ಅಕ್ರಮಗಳ ಕಳಂಕದಿಂದ ಪಾರಾಗುವುದೇ ಕೆಪಿಎಸ್‌ಸಿ

Update: 2022-09-19 06:45 GMT

ಕರ್ನಾಟಕ ಆಡಳಿತಾಂಗದ ಮಾತೃ ಸಂಸ್ಥೆಯಾಗಿರುವ ಕರ್ನಾಟಕ ಲೋಕ ಸೇವಾ ಆಯೋಗ ಅಥವಾ ಕೆಪಿಎಸ್‌ಸಿ ಗೂ ಹಗರಣಗಳಿಗೂ ಭಾರೀ ನಂಟು. ನಿರಂತರ ಅಕ್ರಮಗಳ ನೆಲೆಯೇ ಆಗಿ ಮಾರ್ಪಟ್ಟಿದೆ ಈ ಸಾಂವಿಧಾನಿಕ ಸ್ವಾಯತ್ತ ಸಂಸ್ಥೆ. ಪ್ರತಿಸಲವೂ ಒಂದಲ್ಲ ಒಂದು ಹಗರಣದಿಂದಾಗಿಯೇ ಸುದ್ದಿಯಲ್ಲಿರುತ್ತದೆ ಇದು. ಉದ್ಯೋಗಾಕಾಂಕ್ಷಿಗಳ ಪಾಲಿಗೆ ಇದೊಂದು ಸಿಂಹಸ್ವಪ್ನದಂತೆ ಆಗಿರುವುದೂ ಹೊಸದಲ್ಲ.

ಇತ್ತೀಚೆಗಿನ ಪಿಎಸ್ಸೈ, ಸಹಾಯಕ ಪ್ರಾಧ್ಯಾಪಕ, ಪಿಡಬ್ಲ್ಯುಡಿ ಇಂಜಿನಿಯರ್ ಹುದ್ದೆಗಳ ಅಕ್ರಮ ನೇಮಕಾತಿ ಹಗರಣದ ಕೋಲಾಹಲದ ನಡುವೆಯೇ ಗಮನ ಸೆಳೆದ ಮೂರು ಸುದ್ದಿಗಳೊಡನೆ ಇವತ್ತಿನ ಅವಲೋಕನವನ್ನು ಪ್ರಾರಂಭಿಸಬಹುದೆನ್ನಿಸುತ್ತದೆ. ಮೊದಲನೆಯದು 10 ದಿನಗಳ ಹಿಂದಿನ ಸುದ್ದಿ. 2021ರ ಜನವರಿಯಲ್ಲಿ ನಡೆಯಬೇಕಿದ್ದ ಸಹಾಯಕರ ಹುದ್ದೆಗಳ ಪರೀಕ್ಷೆಯ ಪ್ರಶ್ನೆಪತ್ರಿಕೆಗಳನ್ನು ಬಯಲು ಮಾಡಿದ ಆರೋಪದ ಮೇಲೆ ಆಯೋಗದ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೂವರು ಸಿಬ್ಬಂದಿಯನ್ನು ವಜಾ ಮಾಡಲಾಯಿತು.

ಇನ್ನೊಂದು ಸುದ್ದಿ ಕೆಪಿಎಸ್‌ಸಿ ವಿರುದ್ಧ ಅಭ್ಯರ್ಥಿಗಳು ನಡೆಸಿದ ಪ್ರತಿಭಟನೆ. ಪರೀಕ್ಷೆ ಬರೆದು ವರ್ಷವೇ ಕಳೆದರೂ ಫಲಿತಾಂಶ ಬಾರದೇ ಇರುವುದಕ್ಕೆ ಆಕ್ರೋಶಗೊಂಡ ಅಭ್ಯರ್ಥಿಗಳು ಕಳೆದ ಜುಲೈ ಕಡೇ ವಾರದಲ್ಲಿ ಬೆಂಗಳೂರಿನ ಕೆಪಿಎಸ್‌ಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಗೆಜೆಟೆಡ್ ಪ್ರೊಬೆಷನರಿ 106 ಹುದ್ದೆಗಳ ನೇಮಕಾತಿ, 1,323 ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳು, ಲೋಕೋಪಯೋಗಿ ಇಲಾಖೆಯ 330 ಕಿರಿಯ ಇಂಜಿನಿಯರ್ ಹುದ್ದೆ, 660 ಸಹಾಯಕ ಇಂಜಿನಿಯರ್, ಗ್ರೂಪ್ ಸಿ 387 ಹುದ್ದೆ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ 16 ಹುದ್ದೆಗಳು ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗೆ ಪರೀಕ್ಷೆ ನಡೆದು 17 ತಿಂಗಳುಗಳೇ ಕಳೆದಿದ್ದರೂ ಕೆಪಿಎಸ್‌ಸಿ ಮಾತ್ರ ಫಲಿತಾಂಶ ಪ್ರಕಟಿಸಿಲ್ಲ ಎಂಬುದು ನೊಂದ ಅಭ್ಯರ್ಥಿಗಳ ಅಳಲು. ರಾಜ್ಯ ಸರಕಾರದ ವಿವಿಧ ಇಲಾಖೆ ಗಳಲ್ಲಿ ಖಾಲಿ ಇರುವ ವಿವಿಧ ವೃಂದಗಳ 3,000ಕ್ಕೂ ಹೆಚ್ಚು ಹುದ್ದೆಗಳಿಗೆ ಉದ್ಯೋಗಾಕಾಂಕ್ಷಿಗಳಾಗಿದ್ದವರ ಸಂಕಟ ಅವತ್ತಿನ ಪ್ರತಿಭಟನೆಯಲ್ಲಿ ವ್ಯಕ್ತವಾಗುತ್ತಿತ್ತು.

ಮೂರನೇ ಸುದ್ದಿ 2015ನೇ ಬ್ಯಾಚ್‌ನ ಕೆಪಿಎಸ್‌ಸಿ ಅಭ್ಯರ್ಥಿ ಮಂಗಳೂರಿನ ಯು.ಟಿ.ಫರ್ಝಾನ ಮಾಡಿದ ಗಂಭೀರ ಆರೋಪ ಕುರಿತದ್ದು. ಕೆಪಿಎಸ್‌ಸಿಯಲ್ಲಿ ತಹಶೀಲ್ದಾರ್, ಡಿವೈಎಸ್ಪಿ ಹಂತದ ಎ ಗ್ರೇಡ್ ಹುದ್ದೆಗಳು ಕೋಟಿ ಕೋಟಿ ರೂ. ಗೆ ಮಾರಾಟವಾಗಿವೆ ಎಂಬ ಗಂಭೀರ ಆರೋಪವನ್ನು ಅವರು ಕಳೆದ ಎಪ್ರಿಲ್‌ನಲ್ಲಿ ಮಾಡಿದ್ದರು. ಪರೀಕ್ಷೆ ಫಲಿತಾಂಶ ಬಂದಾಗ ಪಟ್ಟಿಯಲ್ಲಿ ಅರ್ಹರ ಹೆಸರುಗಳೇ ಇರಲಿಲ್ಲ. ಅನುಮಾನ ಬಂದು ಅಂಕಗಳನ್ನು ಕೇಳಿದಾಗ ಕೊಡಲೊಪ್ಪಲಿಲ್ಲ. ಹೋರಾಟಕ್ಕಿಳಿದಾಗ ಎರಡು ತಿಂಗಳು ಸತಾಯಿಸಿ ಬಳಿಕ ಕೊಟ್ಟರು. ಆ ಅಂಕಗಳನ್ನು ನೋಡಿದರೆ ಏನೋ ಕಸರತ್ತು ನಡೆಸಿರುವುದು ಕಾಣಿಸುತ್ತಿತ್ತು. ಅನುಮಾನ ಇನ್ನೂ ಹೆಚ್ಚಾಯಿತು ಎಂದು ಅವರು ಅಕ್ರಮದ ಬಗ್ಗೆ ದೂರಿದ್ದರು.

ಈ ಸುದ್ದಿಗಳ ಪ್ರಸ್ತಾಪದ ಉದ್ದೇಶ ಇಷ್ಟೆ: ಎಲ್ಲಿ ಕೆದಕಿದರೂ ಕೆಪಿಎಸ್‌ಸಿ ಮೈತುಂಬ ಅಕ್ರಮದ್ದೇ ಕಲೆಗಳು. ಅದೆಂದೂ ನಿಯತ್ತಿನಿಂದ ಕೆಲಸವನ್ನೇ ಮಾಡಿಲ್ಲವೇನೊ ಎಂದು ಅನುಮಾನ ಬರುವಷ್ಟರ ಮಟ್ಟಿಗೆ ಹಗರಣಗಳ ಸುಳಿಯಲ್ಲಿರುವ ಸಂಸ್ಥೆಯಾಗಿಬಿಟ್ಟಿದೆ ಅದು. ನೇಮಕಾತಿಯಲ್ಲಿ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಸತತವಾಗಿ ನಡೆದೇ ಬಂದಿದೆ. 2010ರ ವೈದ್ಯಕೀಯ ಹುದ್ದೆಗಳ ನೇಮಕಾತಿ ಹಗರಣದಿಂದ ಹಿಡಿದು ಈಗ ಕೋಲಾಹಲವೆಬ್ಬಿಸಿರುವ ಅಕ್ರಮ ನೇಮಕಾತಿಗಳವರೆಗೆ ಅಡ್ಡದಾರಿಯನ್ನೇ ಕೆಪಿಎಸ್‌ಸಿ ಅನುಸರಿಸುತ್ತಿರುವುದು ಕಾಣಿಸುತ್ತಿದೆ.

ಬಹುಶಃ ಈ ಅಕ್ರಮ ನೇಮಕಾತಿಯ ಮೂಲವು ಕೆಪಿಎಸ್‌ಸಿ ಅಧ್ಯಕ್ಷರು ಮತ್ತು ಸದಸ್ಯರ ನೇಮಕದಲ್ಲಿ ನಡೆಯುವ ಭ್ರಷ್ಟತೆಯಲ್ಲೇ ಇರುವಂತಿದೆ. ಅಲ್ಲಿಯೂ ರಾಜಕಾರಣ, ಜಾತಿ, ವರ್ಗ ಮತ್ತಿತರ ಅಂಶಗಳೇ ಪರಿಗಣನೆಯಾಗುವುದು. ಹೀಗಾಗಿ, ದಕ್ಷತೆ, ಪ್ರಾಮಾಣಿಕತೆ ಹಾಗೂ ಜೇಷ್ಠತೆ ಇವೆಲ್ಲವನ್ನೂ ಗಾಳಿಗೆ ತೂರಿ ನೇಮಕದಲ್ಲಿ ತನ್ನದೇ ದಾರಿ ಹಿಡಿದಿರುವ ಕೆಪಿಎಸ್‌ಸಿ ತನ್ನ ಘನತೆಯನ್ನೇ ಕಳೆದುಕೊಂಡು ಬಹಳ ಕಾಲವೇ ಆಗಿಬಿಟ್ಟಿದೆ. ಉದ್ಯೋಗಗಳನ್ನು ದುಡ್ಡಿಗೆ ಮಾರಿಕೊಳ್ಳುತ್ತ ಕೂತಿರುವ ಪರಿಣಾಮವಾಗಿ ಅರ್ಹರು ಉದ್ಯೋಗ ವಂಚಿತರಾಗುತ್ತಿರುವುದರ ಬಗೆಗಿನ ಆರೋಪ ಕೂಡ ಇಂದು ನಿನ್ನೆಯದಲ್ಲ. ಫರ್ಝಾನ ಅಥವಾ ಅವರ ಹಾಗೆಯೇ ಉದ್ಯೋಗ ವಂಚಿತರಾದ ಅದೆಷ್ಟೋ ಆಕಾಂಕ್ಷಿಗಳು ಆರೋಪಿಸುವ ಹಾಗೆ ದುಡ್ಡಿಲ್ಲದೆ ನೇಮಕಾತಿಯೇ ಇಲ್ಲ. ಇದು ಬರೀ ಆರೋಪ ಮಾತ್ರವಲ್ಲ, ವಾಸ್ತವ ಕೂಡ. ವಿವಿಧ ಪ್ರಕರಣಗಳಲ್ಲಿನ ವರದಿಗಳಲ್ಲೇ ಬೇರೆ ಬೇರೆ ಹುದ್ದೆಗಳ ದರ ಎಷ್ಟೆಂಬುದು ಬಹಿರಂಗವಾದದ್ದಿದೆ. ಅದರ ಪ್ರಕಾರ,

  • ಗೆಜೆಟೆಡ್ ಪ್ರೊಬೆಷನರಿ ಗ್ರೂಪ್ ಎ ಹುದ್ದೆಗೆ ರೂ. 70 ಲಕ್ಷದಿಂದ ರೂ. 1.5 ಕೋಟಿಯವರೆಗೂ ರೇಟು ಇದೆ.
  • ಉಪ ವಿಭಾಗಾಧಿಕಾರಿ ಹುದ್ದೆಗೆ 1ರಿಂದ 1.5 ಕೋಟಿ ರೂ.
  • ಡಿವೈಎಸ್ಪಿ ಹುದ್ದೆಗೆ 80 ಲಕ್ಷದಿಂದ 1 ಕೋಟಿ ರೂ.
  • ಸಹಾಯಕ ಪ್ರಾಧ್ಯಾಪಕ ಹುದ್ದೆಗೆ 80 ಲಕ್ಷ ರೂ.
  • ತಹಶೀಲ್ದಾರ್ ಹುದ್ದೆಗೆ 60 ಲಕ್ಷದಿಂದ 80 ಲಕ್ಷ ರೂ.
  • ಗೆಜೆಟೆಡ್ ಪ್ರೊಬೆಷನರಿ ಗ್ರೂಪ್ ಬಿ ಹುದ್ದೆಗೆ 60 ಲಕ್ಷದಿಂದ 70 ಲಕ್ಷ ರೂ.
  • ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಗೆ 50 ಲಕ್ಷ ರೂ.
  • ಪೊಲೀಸ್ ಸಬ್‌ಇನ್‌ಸ್ಪ್ಪೆಕ್ಟರ್ ಹುದ್ದೆಗೆ 40ರಿಂದ 1.5 ಕೋಟಿ ರೂ.

ಇದಲ್ಲದೆ ಇಂಜಿನಿಯರ್‌ಗಳು ಮತ್ತಿತರ ಅಧಿಕಾರಿಗಳ ವಿಷಯ ಹಾಗಿರಲಿ, ಪ್ರಥಮ ದರ್ಜೆ ಸಹಾಯಕನಾಗುವುದಕ್ಕೂ 15ರಿಂದ 20 ಲಕ್ಷ ರೂ. ತೆರಬೇಕು. ಇದೇ ಎಫ್‌ಡಿಎ ಸಚಿವಾಲಯದಲ್ಲಾದರೆ ದುಪ್ಪಟ್ಟು ಅಂದರೆ ರೂ. 30 ಲಕ್ಷ ದರ. ಕಡೆಗೆ ಚಾಲಕರಂಥ ಗ್ರೂಪ್ ಡಿ ಹುದ್ದೆಗಳಿಗೆ ಸೇರುವುದಕ್ಕೂ ರೂ. 8ರಿಂದ 10 ಲಕ್ಷದವರೆಗೆ ದರ.

ಹೀಗೆ ಈ ದರಪಟ್ಟಿ ದೊಡ್ಡದಿದೆ.

ಎಲ್ಲ ನೇಮಕಾತಿಗಳಲ್ಲಿಯೂ ಅಕ್ರಮದ ವಾಸನೆ ಢಾಳಾಗಿಯೇ ಇರುತ್ತದೆ. ಅಕ್ರಮ ಒಂದೆಡೆಯಾದರೆ, ನೇಮಕದಲ್ಲಿನ ವಿಳಂಬ ನೀತಿ ಇನ್ನೊಂದು ಅವಾಂತರ.

ಕರ್ನಾಟಕ ಲೋಕಸೇವಾ ಆಯೋಗದಲ್ಲಿ ವ್ಯಾಪಕವಾಗಿದ್ದ ಭ್ರಷ್ಟಾಚಾರ ತಡೆದು, ಸುಧಾರಣೆ ತರಲು ಅಂದಿನ ಸಿದ್ದರಾಮಯ್ಯ ಸರಕಾರ ಯುಪಿಎಸ್‌ಸಿ ನಿವೃತ್ತ ಅಧ್ಯಕ್ಷ ಪಿ.ಸಿ. ಹೋಟಾ ನೇತೃತ್ವದ ಸಮಿತಿಯನ್ನು ನೇಮಿಸಿತ್ತು. ಆ ಸಮಿತಿಯು 2013ರ ಆಗಸ್ಟ್ ನಲ್ಲಿ ವರದಿ ನೀಡಿ ಕೆಪಿಎಸ್‌ಸಿಯ ಶೇ.50ರಷ್ಟು ನೌಕರರನ್ನು ಬೇರೆ ಇಲಾಖೆಗೆ ನಿಯೋಜನೆ ಮಾಡುವಂತೆ ಹಾಗೂ ಸಂದರ್ಶನ ಪ್ರಕ್ರಿಯೆಯನ್ನು ಆಮೂಲಾಗ್ರವಾಗಿ ಬದಲಾಯಿಸುವಂತೆ ಶಿಫಾರಸು ಮಾಡಿತ್ತು. ಮಾತ್ರವಲ್ಲ ಆಯೋಗದ ಅಧ್ಯಕ್ಷರು ಸದಸ್ಯರ ನೇಮಕಕ್ಕೂ ಶೋಧನಾ ಸಮಿತಿ ರಚಿಸಬೇಕೆಂಬುದು ಅದರ ಶಿಫಾರಸಾಗಿತ್ತು.

ಅದರ ಹಲವು ಶಿಫಾರಸುಗಳೆಂದರೆ,

  1. ಹಾಲಿ ಸಿಬ್ಬಂದಿಯನ್ನು ಪ್ರತೀ ಎರಡು ವರ್ಷಕ್ಕೊಮ್ಮೆ ಬೇರೆ ಇಲಾಖೆಗಳಿಗೆ ನಿಯೋಜಿಸಿ, ಬೇರೆ ಇಲಾಖೆ ಸಿಬ್ಬಂದಿಯನ್ನು ಆಯೋಗಕ್ಕೆ ನಿಯೋಜಿಸಬೇಕು.
  2. ಮೌಖಿಕ ಸಂದರ್ಶನದ ನೇತೃತ್ವವನ್ನು ಅಧ್ಯಕ್ಷ ಅಥವಾ ಹಿರಿಯ ಸದಸ್ಯರಿಗೆ ವಹಿಸುವುದರ ಜತೆಗೆ ಸದಸ್ಯರಲ್ಲದ ಐಐಎಂ, ಐಐಎಸ್‌ಸಿ, ವಿಟಿಯು ಸೇರಿದಂತೆ ವಿವಿಧ ವಿವಿಗಳ ತಜ್ಞರನ್ನು ಸಂದರ್ಶನ ಸಂಪನ್ಮೂಲ ವ್ಯಕ್ತಿಯಾಗಿ ಇರುವಂತೆ ನೋಡಿಕೊಳ್ಳಬೇಕು.
  3. ಸಂದರ್ಶನ ನಡೆಸುವ ತಂಡವು ವಾರಕ್ಕೊಮ್ಮೆ ಬದಲಾಗಬೇಕು.
  4. ಸಂದರ್ಶನದ ಕೆಲವೇ ಗಂಟೆಗಳ ಮೊದಲು ಸಂದರ್ಶನದ ತಂಡದಲ್ಲಿ ಇರುವವರ ಮಾಹಿತಿ ಬಹಿರಂಗವಾಗಬೇಕು.
  5. ಕನಿಷ್ಠ ಅರ್ಧಗಂಟೆ ಸಂದರ್ಶನ ನಡೆಸುವುದರ ಜತೆಗೆ ದಿನವೊಂದಕ್ಕೆ 9 ಅಭ್ಯರ್ಥಿಗಳ ಸಂದರ್ಶನ ಮಾತ್ರ ಮಾಡಬೇಕು.
  6. ಸಂದರ್ಶನ ನಡೆಸುವ ವಿಷಯ ಪರಿಣಿತರನ್ನು ಹೊರರಾಜ್ಯದಿಂದ ಕರೆಸಬೇಕು.
  7. ಕೆಪಿಎಸ್‌ಸಿ ಆಯೋಗದ ಕಚೇರಿಗೆ ಅಭ್ಯರ್ಥಿಗಳ ಹೊರತು ಯಾವುದೇ ವ್ಯಕ್ತಿಗೂ ಪ್ರವೇಶ ನಿರಾಕರಿಸಬೇಕು.
  8. ಪರೀಕ್ಷಾ ಪದ್ಧತಿಯಲ್ಲಿ ಬದಲಾವಣೆ ಮಾಡಬೇಕು.ದುರದೃಷ್ಟವೆಂದರೆ, ಹೋಟಾ ಸಮಿತಿಯ ಶಿಫಾರಸುಗಳನ್ನು ಈವರೆಗೆ ಯಾವ ಸರಕಾರಗಳೂ ಪೂರ್ಣ ಪ್ರಮಾಣದಲ್ಲಿ ಜಾರಿ ಗೊಳಿಸಿಲ್ಲ. ಸಂದರ್ಶನ, ಪರೀಕ್ಷೆಗೆ ಸಂಬಂಧಿಸಿದ ಕೆಲ ಶಿಫಾರಸುಗಳನ್ನು ಬಿಟ್ಟರೆ, ಭ್ರಷ್ಟತೆ ತಡೆಯುವಲ್ಲಿ ಪಾತ್ರ ವಹಿಸಬಹುದಾಗಿದ್ದ ಪ್ರಮುಖ ಶಿಫಾರಸುಗಳನ್ನು ಬೇಕೆಂದೇ ಅಲಕ್ಷಿಸಲಾಗಿದೆ.

ಇದರ ಜೊತೆಗೇ, ಯಾವ ಅಕ್ರಮಗಳಲ್ಲೂ ಆರೋಪಿಗಳಿಗೆ ಶಿಕ್ಷೆಯಾಗದೇ ಇರುವುದು, ಅಕ್ರಮಗಳು ಅನಾಯಾಸವಾಗಿ ನಡೆಯುತ್ತಲೇ ಇರುವುದಕ್ಕೆ ಎಡೆ ಮಾಡಿಕೊಡುತ್ತಿದೆ. ಕೆಪಿಎಸ್‌ಸಿ.ಮಾಜಿ ಅಧ್ಯಕ್ಷ ಎಚ್.ಎನ್. ಕೃಷ್ಣ ಮತ್ತು ಗೋನಾಳ್ ಭೀಮಪ್ಪ ವಿರುದ್ಧದ ಪ್ರಕರಣಗಳೆಲ್ಲ ವಿಚಾರಣೆ ಹಂತದಲ್ಲೇ ಬಾಕಿಯಾಗಿ ನನೆಗುದಿಗೆ ಬಿದ್ದಿವೆ.

ಲಾಗಾಯ್ತಿನಿಂದಲೂ ಆಯೋಗದಲ್ಲಿ ಗಟ್ಟಿಯಾಗಿ ಕುರ್ಚಿ ಹಿಡಿದು ಕುಳಿತ ಸಿಬ್ಬಂದಿದ್ದೊಂದು ಪಡೆಯೇ ಇದೆ. ಯಾವ ಸರಕಾರ ಬಂದರೂ ಹೋದರೂ ಇವರ ಸ್ಥಾನ ಅಬಾಧಿತ. ಹಲವಾರು ಅಕ್ರಮಗಳ ಮೂಲವೇ ಇವರಾಗಿರುವುದು ಹಿಂದಿನ ಅದೆಷ್ಟೋ ಪ್ರಕರಣಗಳಲ್ಲಿ ಕಣ್ಣಿಗೆ ಹೊಡೆದು ಕಾಣಿಸುತ್ತಿದ್ದರೂ ಸ್ವಚ್ಛತಾ ಕಾರ್ಯ ಮಾತ್ರ ನಡೆಯುತ್ತಿಲ್ಲ.

ಆಯೋಗದ ಗೌಪ್ಯ ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿ ಯಿಂದ ಮುದ್ರಣ ಹಂತದಲ್ಲಿಯೇ ಪ್ರಶ್ನೆಪತ್ರಿಕೆ ಸೋರಿಕೆಯಾಗುವುದು ಬಹಳ ಸಲ ನಡೆದಿದೆ. 2020ರ ಎಫ್‌ಡಿಎ ನೇಮಕಾತಿ ಪ್ರಶ್ನೆಪತ್ರಿಕೆ ಯು ಪರೀಕ್ಷೆಯ ಹಿಂದಿನ ದಿನ ಸೋರಿಕೆಯಾಗಿತ್ತು. ಇದಲ್ಲದೆ ಆಧುನಿಕ ತಾಂತ್ರಿಕತೆ ಬಳಸಿ ಅಕ್ರಮವೆಸಗುವುದು, ಸಾಮೂಹಿಕ ನಕಲಿನಂಥ ದಾರಿಗಳಿಗೆ ಅಧಿಕಾರಿಗಳು, ಪರೀಕ್ಷಾ ಕೇಂದ್ರಗಳ ಮೇಲ್ವಿಚಾರಕರು ದುಡ್ಡಿನ ಆಸೆಗೆ ಶಾಮೀಲಾಗುವುದೆಲ್ಲ ನಡೆಯುತ್ತದೆ.

ಕೆಪಿಎಸ್‌ಸಿ ಅಕ್ರಮಗಳನ್ನೊಮ್ಮೆ ಸ್ಥೂಲವಾಗಿ ಅವಲೋಕಿಸುವು ದಾದರೆ, 1998, 1999, 2004, 2011ನೇ ಸಾಲಿನಲ್ಲಿ 989 ಗೆಜೆಟೆಡ್ ಪ್ರೊಬೆಷನರಿ ಅಧಿಕಾರಿಗಳ ನೇಮಕಾತಿಯಲ್ಲಿ ಭಾರೀ ಭ್ರಷ್ಟಾಚಾರ ಆರೋಪ ಕೇಳಿಬಂತು. ಈ ಹಗರಣಗಳ ಬಗ್ಗೆ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿಯೂ ವಿಚಾರಣೆ ನಡೆಯಿತು.

2015ರ ಕೆಎಎಸ್ ನೇಮಕಾತಿಗೂ ಹಗರಣದ ಕಳಂಕ ಅಂಟಿತ್ತು. ಈಗಿನ ಪಿಎಸ್ಸೈ, ಸಹಾಯಕ ಪ್ರಾಧ್ಯಾಪಕ, ಪಿಡಬ್ಲೂಡಿ ಇಂಜಿನಿಯರ್ ನೇಮಕಾತಿ ಅಕ್ರಮವಂತೂ ಅರ್ಹ ಉದ್ಯೋಗಾಕಾಂಕ್ಷಿಗಳೆಲ್ಲ ಕಂಗೆಡುವ ಹಾಗಿವೆ. ಆಯೋಗದೊಳಗಿನವರ ಕರಾಳ ಕೈವಾಡ ಒಂದು ಬಗೆಯದ್ದಾದರೆ, ಆಯೋಗದ ಮೇಲಿನ ರಾಜಕಾರಣದ ನೆರಳು ಮತ್ತೊಂದು ಬಗೆಯದು.

ಈಚಿನ ಒಂದು ಬೆಳವಣಿಗೆಯನ್ನು ಇಲ್ಲಿ ಗಮನಿಸಬೇಕು. ಕೆಪಿಎಸ್‌ಸಿ ಇತಿಹಾಸದಲ್ಲೇ ಕಂಡುಕೇಳರಿಯದ 2011ನೇ ಸಾಲಿನ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ನೇಮಕಾತಿ ಹಗರಣ ಯಾರೂ ಮರೆತಿರಲಾರರು. ಆ ಪ್ರಕರಣದಲ್ಲಿನ ವಿವಾದಿತ 362 ಮಂದಿಗೆ ನೇಮಕಾತಿ ಆದೇಶ ನೀಡುವಂತೆ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಮಾಜಿ ಪ್ರಧಾನಿ ದೇವೇಗೌಡರು ಮತ್ತು ಸಿರಿಗೆರೆಯ ತರಳಬಾಳು ಸ್ವಾಮೀಜಿ ಪತ್ರ ಬರೆದದ್ದು ಆ ಬೆಳವಣಿಗೆ.

ಆ ನೇಮಕಾತಿ ಪ್ರಕ್ರಿಯೆಯಲ್ಲಿ ಅಂಕಗಳ ತಿದ್ದುಪಡಿ, ಅನರ್ಹರಿಂದ ಮೌಲ್ಯಮಾಪನ, ಭಾರೀ ಮೊತ್ತದ ಹಣಕಾಸು ವಹಿವಾಟು, ಸಿಸಿಟಿವಿ ದಾಖಲೆ ನಾಶ ಹೀಗೆ ಭಾರೀ ಅಕ್ರಮ ಕುರಿತ ಹಲವು ಗಂಭೀರ ಆರೋಪಗಳು ಕೇಳಿಬಂದಿದ್ದವು. ಅವಕಾಶ ವಂಚಿತ ಸುಮಾರು 160 ಮಂದಿ ಅಭ್ಯರ್ಥಿಗಳು ದಾಖಲೆಸಹಿತ ದೂರು ಸಲ್ಲಿಸಿದ್ದರು. ಸಾರ್ವಜನಿಕ ಒತ್ತಡಕ್ಕೆ ಮಣಿದ ಸರಕಾರ, 2013ರಲ್ಲಿ ಅಕ್ರಮದ ಕುರಿತು ಸಿಐಡಿ ತನಿಖೆಗೆ ಆದೇಶಿಸಿತ್ತು.

ಬರೋಬ್ಬರಿ 215 ಸಾಕ್ಷಿ, 700 ಮೊಬೈಲ್, 75 ಬ್ಯಾಂಕ್ ಖಾತೆ ಮತ್ತು ಕೆಪಿಎಸ್ ಸಿಯ 337 ಕಡತಗಳನ್ನು ಜಪ್ತಿ ಮಾಡಿ ತನಿಖೆ ನಡೆಸಿದ್ದ ಸಿಐಡಿ, ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ರಾಜ್ಯ ಹೈಕೋರ್ಟ್ 2018ರಲ್ಲಿ 362 ಅಭ್ಯರ್ಥಿಗಳ ನೇಮಕವನ್ನು ಅಕ್ರಮ ಎಂದು ಘೋಷಿಸಿ, 2014ರಲ್ಲಿ ಕೆಪಿಎಸ್‌ಸಿ ಪ್ರಕಟಿಸಿದ್ದ ಆ ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿಯನ್ನು ಕಾನೂನುಬಾಹಿರ ಎಂದು ತೀರ್ಪು ನೀಡಿತ್ತು. ಬಳಿಕ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಆದರೆ, ಮೇಲ್ಮನವಿಯ ಪರಿಶೀಲನೆ ನಡೆಸಿದ ಸುಪ್ರೀಂಕೋರ್ಟ್ ಕೂಡ ಹೈಕೋರ್ಟ್ ತೀರ್ಪನ್ನೇ ಎತ್ತಿಹಿಡಿದು ಅಕ್ರಮ ನೇಮಕಾತಿ ಆದವರಿಗೆ ಸರಕಾರ ನೇಮಕಾತಿ ಆದೇಶ ನೀಡುವುದು ಕಾನೂನು ಮತ್ತು ಸಂವಿಧಾನಕ್ಕೆ ವಿರುದ್ಧ. ಅಲ್ಲದೆ ಒಂದು ಆಯ್ಕೆ ಪ್ರಕ್ರಿಯೆಯಲ್ಲಿಯೇ ಸಂಪೂರ್ಣ ದೋಷವಿರುವಾಗ ಕೆಲವರು ಒಳ್ಳೆಯವರು ಮತ್ತು ಕೆಲವರು ಕೆಟ್ಟವರು ಎಂದು ವಿಂಗಡಿಸಲು ಸಾಧ್ಯ ವಾಗದು. ಆದ್ದರಿಂದ ಪ್ರಕರಣದಲ್ಲಿ ಸಂಪೂರ್ಣ ಆಯ್ಕೆ ಪ್ರಕ್ರಿಯೆಯನ್ನೇ ರದ್ದು ಮಾಡಿರುವ ಹೈಕೋರ್ಟ್ ತೀರ್ಮಾನ ಸರಿಯಾಗಿಯೇ ಇದೆ ಎಂದು ಹೇಳಿತ್ತು. ಇಷ್ಟೆಲ್ಲ ಆದ ಬಳಿಕವೂ ರಾಜಕಾರಣಿಗಳು, ಸ್ವಾಮೀಜಿಗಳಂಥ ಪ್ರಭಾವಿಗಳ ಇಂಥ ನಡೆ ಅಚ್ಚರಿ ಹುಟ್ಟಿಸುತ್ತದೆ.

ಈ ಬೆಳವಣಿಗೆಯ ಬಗ್ಗೆ ಬಿಜೆಪಿಯ ಹಿರಿಯ ನಾಯಕ ಎಚ್. ವಿಶ್ವನಾಥ್ ''ಸಂವಿಧಾನಬಾಹಿರವಾಗಿ ಆಯ್ಕೆಯಾದ 362 ಮಂದಿ ಸುಪ್ರೀಂಕೋರ್ಟ್ ತೀರ್ಪು ಉಲ್ಲಂಘಿಸಿ ಒಬ್ಬ ರಾಜಕಾರಣಿಗೆ ಪತ್ರ ಬರೆಯುವುದು, ಆ ರಾಜಕಾರಣಿ ಮುಖ್ಯಮಂತ್ರಿಗೆ ಪತ್ರ ಬರೆಯು ವುದು, ಆ ಪತ್ರವನ್ನು ಆಧರಿಸಿ ಮುಖ್ಯಮಂತ್ರಿ ಕ್ರಮಕೈಗೊಳ್ಳಲು ಮುಂದಾಗುವುದು ಎಂದರೆ ಏನರ್ಥ?'' ಎಂದು ಪ್ರಶ್ನಿಸಿದ್ದರು.

ತಮ್ಮ ಮೂಲಕ ಒಬ್ಬರು ಅವರ ಕುಟುಂಬದ ಹಲವರಿಗೆ ಕೆಪಿಎಸ್‌ಸಿಯ ಕ್ಲಾಸ್ ಒನ್ ಹುದ್ದೆ ಕೊಡಿಸಿದ್ದರೆಂದು ಮಾಜಿ ಸಿಎಂ ಕುಮಾರಸ್ವಾಮಿ ಕೂಡ ಹೇಳಿಕೆ ನೀಡಿದ್ದಿದೆ.

ಕೆಪಿಎಸ್‌ಸಿ ವಿಚಾರದಲ್ಲಿ ನಡೆಯುವ ಲಾಬಿ ಎಂಥದು ಎಂಬುದಕ್ಕೆ ಇವೆಲ್ಲವೂ ಉದಾಹರಣೆಗಳು. ಕೆಪಿಎಸ್‌ಸಿಯಲ್ಲಿ ಇಂಥ ಅವ್ಯವಹಾರ ಗಳು ಎಸ್.ಎಂ. ಕೃಷ್ಣ, ಧರಮ್ ಸಿಂಗ್, ಕುಮಾರಸ್ವಾಮಿ, ಸಿದ್ದರಾಮಯ್ಯ, ಯಡಿಯೂರಪ್ಪ ಇವರೆಲ್ಲರ ಆಡಳಿತದಲ್ಲಿ ನಡೆದಿವೆ.

ಸಾರ್ವಜನಿಕ ಆಡಳಿತದಲ್ಲಿ ಪಾರದರ್ಶಕತೆ ಮತ್ತು ಪ್ರಾಮಾಣಿಕತೆ ಯನ್ನೇ ಬುಡಮೇಲು ಮಾಡುವಂತಹ ಈ ಬಗೆಯ ಅಕ್ರಮಗಳು ಒಂದು ವ್ಯವಸ್ಥೆಯ ಒಟ್ಟಾರೆ ವ್ಯಕ್ತಿತ್ವವನ್ನೇ ದುರ್ಬಲಗೊಳಿಸಿಬಿಡುತ್ತವೆ. ಕೆಪಿಎಸ್‌ಸಿ ವಿಚಾರದಲ್ಲಿ ಈಗ ಆಗಿರುವುದು, ಆಗುತ್ತಿರುವುದೂ ಅದೇ. ಸರಕಾರ ಇದನ್ನೆಲ್ಲ ಏಕೆ ಸರಿಪಡಿಸಲು ಹೋಗುತ್ತಿಲ್ಲ, ಅಥವಾ ಯಾಕೆ ಸರಿಪಡಿಸಲು ಆಗುತ್ತಿಲ್ಲ ಎಂಬುದು ಕೂಡ ತೀರಾ ತಿಳಿಯಲಾರದ ವಿಚಾರವೇನೂ ಅಲ್ಲ.

Full View

Writer - ಆರ್. ಜೀವಿ

contributor

Editor - ಆರ್. ಜೀವಿ

contributor

Similar News