ಪಾಲಿಕೆ ಕಸ ವಿಲೇವಾರಿ ಚಾಲಕರ ಸೇವೆಯನ್ನು ಮರಳಿ ಟೆಂಡರ್‌ಗೆ ವಹಿಸದಂತೆ ಆಗ್ರಹ

Update: 2022-09-19 07:37 GMT

ಮಂಗಳೂರು, ಸ.19:  ಮಹಾನಗರ ಪಾಲಿಕೆ ವ್ಯಾಪ್ತಿಯ ಕಸ ವಿಲೇವಾರಿ ಚಾಲಕರ ಸೇವೆಯನ್ನು ಮರಳಿ ಟೆಂಡರ್‌ಗೆ ವಹಿಸದಂತೆ ಕರ್ನಾಟಕ ರಾಜ್ಯ ನಗರಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ಹೊರಗುತ್ತಿಗೆ ನೌಕರರ ಸಂಘ ಹಾಗೂ ಮಂಗಳೂರು ಸಫಾಯಿ ಕರ್ಮಚಾರಿಗಳ ಸಂಘ ಆಗ್ರಹಿಸಿದೆ.

 ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಎಂ.ಬಿ.ನಾಗಣ್ಣ ಗೌಡ, ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆ ಅಧಾರದಲ್ಲಿ ದುಡಿಯುತ್ತಿರುವ ಸ್ವಚ್ಛತಾ ವಾಹನ ಚಾಲಕರನ್ನು ಗುತ್ತಿಗೆ ಪದ್ಧತಿಯಿಂದ ಕೈಬಿಟ್ಟು ಪೌರ ಕಾರ್ಮಿಕರ ಮಾದರಿಯಲ್ಲಿ ನೇರ ಪಾವತಿ ಮಾಡುವಂತೆ ಸಂಘವು ರಾಜ್ಯಾದ್ಯಾಂತ ಹೋರಾಟ ರೂಪಿಸಿತ್ತು. ಈ ಹೋರಾಟಕ್ಕೆ ಸ್ಪಂದಿಸಿದ ರಾಜ್ಯ ಸರಕಾರ ಸ್ವಚ್ಛತೆಯಲ್ಲಿ ತೊಡಗಿರುವ ವಾಹನ ಚಾಲಕರು, ಯುಜಿಡಿ ಕಾರ್ಮಿಕರನ್ನು ನೇರ ಪಾವತಿಗೆ ತರುವುದಾಗಿ ನಿರ್ಣಯ ಕೈಗೊಂಡಿತ್ತು. ಈ ಬಗ್ಗೆ ಸ್ವತಃ ಮುಖ್ಯಮಂತ್ರಿಗಳೇ ಈ ತೀರ್ಮಾನವನ್ನು ಪ್ರಕಟಿಸಿದ್ದಾರೆ. ಹೀಗಿರುವಾಗ ಮಂಗಳೂರು ನಗರ ಪಾಲಿಕೆ ಸ್ವಚ್ಛತಾ ವಾಹನ ಚಾಲಕರನ್ನು ಮರು ಟೆಂಡರ್ ಪದ್ಧತಿಗೆ ಒಳಪಡಿಸುವುದು ಸರಿಯಾದ ಕ್ರಮವಲ್ಲ. ಸ್ವಚ್ಛತಾ ವಾಹನ ಚಾಲಕರ ಕರ್ತವ್ಯಕ್ಕೆ ಸಂಬಂಧಿಸಿದಂತೆ ಯಾವುದೇ ನಿಯಮಿತ ಸಮಯಪಾಲನೆ ಇಲ್ಲದ, ಪ್ರಾಣಿಗಳಂತೆ ದುಡಿಸಿಕೊಳ್ಳಲಾಗುತ್ತಿದೆ. ಸಕಾಲಕ್ಕೆ ವೇತನ ನೀಡದೇ ಕಿರುಕುಳ ನೀಡಲಾಗುತ್ತಿದೆ. ಹೊರಗುತ್ತಿಗೆ ಎಂಬುದು ಸರಕಾರದ ಅಧಿಕೃತ ಜೀತಗಾರಿಕೆ ಎಂಬಂತಾಗಿದೆ ಎಂದು ದೂರಿದರು.

ರಾಜ್ಯದ ಯಾವುದೇ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಏಳು ವರ್ಷದ ಸುದೀರ್ಘ ಅವಧಿಗೆ ಸ್ವಚ್ಛತಾ ಗುತ್ತಿಗೆ ನೀಡುವ ಪದ್ದತಿ ಇಲ್ಲ. ಟೆಂಡರ್ ಮಂಜೂರಾತಿಗಾಗಿ ಮಂಗಳೂರು ನಗರ ಪಾಲಿಕೆಯು ನಗರಾಭಿವೃದ್ಧಿ ಇಲಾಖೆಗೆ ಸಲ್ಲಿಸಿರುವ  ಪ್ರಸ್ತಾವವನ್ನು ಹಿಂಪಡೆದು ಪೌರ ಕಾರ್ಮಿಕರ ಮಾದರಿಯಲ್ಲಿ ನೇರ ಪಾವತಿಗೆ ಕ್ರಮ ವಹಿಸಬೇಕು. ಇದರಿಂದ ಗುತ್ತಿಗೆದಾರರಿಗೆ ನೀಡುವ ಶೇ.5ರಷ್ಟು  ಸೇವಾ ಶುಲ್ಕ, ಶೇ.18ರಷ್ಟು ಜಿಎಸ್‌ಟಿ ಸೇರಿ ನಗರ ಪಾಲಿಕೆಗೆ ವಾರ್ಷಿಕ ಎರಡು ಕೋಟಿ ಹಣ ಉಳಿತಾಯವಾಗಲಿದೆ ಎಂದರು.

ರಾಜ್ಯದ ಎಲ್ಲ ಸ್ಥಳೀಯ ಸಂಸ್ಥೆಗಳಲ್ಲಿ ಪೌರ ಕಾರ್ಮಿಕರ ಖಾಯಂ ಪ್ರಕ್ರಿಯೆ ಆರಂಭವಾದರೆ, ಮಂಗಳೂರು ಮಹಾನಗರ ಪಾಲಿಕೆ ಆ್ಯಂಟನಿ ವೇಸ್ಟ್ ಕಂಪೆನಿಯೊಂದಿಗೆ ಮಾಡಿಕೊಂಡ ಅವೈಜ್ಞಾನಿಕ ಗುತ್ತಿಗೆ ಪದ್ದತಿ ಹಾಗೂ ವಯೋಮಿತಿ ಇತ್ಯಾದಿ ಕಾರಣದಿಂದ ಪೌರ ಕಾರ್ಮಿಕರು ಕೆಲಸದಿಂದ ವಂಚಿತರಾಗುತ್ತಿದ್ದಾರೆ. ಅಂತಿಮವಾಗಿ 111 ಮಂದಿ ಪೌರ ಕಾರ್ಮಿಕರನ್ನು ಖಾಯಂಗೊಳಿಸಲಾಗಿದ್ದು, ಇನ್ನು 207 ಹೊರಗುತ್ತಿಗೆ ಪೌರಕಾರ್ಮಿಕರನ್ನು ನೇರಪಾವತಿಗೆ ಒಳಪಡಿಸಲು ಕ್ರಮವಹಿಸಬೇಕು ಎಂದು ಅವರು ಆಗ್ರಹಿಸಿದರು.

ಈ ಸಂದರ್ಭ ಮಂಗಳೂರು ಮಹಾನಗರ ಪಾಲಿಕೆ ಸಫಾಯಿ ಕರ್ಮಚಾರಿಗಳ ಸಂಘ ದಕದ ಅಧ್ಯಕ್ಷ ನಾರಾಯಣ ಶೆಟ್ಟಿ ಮಾತನಾಡಿ, ಸಫಾಯಿ ಕರ್ಮಚಾರಿ ಆಯೋಗದ ಸಲಹೆ ಸೂಚನೆಗಳನ್ನು ಗಾಳಿಗೆ ತೂರಲಾಗಿದೆ. ಯಾವುದೇ ಸವಲತ್ತು ಇಲ್ಲದೇ ಸಫಾಯಿ ಕರ್ಮಚಾರಿಗಳನ್ನು ಮನುಷ್ಯರೇ ಅಲ್ಲ ಎನ್ನುವ ರೀತಿಯಲ್ಲಿ ದುಡಿಸಲಾಗುತ್ತಿದೆ ಎಂದರು.

ಕರಾವಳಿ ಪ್ರದೇಶದ ಸಂಚಾಲಕ ಬಿ.ಕೆ.ಅಣ್ಣಪ್ಪ ಕಾರೆಕ್ಕಾಡು ಮಾತನಾಡಿ, ಸಫಾಯಿ ಕರ್ಮಚಾರಿಗಳಿಗೆ ಸರಕಾರ 8 ಗಂಟೆಗಳ ಕೆಲಸದ ಅವಧಿಯನ್ನು ಸೀಮಿತಗೊಳಿಸಬೇಕು. ಅಧಿಕಾರಿ ಸಮೂಹ ಅವರನ್ನು ಈಗ ಬೆಳಗ್ಗೆ 6ರಿಂದ ಸಂಜೆ 8ರ ವರೆಗೆ ದುಡಿಸಿಕೊಳ್ಳುತ್ತಿರುವುದು ಅನ್ಯಾಯ ಎಂದರು. 

ಸುದ್ದಿಗೋಷ್ಠಿಯಲ್ಲಿ  ರಾಜ್ಯ ಕಾರ್ಯದರ್ಶಿ ಶ್ರೀನಿವಾಸ, ಉಡುಪಿ ವಿಭಾಗದ ವಿನಯ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News