ವೇತನ ಹೆಚ್ಚಳಕ್ಕೆ ಆಗ್ರಹ: ಸೆ.21ರಿಂದ ಟಾಟಾ-ಮಾರ್ಕೊಪೊಲೊ ಕಾರ್ಮಿಕರ ಅನಿರ್ದಿಷ್ಟಾವಧಿ ಸತ್ಯಾಗ್ರಹ

Update: 2022-09-20 14:51 GMT

ಬೆಂಗಳೂರು, ಸೆ.20: ಧಾರವಾಡ ಜಿಲ್ಲೆಯ ಕೈಗಾರಿಕಾ ಪ್ರದೇಶದಲ್ಲಿ ವಿಶೇಷ ಆರ್ಥಿಕ ವಲಯದಡಿ ಸ್ಥಾಪಿತವಾದ ಟಾಟಾ ಮಾರ್ಕೊಪೊಲೊ ಬಸ್ ತಯಾರಕ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ವೇತನವನ್ನು ಹೆಚ್ಚಳ ಮಾಡಿಲ್ಲ. ಹಾಗಾಗಿ ವೇತನ ಹೆಚ್ಚಳ ಮಾಡಲು ಒತ್ತಾಯಿಸಿ ಕ್ಯಾಂಟಿನ್ ಊಟ ಬಹಿಷ್ಕರಿಸಿ ಕೆಲಸಕ್ಕೆ ಮುಂದಾದ ಕಾರ್ಮಿಕರನ್ನು ಕೆಲಸದಿಂದ ಹೊರಗಿಡಲಾಗಿದೆ. ಜು.6ರಿಂದ ಇಲ್ಲಿಯವರೆಗೆ ಅಂದರೆ 77 ದಿನಗಳ ಕಾಲ ಕಾನೂನುಬಾಹಿರವಾಗಿ ಕಾರ್ಖಾನೆಯು ಲಾಕೌಟ್ ಮುಂದುವರಿಸಿದೆ ಎಂದು ಟಾಟಾ-ಮಾರ್ಕಪೋಲೊ ಕ್ರಾಂತಿಕಾರಿ ಕಾರ್ಮಿಕ ಸಂಘ ಆರೋಪಿಸಿದೆ.

ಮಂಗಳವಾರ ಪ್ರೆಸ್‍ಕ್ಲಬ್‍ನಲ್ಲಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಆರ್. ಮಾನಸಯ್ಯ, ಕೋವಿಡ್ ಅವಧಿಯಲ್ಲಿ ಕಾರ್ಮಿಕರು 5000ಕ್ಕೂ ಹೆಚ್ಚಿನ ವಾಹನಗಳನ್ನು ತಯಾರಿಸಿ ಕಂಪನಿಯ ಲಾಭಕ್ಕೆ ಕಾರಣವಾದರೂ ಕಂಪನಿಯ ಕಾರ್ಮಿಕರ ಸಂಬಳ ಹೆಚ್ಚಿಸಲು ತಯಾರಿಲ್ಲ. ಕಾರ್ಮಿಕರ ಹಾಲಿ ವೇತನ ಮಾಸಿಕ 22,000 ದಿಂದ 23,000 ಇದ್ದು, ರಾಜ್ಯ ಸರಕಾರವು ಇದನ್ನು ಗಂಬೀರವಾಗಿ ಪರಿಗಣಿಸುತ್ತಿಲ್ಲ. ಕಂಪನಿಯ ನಿರ್ಲಕ್ಷ್ಯ ದೋರಣೆಯಿಂದ ಆರಂಭದಲ್ಲಿ 1,600ಕ್ಕೂ ಹೆಚ್ಚು ಖಾಯಂ ಕಾರ್ಮಿಕರಿದ್ದರು. ಈಗ ಕಾರ್ಮಿಕರ ಸಂಖ್ಯೆ 1,234 ಕ್ಕೆ ಇಳಿದಿದೆ ಎಂದರು. 

ಕಂಪನಿಯ ಕಾನೂನುಬಾಹಿರ ಕಾರ್ಮಿಕ ವಿರೋಧಿ ಕ್ರಮವನ್ನು ಖಂಡಿಸಿ, ಮಾ.23ರಿಂದ ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ 45 ದಿನಗಳ ಧರಣಿ ನಡೆಸಲಾಯಿತು. ಪರಿಣಾಮವಾಗಿ ಕಂಪನಿಯೊಂದಿಗೆ 79 ಸುತ್ತಿನ ಮಾತುಕತೆಯಾದರೆ, ಕಾರ್ಮಿಕ ಸಚಿವರು ಹಾಗೂ ಕಾರ್ಮಿಕ ಆಯುಕ್ತರ ಮಧ್ಯಸ್ಥಿಕೆಯಲ್ಲಿ 9 ಸುತ್ತಿನ ಮಾತುಕತೆಯಾಗಿದೆ. ಆದರೆ, ಕಂಪನಿಯು ಕಾರ್ಮಿಕರ ಕಾನೂನಾತ್ಮಕ ಬೇಡಿಕೆಗಳನ್ನು ತಳ್ಳಿ ಹಾಕಿದೆ. ಹಾಗಾಗಿ ಇಂದಿನಿಂದ(ಸೆ.21) ನಗರದ ಫ್ರೀಡಂ ಪಾರ್ಕನಲ್ಲಿ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ಆರಂಭಿಸಲಾಗುವುದು ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News