ನೂತನ ಪಾರ್ಕಿಂಕ್ ನೀತಿ ಹಿಂಪಡೆಯದಿದ್ದರೆ ಹೋರಾಟ: ಆಪ್ ಎಚ್ಚರಿಕೆ

Update: 2022-09-20 12:16 GMT

ಬೆಂಗಳೂರು, ಸೆ.20: ‘ನಗರದಲ್ಲಿ ವಾಹನ ಸವಾರರಿಗೆ ಗುಣಮಟ್ಟದ ರಸ್ತೆ ಕಲ್ಪಿಸಲು ಸಾಧ್ಯವಾಗದ ಭ್ರಷ್ಟ ಬಿಜೆಪಿ ಸರಕಾರವು ಈಗ ನೂತನ ಪಾರ್ಕಿಂಗ್ ನೀತಿ ಮೂಲಕ ವಾಹನ ಸವಾರರ ಜೇಬಿಗೆ ಕತ್ತರಿ ಹಾಕಲು ಮುಂದಾಗುತ್ತಿದೆ. ಜನವಿರೋಧಿ ನೀತಿಯನ್ನು ಹಿಂಪಡೆಯದಿದ್ದರೆ, ಪಕ್ಷವು ಬೃಹತ್ ಹೋರಾಟವನ್ನು ರೂಪಿಸಲಿದೆ’ ಎಂದು ಎಎಪಿ ಮುಖಂಡ ಮೋಹನ್ ದಾಸರಿ ಎಚ್ಚರಿಕೆ ನೀಡಿದರು.

ಮಂಗಳವಾರ ಪ್ರೆಸ್‍ಕ್ಲಬ್‍ನಲ್ಲಿ ಮಾತನಾಡಿದ ಅವರು, ‘ರವಿವಾರವು ರಜಾದಿನವಾಗಿದ್ದರೂ, ಸೆ.18ರ ರವಿವಾರದಂದೇ ಟೆಂಡರ್ ಗೆ ಆಹ್ವಾನ ಕರೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಕೆಟಿಪಿಪಿ ಕಾಯಿದೆ ಪ್ರಕಾರ ಟೆಂಡರ್‍ಗೆ 40 ದಿನಗಳ ಕಾಲಾವಕಾಶ ನೀಡಬೇಕಾಗಿದ್ದರೂ, ಕೇವಲ 15 ದಿನಗಳ ಕಾಲಾವಕಾಶ ನೀಡಲಾಗಿದೆ. ಎಂಟು ವಲಯಗಳಲ್ಲೂ ಎಂಟು ಗುತ್ತಿಗೆದಾರರನ್ನು ಪೂರ್ವನಿಗದಿ ಮಾಡಿಕೊಂಡಿದ್ದು, ಕೇವಲ ನಾಮಕಾವಸ್ತೆಗಾಗಿ ಟೆಂಡರ್ ಕರೆಯಲಾಗಿದೆ’ ಎಂದು ಆರೋಪಿಸಿದರು.

‘ರಸ್ತೆ ಬದಿ ವಾಹನ ನಿಲ್ಲಿಸುವುದಕ್ಕೂ ಪ್ರಿಪೇಯ್ಡ್ ಶುಲ್ಕ ವಿಧಿಸುವ ನೂತನ ಪಾರ್ಕಿಂಗ್ ನೀತಿಯು ಸಾಮಾನ್ಯ ವಾಹನ ಸವಾರರಿಗೆ ಭಾರೀ ಹೊರೆಯಾಗಲಿದೆ. ಪ್ರತಿ ಗಂಟೆಗೆ 15ರಿಂದ 30 ರೂಪಾಯಿವರೆಗೆ ಪಾರ್ಕಿಂಗ್ ಶುಲ್ಕ ವಿಧಿಸುವುದರಿಂದ ಬಡ ಹಾಗೂ ಮಧ್ಯಮ ವರ್ಗದ ವಾಹನ ಸವಾರದ ಆದಾಯದ ದೊಡ್ಡ ಪಾಲು ಈ ಶುಲ್ಕಕ್ಕೆ ಖರ್ಚಾಗಲಿದೆ. ಇದರ ಜೊತೆಗೆ ತಮ್ಮ ಮನೆಯೆದುರು ಕಾರು ಪಾರ್ಕಿಂಗ್ ಮಾಡುವುದಕ್ಕೂ 3 ಸಾವಿರ ರೂ.ಯಿಂದ 5 ಸಾವಿರ ರೂಪಾಯಿ ನೀಡಿ ಪರವಾನಗಿ ಪಡೆಯಬೇಕು ಎಂಬ ನಿಯಮ ರೂಪಿಸಲಾಗಿದೆ. ವಾಹನ ಸವಾರರಿಗೆ ನೆರವಾಗುವಂತಹ ನೀತಿ ರೂಪಿಸುವ ಬದಲು ಅವರನ್ನು ಲೂಟಿ ಮಾಡಲು ಸರಕಾರ ಮುಂದಾಗಿದೆ’ ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News