ಮಂಗಳೂರು: ಮೈಸೂರು ವಿಭಾಗದ ಮಟ್ಟದ ದಸರಾ ಕ್ರೀಡಾಕೂಟ

Update: 2022-09-18 15:33 GMT

ಮಂಗಳೂರು, ಸೆ.18: ದ.ಕ.ಜಿಲ್ಲಾಡಳಿತ, ದ.ಕ. ಜಿಪಂ, ದ.ಕ.ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ದ.ಕ. ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘ, ದ.ಕ.ಜಿಲ್ಲಾ ಯುವಜನ ಒಕ್ಕೂಟ ಹಾಗೂ ಮಂಗಳೂರು ಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ರವಿವಾರ ನಗರದ ಮಂಗಳಾ ಕ್ರೀಡಾಂಗಣದಲ್ಲಿ ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟ ನಡೆಯಿತು.

ಈ ಕ್ರೀಡಾಕೂಟದಲ್ಲಿ ದ.ಕ., ಉಡುಪಿ, ಮೈಸೂರು, ಹಾಸನ, ಮಂಡ್ಯ, ಕೊಡಗು, ಚಿಕ್ಕಮಗಳೂರು, ಚಾಮರಾಜನಗರ ಸಹಿತ ೮ ಜಿಲ್ಲೆಗಳ ಸುಮಾರು 1500 ಕ್ರೀಡಾಪಟುಗಳು ಭಾಗವಹಿಸಿದ್ದರು. ಅಥ್ಲೆಟಿಕ್, ವಾಲಿಬಾಲ್, ಬಾಸ್ಕೆಟ್‌ಬಾಲ್, ಕುಸ್ತಿ, ಹ್ಯಾಂಡ್‌ಬಾಲ್, ಟೇಬಲ್‌ಟೆನ್ನಿಸ್, ನೆಟ್‌ಬಾಲ್, ಬಾಲ್ ಬ್ಯಾಡ್ಮಿಂಟನ್‌ ಭಾರ ಎತ್ತುವ  ಕ್ರೀಡೆಗಳನ್ನು ಆಯೋಜಿಸಲಾಗಿತ್ತು.

ಕ್ರೀಡಾಕೂಟವನ್ನು ಮೇಯರ್ ಜಯಾನಂದ ಅಂಚನ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ನಾನು ಕೂಡ ಕ್ರೀಡಾಪಟು. ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಮನಸ್ಸಿಗೆ ನೆಮ್ಮದಿ ದೊರಕುತ್ತದೆ. ದೇಹಕ್ಕೆ ವ್ಯಾಯಾಮ ಸಿಕ್ಕಂತಾಗುತ್ತದೆ. ಕ್ರೀಡಾಪಟುಗಳಿಗೆ ಪ್ರೋತ್ಸಾಹವಾಗುವಂತೆ ಕ್ರೀಡಾಪರಿಕರ ನೀಡಲಾಗುತ್ತದೆ. ನಗರದ ಕ್ರೀಡಾಂಗಣಗಳ ಅಭಿವೃದ್ಧಿಗೂ ಮನಪಾ ಮುಂದಾಗಿದೆ ಎಂದರು.

ಉಪಮೇಯರ್ ಪೂರ್ಣಿಮಾ ಮಾತನಾಡಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರವಿ ವೈ. ನಾಯಕ್ ಸ್ವಾಗತಿಸಿದರು. ಮನಪಾ ಸದಸ್ಯೆ ಸಂಧ್ಯಾ ಆಚಾರ್ಯ, ಜಿಲ್ಲಾ ಕ್ರೀಡಾಂಗಣ ಸಮಿತಿ ಸದಸ್ಯೆ ಸಂಧ್ಯಾ ವೆಂಕಟೇಶ್, ದ.ಕ. ಜಿಲ್ಲಾ ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ಪುರುಷೋತ್ತಮ ಪೂಜಾರಿ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷೆ ಲಿಲ್ಲಿ ಪಾಯಸ್, ಇಲಾಖೆಯ ಅಧೀಕ್ಷಕ ಮಂಜು ಎಲ್.ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶೇಖರ್ ಕಡ್ತಲ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News