ಮಹಿಳೆಯರು ಅನುಭವಿಸುವ ದೈಹಿಕ ಹಿಂಸೆಗೆ ಕೊನೆಯಿಲ್ಲ

Update: 2022-09-17 04:19 GMT

ಮಹಿಳೆಯರ ವಿರುದ್ಧದ ಲಿಂಗಾಧಾರಿತ ಹಿಂಸೆಯು ಮೂಲಭೂತ ಮಾನವಹಕ್ಕುಗಳ ಉಲ್ಲಂಘನೆಯಾಗಿದೆ ಎನ್ನುವುದನ್ನು ಜಾಗತಿಕವಾಗಿ ಅಂಗೀಕರಿಸಲಾಗಿದೆ. ವಿಶ್ವಸಂಸ್ಥೆಯು ಲಿಂಗಾಧಾರಿತ ಹಿಂಸೆಯನ್ನು, ಮಹಿಳೆಯರು, ಬಾಲಕಿಯರು ಮತ್ತು ಬಾಲಕರ ವಿರುದ್ಧ ದೈಹಿಕ, ಲೈಂಗಿಕ ಅಥವಾ ಮಾನಸಿಕ ಹಾನಿಗೆ ಕಾರಣವಾಗುವ ಯಾವುದೇ ಕೃತ್ಯ ಅಥವಾ ಇಂತಹ ಕೃತ್ಯಗಳು ಮತ್ತು ಬಲಾತ್ಕಾರದ ಬೆದರಿಕೆ ಅಥವಾ ಸ್ವಾತಂತ್ರ ಹರಣ ಎಂಬುದಾಗಿ ವಿವರಿಸಿದೆ.

  ಗಂಡನಿಂದ ಹಿಂಸೆಗೆ ಒಳಗಾದ ಮಹಿಳೆಯರ ಪ್ರಮಾಣ

ಮದುವೆಯಾಗಿರುವ ಮಹಿಳೆಯರ ಪೈಕಿ ಶೇ. 32 ಮಂದಿ ಎಂದಾದರೂ ತಮ್ಮ ಹಾಲಿ ಅಥವಾ ಮಾಜಿ ಗಂಡನಿಂದ ದೈಹಿಕ, ಲೈಂಗಿಕ ಅಥವಾ ಮಾನಸಿಕ ಹಿಂಸೆಗೆ ಒಳಗಾಗಿದ್ದಾರೆ. ಅದೇ ವೇಳೆ, ಸಮೀಕ್ಷೆಗಿಂತ 12 ತಿಂಗಳ ಮೊದಲಿನ ಅವಧಿಯಲ್ಲಿ ಶೇ. 27 ವಿವಾಹಿತ ಮಹಿಳೆಯರು ಈ ಪೈಕಿ ಒಂದಾದರೂ ಮಾದರಿಯ ಹಿಂಸೆಗೆ ಒಳಗಾಗಿದ್ದಾರೆ.

ಶೇ. 29 ಮಹಿಳೆಯರು ಒಮ್ಮೆಯಾದರೂ ಗಂಡನಿಂದ ದೈಹಿಕ ಹಿಂಸೆಗೆ ಒಳಗಾಗಿದ್ದಾರೆ. ಸಮೀಕ್ಷೆಗಿಂತ ಮೊದಲಿನ 12 ತಿಂಗಳ ಅವಧಿಯಲ್ಲಿ ಶೇ. 23 ಮಹಿಳೆಯರು ದೈಹಿಕ ಹಿಂಸೆಗೆ ಒಳಗಾಗಿದ್ದಾರೆ.

ಶೇ. 6 ಮಹಿಳೆಯರು ಒಮ್ಮೆಯಾದರೂ ಗಂಡನಿಂದ ಲೈಂಗಿಕ ಹಿಂಸೆಗೆ ಒಳಗಾಗಿದ್ದಾರೆ. ಸಮೀಕ್ಷೆಗಿಂತ ಮೊದಲಿನ 12 ತಿಂಗಳ ಅವಧಿಯಲ್ಲಿ ಶೇ. 5 ಮಹಿಳೆಯರು ಗಂಡನಿಂದ ಇಂಥ ಹಿಂಸೆ ಅನುಭವಿಸಿದ್ದಾರೆ.

ಶೇ. 14 ಮಹಿಳೆಯರು ಗಂಡನಿಂದ ಒಮ್ಮೆಯಾದರೂ ಮಾನಸಿಕ ಹಿಂಸೆಗೆ ಒಳಗಾಗಿದ್ದಾರೆ ಹಾಗೂ ಸಮೀಕ್ಷೆಗಿಂತ ಮೊದಲಿನ 12 ತಿಂಗಳ ಅವಧಿಯಲ್ಲಿ ಶೇ. 12 ಮಹಿಳೆಯರು ಗಂಡನಿಂದ ಮಾನಸಿಕ ಹಿಂಸೆಗೆ ಒಳಗಾಗಿದ್ದಾರೆ.

ಶೇ. 22  ಮಹಿಳೆಯರಿಗೆ ದೈಹಿಕ ಹಿಂಸೆ

ಭಾರತದಲ್ಲಿ 18-49 ವರ್ಷ ವಯೋ ಗುಂಪಿನ ಮಹಿಳೆಯರ ಪೈಕಿ ಶೇ. 29 ಮಂದಿ 15ನೇ ವರ್ಷ ಪ್ರಾಯದ ಬಳಿಕ ದೈಹಿಕ ಹಿಂಸೆಗೆ ಒಳಗಾಗಿದ್ದಾರೆ ಎನ್ನುವುದನ್ನು ಭಾರತೀಯ ಕುಟುಂಬ ಆರೋಗ್ಯ ಸಮೀಕ್ಷೆ 2019-21 (ಎನ್‌ಎಫ್‌ಎಚ್‌ಎಸ್-5) ಕಂಡುಕೊಂಡಿದೆ ಹಾಗೂ ಶೇ. 22 ಮಹಿಳೆಯರು ಸಮೀಕ್ಷೆಗಿಂತ ಮೊದಲಿನ 12 ತಿಂಗಳ ಅವಧಿಯಲ್ಲಿ ದೈಹಿಕ ಹಿಂಸೆಗೆ ಒಳಗಾಗಿದ್ದಾರೆ. 18-49 ವರ್ಷ ವಯೋಗುಂಪಿನ ಗರ್ಭಿಣಿಯರ ಪೈಕಿ ಶೇ. 3 ಮಂದಿ ಗರ್ಭಧಾರಣೆ ಅವಧಿಯಲ್ಲಿ ದೈಹಿಕ ಹಿಂಸೆಗೆ ಗುರಿಯಾಗಿದ್ದಾರೆ ಎಂದು ಸಮೀಕ್ಷೆ ಹೇಳಿದೆ.

ಪತ್ನಿಪೀಡಕರು ಕರ್ನಾಟಕದಲ್ಲಿ ಅಧಿಕ!

* ಗಂಡನಿಂದ ಕನಿಷ್ಠ ಒಮ್ಮೆಯಾದರೂ ದೈಹಿಕ, ಲೈಂಗಿಕ ಮತ್ತು ಮಾನಸಿಕ ಹಿಂಸೆಗೆ ಒಳಗಾಗಿರುವ ಮಹಿಳೆಯರ ಸಂಖ್ಯೆ ಕರ್ನಾಟಕದಲ್ಲಿ ಹೆಚ್ಚು. ಕರ್ನಾಟಕದಲ್ಲಿ ಶೇ. 48 ಮಹಿಳೆಯರು ಇಂಥ ಹಿಂಸೆಗೆ ಒಳಗಾಗಿದ್ದಾರೆ.

*ನಂತರದ ಸ್ಥಾನಗಳಲ್ಲಿ ಬಿಹಾರ (ಶೇ. 43), ಮಣಿಪುರ (ಶೇ. 42), ತೆಲಂಗಾಣ (ಶೇ. 41), ತಮಿಳುನಾಡು (ಶೇ. 40) ರಾಜ್ಯಗಳು ಬರುತ್ತವೆ.

* ಗಂಡನಿಂದ ಕನಿಷ್ಠ ಒಮ್ಮೆಯಾದರೂ ದೈಹಿಕ, ಲೈಂಗಿಕ ಮತ್ತು ಮಾನಸಿಕ ಹಿಂಸೆಗೆ ಒಳಗಾಗಿರುವ ಮಹಿಳೆಯರ ಸಂಖ್ಯೆ ಲಕ್ಷದ್ವೀಪದಲ್ಲಿ (ಶೇ. 1.3) ಅತ್ಯಂತ ಕಡಿಮೆಯಾಗಿದೆ.

*ಮಹಿಳೆಯರು ಗಂಡನಿಂದ ಅತ್ಯಂತ ಕಡಿಮೆ ಹಿಂಸೆಗೆ ಒಳಗಾಗಿರುವ ಇತರ ರಾಜ್ಯಗಳೆಂದರೆ ಗೋವಾ (ಶೇ. 10), ಹಿಮಾಚಲಪ್ರದೇಶ (ಶೇ. 11), ನಾಗಾಲ್ಯಾಂಡ್ (ಶೇ. 11).

ವಯಸ್ಸು ಹೆಚ್ಚಿದಂತೆ ಹಿಂಸೆಯೂ ಹೆಚ್ಚು

 ಪ್ರಾಯದೊಂದಿಗೆ ಮಹಿಳೆಯರು ಅನುಭವಿಸುವ ಹಿಂಸೆಯ ಪ್ರಮಾಣವೂ ಹೆಚ್ಚುತ್ತದೆ. ದೈಹಿಕ ಹಿಂಸೆಯ ಪ್ರಮಾಣವು 18-19ರ ವಯೋಗುಂಪಿನಲ್ಲಿ ಶೇ. 16 ಇದ್ದರೆ, 40-49ರ ವಯೋಗುಂಪಿನ ಮಹಿಳೆಯರಲ್ಲಿ ಈ ಪ್ರಮಾಣವು ಶೇ. 32ಕ್ಕೆ ಹೆಚ್ಚುತ್ತದೆ. ಮದುವೆಯಾದ ಮಹಿಳೆಯರಿಗೆ ಹೋಲಿಸಿದರೆ ಮದುವೆಯಾಗದ ಮಹಿಳೆಯರು ಹಿಂಸೆಗೆ ಒಳಗಾಗುವ ಪ್ರಮಾಣ ಕಡಿಮೆ.

 ಗ್ರಾಮೀಣ ಮಹಿಳೆಯರು (ಶೇ.31) ದೈಹಿಕ ಹಿಂಸೆಗೆ ಒಳಗಾಗುವ ಪ್ರಮಾಣವು ನಗರ ಪ್ರದೇಶಗಳಲ್ಲಿ ವಾಸಿಸುವ ಮಹಿಳೆಯರಿಗಿಂತ (ಶೇ.24) ಹೆಚ್ಚು.

 ಮಹಿಳೆಯರ ಶಿಕ್ಷಣದ ಮಟ್ಟ ಮತ್ತು ಸಂಪತ್ತು ಹೆಚ್ಚಿದಂತೆ ಅವರು ಅನುಭವಿಸುವ ಹಿಂಸೆ ಕಡಿಮೆಯಾಗುತ್ತದೆ. ದೈಹಿಕ ಹಿಂಸೆ ಅನುಭವಿಸುವ ಮಹಿಳೆಯರ ಪ್ರಮಾಣವು ಶಾಲೆಗೆ ಹೋಗದ ಮಹಿಳೆಯರಲ್ಲಿ ಶೇ. 39 ಇದ್ದರೆ, 12 ಅಥವಾ ಅದಕ್ಕಿಂತ ಹೆಚ್ಚಿನ ವರ್ಷ ಶಿಕ್ಷಣ ಪಡೆದ ಮಹಿಳೆಯರಲ್ಲಿ ಶೇ. 17 ಆಗಿದೆ. ಅದೇ ರೀತಿ, ಮಹಿಳೆಯರ ಸಂಪತ್ತನ್ನು ಐದು ವಿಭಾಗಗಳಲ್ಲಿ ವರ್ಗೀಕರಿಸಿದರೆ, ಕನಿಷ್ಠ ಸಂಪತ್ತು ಗುಂಪಿನಲ್ಲಿ ಬರುವ ಮಹಿಳೆಯರ ಪೈಕಿ ಶೇ. 38 ದೈಹಿಕ ಹಿಂಸೆ ಅನುಭವಿಸಿದರೆ, ಗರಿಷ್ಠ ಸಂಪತ್ತು ಗುಂಪಿನಲ್ಲಿ ಬರುವ ಶೇ. 17 ಮಹಿಳೆಯರು ದೈಹಿಕ ಹಿಂಸೆಗೆ ಒಳಗಾಗುತ್ತಾರೆ.

 ಇನ್ನೊಂದು ಕುತೂಹಲದ ಸಂಗತಿಯೆಂದರೆ, ಉದ್ಯೋಗ ಹೊಂದಿರುವ ಮಹಿಳೆಯರು ಉದ್ಯೋಗ ಇರದ ಮಹಿಳೆಯರಿಗಿಂತ ಹೆಚ್ಚಿನ ದೈಹಿಕ ಹಿಂಸೆಗೆ ಗುರಿಯಾಗುತ್ತಾರೆ. ಹಣದ ರೂಪದಲ್ಲಿ ವೇತನ ಪಡೆಯುವ ಮಹಿಳೆಯರ ಪೈಕಿ ಶೇ. 36 ಮಂದಿ ದೈಹಿಕ ಹಿಂಸೆಗೆ ಒಳಗಾದರೆ, ಕೆಲಸ ಇರದ ಮಹಿಳೆಯರು ದೈಹಿಕ ಹಿಂಸೆಗೆ ಒಳಗಾಗುವ ಪ್ರಮಾಣ ಶೇ. 25.

ಮಕ್ಕಳು ಹೆಚ್ಚಿದಂತೆ ಹಿಂಸೆಯೂ ಹೆಚ್ಚು

 ಮಹಿಳೆಯರ ಮೇಲೆ ಗಂಡಂದಿರು ನಡೆಸುವ ಹಿಂಸಾಚಾರವು ದಂಪತಿ ಹೊಂದಿರುವ ಮಕ್ಕಳ ಸಂಖ್ಯೆಯೊಂದಿಗೆ ಹೆಚ್ಚುತ್ತದೆ. ಯಾವುದೇ ಮಕ್ಕಳಿರದ ಮಹಿಳೆಯರ ಪೈಕಿ ಶೇ. 24 ಮಂದಿ ಹಿಂಸೆಗೆ ಒಳಗಾದರೆ, 5 ಅಥವಾ ಅದಕ್ಕಿಂತ ಹೆಚ್ಚಿನ ಮಕ್ಕಳಿರುವ ಮಹಿಳೆಯರ ಪೈಕಿ ಶೇ. 41 ಮಂದಿ ಹಿಂಸೆಗೆ ಗುರಿಯಾಗುತ್ತಾರೆ.

 *ಒಂದು ಅಥವಾ ಹೆಚ್ಚಿನ ಮಾದರಿಯ ಹಿಂಸೆಯನ್ನು ಅನುಭವಿಸುವ ಮಹಿಳೆಯರ ಪ್ರಮಾಣವು ನಗರಕ್ಕಿಂತ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು. ಗ್ರಾಮೀಣ ಮಹಿಳೆಯರ ಪೈಕಿ ಶೇ. 34 ಮಂದಿ ಹಿಂಸೆಗೆ ಗುರಿಯಾದರೆ, ಇಂಥ ಹಿಂಸೆಗೆ ಒಳಗಾಗುವ ನಗರವಾಸಿ ಮಹಿಳೆಯರ ಪ್ರಮಾಣ ಶೇ. 27.

 ಮಹಿಳೆಯರ ಶಾಲಾ ಶಿಕ್ಷಣದ ಅವಧಿ ಮತ್ತು ಸಂಪತ್ತು ಹೆಚ್ಚಿದಂತೆ ಅವರ ಮೇಲೆ ಗಂಡಂದಿರು ನಡೆಸುವ ಎಲ್ಲಾ ಮಾದರಿಯ ಹಿಂಸಾಚಾರದ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತದೆಯಾದರೂ, 12 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ಶಿಕ್ಷಣ ಪಡೆದ ಮಹಿಳೆಯರು ಹಾಗೂ ಗರಿಷ್ಠ ಸಂಪತ್ತು ವಿಭಾಗದಲ್ಲಿ ಬರುವ ಮಹಿಳೆಯರ ಪೈಕಿ ಐದರಲ್ಲಿ ಒಬ್ಬರು ದೈಹಿಕ, ಲೈಂಗಿಕ ಅಥವಾ ಮಾನಸಿಕ ಹಿಂಸೆಗೆ ಒಳಗಾಗಿದ್ದಾರೆ.

Writer - ಆರ್.ಎಚ್.

contributor

Editor - ಆರ್.ಎಚ್.

contributor

Similar News