ಸಹಕಾರಿ ಬ್ಯಾಂಕ್ ಗಳಲ್ಲಿ 4,167ಕ್ಕೂ ಹೆಚ್ಚು ನಕಲಿ ಕಂಪೆನಿಗಳು ಗಮನಕ್ಕೇ ಬಂದಿಲ್ಲ: ಎಸ್.ಟಿ.ಸೋಮಶೇಖರ್

Update: 2022-09-15 03:07 GMT

ಬೆಂಗಳೂರು: ರಾಜ್ಯದ ನಗರ ಸಹಕಾರಿ ಬ್ಯಾಂಕ್‌ಗಳಲ್ಲಿ 4,167ಕ್ಕೂ ಹೆಚ್ಚು ನಕಲಿ ಕಂಪೆನಿಗಳು ವಹಿವಾಟು ನಡೆಸಿವೆ ಎಂದು ರಾಜ್ಯಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಸಹಕಾರ ಇಲಾಖೆಯೇ ಮಾಹಿತಿ ಒದಗಿಸಿದ್ದರೂ ರಾಜ್ಯ ಸರಕಾರದ ಗಮನಕ್ಕೇ ಬಂದಿಲ್ಲ ಎಂದು ಸಹಕಾರ ಇಲಾಖೆ ಸಚಿವ ಎಸ್.ಟಿ. ಸೋಮಶೇಖರ್ ಅವರು ಸದನದ ದಾರಿತಪ್ಪಿಸಿರುವುದು ಇದೀಗ ಬಹಿರಂಗವಾಗಿದೆ.

ಅಲ್ಲದೆ, ರಾಜ್ಯ ಸರಕಾರದ ಗಮನಕ್ಕೆ ಬರದೆಯೇ 4,167ಕ್ಕೂ ಹೆಚ್ಚು ನಕಲಿ ಕಂಪೆನಿಗಳು ನಗರ ಸಹಕಾರಿ ಬ್ಯಾಂಕ್‌ಗಳಲ್ಲಿ ವ್ಯವಹಾರ ನಡೆಸುತ್ತಿದೆ ಎಂಬುದು ಮತ್ತೊಮ್ಮೆ ಸಾಬೀತಾದಂತಾಗಿದೆ. ಈ ಯಾವುದೇ ವ್ಯವಹಾರಗಳೂ ತನ್ನ ಗಮನಕ್ಕೆ ಬಂದಿಲ್ಲ ಎಂದು ಉತ್ತರಿಸುವ ಮೂಲಕ ರಾಜ್ಯ ಸರಕಾರದ ಸಹಕಾರ ಇಲಾಖೆಯೇ ರಾಜ್ಯಮಟ್ಟದ ಸಮನ್ವಯ ಸಮಿತಿ ಸಭೆಗೆ ಮಂಡಿಸಿದ್ದ ಕಾರ್ಯಸೂಚಿ ಮತ್ತು ವಿವರಣೆಯನ್ನು ತಳ್ಳಿ ಹಾಕಿದೆ.

ನಗರ ಸಹಕಾರಿ ಬ್ಯಾಂಕ್‌ಗಳಲ್ಲಿ 4,167ಕ್ಕೂ ಹೆಚ್ಚು ನಕಲಿ ಕಂಪೆನಿಗಳು ವ್ಯವಹಾರ ನಡೆಸಿರುವುದು ಸರಕಾರದ ಗಮನಕ್ಕೆ ಬಂದಿದೆಯೇ ಮತ್ತು ಸಹಕಾರಿ ಬ್ಯಾಂಕ್‌ಗಳು ಬೇನಾಮಿ ಕಂಪೆನಿಗಳಿಂದ 4,754 ಕೋಟಿ ರೂ.ಗೂ ಹೆಚ್ಚು ಮೊತ್ತದ ಠೇವಣಿ ಸ್ವೀಕರಿಸಿರುವ ಕುರಿತು ಸರಕಾರದ ನಿಲುವಿನ ಕುರಿತು ವಿಧಾನಪರಿಷತ್‌ನ ಸದಸ್ಯ ಎನ್. ರವಿಕುಮಾರ್ ವಿಧಾನಪರಿಷತ್ ಅಧಿವೇಶನದಲ್ಲಿ ಚುಕ್ಕೆ ಗುರುತಿಲ್ಲದ ಪ್ರಶ್ನೆ ಕೇಳಿದ್ದರು.

ಇದಕ್ಕೆ ಉತ್ತರಿಸಿರುವ ಎಸ್.ಟಿ. ಸೋಮಶೇಖರ್ ಅವರು ನಗರ ಸಹಕಾರಿ ಬ್ಯಾಂಕ್‌ಗಳಲ್ಲಿ 4,167ಕ್ಕೂ ಹೆಚ್ಚು ನಕಲಿ ಕಂಪೆನಿಗಳು ವ್ಯವಹಾರ ನಡೆಸಿರುವುದು ಸರಕಾರದ ಗಮನಕ್ಕೆ ಬಂದಿಲ್ಲ ಎಂದು ಹೇಳಿದ್ದಾರೆ.

ನಗರ ಸಹಕಾರ ಬ್ಯಾಂಕ್‌ಗಳು ಕರ್ನಾಟಕ ರಾಜ್ಯ ಸಹಕಾರ ಸಂಘಗಳ ಕಾಯ್ದೆ 1959ರ ಅಡಿ ನೋಂದಣಿಯಾಗಿ ಆರ್‌ಬಿಐನಿಂದ ಪರವಾನಿಗೆ ಪಡೆದು ಕಾರ್ಯನಿರ್ವಹಿಸುತ್ತಿವೆ. ಈ ಬ್ಯಾಂಕ್‌ಗಳ ವ್ಯವಹಾರಗಳನ್ನು ವಾರ್ಷಿಕ ಲೆಕ್ಕ ಪರಿಶೋಧನೆ ಹಾಗೂ ಆರ್‌ಬಿಐ ಪರಿವೀಕ್ಷಣೆ ನಡೆಸುತ್ತಿದೆ. ಈ ವರದಿಗಳಲ್ಲಿ ಆರ್ಥಿಕ ಅವ್ಯವಹಾರಗಳು ಕಂಡುಬಂದಲ್ಲಿ ಬ್ಯಾಂಕಿಂಗ್ ರೆಗ್ಯುಲೇಷನ್ ಕಾಯ್ದೆ 1949 ಹಾಗೂ ಕರ್ನಾಟಕ ಸಹಕಾರಿ ಸಂಘಗಳ ಕಾಯ್ದೆ 1959ರ ಅವಕಾಶಗಳನ್ವಯ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಉತ್ತರಿಸಿರುವ ಸೋಮಶೇಖರ್ ಅವರು ರಾಜ್ಯಮಟ್ಟದ ಸಮನ್ವಯ ಸಮಿತಿ ಸಭೆಯ ಕಾರ್ಯಸೂಚಿಯಲ್ಲಿನ ಟಿಪ್ಪಣಿಯನ್ನೇ ಮುಚ್ಚಿಟ್ಟಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಸಮನ್ವಯ ಸಮಿತಿ ಸಭೆಗೆ ಮಂಡಿಸಿದ್ದ ವಿವರಣೆಯಲ್ಲೇನಿತ್ತು?

ನಕಲಿ ಕಂಪೆನಿಗಳು ಆದಾಯ ತೆರಿಗೆ ಕುರಿತಾದ ವಿವರಗಳನ್ನು ಸಲ್ಲಿಸದಿರುವ ಕುರಿತು ಕಾರ್ಯಸೂಚಿ ಪಟ್ಟಿಯಲ್ಲಿ ಸೇರಿಸಿತ್ತು. ಕಂಪೆನಿಗಳ ನೋಂದಣಿ ಇಲಾಖೆ (ಆರ್‌ಒಸಿ) ಬೆಂಗಳೂರು ವ್ಯಾಪ್ತಿಯಲ್ಲಿ ಅಕ್ರಮ ವ್ಯವಹಾರ, ಅಕ್ರಮ ಆಸ್ತಿಗಳನ್ನು ಅಡಗಿಸಿಡುವುದಕ್ಕೆ ಪೂರಕವಾಗಿ ಕಾರ್ಯಾಚರಣೆ ನಡೆಸುತ್ತಿವೆ ಎಂದು ಗುರುತಿಸಲಾಗಿರುವ ಒಟ್ಟು ನಕಲಿ (ಶೆಲ್) ಕಂಪೆನಿಗಳ ಪೈಕಿ 4,167 ಕಂಪೆನಿಗಳು ವಾರ್ಷಿಕ ರಿಟರ್ನ್ಸ್ ಸಲ್ಲಿಸಿರಲಿಲ್ಲ.

ಅಲ್ಲದೆ, ಈ ನಕಲಿ ಕಂಪೆನಿಗಳು ನಗರ ಸಹಕಾರಿ ಬ್ಯಾಂಕ್‌ಗಳಲ್ಲಿಯೇ ಖಾತೆ ತೆರೆದು ಕೋಟ್ಯಂತರ ವಹಿವಾಟು ನಡೆಸಿವೆ ಎಂಬ ಸಂಗತಿಯು ರಾಜ್ಯಮಟ್ಟದ ಸಮನ್ವಯ ಸಮಿತಿಯು 2022ರ ಜೂನ್ 27ರ ರಂದು ನಡೆದಿದ್ದ 56ನೇ ಸಭೆಗೆ ಸಲ್ಲಿಸಿರುವ ಕಾರ್ಯಸೂಚಿ ಪಟ್ಟಿಯಲ್ಲಿ ವಿವರಣೆ ಒದಗಿಸಿತ್ತು.

ಹಲವು ನಕಲಿ ಕಂಪೆನಿಗಳು ಹೊಂದಿದ್ದ ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡಲಾಗಿದ್ದರೂ ಇನ್ನೂ ಬಹುತೇಕ ಕಂಪೆನಿಗಳು ರಾಜ್ಯದಲ್ಲಿ ಕಾರ್ಯಾಚರಿಸುತ್ತಿವೆ. ರಿಜಿಸ್ಟ್ರರ್ ಆಫ್ ಕಂಪೆನೀಸ್ ಮಾಹಿತಿ ಪ್ರಕಾರ ಶೆಲ್ ಕಂಪೆನಿಗಳು ನಗರ ಸಹಕಾರಿ ಬ್ಯಾಂಕ್‌ಗಳಲ್ಲಿ ಖಾತೆ ತೆರೆದಿವೆ. ಈ ಸಂಬಂಧ ಭಾರತೀಯ ರಿಸರ್ವ್ ಬ್ಯಾಂಕ್, ನಗರ ಸಹಕಾರಿ ಬ್ಯಾಂಕ್‌ಗಳಿಂದ ಮಾಹಿತಿಯನ್ನು ಬಯಸಿದೆ ಎಂಬುದು ಕಾರ್ಯಸೂಚಿ ಪಟ್ಟಿಯಿಂದ ತಿಳಿದು ಬಂದಿತ್ತು.

ಎಸ್‌ಎಲ್‌ಸಿಸಿ (ಸ್ಟೇಟ್ ಲೆವೆಲ್ ಕೋ ಆರ್ಡಿನೇಷನ್ ಕಮಿಟಿ)ಯ 54ನೇ ಸಭೆಯಲ್ಲಿ ಕಂಪೆನಿಗಳ ಕೆವೈಸಿ ವಿವರಗಳ ಕ್ರೋಡೀಕೃತ ಮಾಹಿತಿ ಒದಗಿಸುವ ಕುರಿತು ಚರ್ಚೆ ನಡೆದಿತ್ತು. ಆದರೆ ಬ್ಯಾಂಕ್‌ಗಳು ಈ ಮಾಹಿತಿಯನ್ನು ಆರ್‌ಬಿಐನೊಂದಿಗೆ ಹಂಚಿಕೊಂಡಿರಲಿಲ್ಲ.

ಅಲ್ಲದೆ, 55ನೇ ಎಸ್‌ಎಲ್‌ಸಿಸಿ ಸಭೆಯಲ್ಲಿ ಸೆಬಿಯ ಯಾವೊಬ್ಬ ಪ್ರತಿನಿಧಿಯು ಹಾಜರಿರಲಿಲ್ಲ ಎಂಬುದು ಕಾರ್ಯಸೂಚಿ ಪಟ್ಟಿಯಿಂದ ಗೊತ್ತಾಗಿದೆ. ಅದಲ್ಲದೆ ನಗರ ಸಹಕಾರಿ ಬ್ಯಾಂಕ್‌ಗಳಲ್ಲಿ ನಕಲಿ ಕಂಪೆನಿಗಳು ಹೂಡಿಕೆ ಮಾಡಿವೆ ಎಂದು ಆರ್‌ಬಿಐ ಸರಕಾರದ ಗಮನಕ್ಕೆ ತಂದಿದ್ದರೂ ಸಚಿವ ಸೋಮಶೇಖರ್ ಅವರು ಈ ಕುರಿತು ಗಂಭೀರ ಕ್ರಮ ಕೈಗೊಂಡಿಲ್ಲ ಎಂದು ಗೊತ್ತಾಗಿದೆ.

ಸಂಸತ್ ಅಧಿವೇಶನದಲ್ಲಿ ಕೇಳಲಾಗಿದ್ದ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದ ಕಂಪೆನಿ ವ್ಯವಹಾರಗಳ ಕೇಂದ್ರ ಸಚಿವಾಲಯವು ನೀಡಿದ್ದ ಮಾಹಿತಿ ಪ್ರಕಾರ ಆರ್‌ಒಸಿ ಬೆಂಗಳೂರು ವ್ಯಾಪ್ತಿಯಲ್ಲಿಯೇ 11,185 ಶೆಲ್ ಕಂಪೆನಿಗಳಿದ್ದವು. ಅಲ್ಲದೆ, ದೇಶದಲ್ಲಿ 2018ರಿಂದ 2021ರ ಅವಧಿಯಲ್ಲಿ 2,38,223 ಶೆಲ್ ಕಂಪೆನಿಗಳಿವೆ ಎಂದು ಕೇಂದ್ರ ಸರಕಾರವು ಗುರುತಿಸಿದ್ದನ್ನು ಸ್ಮರಿಸಬಹುದು.

Writer - ಜಿ.ಮಹಾಂತೇಶ್

contributor

Editor - ಜಿ.ಮಹಾಂತೇಶ್

contributor

Similar News