ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿ ಎಚ್.ಎಲ್.ಪುಷ್ಪಾ ಆಯ್ಕೆ

Update: 2022-09-18 15:42 GMT
 ಎಚ್.ಎಲ್.ಪುಷ್ಪಾ

ಬೆಂಗಳೂರು, ಸೆ.18: ಕರ್ನಾಟಕ ಲೇಖಕಿಯರ ಸಂಘ ಅಧ್ಯಕ್ಷೀಯ ಸ್ಥಾನಕ್ಕೆ ರವಿವಾರದಂದು ಮತದಾನ ನಡೆದಿದ್ದು, ಸಂಘದ ಅಧ್ಯಕ್ಷೆಯಾಗಿ ಲೇಖಕಿ ಎಚ್.ಎಲ್.ಪುಷ್ಪಾಅವರು ಆಯ್ಕೆಯಾಗಿದ್ದಾರೆ.

ಅವರ ಹುಟ್ಟುಹಬ್ಬದಂದು ಚುನಾವಣೆಯಲ್ಲಿ ಗೆದ್ದಿರುವುದು ವಿಶೇಷವಾಗಿದ್ದು, ನಿಯಮದಂತೆ ಮೂರು ವರ್ಷಗಳ ಕಾಲ ಅವರು ಸಂಘದ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಬಿಎಂಶ್ರೀ ಪ್ರತಿಷ್ಠಾನದ ಕಚೇರಿಯಲ್ಲಿ ರವಿವಾರ ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಬೆಂಗಳೂರಿನ ಮತದಾರರಿಗೆ ಮತದಾನದ ಅವಕಾಶ ಕಲ್ಪಿಸಿದ್ದು, ರಾಜ್ಯದ ಇತರೆ ಜಿಲ್ಲೆಗಳ ಮತದಾರರು ಮುಂಚಿತವಾಗಿಯೇ ಅಂಚೆಯ ಮೂಲಕ ಮತದಾನ ಮಾಡಿದ್ದರು.

ಸಂಘದ 1,330 ಸದಸ್ಯರಲ್ಲಿ 1,295 ಮಂದಿ ಮತದಾನದ ಅರ್ಹತೆ ಹೊಂದಿದ್ದರು. ಬೆಂಗಳೂರಿನಲ್ಲಿ 650 ಮಂದಿ ಮತದಾನದ ಅರ್ಹತೆ ಹೊಂದಿದ್ದರು. ರಾಜ್ಯದ ಎಲ್ಲೆಡೆಯಿಂದ 699 ಮತಗಳು ಚಲಾವಣೆಯಾಗಿದ್ದವು. ಎಚ್.ಎಲ್. ಪುಷ್ಪಾ 342, ವನಮಾಲಾ ಸಂಪನ್ನಕುಮಾರ್ 280 ಹಾಗೂ ಶೈಲಜಾ ಸುರೇಶ್ 33 ಮತಗಳನ್ನು ಪಡೆದಿದ್ದಾರೆ. ಉಳಿದ 44 ಮತಗಳು ತಿರಸ್ಕರಿಸಲ್ಪಟ್ಟಿವೆ. 

'ರಾಜ್ಯದ ಎಲ್ಲಾ ಪಂಥಗಳ ಎಲ್ಲಾ ಲೇಖಕಿಯರನ್ನು ಒಗ್ಗೂಡಿಸುವುದರ ಜತೆಗೆ ಯುವ ಲೇಖಕಿಯರನ್ನು ಹಾಗೂ ಯುವ ಚಿಂತನೆಗಳನ್ನು ಬಳಸಿಕೊಂಡು ಸಂಘವನ್ನು ಮುನ್ನಡೆಸಲಾಗುವುದು. ಲೇಖಕಿಯರ ಕೃತಿಗಳಿಗೆ ಸಿಗಬೇಕಾದ ಮನ್ನಣೆ ದೊರಕಿಸಿಕೊಡುವುದು ನನ್ನ ಮುಖ್ಯ ಆದ್ಯತೆಯಾಗಿದ್ದು,  ಹಿರಿಯ ಕಲಾವಿದರ ಬಗ್ಗೆ ಡಾಕ್ಯುಮೆಂಟೇಷನ್ ಮಾಡಲಾಗುವುದು. ಸಂಘಕ್ಕೆ ಹೆಚ್ಚಿನ ಅನುದಾನವನ್ನು ಪಡೆಯುವ ನಿಟ್ಟಿನಲ್ಲಿ ಸರಕಾರದ ಗಮನ ಸೆಳೆಯಲಾಗುವುದು'.

- ಎಚ್.ಎಲ್. ಪುಷ್ಪಾ, ಲೇಖಕಿ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News