ಕೊಲೆ ಪ್ರಕರಣ: ರವಿ ಪೂಜಾರಿ ಸಹಚರ ಸುರೇಶ್ ಪೂಜಾರಿ ವಶಕ್ಕೆ ಪಡೆಯಲು ಮುಂದಾದ ಸಿಸಿಬಿ

Update: 2022-09-18 15:49 GMT

ಬೆಂಗಳೂರು, ಸೆ.18: ‘ಶಬನಂ ಡೆವಲಪರ್ಸ್' ಸಿಬ್ಬಂದಿ ಕೊಲೆ ಪ್ರಕರಣ ಸಂಬಂಧ ಪಾತಕಿ ರವಿ ಪೂಜಾರಿ ಸಹಚರ ಸುರೇಶ್ ಪೂಜಾರಿಯನ್ನು ವಶಕ್ಕೆ ಪಡೆಯಲು ಸಿಸಿಬಿ ಪೊಲೀಸರು ಮುಂದಾಗಿದ್ದಾರೆ.

ನ್ಯಾಯಾಲಯದ ಬಾಡಿ ವಾರೆಂಟ್ ಪಡೆದು ಮುಂಬೈಗೆ ನಗರದ ಸಿಸಿಬಿ ಅಧಿಕಾರಿಗಳು ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ವಿದೇಶದಲ್ಲಿ ನೆಲೆಸಿದ್ದ ಪೂಜಾರಿ ಸಹಚರ ಸುರೇಶ್ ಪೂಜಾರಿಯನ್ನು ಮುಂಬೈ ಪೊಲೀಸರು ಬಂಧಿಸಿ ಕರೆ ತಂದಿದ್ದರು.

ಮುಂಬೈ ಮಹಾನಗರದಲ್ಲಿ ನಡೆದಿದ್ದ ಹಲವು ಅಪರಾಧ ಕೃತ್ಯಗಳಲ್ಲಿ ಪಾತ್ರದ ಹಿನ್ನಲೆಯಲ್ಲಿ ಆತನನನ್ನು ಮುಂಬೈ ಪೊಲೀಸರು ಸುದೀರ್ಘ ತನಿಖೆಗೊಳಪಡಿಸಿದ್ದರು. ಈಗ ಅವರ ಬಹುತೇಕ ತನಿಖೆ ಪೂರ್ಣಗೊಂಡಿದೆ. ಹೀಗಾಗಿ ಬೆಂಗಳೂರಿನ ಕೊಲೆ ಪ್ರಕರಣಗಳ ಸಂಬಂಧ ಸುರೇಶ್ ಪೂಜಾರಿಯನ್ನು ವಶಕ್ಕೆ ಪಡೆಯಲು ಸಿಸಿಬಿ ತಂಡ ತೆರಳಿದೆ. 

ಇನ್ನೂ, ದಶಕಗಳಿಂದ ರವಿ ಪೂಜಾರಿ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ಸುರೇಶ್, ವಿದೇಶದಲ್ಲಿದ್ದ ರವಿ ಸೂಚನೆ ಮೇರೆಗೆ ಬೆಂಗಳೂರು, ಮಂಗಳೂರು ಹಾಗೂ ಮುಂಬೈ ಸೇರಿದಂತೆ ವಿವಿಧೆಡೆ ಅಪರಾಧ ಕೃತ್ಯಗಳನ್ನು ಎಸಗಿದ್ದ. 2007ರ ಫೆಬ್ರವರಿ 15 ರಂದು ರವಿ ಪೂಜಾರಿ ಸೂಚನೆ ಮೇರೆಗೆ ಬೆಂಗಳೂರಿನ ಶಬನಂ ಡೆವಲಪರ್ಸ್ ಮೇಲೆ ಗುಂಡಿನ ದಾಳಿ ನಡೆದಿತ್ತು.

ಈ ಕೃತ್ಯದಲ್ಲಿ ಇಬ್ಬರು ಸಿಬ್ಬಂದಿ ಹತ್ಯೆಗೀಡಾಗಿದ್ದರು. ಆ ದಿನ ನಗರದ ಹೋಟೆಲ್‍ವೊಂದರಲ್ಲಿ ಪ್ರವೀಣ್ ರಾವ್ ಹೆಸರಿನ ನಕಲಿ ದಾಖಲೆ ನೀಡಿ ವಾಸ್ತವ್ಯ ಹೂಡಿ ಗುಂಡಿನ ದಾಳಿಯನ್ನು ಸುರೇಶ್ ಉಸ್ತುವಾರಿ ವಹಿಸಿದ್ದ ಎಂದು ಹೇಳಲಾಗುತ್ತಿದೆ.ಇದೇ ಪ್ರಕರಣದಲ್ಲಿ ಈಗಾಗಲೇ ರವಿ ಪೂಜಾರಿ ವಿರುದ್ಧ ಪೊಲೀಸರು ಆರೋಪ ಪಟ್ಟಿಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News