ಅಧಿವೇಶನದಲ್ಲಿ ಚರ್ಚೆಗೆ ಅವಕಾಶ ಕಲ್ಪಿಸದೆ ತಾರತಮ್ಯ ಮುಂದುವರಿಸಿದ ಸರಕಾರ: ಯು.ಟಿ. ಖಾದರ್ ಅಸಮಾಧಾನ

Update: 2022-09-15 15:36 GMT

ಮಂಗಳೂರು, ಸೆ.15: ದ.ಕ.ಜಿಲ್ಲೆಯಲ್ಲಿ ಜುಲೈಯಲ್ಲಿ ನಡೆದ ಸರಣಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರವು ವಿಧಾನ ಮಂಡಲದ ಅಧಿವೇಶನದಲ್ಲಿ ಚರ್ಚೆಗೆ ಅವಕಾಶ ನೀಡದೆ ತಾರತಮ್ಯ ನೀತಿಯನ್ನು ಮುಂದುವರಿಸಿದೆ ಎಂದು ಮಾಜಿ ಸಚಿವ, ವಿಧಾನಸಭೆಯ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ಕೋಮುಗಲಭೆಯಿಂದ ದ.ಕ. ಜಿಲ್ಲೆಯಲ್ಲಿ ಮೂರು ಕೊಲೆಗಳು ನಡೆದಿತ್ತು. ಆ ಪೈಕಿ ಸರಕಾರವು ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಮಾತ್ರ ಪರಿಹಾರ ನೀಡಿದೆ. ಆದರೆ ಬೆಳ್ಳಾರೆಯ ಮಸೂದ್ ಮತ್ತು ಮಂಗಳಪೇಟೆಯ ಫಾಝಿಲ್ ಕುಟುಂಬಕ್ಕೆ ಯಾವುದೇ ಪರಿಹಾರ ನೀಡಲಿಲ್ಲ. ಅಲ್ಲದೆ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ತನಿಖೆಯನ್ನು ಎನ್‌ಐಎ ತಂಡಕ್ಕೆ ವಹಿಸಿದೆ. ಮಸೂದ್ ಮತ್ತು ಫಾಝಿಲ್ ಕೊಲೆ ಪ್ರಕರಣದ ತನಿಖೆಯನ್ನು ಸ್ಥಳೀಯ ಪೊಲೀಸರಿಗೆ ವಹಿಸುವ ಮೂಲಕ ತಾರತಮ್ಯ ಎಸಗಿದೆ. ಹಾಗಾಗಿ ಮಸೂದ್ ಮತ್ತು ಫಾಝಿಲ್ ಕುಟುಂಬಕ್ಕೆ ಯಾವಾಗ ಪರಿಹಾರ ನೀಡುವುದು ಎಂದು ಖಾದರ್ ಅಧಿವೇಶನದಲ್ಲಿ ಪ್ರಶ್ನಿಸಿದ್ದರು.

ಸರಕಾರದ ನಡೆಯ ಬಗ್ಗೆ ಪ್ರತಿಕ್ರಿಯಿಸಿರುವ ಖಾದರ್ ‘ಸದನದಲ್ಲಿ ಚರ್ಚೆಗೆ ಅವಕಾಶ ಕಲ್ಪಿಸದೆ ಗೃಹಸಚಿವರು ಕೇವಲ ಲಿಖಿತ ಉತ್ತರ ನೀಡಿದ್ದಾರೆ. ಅದರಲ್ಲಿ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ ಮಾತ್ರ ಕೋಮು ಸಂಬಂಧ ಪ್ರಕರಣವಾಗಿದೆ ಎಂದು ತಿಳಿಸಲಾಗಿದೆ. ಪರಿಹಾರ ವಿತರಣೆ ಮತ್ತು ತನಿಖಾ ತಂಡಕ್ಕೆ ಹಸ್ತಾಂತರ ವಿಷಯದಲ್ಲೂ ಸರಕಾರ ತಾರತಮ್ಯ ಎಸಗಿದೆ. ಅಲ್ಲದೆ ಚರ್ಚೆಗೂ ಅವಕಾಶ ನೀಡಲಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸರಕಾರದ ದ್ವಂದ ನಿಲುವಿನ ಬಗ್ಗೆ ಸಾರ್ವಜನಿಕ ವಲಯದಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದರೂ ಕೂಡ ಸರಕಾರ ತನ್ನ ನಿಲುವನ್ನು ಬದಲಾಯಿಸಿಲ್ಲ. ಸರಕಾರವು ಕೋಮುಪಕ್ಷಪಾತಿ ಎಂಬುದು ಇದರಿಂದ ಸಾಬೀತಾಗಿದೆ. ಸರಕಾರದ ಈ ನಡೆಯ ವಿರುದ್ಧ ರಾಜ್ಯಪಾಲರಿಗೆ ದೂರು ನೀಡುವುದಾಗಿ ಯು.ಟಿ.ಖಾದರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News