VIDEO- ಭೂಸ್ವಾಧೀನ ಪ್ರಕ್ರಿಯೆ ವಿರೋಧಿಸಿ ಅನಿರ್ದಿಷ್ಟಾವಧಿ ಹೋರಾಟ ಆರಂಭ
ಬೆಂಗಳೂರು, ಸೆ.13: ಕರ್ನಾಟಕ ರಾಜ್ಯ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ(ಕೆಐಎಡಿಬಿ)ಯ ಕೃಷಿ ಭೂಮಿಯನ್ನು ಅಕ್ರಮವಾಗಿ ಭೂ ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ವಿರೋಧಿಸಿ ಅನಿರ್ದಿಷ್ಟಾವಧಿ ಹೋರಾಟ ಆರಂಭಿಸಲಾಗಿದೆ.
ಮಂಗಳವಾರ ನಗರದ ಫ್ರೀಡಂ ಪಾರ್ಕಿನ ಮೈದಾನದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿ ರೈತರು ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಜಮಾಯಿಸಿದ ಹೋರಾಟಗಾರರು, ರಾಜ್ಯ ಸರಕಾರ ತಮ್ಮ ಬೇಡಿಕೆ ಈಡೇರಿಸುವವರೆಗೂ ಹೋರಾಟ ಮುಂದುವರೆಸುವುದಾಗಿ ತಿಳಿಸಿದರು.
13 ಹಳ್ಳಿಗಳ ರೈತರ ಫಲವತ್ತಾದ 1,777 ಎಕರೆ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಕೆಐಎಡಿಬಿ ಮುಂದಾಗಿದ್ದು, ರೈತರಿಗೆ ನೋಟಿಸ್ ನೀಡಿತ್ತು. ಅದನ್ನು ವಿರೋಧಿಸಿ ಕಳೆದ 163 ದಿನಗಳಿಂದ ನೂರಾರು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಅದರ ಭಾಗವಾಗಿ ಅಧಿವೇಶನ ಹಿನ್ನೆಲೆ ಬೆಂಗಳೂರಿನಲ್ಲಿ ಹೋರಾಟ ನಡೆಸಲಾಗುತ್ತಿದೆ ಎಂದರು.
ಚನ್ನರಾಯಪಟ್ಟಣದಲ್ಲಿ ಹೋರಾಟಕ್ಕೆ ಸೇರಿದ್ದ ರೈತರೆಲ್ಲ ಇಲ್ಲಿಗೆ ಬಂದು ಧರಣಿ ನಡೆಸುತ್ತಿದ್ದು, ಅಧಿವೇಶನದಲ್ಲಿ ಅಕ್ರಮ ಭೂಸ್ವಾಧೀನದ ಕುರಿತು ಚರ್ಚೆ ಮಾಡಬೇಕು, ಸಮಸ್ಯೆಯನ್ನು ಬಗೆಹರಿಸಬೇಕು ಎಂಬುದು ನಮ್ಮ ಬೇಡಿಕೆ ಎಂದು ಹೋರಾಟಗಾರರು ತಿಳಿಸಿದರು.
ದೇವನಹಳ್ಳಿ ರೈತರ ಬಗ್ಗೆ ಸರಕಾರ ಗಮನಹರಿಸಿದರೆ ಬೆಂಗಳೂರಿನಿಂದ ವಾಪಸ್ ಹೋಗುತ್ತೇವೆ. ಇಲ್ಲವಾದಲ್ಲಿ ನಮ್ಮ ಹೋರಾಟ ಬೆಂಗಳೂರಿನಲ್ಲೇ ಮುಂದುವರೆಯುತ್ತದೆ ಎಂದು ಧರಣಿ ನಿರತ ಹೋರಾಟಗಾರರು ಹೇಳಿದರು.