ಅತ್ಯುತ್ತಮ ರಂಗಕೃತಿ

Update: 2022-09-20 08:39 GMT

ಕತೆಗಾರ, ಕವಿ, ಚಿತ್ರಕಲಾವಿದ ಹೀಗೆ ಬಹುಮುಖ ಪ್ರತಿಭೆಯ ಡಾ. ಡಿ.ಎಸ್. ಚೌಗಲೆ ನಾಡಿನ ಅತ್ಯಂತ ಪ್ರಮುಖ ನಾಟಕಕಾರ. ಅವರ ‘ಸಾವಿತ್ರಿಬಾಯಿ ಫುಲೆ ಬೆಳಕಿನ ದೊಂದಿ’ ನಾಟಕ ಬಹುತ್ವ, ಸಮಾನತೆ ಮತ್ತಿತರ ಹಲವು ಕಾರಣಗಳಿಂದ ಮಹತ್ವದ್ದು. ಸಾವಿತ್ರಿಬಾಯಿ ಫುಲೆ ಅವರ ವ್ಯಕ್ತಿತ್ವವನ್ನು ಬಣ್ಣಿಸುವ ನಾಟಕ ಒಟ್ಟು ಏಳು ದೃಶ್ಯಗಳನ್ನು ಹೊಂದಿದೆ. ಏಕವ್ಯಕ್ತಿ ಪ್ರದರ್ಶನಕ್ಕೆಂದೇ ರೂಪುಗೊಂಡ ನಾಟಕ ಸಂಪೂರ್ಣ ಸಾವಿತ್ರಿಬಾಯಿ ಅವರ ವ್ಯಕ್ತಿತ್ವದ ಮೇಲೆ ಕೇಂದ್ರೀಕೃತಗೊಂಡಿದೆ.

ಪೂರ್ವ ಕಾಲದ ಬಹುಮುಖ್ಯ ಅಕ್ಷರ ಕ್ರಾಂತಿಯ ಇತಿಹಾಸ ನಾಟಕದ ಮೂಲ ದ್ರವ್ಯ. ಸಾವಿತ್ರಿಬಾಯಿ ವ್ಯಕ್ತಿತ್ವ ಇದರ ಜೀವಾಳ. ದೇಶದ ಆಂತರಿಕ ಸ್ವಾತಂತ್ರ್ಯದ ಮೊದಲ ಕಿಡಿ ಹೊತ್ತಿಸಿದ ಈ ಅಕ್ಷರ ಕ್ರಾಂತಿ ವಿಶೇಷವಾಗಿ ಮಹಿಳೆಯರ ಭವಿಷ್ಯದ ಸ್ವಾವಲಂಬಿ ಬದುಕಿನ ಕನಸಿಗೆ ದೊಡ್ಡ ಬೆಳಕಾಯಿತು. ಅದೇ ಬೆಳಕಿನಲ್ಲಿ ಇಂದಿನ ಸ್ತ್ರೀ ಸ್ವಾತಂತ್ರ್ಯವನ್ನು ಮತ್ತು ಶಿಕ್ಷಣದ ಮಹತ್ವವನ್ನು ನಿಚ್ಚಳವಾಗಿ ಕಾಣಬಹುದಾಗಿದೆ. ಡಾ. ಚೌಗಲೆ ಅವರ ನಾಟಕ ಸಾಹಿತ್ಯದಲ್ಲಿ ಮಹಿಳಾಪರ ದನಿಯ ಒಳಹರಿವನ್ನು ಗಮನಿಸಬಹುದು. ಅವರ ಬಹುಚರ್ಚಿತ ‘ಗಾಂಧಿ ವಿರುದ್ಧ ಗಾಂಧಿ’ ಅನುವಾದಿತ ನಾಟಕದಲ್ಲಿ ಕೂಡ ಅವರು ಗಾಂಧಿಯಷ್ಟೇ ಮುಖವಾಗಿ ಕಸ್ತೂರಬಾ ಅವರನ್ನು ಚಿತ್ರಿಸುತ್ತಾರೆ. ಕಸ್ತೂರಬಾ ಕೇವಲ ಗಾಂಧಿ ಅವರ ಪತ್ನಿಯಾಗಷ್ಟೇ ಅಲ್ಲ ಒಬ್ಬ ಅಪ್ರತಿಮ ತಾಯಿ ಆಗಿ ಮನಸಿನಾಳಕ್ಕೆ ಇಳಿಯುತ್ತಾರೆ. ಅದೇ ಪಾತಳಿಯಿಂದ ಅವರು ಪ್ರತ್ಯೇಕವಾಗಿ ‘ಕಸ್ತೂರಬಾ’ ನಾಟಕ ರಚಿಸುವ ಮೂಲಕ ಆ ಮಹಿಳಾ ವ್ಯಕ್ತಿತ್ವಕ್ಕೆ ದೊಡ್ಡ ನ್ಯಾಯ ಒದಗಿಸುತ್ತಾರೆ. ‘ವಖಾರಿಧೂಸ’ ನಾಟಕದಲ್ಲಿ ಕೂಡ ಮಹಿಳಾ ಕಾರ್ಮಿಕರ ಬವಣೆ, ಶೋಷಣೆಯನ್ನು ಮನಮಿಡಿಯುವಂತೆ ಚಿತ್ರಿಸುವ ಮೂಲಕ ಸ್ತ್ರೀ ಪರವಾದ ತಮ್ಮ ಚಿಂತನೆಯನ್ನು ಮುಂದುವರಿಸುತ್ತಾರೆ, ಇದೀಗ ‘ಸಾವಿತ್ರಿಬಾಯಿ ಫುಲೆ’ ರಂಗಕೃತಿಯಲ್ಲಿ ಸ್ತ್ರೀ ಪರವಾದ ಚಿಂತನೆ ಮತ್ತು ನಿಲುವು ದೃಶ್ಯದಿಂದ ದೃಶ್ಯಕ್ಕೆ ಬೆಳಕಿನಂತೆ ಹಬ್ಬಿದೆ.

ಬಡವರು, ದಮನಿತರು, ಶೋಷಿತರು ಮತ್ತು ದಲಿತರ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವ ಸಂಕಲ್ಪ ತಾಳಿದ ಜ್ಯೋತಿಬಾ ಫುಲೆ ಅವರ ಬಾಳಸಂಗಾತಿ ಸಾವಿತ್ರಿಬಾಯಿ ಪ್ರಯತ್ನಕ್ಕೆ ಅಲ್ಪಸಂಖ್ಯಾತ ಸಮುದಾಯದ ಹೆಣ್ಣುಮಗಳು - ಫಾತಿಮಾ ಶೇಖ್ ಸೂಕ್ತ ಬೆಂಗಾವಲಾಗಿ ನಿಲ್ಲುತ್ತಾರೆ. ಇದು ಕೂಡ ಆ ಇತಿಹಾಸದ ಪ್ರಮುಖ ಭಾಗ, ಇದರ ಮೇಲೆ ಇನ್ನಷ್ಟು ಬೆಳಕು ಚೆಲ್ಲುವ ಪ್ರಯತ್ನ ಅಗತ್ಯವಾಗಿ ಬೇಕಿದೆ. ಚೌಗಲೆ ಅವರು ಈ ನಾಟಕದಲ್ಲಿ ಆ ಪ್ರಯತ್ನ ಮಾಡಿದ್ದಾರೆ. ಸಂಪೂರ್ಣ ಫೋಕಸ್ ಸಾವಿತ್ರಿಬಾಯಿ ಅವರ ಮೇಲಿರುವುದರಿಂದ ಫಾತಿಮಾ ಶೇಖ್ ಬಗ್ಗೆ ಪ್ರಸ್ತಾಪ ಮಾತ್ರ ಸಾಧ್ಯವಾಗಿದೆ. ಆದರೂ, ಇತಿಹಾಸದ ಈ ಪ್ರಮುಖ ಭಾಗವನ್ನು ನಾಟಕಕಾರ ಕಡೆಗಣಿಸಿಲ್ಲ. ಇದು ಡಾ. ಚೌಗಲೆ ಅವರ ಸಮಷ್ಟಿ ಪ್ರಜ್ಞೆಯ ಬದ್ಧತೆಗೊಂದು ಸಾಕ್ಷಿ.

ಪುರೋಹಿತಶಾಹಿ ಪಟ್ಟಭದ್ರರಿಂದ ಬೀದಿಗೆ ತಳ್ಳಲ್ಪಟ್ಟ ಫುಲೆ ದಂಪತಿಗೆ ಫಾತಿಮಾ ಶೇಖ್ ಅವರ ಸಹೋದರ ಉಸ್ಮಾನ್ ಭಾಯ್ ತಮ್ಮ ಮನೆಯಲ್ಲಿ ಆಶ್ರಯ ನೀಡಿ ಬೆಂಬಲಕ್ಕೆ ನಿಲ್ಲುತ್ತಾರೆ, ಶಿಕ್ಷಣದ ಆ ಕನಸಿನ ಮೊದಲ ಕಿಡಿಗಳು ಸಿಡಿಯುವುದು ಇದೇ ಉಸ್ಮಾನ್ ಭಾಯ್ ಮನೆಯಲ್ಲಿ. ಅಷ್ಟೇ ಅಲ್ಲ ಮಿಶನರಿಯೊಂದು ನಡೆಸುತ್ತಿದ್ದ ಟೀಚರ್ಸ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್‌ನಲ್ಲಿ ಸೂಕ್ತ ತರಬೇತಿ ಪಡೆದ ಫಾತಿಮಾ ಶೇಖ್ ಕೂಡ ಸಾವಿತ್ರಿಬಾಯಿಗೆ ಹೆಗಲಿಗೆ ಹೆಗಲು ಕೊಟ್ಟು ಜೊತೆ ನಿಲ್ಲುತ್ತಾರೆ, ಜೊತೆಯಾಗಿ ಅಕ್ಷರ ಕ್ರಾಂತಿ ದೀವಿಗೆಯನ್ನು ಪ್ರತೀ ಮನೆಗೂ ತಲುಪಿಸುವ ಕೆಲಸ ಮಾಡುತ್ತಾರೆ.

ಹೆಣ್ಣುಮಕ್ಕಳಿಗೆ ಶಿಕ್ಷಣ ನಿರಾಕರಿಸುವ ಅಂಧತ್ವ ಯಾವುದೋ ಒಂದು ಧರ್ಮಕ್ಕೆ ಮಾತ್ರ ಸೀಮಿತವಲ್ಲ. ಫಾತಿಮಾ ಬಾಳಿ ಬದುಕಿದ ಧರ್ಮದಲ್ಲೂ ಅಂಥ ಧರ್ಮಾಂಧರಿದ್ದರು. ಫಾತಿಮಾ ಕೂಡ ಸಾಕಷ್ಟು ವಿರೋಧಗಳನ್ನು ಎದುರಿಸಿದವರೇ. ಈ ಅರ್ಥದಲ್ಲಿ ಇಬ್ಬರ ನೋವು ಮತ್ತು ಕನಸು ಒಂದೇ ಆಗಿತ್ತು. ಹೀಗಾಗಿ ಸಾವಿತ್ರಿಬಾಯಿ ಫುಲೆ ಮತ್ತು ಫಾತಿಮಾ ಶೇಖ್ ಒಂದು ಅನುಪಮ ಜೋಡಿಯಾಗಿ ದಮನಿತರು, ಶೋಷಿತರು, ಬಡವರು, ದಲಿತರು ಮತ್ತು ಅಲ್ಪಸಂಖ್ಯಾತ ಸಮುದಾಯದ ಹೆಣ್ಣುಮಕ್ಕಳ ಪಾಲಿನ ದೊಡ್ಡ ಆಶಾಕಿರಣವೇ ಆಗುತ್ತಾರೆ. ಮೊದಲ ಅಕ್ಷರದವ್ವಂದಿರಾಗುತ್ತಾರೆ. ಈ ಸಾಂಘಿಕ ಯತ್ನದ ಫಲವಾಗಿ ಹೆಣ್ಣುಮಕ್ಕಳಿಗೆ ಇತಿಹಾಸದ ಮೊತ್ತ ಮೊದಲ ಶಾಲೆ ಪುಣೆಯಲ್ಲಿ ರೂಪುಗೊಳ್ಳುತ್ತದೆ.

ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವ ಮಹತ್ತರ ಸಂಕಲ್ಪತಾಳಿದ ಸಾವಿತ್ರಿಬಾಯಿ ಫುಲೆ ಮತ್ತು ಫಾತಿಮಾ ಅವರು ತಳಸಮುದಾಯದ ಮನೆ-ಮನಗಳಲ್ಲಿ ಅರಿವಿನ ಅಕ್ಷರಗಳನ್ನು ಅತ್ಯಂತ ಯಶಸ್ವಿಯಾಗಿ ಬಿತ್ತುತ್ತಾರೆ. ಆಗ ದೇಶದಲ್ಲಿ ಬ್ರಿಟಿಷ್ ಆಡಳಿತವಿತ್ತು. ಫುಲೆ ಅವರು ಬದುಕಿ ಬಾಳಿದ ನೆಲದಲ್ಲಿ ಪೇಶ್ವಾಶಾಹಿ ಅಧಿಕಾರ ನೆಲಕಚ್ಚಿದ್ದರೂ ಅವರ ಪುರೋಹಿತಶಾಹಿ ಅಟ್ಟಹಾಸ ಇನ್ನೂ ಜೀವಂತವಾಗಿತ್ತು. ಇದನ್ನು ಎದುರಿಸಲು ವಿಶೇಷವಾಗಿ ಮಹಿಳೆಯರಿಗೆ ಒಂದು ಹೊಸ ಬೆಳಕಿನ ದೊಂದಿ ಬೇಕಿತ್ತು. ಸಾವಿತ್ರಿಬಾಯಿ ಮತ್ತು ಫಾತಿಮಾ ಶೇಖ್ ಅದನ್ನು ಕೈಯಲ್ಲಿ ಹಿಡಿದು ಸಾಗುವ ಧೈರ್ಯವನ್ನು ತೋರಿದರು. ಅಂದಿನ ಪೇಶ್ವಾಶಾಹಿತ್ವದ ಮೇಲ್ವರ್ಗ ನಡೆಸುತ್ತಿದ್ದ ದಮನಕಾರಿ ನೀತಿಯನ್ನು, ಸಮಾಜದ ಸ್ತ್ರೀ ವಿರೋಧಿ ಧೋರಣೆಯ ಹಿಂದೂ-ಮುಸ್ಲಿಮ್ ಪುರೋಹಿತಶಾಹಿತ್ವವನ್ನು ಎದುರಿಸಿ ಮಹಿಳೆಯರಿಗೆ ಶಿಕ್ಷಣದ ಹಕ್ಕು ಪ್ರತಿಪಾದಿಸಿದ ಈ ಅನುಪಮ ಜೋಡಿ ಸಮಾನತೆಯ ತತ್ವಕ್ಕೆ ಭಾಷ್ಯ ಬರೆದರು. ಚಿಂತಿಸಲು ಪ್ರೇರೇಪಿಸುವ ದೃಶ್ಯಗಳಲ್ಲಿ ಮುಖ್ಯವಾಗಿ ಜ್ಯೋತಿಬಾ ಅವರ ಅಂತ್ಯಕಾಲದ ಪ್ರಸಂಗ ಮತ್ತು ಸಾವಿತ್ರಿಬಾಯಿಯವರ ಅಂತ್ಯದ ಘಟನೆ ಮನದಲ್ಲಿ ಬಹುಕಾಲ ಉಳಿಯುವಂಥವು.

ಸ್ವಾತಂತ್ರ್ಯ ಪೂರ್ವದಲ್ಲಿ ನಡೆದ ಈ ಐತಿಹಾಸಿಕ ಸಾಹಸ ನೆಲದ ಮಹಿಳೆಯರ ದಿಟ್ಟತನವನ್ನು ಸಾರುವಂಥದು. ಬ್ರಿಟಿಷ್ ಆಡಳಿತ ಕಾಲದ ಕ್ರೈಸ್ತ ಮಿಶನರಿಗಳು ಕೂಡ ಇದಕ್ಕೆ ಪರೋಕ್ಷ ಬೆಂಬಲ ನೀಡಿದ್ದನ್ನು ‘ಸಾವಿತ್ರಿಬಾಯಿ ಫುಲೆ’ ನಾಟಕ ಸೂಕ್ಷ್ಮವಾಗಿ ಗ್ರಹಿಸಿದೆ.

ಕ್ರೈಸ್ತ ಪಾದ್ರಿಯೊಬ್ಬರು ನೀಡಿದ ಬೈಬಲ್ ಓದಿ, ಸಾವಿತ್ರಿಬಾಯಿ ಪ್ರಭಾವಿತರಾಗುತ್ತಾರೆ. ಜ್ಯೋತಿಬಾ ಅವರು ತಂದುಕೊಟ್ಟ ಕುರ್‌ಆನ್ ಕೂಡ ಓದುತ್ತಾರೆ. ಸಮಾಜದಲ್ಲಿ ತೀವ್ರ ವಿರೋಧಗಳ ನಡುವೆಯೇ ಹೀಗೆ ಅಪರೂಪಕ್ಕೆ ಸಿಕ್ಕ ಬೆಂಬಲಗಳಿಂದ, ಪ್ರೇರಣೆಗಳಿಂದ ಸಾವಿತ್ರಿಬಾಯಿ ಅವರ ಕನಸಿಗೆ ರೆಕ್ಕೆಗಳು ಮೂಡುತ್ತದೆ. ಇದೊಂದು ಯಶೋಗಾಥೆ, ಇದನ್ನು ಅತ್ಯಂತ ಹೃದ್ಯವಾಗಿ ನಾಟಕೀಯ ರೂಪದಲ್ಲಿ ಕಟ್ಟಿಕೊಟ್ಟ ಡಾ. ಡಿ.ಎಸ್. ಚೌಗಲೆ ಅವರ ಬಹುತ್ವದ ಸಾಹಿತ್ಯ ಸಾಹಸ ಇಂದಿನ ದಿನಮಾನಕ್ಕೆ ಅತ್ಯಂತ ಅಗತ್ಯವಾಗಿ ಬೇಕಿದೆ.

ಡಾ. ಚೌಗಲೆ ಅವರ ‘ಸಾವಿತ್ರಿಬಾಯಿ ಫುಲೆ’ ರಂಗಕೃತಿ ಏಕವ್ಯಕ್ತಿ ನಾಟಕ ರಚನೆಯ ದೃಷ್ಟಿಯಿಂದ ಒಂದು ಹೊಸ ಪ್ರಯೋಗ. ಸಾವಿತ್ರಿಬಾಯಿ ಫುಲೆ ನಡೆದು ಬಂದ ದಾರಿ ಮತ್ತು ಶಿಕ್ಷಣದ ಕ್ರಾಂತಿಗಿಳಿದಾಗ ಪುರೋಹಿತಶಾಹಿಯ ಹಲವು ಅಡ್ಡಿಗಳನ್ನು ಎದುರಿಸಿದ ಚಿತ್ರಣವನ್ನು ಡಾ. ಚೌಗಲೆ ಅತ್ಯಂತ ಸೊಗಸಾಗಿ ಮತ್ತು ತರ್ಕಬದ್ಧವಾಗಿ ಕಟ್ಟಿಕೊಟ್ಟಿದ್ದಾರೆ. ರಂಗಕೃತಿಯನ್ನು ಓದುವಾಗ ಎಲ್ಲವನ್ನು ಹೆಚ್ಚು ಮಾತುಗಳಲ್ಲಿ ಹೇಳುವ ಪ್ರಯತ್ನದಂತೆ ಭಾಸವಾಗುತ್ತದೆ. ಇಲ್ಲಿನ ಬಹುತೇಕ ಮಾತುಗಳು ಒಂದು ರೀತಿಯಲ್ಲಿ ಸಾವಿತ್ರಿಬಾಯಿಯವರ ಸ್ವಗತಗಳೆನಿಸುತ್ತವೆ. ಆದರೆ, ಮಾತುಗಳಲ್ಲಿನ ಭಾಷಾ ಸೊಗಸುಗಾರಿಕೆ ಮತ್ತು ಕಥನ ಶೈಲಿ ಪ್ರತೀ ದೃಶ್ಯಗಳ ಸಮಗ್ರ ವಿವರಗಳನ್ನು ಕಣ್ಮುಂದೆ ನಿಲ್ಲಿಸುವಷ್ಟು ಸಶಕ್ತವಾಗಿವೆ ಎನ್ನುವುದನ್ನು ಗಮನಿಸಬೇಕು. ಅವರು ಇಲ್ಲಿ ಬಳಸಿರುವ ದೇಸಿತನದ ವಿಶಿಷ್ಟ ಭಾಷೆಯಲ್ಲಿ ತಾಜಾತನವಿದೆ. ಹೀಗಾಗಿ ಸಾವಿತ್ರಿಬಾಯಿ ಇಂದಿನ ಪೀಳಿಗೆಯ ಕನಸಿಗೆ ಸ್ವತಃ ಬಂದು ತಮ್ಮ ಅಂದಿನ ಕ್ರಾಂತಿ ಕಥನ ಬಿಚ್ಚಿಡುವಂಥ ಅನುಭವವನ್ನು ಈ ನಾಟಕ ಓದುಗರಿಗೆ ಕಟ್ಟಿಕೊಡುತ್ತದೆ. ಕಾದಂಬರಿ, ಕತೆ, ಕಾವ್ಯಗಳಿಂದ ವಸ್ತುವನ್ನು ಎತ್ತಿಕೊಂಡು ಏಕವ್ಯಕ್ತಿಯ ಮೂಲಕ ಪ್ರಯೋಗಿಸಲು ಸಾಧ್ಯವಾಗುವ ಹಾಗೆ ಸ್ಕ್ರಿಪ್ಟ್ ರೂಪಿಸಿಕೊಂಡು ಪ್ರಸ್ತುತಪಡಿಸುವ ಯತ್ನಗಳು ಹೊಸದೇನಲ್ಲ. ಒಬ್ಬರೇ ಎಲ್ಲ ಪಾತ್ರಗಳನ್ನು ನಿರ್ವಹಿಸಿ ಪ್ರಸ್ತುತಪಡಿಸುವ ಏಕಪಾತ್ರಾಭಿನಯ ಕೂಡ ಪರಿಚಿತವೇ. ಆದರೆ, ನಾಟಕಕಾರ ಡಾ. ಚೌಗಲೆ ಅವರು ಏಕವ್ಯಕ್ತಿ ಪ್ರದರ್ಶನ ನಾಟಕಕ್ಕೆ ಸಾಹಿತ್ಯ ಮತ್ತು ಕಲಾತ್ಮಕ ರಚನಾ ಕ್ರಮದ ಮೂಲಕ ಸ್ಪಷ್ಟ ಸ್ವರೂಪ ನೀಡುವ ಪ್ರಯತ್ನ ಮಾಡಿದ್ದಾರೆ. ಇದನ್ನೇ ಇಂಪ್ರೂವೈಸ್ ಮಾಡಿ ಪೂರ್ಣ ಪ್ರಮಾಣದ ಪ್ರಯೋಗವಾಗಿಸಬಹುದು ಕೂಡ. ಎಲ್ಲ ಅರ್ಥದಲ್ಲಿಯೂ ಇದೊಂದು ಅತ್ಯುತ್ತಮ ರಂಗಕೃತಿ ಎನ್ನುವುದು ನಿಸ್ಸಂದೇಹ.

Writer - ದಿಲಾವರ ರಾಮದುರ್ಗ

contributor

Editor - ದಿಲಾವರ ರಾಮದುರ್ಗ

contributor

Similar News