ಉಪ್ಪಿನಂಗಡಿ: ಪಂಜಳ ನೇತ್ರಾವತಿ ನದಿಯಲ್ಲಿ ಮೊಸಳೆಗಳು ಪತ್ತೆ

Update: 2022-09-19 15:40 GMT
ನದಿಯ ಮರಳ ದಿಬ್ಬದಲ್ಲಿ ಮೊಸಳೆ ವಿಶ್ರಮಿಸುತ್ತಿರುವುದು

ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಪಂಜಳ ಎಂಬಲ್ಲಿ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ನೇತ್ರಾವತಿ ನದಿಯಲ್ಲಿ ಮೊಸಳೆಗಳು ಕಂಡು ಬಂದಿದ್ದು, ಜನತೆಯಲ್ಲಿ ಆತಂಕ ಮೂಡಿಸಿವೆ.

ವಾರದ ಹಿಂದೆ ಇಲ್ಲಿಯ ಪೆಟ್ರೋಲ್ ಪಂಪ್‍ವೊಂದರ ಬಳಿಯ ನೇತ್ರಾವತಿ ನದಿಯಲ್ಲಿ ಮೂರು ಮೊಸಳೆಗಳು ಪತ್ತೆಯಾಗಿವೆ. ಮಧ್ಯಾಹ್ನ ಹೊತ್ತಿನಲ್ಲಿ ನದಿ ಮಧ್ಯದಲ್ಲಿ ಕುರುಚಲು ಹುಲ್ಲನ್ನು ಹೊಂದಿರುವ ಮರಳ ದಿಬ್ಬದ ಮೇಲೆ ಈ ಮೊಸಳೆಗಳು ಕಂಡು ಬಂದಿದ್ದು, ಇದರಲ್ಲಿ ಒಂದು ಮೊಸಳೆ ದೊಡ್ಡ ಗಾತ್ರದಾದರೆ, ಇನ್ನೆರಡು ಮೊಸಳೆಗಳು ಅದಕ್ಕಿಂತ ಸ್ವಲ್ಪ ಸಣ್ಣ ಗಾತ್ರದವಾಗಿದ್ದವು ಎಂದು ಪ್ರತ್ಯಕ್ಷದರ್ಶಿ ಸಿದ್ದೀಕ್ ಕೊಪ್ಪಳ ಎಂಬವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ನೇತ್ರಾವತಿ ನದಿಯಲ್ಲಿ ಹಲವರು ಮೀನು ಹಿಡಿಯುವುದು, ಗಾಳ ಹಾಕುವುದು ಸರ್ವೇ ಸಾಮಾನ್ಯವಾಗಿದೆ. ಅಲ್ಲದೇ, ನೇತ್ರಾವತಿ ನದಿ ತೀರದ ಹಳೆಗೇಟು ಬಳಿ ಈಗಾಗಲೇ ಅಲೆಮಾರಿಗಳು ಬಿಡಾರ ಹೂಡಿದ್ದು, ಅವರು ಎಲ್ಲದಕ್ಕೂ ನದಿಯನ್ನೇ ಆಶ್ರಯಿಸಿದ್ದಾರೆ. ಇದೇ ನದಿಯಲ್ಲಿ ಈಗ ಮೊಸಳೆಗಳು ಕಂಡು ಬಂದಿರುವುದು ಆತಂಕಕ್ಕೆ ಕಾರಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News