ಆಧುನಿಕ ಗುಲಾಮಗಿರಿಯ ಉರುಳಲ್ಲಿ 50 ಮಿಲಿಯನ್ ಜನತೆ: ವಿಶ್ವಸಂಸ್ಥೆ

Update: 2022-09-13 15:55 GMT

ಜಿನೆವಾ, ಸೆ.13: ವಿಶ್ವದಾದ್ಯಂತ ಸುಮಾರು 50 ಮಿಲಿಯನ್ ಜನತೆ ಬಲವಂತದ ಮದುವೆ ಅಥವಾ ಬಲವಂತದ ಕೆಲಸದಂತಹ ಆಧುನಿಕ ಗುಲಾಮಗಿರಿಯ ಉರುಳಲ್ಲಿ ಸಿಲುಕಿದ್ದು ಇತ್ತೀಚಿನ ವರ್ಷಗಳಲ್ಲಿ ಅವರ ಜೀವನಮಟ್ಟ ನಾಟಕೀಯವಾಗಿ ಕುಸಿಯುತ್ತಿದೆ ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ.

2030ರ ಒಳಗೆ ಎಲ್ಲಾ ವಿಧದ ಆಧುನಿಕ ಗುಲಾಮಗಿರಿಯನ್ನು ನಿರ್ಮೂಲನೆ ಮಾಡುವ ಗುರಿಯನ್ನು ವಿಶ್ವಸಂಸ್ಥೆ ಹಾಕಿಕೊಂಡಿತ್ತು. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಬಲವಂತದ ಕೆಲಸ(ಇಚ್ಛೆಗೆ ವಿರುದ್ಧವಾದ ದುಡಿಮೆ) ಅಥವಾ ಬಲವಂತದ ವಿವಾಹದ ಬಲೆಯಲ್ಲಿ ಸಿಲುಕಿದವರ ಪ್ರಮಾಣ 2016ರಿಂದ 2021ರ ಅವಧಿಯಲ್ಲಿ 10 ಮಿಲಿಯನ್ನಷ್ಟು ಹೆಚ್ಚಳ ದಾಖಲಿಸಿದೆ. 2021ರ ಅಂತ್ಯದ ವೇಳೆ 28 ಮಿಲಿಯನ್ ಜನತೆ ಇಚ್ಛೆಗೆ ವಿರುದ್ಧದ ಕೆಲಸದಲ್ಲಿ, 22 ಮಿಲಿಯನ್ ಜನತೆ ತಮ್ಮ ಇಚ್ಛೆಗೆ ವಿರುದ್ಧವಾದ ವಿವಾಹ ಬಂಧನದಲ್ಲಿ ಸಿಲುಕಿದ್ದರು ಎಂದು ವಿಶ್ವಸಂಸ್ಥೆಯ ನೂತನ ವರದಿ ಹೇಳಿದೆ. ಕಾರ್ಮಿಕ ಮತ್ತು ವಲಸೆಗಾಗಿ ವಿಶ್ವಸಂಸ್ಥೆ ಏಜೆನ್ಸಿ ಹಾಗೂ ವಾಕ್ಫ್ರೀ ಪ್ರತಿಷ್ಟಾನ ಈ ಅಧ್ಯಯನ ವರದಿ ಬಿಡುಗಡೆಗೊಳಿಸಿದೆ.

ವಿಶ್ವದಲ್ಲಿ ಪ್ರತೀ 150 ಮಂದಿಯಲ್ಲಿ ಒಬ್ಬ ವ್ಯಕ್ತಿ ಆಧುನಿಕ ರೀತಿಯ ಗುಲಾಮಗಿರಿಯ ಹಿಡಿತದಲ್ಲಿದ್ದಾರೆ. ಆಧುನಿಕ ಗುಲಾಮಗಿರಿಯ ಪರಿಸ್ಥಿತಿ ಸುಧಾರಣೆಯಾಗದಿರುವುದು ಆಘಾತಕಾರಿಯಾಗಿದೆ. ಮಾನವ ಹಕ್ಕುಗಳ ಈ ಮೂಲಭೂತ ದುರುಪಯೋಗದ ನಿರಂತರತೆಗೆ ಸಮರ್ಥನೆಯಿಲ್ಲ ಎಂದು ಇಂಟರ್ನ್ಯಾಷನಲ್ ಲೇಬರ್ ಆರ್ಗನೈಸೇಷನ್ (ಐಎಲ್ಒ)ದ ಮುಖ್ಯಸ್ಥ ಗಯ್ ರೈಡರ್ ಹೇಳಿದ್ದಾರೆ.

ಕಾರ್ಮಿಕರ ಸ್ಥಿತಿ ಹಾಗೂ ಅವರ ಆರ್ಥಿಕ ಪರಿಸ್ಥಿತಿಯನ್ನು ಹದಗೆಡಿಸಿದ ಕೋವಿಡ್ ಸಾಂಕ್ರಾಮಿಕವು ಅಪಾಯವನ್ನು ಹೆಚ್ಚಿಸಿದೆ. ಹವಾಮಾನ ಬದಲಾವಣೆ ಮತ್ತು ಸಂಘರ್ಷಗಳ ಪರಿಣಾಮಗಳೊಂದಿಗೆ ಸೇರಿಕೊಂಡು ಇದು ಉದ್ಯೋಗ ಮತ್ತು ಶಿಕ್ಷಣಕ್ಕೆ ಅಭೂತಪೂರ್ವ ಅಡ್ಡಿ, ತೀವ್ರ ಬಡತನ ಮತ್ತು ಅಸುರಕ್ಷಿತ ವಲಸೆಯ ಹೆಚ್ಚಳಕ್ಕೆ ಕೊಡುಗೆ ನೀಡಿದ್ದು ಬೆದರಿಕೆಯನ್ನು ಹೆಚ್ಚಿಸಿದೆ. ಬಲವಂತದ ದುಡಿಮೆ ದೀರ್ಘಾವಧಿಯವರೆಗೆ, ಬಲವಂತದ ವಿವಾಹವು ಸಾಮಾನ್ಯವಾಗಿ ಜೀವಿತಾವಧಿಯ ಶಿಕ್ಷೆ ಆಗಿರುವುದರಿಂದ  ಇದನ್ನು ದೀರ್ಘಾವಧಿಯ ಸಮಸ್ಯೆ ಎಂದು ಪರಿಗಣಿಸಬಹುದು.

ಬಲವಂತದ ಕೆಲಸದ ಕ್ಷೇತ್ರದಲ್ಲಿ ಪ್ರತೀ 5 ಪ್ರಕರಣಗಳಲ್ಲಿ ಒಂದು ಮಕ್ಕಳಿಗೆ ಸಂಬAಧಿಸಿದೆ ಮತ್ತು ಇದರಲ್ಲಿ 50%ಕ್ಕೂ ಹೆಚ್ಚು ಮಕ್ಕಳು ವಾಣಿಜ್ಯ ಲೈಂಗಿಕ ಶೋಷಣೆಯ ಬಲಿಪಶುಗಳು. ವಲಸೆ ಕಾರ್ಮಿಕರಲ್ಲದ  ವಯಸ್ಕ ಕಾರ್ಮಿಕರಿಗೆ ಹೋಲಿಸಿದರೆ, ವಲಸೆ ಕಾರ್ಮಿಕರು ಬಲವಂತದ ದುಡಿಮೆಗೆ ಸಿಲುಕುವ ಅಪಾಯ 3 ಪಟ್ಟು ಅಧಿಕವಾಗಿದೆ ಎಂದು ವರದಿ ಉಲ್ಲೇಖಿಸಿದೆ. ಈ ವರದಿಯು  ಎಲ್ಲಾ ವಲಸೆಗಳು ಸುರಕ್ಷಿತ, ಕ್ರಮಬದ್ಧ ಮತ್ತು ನಿಯಮಿತವಾಗಿದೆ ಎಂದು ಖಚಿತಪಡಿಸಿಕೊಳ್ಳುವ ಅಗತ್ಯವನ್ನು ಒತ್ತಿಹೇಳಿದೆ ಎಂದು ಇಂಟರ್ನ್ಯಾಷನಲ್ ಆರ್ಗನೈಸೇಷನ್ ಫಾರ್ ಮೈಗ್ರೇಷನ್(ಐಒಎಂ)ನ ಮುಖ್ಯಸ್ಥ ಅಂಟೋನಿಯೊ ವಿಟೋರಿನೊ ಹೇಳಿದ್ದಾರೆ.

ಆಧುನಿಕ ಗುಲಾಮಗಿರಿ ಮೂಲಭೂತವಾಗಿ ಪ್ರತಿಯೊಂದು ದೇಶದಲ್ಲಿಯೂ ಇದೆ. ಬಲವಂತದ ಕೆಲಸದ 50%ಕ್ಕೂ ಅಧಿಕ, ಬಲವಂತದ ವಿವಾಹದ 25%ದಷ್ಟು ಪ್ರಕರಣ ಮೇಲ್ಮಧ್ಯಮ ಆದಾಯ ಅಥವಾ ಅಧಿಕ ಆದಾಯದ ದೇಶಗಳಲ್ಲಿ ದಾಖಲಾಗಿವೆ. 2016ರ ಸಮೀಕ್ಷೆಯ ಬಳಿಕ ಬಲವಂತದ ವಿವಾಹಕ್ಕೆ ಸಿಲುಕಿದ ಮಹಿಳೆಯರು ಮತ್ತು ಬಾಲಕಿಯರ ಸಂಖ್ಯೆಯಲ್ಲಿ 6.6 ಮಿಲಿಯನ್ ಹೆಚ್ಚಳ ದಾಖಲಾಗಿದೆ. ಬಲವಂತದ ದುಡಿಮೆಗೆ ಸಿಲುಕಿದವರ ಪ್ರಮಾಣದಲ್ಲಿ 2.7 ಮಿಲಿಯನ್ ಹೆಚ್ಚಳ ದಾಖಲಾಗಿದೆ. ಬಲವಂತದ ದುಡಿಮೆಯಲ್ಲಿರುವವರಲ್ಲಿ 14%ದಷ್ಟು ಮಂದಿ ಸರಕಾರದ ಅಧಿಕಾರಿಗಳು ವಿಧಿಸಿದ ಕೆಲಸ ಮಾಡುತ್ತಿದ್ದಾರೆ. ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ  ಜೈಲಿನಲ್ಲಿರುವ ಖೈದಿಗಳನ್ನು ಬಲವಂತದ ಮತ್ತು ಕಡ್ಡಾಯ ದುಡಿಮೆಗೆ ಬಳಸಲಾಗುತ್ತಿದೆ  ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ

ಚೀನಾದ ಉಲ್ಲೇಖ

ಉತ್ತರ ಕೊರಿಯಾದಲ್ಲಿ ಅಸಾಮಾನ್ಯ ಕಠಿಣ ಪರಿಸ್ಥಿತಿಗಳಲ್ಲಿ ಬಲವಂತವಾಗಿ ಕಾರ್ಮಿಕರನ್ನು ದುಡಿಸಿಕೊಳ್ಳುವ ಬಗ್ಗೆ ವಿಶ್ವಸಂಸ್ಥೆ ಮಾನವ ಹಕ್ಕುಗಳ ವಿಭಾಗ ವ್ಯಕ್ತಪಡಿಸಿರುವ ಆತಂಕವನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ  ಚೀನಾದ ಕ್ಸಿನ್ಜಿಯಾಂಗ್ ಪ್ರಾಂತ ಸೇರಿದಂತೆ ಆ ದೇಶದ ಹಲವೆಡೆ ಬಲವಂತದ ದುಡಿಮೆಯ ಸಾಧ್ಯತೆಯ ಬಗ್ಗೆ ವಿಶ್ವಸಂಸ್ಥೆಯ ಆತಂಕವನ್ನು ಒತ್ತಿಹೇಳಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News