×
Ad

ವಿಜ್ಞಾನದ ಮೂಲಕ ಎಲ್ಲಾ ರಂಗಗಳಲ್ಲಿ ಕ್ರಾಂತಿ ಮಾಡುವುದು ಭಾರತದ ಗುರಿ: ಸಂಸದ ನಳಿನ್ ಕುಮಾರ್

Update: 2022-09-17 22:17 IST

ಪುತ್ತೂರು: ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ವಿಜ್ಞಾನದ ಬಗ್ಗೆ ಪ್ರೇರಣೆ ನೀಡುವುದು, ಅವರಲ್ಲಿ ಅನ್ವೇಷಣಾ ಭಾವನೆಗಳನ್ನು ಜಾಗೃತಿಗೊಳಿಸುವುದು ಮತ್ತು ಪ್ರಯೋಗ ಶೀಲತೆಯ ಮಾನಸಿಕತೆಯನ್ನು ಬೆಳೆಸುವುದ ರೊಂದಿಗೆ ಅವರನ್ನು ವಿಜ್ಞಾನಿಗಳಾಗಿ ಮತ್ತು ಸಂಶೋಧಕರಾಗಿ ಬೆಳೆಸುವುದು ಅಟಲ್ ಟಿಂಕರಿಂಗ್ ಲ್ಯಾಬ್‍ನ ಪರಿಕಲ್ಪನೆಯಾಗಿದೆ. ಲೋಕಲ್ ಫಾರ್ ಓಕಲ್ ಮೂಲಕ ಸ್ವದೇಶಿ ಚಿಂತನೆಯೊಂದಿಗೆ ವಿಜ್ಞಾನದ ಮೂಲಕ ಎಲ್ಲಾ ರಂಗಗಳಲ್ಲಿ ಕ್ರಾಂತಿ ಮಾಡುವುದು ಭಾರತದ ಗುರಿಯಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.

ಅವರು ಶನಿವಾರ ಸವಣೂರಿನ ವಿದ್ಯಾರಶ್ಮಿ ವಿದ್ಯಾಲಯದಲ್ಲಿ  ನೂತನವಾಗಿ ನಿರ್ಮಾಣಗೊಂಡ ಸುಸಜ್ಜಿತ ಅಟಲ್ ಟಿಂಕರಿಂಗ್ ಲ್ಯಾಬ್ ಉದ್ಘಾಟನೆ  ಮತ್ತು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸಹಕಾರಿ ಧುರೀಣ ಸವಣೂರು ಸೀತಾರಾಮ ರೈ.ಕೆ ಅವರ 75ನೇ ವರ್ಷದ ಹುಟ್ಟುಹಬ್ಬದ ನೆನಪಿಗಾಗಿ ಹೊರತಂದಿರುವ `ಅಮೃತರಶ್ಮಿ'ಅಭಿನಂದನಾ ಗ್ರಂಥ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಗ್ರಂಥ ಬಿಡುಗಡೆಗೊಳಿಸಿ ಮಾತನಾಡಿದರು.

ಶಿಕ್ಷಣ ಕಾಶಿಯಾಗಿರುವ ದ.ಕ.ಜಿಲ್ಲೆ ಅಟಲ್ ಟಿಂಕರಿಂಗ್ ಲ್ಯಾಬಿನ ಪ್ರಯೋಗ ಶಾಲೆಯಾಗಿದ್ದು, ದೇಶದಲ್ಲಿಯೇ ಅಟಲ್ ಟಿಂಕರಿಂಗ್ ಲ್ಯಾಬ್‍ಗಳು ಇರುವುದು ದ.ಕ ಮತ್ತು ಉಡುಪಿ ಜಿಲ್ಲೆಯಲ್ಲಿ ಮಾತ್ರ. ದೇಶದಲ್ಲಿ ನೀಡಲಾದ ಏಕೈಕ ಇಂಕ್ವೇಷನ್ ಲ್ಯಾಬ್ ಕೂಡ ಮಂಗಳೂರಿಗೆ ಬಂದಿದೆ. ಪ್ರಸ್ತುತ ವಿಜ್ಞಾನದಲ್ಲಿ ಕ್ರಾಂತಿಕಾರಿ ಬೆಳವಣಿ ಗಳಾಗುತ್ತಿದ್ದು, ಮೊಬೈಲ್ ಉತ್ಪಾದನೆಯಲ್ಲಿ ಭಾರತ ಜಗತ್ತಿನಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ. ರಕ್ಷಣಾ ಇಲಾಖೆಯಲ್ಲಿ ಪರಿವರ್ತನೆಯ ಯುಗ ಪ್ರಾರಂಭವಾಗಿದೆ ಎಂದರು.

ಅಟಲ್ ಟಿಂಕರಿಂಗ್ ಲ್ಯಾಬ್ ಉದ್ಘಾಟಿಸಿದ ಬಂದರು. ಮೀನುಗಾರಿಕೆ ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಅವರು ಮಾತನಾಡಿ ಯಾವುದೇ ಕ್ಷೇತ್ರದಲ್ಲಿ ಯಶಸ್ವಿಯಾಗಿ ಗುರುತಿಸಿಕೊಳ್ಳಬೇಕಾದರೆ ನಾವು ಸಾಧನೆ ಮಾಡಬೇಕು. ಧೈರ್ಯದೊಂದಿಗೆ ನಾವು ನಮ್ಮ ಬುದ್ಧಿಯ ಪ್ರದರ್ಶನ ಮಾಡಿದಾಗ ಮಾತ್ರ ಸಮಾಜ ಗುರುತಿಸುವ ಕೆಲಸ ಮಾಡುತ್ತದೆ. ಬುದ್ಧಿ ಶಕ್ತಿಯ ಮೂಲಕ ಆವಿಷ್ಕಾರಗಳನ್ನು ಮಾಡಿದರೆ ನಮ್ಮ ಶಕ್ತಿಯ ಪ್ರದರ್ಶನ ಮಾಡಲು ಸಾಧ್ಯ. ಈ ನಿಟ್ಟಿನಲ್ಲಿ ಅಟಲ್ ಟಿಂಕರಿಂಗ್ ಲ್ಯಾಬ್ ಮಕ್ಕಳ ಪಾಲಿಗೆ ಬಹುಮುಖ್ಯ ಕೊಡುಗೆ ಎಂದರು.

ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, `ಅಮೃತರಶ್ಮಿ'ಅಭಿನಂದನಾ ಗ್ರಂಥದ ಸಂಪಾದಕರಾದ ಹಿರಿಯ ಪತ್ರಕರ್ತ ಹರೀಶ್ ರೈ ಪಿ.ಬಿ ಅವರು ಮಾತನಾಡಿದರು.

ಸವಣೂರು ಗ್ರಾ.ಪಂ.ಅಧ್ಯಕ್ಷೆ ರಾಜೀವಿ ವಿ.ಶೆಟ್ಟಿ, ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು, ದ.ಕ.ಜಿಲ್ಲಾ ಅಟಲ್ ಲ್ಯಾಬ್ ನೋಡಲ್ ಅಧಿಕಾರಿ ಜಯಲಕ್ಷ್ಮಿ, ವಿದ್ಯಾರಶ್ಮಿ ಸಮೂಹ ವಿದ್ಯಾಸಂಸ್ಥೆಗಳ ಆಡಳಿತಾಧಿಕಾರಿ ಅಶ್ವಿನ್ ಎಲ್.ಶೆಟ್ಟಿ, ಹಿರಿಯ ನಿದೇಶಕ ಎನ್.ಸುಂದರ ರೈ ನಡುಮನೆ, ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ನಾರಾಯಣ ಮೂರ್ತಿ ಉಪಸ್ಥಿತರಿದ್ದರು.

ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಸೀತಾರಾಮ ರೈ.ಕೆ ಸ್ವಾಗತಿಸಿದರು. ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲ ಸೀತಾರಾಮ ಕೇವಳ ವಂದಿಸಿದರು.

ಪಿ.ಬಿ. ಹರೀಶ್ ರೈಗೆ ಸನ್ಮಾನ

ಭಾರತೀಯ ಕಾರ್ಯನಿರತ ಪತ್ರಕರ್ತರ ಸಂಘದ ರಾಷ್ಟ್ರೀಯ ಮಂಡಳಿ ಸದಸ್ಯರಾಗಿ ಆಯ್ಕೆಗೊಂಡಿರುವ  `ಅಮೃತರಶ್ಮಿ'ಅಭಿನಂದನಾ ಗ್ರಂಥದ ಸಂಪಾದಕರಾದರಾದ ಹರೀಶ್ ರೈ ಪಿ.ಬಿ ಅವರನ್ನು ಸವಣರು ವಿದ್ಯಾರಶ್ಮಿ ವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ, ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣರು ಕೆ. ಸೀತಾರಾಮ ರೈ, ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅಶ್ವಿನ್ ಎಲ್ ಶೆಟ್ಟಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಸವಣೂರು ಗ್ರಾಪಂ ಅಧ್ಯಕ್ಷೆ ರಾಜೀವಿ ವಿ ಶೆಟ್ಟಿ, ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು, ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲ ಸೀತಾರಾಮ ಕೇವಳ ಮತ್ತಿತರರು ಉಪಸ್ಥಿತರಿದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News