಗಿದ್ದಾಗ ಆಚರಿಸುತ್ತಿದ್ದ  ಆಗಸ್ಟ್ 15ನ್ನು ನೆನಪಿಸಿತು. ಅಲ್ಲಿಂದ ಇಲ್ಲಿಗೆ ನಾವು ಬಂದು ತಲುಪಿದ್ದಾದರೂ ಹೇಗೆ? ಈ ದೇಶ ಎಷ್ಟೊಂದು ಬದಲಾಗಿ ಹೋಯಿತು? 
ಯುಎಪಿಎಯನ್ನು ಪ್ರಯೋಗಿಸುವ ಮೂಲಕ ನಮ್ಮನ್ನು ಎಷ್ಟು ವರ್ಷಗಳ ಕಾಲ ಬೇಕಾದರೂ ಜೈಲಿನಲ್ಲೇ ಕೊಳೆಯುವಂತೆ ಮಾಡಬಹುದು. ನಮ್ಮ ವಿಚಾರಣೆಯೇ ಪ್ರಾರಂಭವಾಗದಿರುವಾಗ ನಮ್ಮನ್ನು ಬಂಧಿಸಿದವರು ಏನನ್ನೂ ಸಾಬೀತು ಮಾಡುವ ಅಗತ್ಯವಿರುವುದಿಲ್ಲ. ಅವರಿಗೆ ನಮ್ಮ ಮೇಲೆ ಹೊರಿಸಿರುವ ಅಸಂಬದ್ಧ ಆರೋಪಗಳನ್ನು ನ್ಯಾಯಾಲಯದಲ್ಲಿ ಸಾಬೀತು ಮಾಡುವ ಸಾಮರ್ಥ್ಯವಿರದಿದ್ದರೂ, ಅದು ನಮ್ಮ ವಿರುದ್ಧ ಒಂದು ಅಪರಾಧ ಕಥನವನ್ನು ಕಟ್ಟಿ ಹರಿಬಿಡುವುದನ್ನೇನೂ ತಡೆಯುವುದಿಲ್ಲ. 

ಒಂದು ಸಂಜೆ ನನ್ನೊಡನೆ ಜೈಲಿನ ವಾರ್ಡನ್ ನನ್ನ ಕೇಸಿನ ಬಗ್ಗೆ ಮಾತುಕತೆಗಿಳಿದರು. 2020ರಲ್ಲಿ ಮೊದಲ ಬಾರಿ ಅವರು ನನ್ನನ್ನು ಜೈಲಿನಲ್ಲಿ  ನೋಡಿದಾಗ ನನ್ನ ಮೇಲೆ ಹೊರಿಸಲಾದ ಆರೊಪಗಳನ್ನು ನಂಬಲು ಕಷ್ಟವಾಯಿತೆಂದು ಹೇಳಿದರು. ಆ ಆರೋಪಗಳೆಲ್ಲವೂ ರಾಜಕೀಯ ಪ್ರೇರಿತವಾಗಿದೆಯೆಂದೂ, ಕೆಲವೇ ದಿನಗಳಲ್ಲಿ ನಾನು ಜೈಲಿನಿಂದ ಬಿಡುಗಡೆಯಾಗಬಹುದೆಂದು ಅವರು ಭಾವಿಸಿದ್ದರಂತೆ. 

ಆದರೆ ಈಗ 2022ರಲ್ಲಿ ಜೈಲಿನ ಮೈಕಿನಲ್ಲಿ ನನ್ನ ಹೆಸರು ಬರುವ ದಿನಕ್ಕಾಗಿ ನಾನು ಕಾಯುತ್ತಿರುವಾಗ  ಅವರಿಗೂ ಆ ಬಗ್ಗೆ ಅನುಮಾನಗಳು ಶುರುವಾಗಿವೆ. “ಬೈಲ್ ಕ್ಯೂ ನಹಿ ಮಿಲ್ ರಹಿ ತುಮ್ಹೆ? ಕಿಸನ್ ಅಂದೋಲನ್ ವಾಲೋಣ್ ಕೋ ತೊ ಮಿಲ್ ಗಯಿ ಥಿ ಕುಚಿ ದಿನ್ಹೊ ಮೆ ಹಿ” (ನಿನಗೇಕೆ ಜಾಮೀನು ಸಿಗುತ್ತಿಲ್ಲ? ಕಿಸಾನ್ ಆಂದೋಲನದ ಕಾರ್ಯಕರ್ತರಿಗಾದರೆ ಕೆಲವೇ ದಿನಗಳಲ್ಲೇ ಜಾಮೀನು ಸಿಕ್ಕಿತ್ತಲ್ಲ?). ನಾನು ಅವರಿಗೆ  ಯುಎಪಿಎಗೂ ಇತರ ಐಪಿಸಿ ಸೆಕ್ಷನ್ ಗಳಡಿಯಲ್ಲಿನ ವಿಚಾರಣೆಗೂ ಇರುವ ವ್ಯತ್ಯಾಸಗಳನ್ನು ವಿವರಿಸಿ ಹೇಳಲು ಪ್ರಾರಂಭಿಸಿದೆ. ಆದರೆ ನಾನು ವಿವರಣೆ ಪ್ರಾರಂಭಿಸಿದ ಸ್ವಲ್ಪ ಹೊತ್ತಿನಲ್ಲೇ ಅವರ ಗಮನ ಆ ಕಡೆಗಿರಲಿಲ್ಲವೆಂದು ನನಗೆ ಗೊತ್ತಾಯಿತು. ಕಾನೂನಿನ ಇಂಥಾ ತಾಂತ್ರಿಕ ವಿವರಣೆಗಳ ಬಗ್ಗೆ ಯಾರಿಗೆ ತಾನೇ ಆಸಕ್ತಿ ಇರುತ್ತದೆ. ಕಾನೂನು ಪರಿಣಿತರು ಮತ್ತು ಇಂಥಾ ಕ್ರೂರ-ಅಸಂಗತ ಕಾನೂನಿಗಳಿಗೆ ಬಲಿಯಾದ ದುರದೃಷ್ಟವಂತ ಬಲಿಪಶುಗಳನ್ನು ಹೊರತುಪಡಿಸಿ ಇನ್ಯಾರಿಗೆ  ತಾನೇ ಇದು ಅರ್ಥವಾದೀತು? 

ಅಪನಿಂದೆಗಳ ಭಾರ

ಸತ್ಯೋತ್ತರ ಕಾಲದಲ್ಲಿ ವಾಸ್ತವಗಳಿಗಿಂತ ಅದರ ಬಗ್ಗೆ ರೂಪಿಸಲಾಗುವ ಅಭಿಪ್ರಾಯಗಳಿಗೇ ಹೆಚ್ಚಿನ ಪ್ರಾಧಾನ್ಯತೆ. ನೀವು ನನಗೆ ಬರೆದ ಪತ್ರದಲ್ಲಿ ನಾನು ನಿಮ್ಮ ಮೇಲೆ ಬೀರಿರುವ ಪ್ರಭಾವದ ಬಗ್ಗೆ ಹೊಗಳಿ ಬರೆದಿದ್ದೀರಿ. ನಿಮ್ಮ ಆ ಪ್ರೀತಿಪೂರ್ವಕ ಮಾತುಗಳಿಗಾಗಿ ಧನ್ಯವಾದಗಳು. ನಿಮ್ಮನ್ನು ಪ್ರಭಾವಿಸಿದ ರೀತಿಯಲ್ಲೇ ನಾನು ಜೈಲಿನಲ್ಲಿ ದಿನನಿತ್ಯ ನನ್ನ ಸಂಪರ್ಕಕ್ಕೆ ಬರುವ ಎಲ್ಲರನ್ನು ಪ್ರಭಾವಿಸುತ್ತಾ, ಮಾಧ್ಯಮಗಳು ನನ್ನ ಮೇಲೆ ಮಾಡಿರುವ ಪ್ರಚಾರಗಳು ಎಷ್ಟು ಸುಳ್ಳು ಎಂದು ಮನವರಿಕೆ ಮಾಡಿಕೊಡುವಲ್ಲಿ ಖಂಡಿತಾ  ಯಶಸ್ವಿಯಾಗಿರುತ್ತೇನೆಂದು ಭಾವಿಸುತ್ತೇನೆಂದು ಕೂಡಾ ಹೇಳಿದ್ದೀರಿ. 

ಆದರೆ, ವಿಷಯವೇನೆಂದರೆ, ತಮಗೆ ಸತ್ಯವನ್ನು ಮನವರಿಕೆ ಮಾಡಿಕೊಡುವುದು ಬಹಳ ಸುಲಭವಾಗಿತ್ತು. ಏಕೆಂದರೆ ನೀವು ಮಾಧ್ಯಮಗಳು ಬಿತ್ತುವ ಸುಳ್ಳುಗಳನ್ನು ಸುಲಭವಾಗಿ ಪತ್ತೆ ಹಚ್ಚಬಲ್ಲವರಾಗಿದ್ದಿರಿ. ಆದರೆ ನಿರಂತರವಾಗಿ ಪ್ರಚಾರಗಳ ದಾಳಿಗೆ ಬಲಿಯಾಗುತ್ತಿರುವವರನ್ನು ಎಚ್ಚರಿಸುವುದು ಬಹಳ ಕಷ್ಟದ ಕೆಲಸ. ನಾನು ಜೈಲಿನಲ್ಲಿ ಕಳೆದ ಎರಡು ವರ್ಷಗಳಲ್ಲಿ ಸುದ್ದಿಪತ್ರಿಕೆಗಳು (ಅದೊಂದೇ ಇಲ್ಲಿ ಲಭ್ಯವಿರುವ ಮಾಹಿತಿ ಮೂಲ) ನನ್ನ ಪ್ರಕರಣದ ಬಗ್ಗೆ ಆಗಾಗ್ಗೆ ವರದಿ ಮಾಡಿವೆ. ಇಂಗ್ಲೀಶ್ ಪತ್ರಿಕೆಗಳು ಸುದ್ದಿನಿಷ್ಟತೆಯ ನಾಟಕವನ್ನಾದರೂ ಅಡಿವೆ. ಆದರೆ ಬಹಳಷ್ಟು ಹಿಂದಿ ವೃತ್ತಪತ್ರಿಕೆಗಳು- ಸುದ್ದಿಗಾಗಿ ಜೈಲಿನಲ್ಲಿರುವ ಶೇ.90ರಷ್ಟು ಬಂಧಿಗಳು ಅವುಗಳನ್ನೇ ಅವಲಂಬಿಸುತ್ತಾರೆ-ಮಾತ್ರ ಎಲ್ಲಾ ವೃತ್ತಿ ಸಂಹಿತೆಗಳನ್ನು ಗಾಳಿಗೆ ತೂರಿಬಿಟ್ಟಿವೆ. ಅವು ದಿನನಿತ್ಯ ಬಿತ್ತರಿಸುವುದು ಶುದ್ಧ ವಿಷವನ್ನೇ.  

ಅವು ನನ್ನ ಜಾಮೀನು ಪ್ರಕ್ರಿಯೆಗಳ ಬಗ್ಗೆ ಆಯ್ದ ವಿಷಯಗಳನ್ನು ಮಾತ್ರ ವರದಿ ಮಾಡುತ್ತವೆ. ನನ್ನ ವಕೀಲರು ವಾದ ಮಾಡಿದಾಗ ಅವು ನಮ್ಮ ವಾದಗಳನ್ನು ವರದಿ ಮಾಡುವುದೇ ಇಲ್ಲ. ಅಥವಾ ಕೆಲವೊಮ್ಮೆ ನನ್ನ ಬಗ್ಗೆ ದಯೆ ತೋರಿದರೂ ಅದನ್ನು 5 ಅಥವಾ 6ನೇ ಪುಟದಲ್ಲಿ ಯಾರ ಗಮನವನ್ನು ಸೆಳೆಯದಂಥ ಶೀರ್ಷಿಕೆಯಡಿ ಪ್ರಕಟಿಸುತ್ತವೆ. ಆದರೆ ಸರ್ಕಾರಿ ವಕೀಲರ ಪ್ರತಿವಾದಗಳನ್ನು ಮಾತ್ರ ಮುಖಪುಟದಲ್ಲಿ ಪ್ರಕಟಿಸುತ್ತವೆ. ಮತ್ತು ಅವನ್ನು ನ್ಯಾಯಾಲಯದ ಅಭಿಪ್ರಾಯವೇ ಎಂದು ಭಾಸವಾಗುವಂತೆ ವರದಿ ಮಾಡುತ್ತವೆ. ಅಂಥಾ ಸಂದರ್ಭಗಳಲ್ಲಿ ಅವರು ತಮ್ಮ ರೋಚಕ ವರದಿಗೆ ಪೂರಕವಾಗುವಂತೆ ನನ್ನ ಯಾವುದಾದರೂ ಅತ್ಯಂತ ಕೆಟ್ಟ ಫೋಟೋಗಳನ್ನು ಹುಡುಕಿ ಅದರ ಜೊತೆಗೆ ಪ್ರಕಟಿಸುತ್ತವೆ. 

ಒಂದು ದಿನ ಹಿಂದಿ ಪತ್ರಿಕೆಯ ಶೀರ್ಷಿಕೆಯೊಂದು “ಖಾಲಿದ್ ನೆ ಕಹಾ ಥಾ ಭಾಶಣ್ ಸೆ ಕಾಮ್ ನಹಿ ಚಲೆಗ, ಖೂನ್ ಬಹಾನಾ ಪಡೆಗಾ” (ಭಾಶಣದಿಂದ ಏನು ಸಾಧಿಸಲಾಗದು- ರಕ್ತವನ್ನು ಹರಿಸಬೇಕು ಎಂದು ಹೇಳಿದ್ದ ಉಮರ್ ಖಾಲಿದ್) ಎಂದು ಅರಚಿಕೊಳ್ಳುತ್ತಿತ್ತು. ಆದರೆ ವರದಿಯಲ್ಲಿ ಮಾತ್ರ ಶೀರ್ಶಿಕೆಯನ್ನು ಸಮರ್ಥಿಸುವ ಯಾವ ಅಂಶಗಳೂ ಇರಲಿಲ್ಲ. ಅಷು ಮಾತ್ರವಲ್ಲ, ಇಂಥ ವಿಷಯಗಳನ್ನು ವರದಿ ಮಾಡುವಾಗ “ಇವು ಇನ್ನು ನ್ಯಾಯಾಲಯದ ವಿಚಾರಣೆಯಲ್ಲಿ ಸಾಬೀತುಪಡಿಸದ ಆರೋಪಗಳು” ಎಂಬ ವಾಡಿಕೆಯ ಡಿಸ್‍ಕ್ಲೈಮರ್ ಗಳನ್ನು ನೀಡಿರಲಿಲ್ಲ. 

ಅವುಗಳನ್ನು “ಅಭಿಪ್ರಾಯ” ಎಂಬರ್ಥ ಬರುವಂತೆ ಕೊಟೇಷನ್ ಗಳಡಿಯಲ್ಲೂ ಪ್ರಕಟಿಸಲಿಲ್ಲ ಅಥವಾ ಪ್ರಶ್ನಾರ್ಥಕ ಚಿಹ್ನೆಯನ್ನು ಬಳಸಿರಲಿಲ್ಲ. ಎರಡು ದಿನಗಳ ನಂತರ ಅದೇ ಪತ್ರಿಕೆ ಹಿಂದಿನದ್ದಕ್ಕಿಂತ ರೋಚಕ ವಾದ ಶೀರ್ಷಿಕೆಯೊಂದಿಗೆ ಮತ್ತೊಂದು ವರದಿಯನ್ನು ಪ್ರಕಟಿಸಿತು, “ ಖಾಲಿದ್ ಚಹ್ತಾ ಥಾ, ಮುಸಲ್ಮಾನೋಕೆ ಲಿಯೆ ಅಲಗ್ ದೇಶ್” (ಮುಸಲ್ಮಾನರಿಗಾಗಿ ಪ್ರತ್ಯೇಕ ದೇಶ ಬೇಕೆಂದು ಖಾಲಿದ್ ಬಯಸಿದ್ದ). ನವದೆಹಲಿಯ ಯಮುನಾ ತೀರದಾಚೆಗಿನ ಪ್ರದೇಶದಲ್ಲಿ ನಡೆದ ಹಿಂಸಾಚಾರದಲ್ಲಿ ಸತ್ತವರೆಲ್ಲ ಮುಸ್ಲಿಮರೇ ಆಗಿದ್ದರಿಂದ ಅದು ಪ್ರತ್ಯೇಕ ಮುಸ್ಲಿಂ ದೇಶಕ್ಕೆ ದಾರಿ ಮಾಡಿಕೊಡಬಹುದು ಎಂಬುದು ಆ ವರದಿಯ ಇಂಗಿತವಾಗಿತ್ತು. ಎಂಥಾ ದುರಂತ-ವಿನೋದವಿದು! ನನಗೆ ನಿಜಕ್ಕೂ ಅಳಬೇಕೋ ನಗಬೇಕೋ ತಿಳಿಯಲಿಲ್ಲ. ದಿನನಿತ್ಯ ಇಂಥಾ ವಿಷಕ್ಕೆ ಬಲಿಯಾಗುತ್ತಿರುವರಿಗೆ ನಾನು ಹೇಗೆ ತಾನೆ ಸತ್ಯವನ್ನು ಮನವರಿಕೆ ಮಾಡಿಕೊಡಲಿ?  

ಅದಕ್ಕೆ ಮುಂಚೆ ಮತ್ತೊಂದು ಹಿಂದಿ ದೈನಿಕವು ನಾನು ದಿಲ್ಲಿ ದಂಗೆಗಳಲ್ಲಿ ಪಾಲ್ಗೊಂಡಿದ್ದೆನೆಂದು ಪೊಲೀಸರೆದುರು ಒಪ್ಪಿಕೊಂಡಿದ್ದೇನೆಂದು ಪ್ರತಿಪಾದಿಸುವ ವರದಿ ಪ್ರಕಟಿಸಿತು. ಆದರೆ ಪೊಲೀಸ್ ಕಸ್ಟಡಿಯ ಅವಧಿಯಲ್ಲಿ ನಾನು ಪೊಲೀಸರಿಗೆ ಯಾವುದೇ ಹೇಳಿಕೆಯನ್ನೂ ನೀಡಿಲ್ಲ ಹಾಗೂ ಯಾವುದೇ ಪೇಪರ್ ಗಳಿಗೆ ಸಹಿ ಹಾಕಿಲ್ಲವೆಂದು ನಾನು ಎರಡೆರಡು ಬಾರಿ ನ್ಯಾಯಾಲಯದಲ್ಲಿ ಅಧಿಕೃತವಾಗಿ ಹೇಳಿಕೆ ನೀಡಿದ್ದೇನೆ. ಹಾಗಾದರೆ ಈ ಸುದ್ದಿಯ ಮೂಲವೇನಾಗಿರಬಹುದು?

ಯಾವುದೇ ಮಾನದಂಡಗಳಿಂದ ನೋಡಿದರೂ, ಈ ಪತ್ರಿಕೆಗಳು ವರದಿಗಾರಿಕೆಯ ಕಸುಬು ಮಾಡುತ್ತಿವೆ ಎಂದು ಹೇಳಲು ಸಾಧ್ಯವಿಲ್ಲ. ತಮ್ಮ ಪೂರ್ವನಿರ್ಧಾರಿತ ಕಥನಗಳಿಗೆ ತಕ್ಕಂತೆ ಅವು ತಮಗೇ ಬೇಕಾದ ಸುದ್ದಿಯನ್ನು ಆಯ್ದುಕೊಳ್ಳುತ್ತವೆ ಅಥವಾ ಹಸಿಹಸಿ ಸುಳ್ಳುಗಳನ್ನೇ ಸೃಷ್ಟಿ ಮಾಡುತ್ತಿವೆ. ನ್ಯಾಯಾಲಯಗಳು ಅಸಲಿ ವಿಚಾರಣೆಯನ್ನು ಇನ್ನೂ ಪ್ರಾರಂಭಿಸುವ ಮುನ್ನವೇ ಅವರು ಸಾರ್ವಜನಿಕ ಅಭಿಪ್ರಾಯದ ನ್ಯಾಯಾಲಯದಲ್ಲಿ ನನ್ನನ್ನು ಅಪರಾಧಿ ಎಂದು ಸಾಬೀತುಮಾಡಲು ಪ್ರಯತ್ನಿಸುತ್ತಿದ್ದಾರೆ. ಹಾಗೆ ಮಾಡುವ ಮೂಲಕ ಅವರು ಬಹುಸಂಖ್ಯಾತರ ಸಾಮೂಹಿಕ ಪ್ರಜ್ನೆಯನ್ನು ತಮಗೇ ಬೇಕಾದಂತೆ ರೂಪಿಸುತ್ತಿದ್ದಾರೆ. 

ಕೆಲವೊಮ್ಮೆ ಮಾಧ್ಯಮಗಳು ಹೇಳುವ ಸುಳ್ಳುಗಳು ಪೊಲೀಸರು ಹೇಳುವ ಸುಳ್ಳುಗಳನ್ನು ಮೀರಿಸಿರುತ್ತವೆ. ಒಂದು ಪ್ರಮುಖ ಹಿಂದಿ ದೈನಿಕವೊಂದು ನಾನು ಶತಾಯ ಗತಾಯ ದಿಲ್ಲಿಯಲ್ಲಿ ಗಲಭೆಗಳನ್ನು ಮಾಡಲೇ ಬೇಕೆಂಬ ನಿರ್ಧಾರದೊಂದಿಗೆ ಹಿಂಸಾಚಾರ ಪ್ರಾರಂಭವಾದ ಒಂದು ವಾರಕ್ಕೆ ಮುನ್ನ 2020ರ ಫೆಬ್ರವರಿ 16 ರಂದು ಝಾಕಿರ್ ನಗರದಲ್ಲಿ ಗುಟ್ಟಾಗಿ ಶರ್ಜೀಲ್ ಇಮಾಮ್ ಅವರನ್ನು ಭೇಟಿಯಾಗಿದ್ದೆ ಎಂದು ವರದಿ ಮಾಡಿತು. 

ವಾಸ್ತವವೇನೆಂದರೆ 2020ರ ಫೆಬ್ರವರಿ 16 ರಂದು ನಾನು ದೆಹಲಿಯಿಂದ 1136 ಕಿ.ಮೀ. ದೂರದಲ್ಲಿರುವ ಮಹಾರಾಷ್ಟ್ರದ ಅಮರಾವತಿಯಲ್ಲಿದ್ದೆ. ಇದನ್ನು ಪೊಲೀಸರೇ ಸ್ವಯಂ ಧೃಢೀಕರಿಸುತ್ತಾರೆ. ಮತ್ತು ಶರ್ಜಿಲ್ ಇಮಾಮ್ ಅವರು ಮತ್ತೊಂದು ಪ್ರಕರಣದಲ್ಲಿ ಇಪ್ಪತ್ತು ದಿನಗಳ ಹಿಂದೆಯೇ ಬಂಧಿತರಾಗಿದ್ದರು. ಮತ್ತು ಆ ರಾತ್ರಿ ತಿಹಾರ್ ಜೈಲಿನಲ್ಲಿದ್ದರು. ಆ ವರದಿಗಾರ ಮಹಾಶಯರು ಈ ಕಥೆಯನ್ನು ಕಟ್ಟುವ ಮುನ್ನ ಕೆಲವು ಮೂಲಭೂತ ಸಂಗತಿಗಳನ್ನು ಪರಿಶೀಲಿಸಿಕೊಳ್ಳುವ  ವೃತ್ತಿಪರತೆಯನ್ನೂ ತೋರಿರಲಿಲ್ಲ. 
ಆದರೆ ಯಾರಿಗೆ ತಾನೇ ಈ  ವಿವರಗಳ ಬಗ್ಗೆ  ಮತ್ತು ವಾಸ್ತವತೆಯನ್ನು ಅರಿತುಕೊಳ್ಳುವ ಆಸಕ್ತಿಯಿದೆ? 

ಭಾರತದಲ್ಲಿ ಇಂದು ಸತ್ಯವೆನ್ನುವುದು ಜನರಿಗೆ ಗೋಚರಿಸುವುದಲ್ಲ. ಜನರಿಗೆ ಸತ್ಯವನ್ನು ತಲುಪಿಸಲಾಗುತ್ತದೆ. ಯಾವುದನ್ನು ಜನರಿಗೆ ತಲುಪಿಸಲಾಗುವುದೋ ಅದೇ ಸತ್ಯ. ನಾನು ಅವರಿಗೆ ಖುದ್ದಾಗಿ ಏನೇ ಹೇಳಿದರೂ ಪತ್ರಿಕೆಗಳಲ್ಲಿ ದೊಡ್ಡ ದೊಡ್ಡ ತಲೆ ಬರಹದಡಿ ಬರುವ ಸುದ್ದಿಗಳು ಅವರ ತಲೆಗಳಲ್ಲಿ ಅದಕ್ಕಿಂತ ಆಳವಾದ ಅಭಿಪ್ರಾಯವನ್ನು ಕೊರೆದಿರುತ್ತವೆ. ನೀವೇ ಒಮ್ಮೆ ಬಳಸಿದ್ದ ವಾಕ್ಯಗಳನ್ನು ಬಳಸಿ ಹೇಳುವುದಾದರೆ, ಜನರಿಗೆ ಮುದ್ರಿತ ಪದಗಳ ಮೇಲಿರುವ ಮೂಢ ವಿಶ್ವಾಸವು  “ತಾವು ಕಣ್ಣಾರೆ ಕಾಣುವ ಸತ್ಯಗಳ ಮೇಲೆ ಇರುವುದಿಲ್ಲ”.  

ಈ  ಸತ್ಯವನ್ನು ನಾನು ಕಳೆದೆರಡು ವರ್ಷಗಳಲ್ಲಿ ಚೆನ್ನಾಗಿಯೇ ಗಮನಿಸಿದ್ದೇನೆ. ಅದು ಪತ್ರಿಕೆಗಳಲ್ಲಿ ಬಂದಿದೆಯೆಂದರೆ ಸತ್ಯವೇ ಆಗಿರಬೇಕು. “ಕುಚ್ ತೋ ಕಿಯ ಹಿ ಹೋಗ. ಪೂರಾ ಜೂಟ್ ಥೋಡಿ ಲಿಖ್ ದೇಂಗೇ” (ಏನಾದರೂ ಮಾಡಿರಲಿಕ್ಕೇ ಬೇಕು. ಪೂರಾಪೂರಾ ಸುಳ್ಳುಗಳನ್ನೇ ಯಾರಾದರೂ ಪ್ರಿಂಟ್ ಮಾಡುತ್ತಾರಾ?)

ಚಿತ್ರನಟ ಸಂಜಯ್ ದತ್ ಬದುಕನ್ನು ಆಧರಿಸಿದ “ಸಂಜು” ಚಲನ ಚಿತ್ರದಲ್ಲಿ ಹಲವು ಲೋಪಗಳಿರಬಹುದು. ಆದರೆ ಅದು ಮಾಧ್ಯಮಗಳ ಪಾತ್ರವನ್ನು ಮಾತ್ರ ಸಖತ್ತಾಗಿ ಚಿತ್ರಿಸಿದೆ. ಮಾಧ್ಯಮಗಳು ಕೂಡ ಒಂದು ನಶೆಯ  ಪದಾರ್ಥವೇ. ಪ್ರತಿ ಬೆಳಿಗ್ಗೆ ಹೇಗೆ ಈ ಪತ್ರಿಕೆಯ ಪುಟಗಳು ಜನರ ಮೆದುಳಿಗೆ ಜೋಮು ಹಿಡಿಸಿ ಬದಲಿ ವಾಸ್ತವದ ಕಡೆಗೆ ಕೊಂಡೊಯ್ಯುತ್ತವೆ ಎಂದು ನಾನು ನೋಡುತ್ತಿರುತ್ತೇನೆ. ಪ್ರತಿನಿತ್ಯವೂ ಸುಳ್ಳುಗಳನ್ನು ಬೃಹತ್ ಪ್ರಮಾಣದಲ್ಲಿ ಉತ್ಪಾದಿಸುತ್ತಿರುವಾಗ ಜನರು ಸತ್ಯ ಮತ್ತು ಸುಳ್ಳುಗಳ ನಡುವಿನ ವ್ಯತ್ಯಾಸವನ್ನು ಗ್ರಹಿಸುವ ಸಾಮರ್ಥ್ಯವನ್ನೂ ಕಳೆದುಕೊಳ್ಳುತ್ತಾ ಹೋಗುತ್ತಾರೆ. ಜನರು ಅಂಥಾ ಸ್ಥಿತಿಯನ್ನು ಮುಟ್ಟಿದ ನಂತರ ಜನರಿಗೆ ಉತ್ತಮವಾದ ಸುಳ್ಳುಗಳನ್ನು ಒದಗಿಸುವ ಅಗತ್ಯವೂ ಇರುವುದಿಲ್ಲ. ಎಷ್ಟೆ ಅಸಂಬದ್ದವಾದದ್ದನ್ನು ಕೊಟ್ಟರೂ ಜನರು ಅದನ್ನು ಒಪ್ಪಿಕೊಳ್ಳುವಂತೆ ಮಾಡಬಹುದು. 

ಸುಳ್ಳು ಮತ್ತು ಮಿಥ್ಯರೋಪಗಳ ದೈತ್ಯ ಯಂತ್ರಾಂಗದ ವಿರುದ್ಧ ನಾವು ಹೋರಾಡುವುದಾದರೂ ಹೇಗೆ? ದ್ವೇಷ ಮತ್ತು ಸುಳ್ಳುಗಳ ಪ್ರತಿಪಾದಕರ ಬಳಿ ಎಷ್ಟೆಲ್ಲಾ ಸಂಪನ್ಮೂಲಗಳಿವೆ- ಹಣ, ಹೇಳಿದಂತೆ ಕೇಳುವ 24x 7 ಸುದ್ದಿ ವಾಹಿನಿಗಳು, ಟ್ರೋಲ್ ಸೈನಿಕರು, ಮತ್ತು  ಪೊಲೀಸರು ಕೂಡ. 

ರೋಹಿತ್, ನಿಜ ಹೇಳಬೇಕೆಂದರೆ ಇವೆಲ್ಲವೂ ಕೆಲವೊಮ್ಮೆ ನನ್ನನ್ನು ಹತಾಶೆಗೆ ದೂಡುತ್ತದೆ. ಹಲವಾರು ಬಾರಿ ಒಂಟಿಯೆಂಬ ಭಾವ ಕಾಡುತ್ತದೆ. ಫ್ಯಾಸಿಸ್ಟ್ ವಿರೋಧಿ ಹೋರಾಟಗಳಲ್ಲಿ ಒಡನಾಡಿಗಳಾಗಿದ್ದ ನನಗಿಂತ ಕೆಲವು ಸ್ಥಿತಿವಂತ ಸ್ನೇಹಿತರು ಈಗ ಮೌನಕ್ಕೆ ಶರಣಾಗಿದ್ದಾರೆ. ನಾನು ಮಾತ್ರ ಈ ಸುಳ್ಳುಗಳಿಗೆ ಒಂಟಿಯಾಗಿ ಬಲಿಯಾಗಿದ್ದೇನೆ. ಇದು ನಾನು ಯಾರಿಗೂ ಬೇಡದ ವ್ಯಕ್ತಿಯೇನೋ ಎಂಬ ಭಾವನೆಯನ್ನು ಹುಟ್ಟಿಸುತ್ತದೆ. ಅದು ನನ್ನ ನೆಲದಲ್ಲೇ ನನ್ನನ್ನು ಅಪರಿಚಿತನನ್ನಾಗಿಸುತ್ತದೆ. ಅಂಥಾ ಸಮಯಗಳಲ್ಲಿ ನನ್ನ ಮೇಲಿನ ಈ  ದಮನ ಮತ್ತು ಅನ್ಯೀಕರಣ  ವ್ಯಕ್ತಿಗತವದುದಲ್ಲ ಎಂಬು ಅರಿವು  ಮಾತ್ರ  ನನಗೆ ಸಮಾಧಾನ ನೀಡುತ್ತದೆ. ನನ್ನ ಮೇಲಿನ ದಮನ ಮತ್ತು ಅನ್ಯೀಕರಣವು ಇಂದು ಭಾರತದಲ್ಲಿ ಇಡೀ ಮುಸ್ಲಿಂ ಸಮುದಾಯದ ಮೇಲೆ ನಡೆಯುತ್ತಿರುವ ದಮನ ಹಾಗೂ ಅನ್ಯೀಕರಣಕ್ಕೆ  ಸಾಂಕೇತಿಕವಾಗಿದೆ.   

ಮೌನ ಮತ್ತು ಒಂಟಿತನಗಳಲ್ಲಿ ನಾನು ಸಮಾಧಾನವನ್ನು ಅರಸುತ್ತೇನೆ

ಇತ್ತಿಚಿನ ದಿನಗಳಲ್ಲಿ ನನ್ನ ಸುತ್ತಮುತ್ತಲಿನ ಜನರಿಗೆ ಸತ್ಯದ ಬಗ್ಗೆ ಅರಿವು ಮೂಡಿಸುವ ಪ್ರಯತ್ನವನ್ನು ನಾನು ಕೈಬಿಟ್ಟಿದ್ದೇನೆ. ಎಷ್ಟು ಸುಳ್ಳುಗಳನ್ನು ಅಂತ ಬಯಲುಗೊಳಿಸುವುದು? ಇವೆಲ್ಲದರಿಂದಾಗಿ, ಒಂದು ಹೆಜ್ಜೆ ಮುಂದೆ ಹೋಗಿ,  ಜನರು ನಿಜಕ್ಕೂ ಸುಳ್ಳು ಪ್ರಚಾರಗಳಿಗೆ ಬಲಿಯಾಗಿ ತಪ್ಪಾಗಿ ಅರ್ಥಮಾಡಿಕೊಂಡಿದ್ದಾರೋ ಅಥವಾ ಆ ಸುಳ್ಳುಗಳು ಅವರ ಸುಪ್ತಪ್ರಜ್ನೆಯಲ್ಲಿರುವ ಪೂರ್ವಗ್ರಹಗಳಿಗೆ ಪೂರಕವಾಗಿರುವುದರಿಂದ ಆ ಸುಳ್ಳುಗಳನ್ನು ನಂಬಲು ಬಯಸುತ್ತಾರೋ ಎಂದು ಕೇಳಬೇಕು ಎನಿಸುತ್ತದೆ. 

ಗೋಡೆಗೆ ಹಣೆ ಚಚ್ಚಿಕೊಳ್ಳುವುದರ ಬದಲು ಈ ಮಧ್ಯೆ ಜೈಲಿನಲ್ಲಿ ನನ್ನ ಬಹುಪಾಲು ಸಮಯವನ್ನು ಒಂಟಿಯಾಗಿ ಕಳೆಯುತ್ತಿದ್ದೇನೆ. ಎಷ್ಟೆ ಚಿಂತೆಗೀಡುಮಾಡುವ ವಿಷಯವಾಗಿದ್ದರೂ, ಕಳೆದೆರಡು ವರ್ಷಗಳ ಜೈಲು ಜೀವನವೂ ನನ್ನಲ್ಲಿ ತಂದಿರುವ ದೊಡ್ಡ ಬದಲಾವಣೆ ಇದೇ ಆಗಿದೆ. ನಾನಿರುವ ಸಂದರ್ಭವು ಮೌನ ಮತ್ತು  ಒಂಟಿತನಗಳಲ್ಲಿ ಸಮಾಧಾನವನ್ನು ಅರಸುವ ಅನಿವಾರ್ಯತೆಗೆ ನನ್ನನ್ನು ದೂಡಿದೆ. ನನ್ನ ಜೈಲು ಜೀವನದ ಪ್ರಾರಂಭದ ದಿನಗಳಲ್ಲಿ ಅನಿಸುತ್ತಿದ್ದಂತೆ ಈಗ ಗಂಟೆಗಟ್ಟಲೇ ಒಬ್ಬಂಟಿಯಾಗಿ ಜೈಲುಕೋಣೆಯಲ್ಲಿದ್ದರೂ ಉಸಿರುಗಟ್ಟಿದಂತೆ ಅನಿಸುವುದಿಲ್ಲ. 

ಈಗೀಗ ಜನರ ಸದ್ದುಗಳು ಮತ್ತು ನ್ಯಾಯಾಲಯಗಳಿಗೆ ಹೋಗುವಾಗ ಕೇಳುವ ಟ್ರಾಫಿಕ್ ಸದ್ದುಗಳು ಕಿರಿಕಿರಿಯನ್ನು ಮತ್ತು ಆತಂಕವನ್ನು ಹುಟ್ಟಿಸುತ್ತಿದೆ. ಜನಜಂಗುಳಿಗಿಂತ ಜೈಲಿನ ಪ್ರಶಾಂತತೆ ನನಗೆ ಹೆಚ್ಚೆಚ್ಚು ಹಿಡಿಸುತ್ತಿದೆ. ಹಾಗಿದ್ದರೆ, ನಾನು ಈ ಬಂಧನದ ಪರಿಸ್ಥಿತಿಗೆ ಒಗ್ಗಿಹೋಗುತ್ತಿದೇನೇನೋ ಎಂದು ಅನಿಸತೊಡಗುತ್ತದೆ.. 

ಇತ್ತಿಚೆಗೆ ನಾನು ಸುಳ್ಳು ಪ್ರಕರಣದಡಿಯಲ್ಲಿ 14 ವರ್ಷ ಜೈಲುವಾಸ ಅನುಭವಿಸಿದ ವ್ಯಕ್ತಿಯೊಬ್ಬರ �

Writer - ಅನುವಾದ: ಶಿವಸುಂದರ್

contributor

Editor - ಅನುವಾದ: ಶಿವಸುಂದರ್

contributor

Similar News