ಬೆಂಗಳೂರು: ಮಲೆನಾಡಿಗರನ್ನು ಉಳಿಸಲು ಸರಕಾರಕ್ಕೆ ಆಗ್ರಹ; ಪ್ರತಿಭಟನೆ

Update: 2022-09-20 17:27 GMT

ಬೆಂಗಳೂರು, ಸೆ.20: ಮಲೆನಾಡನ್ನು ವಿಶೇಷ ಕೃಷಿ ವಲಯವಾಗಿ ಘೋಷಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸಲು ರಾಜ್ಯ ಸರಕಾರ ಮುಂದಾಗಬೇಕೆಂದು ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಮಂಗಳವಾರ ಇಲ್ಲಿನ ಫ್ರೀಡಂಪಾರ್ಕಿನ ಮೈದಾನದಲ್ಲಿ ಮಲೆನಾಡು ಜನಪರ ಒಕ್ಕೂಟದ ನೇತೃತ್ವದಲ್ಲಿ ಜಮಾಯಿಸಿದ ಹೋರಾಟಗಾರರು ಮಲೆನಾಡಿಗರನ್ನು ಉಳಿಸಿ ಎಂಬ ನಿಟ್ಟಿನಲ್ಲಿ ಸರಕಾರದ ಎದುರು ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸಿ, ಆಕ್ರೋಶ ಹೊರಹಾಕಿದರು.

ಮಲೆನಾಡನ್ನು ವಿಶೇಷ ಕೃಷಿ ವಲಯವಾಗಿ ಘೋಷಿಸಬೇಕು. ಹಾಲಿನ ಘಟಕ ಸ್ಥಾಪಿಸಿ ಕೆಎಂಎಫ್ ಸಂಪರ್ಕ ಕಲ್ಪಿಸಬೇಕು. ಎಲೆಚುಕ್ಕಿ ರೋಗಕ್ಕೆ ಲಸಿಕೆ ಸಂಶೋಧಿಸಬೇಕು. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕನಿಷ್ಠ 10 ಎಕರೆ ಜಾಗವನ್ನು ಆಶ್ರಯ ನಿವೇಶನಕ್ಕೆ ಕಾಯ್ದಿರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು
.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಒಕ್ಕೂಟದ ಅನಿಲ್ ಹೊಸಕೊಪ್ಪ, ಪರಿಸರ ಸೂಕ್ಷ್ಮ ವಲಯ, ಹುಲಿ ಯೋಜನೆ ಇತ್ಯಾದಿಗಳಿಂದ ಆಗುವ ತೊಂದರೆ ತಪ್ಪಿಸಬೇಕು. ಸೆಕ್ಷನ್ 4 ವಾಪಸ್ ಪಡೆಯುವುದು, ಎಪ್ರಿಲ್ 15ಅನ್ನು ಮಲೆನಾಡು ದಿನವನ್ನಾಗಿ ಆಚರಿಸುವುದು ಇತ್ಯಾದಿ ಬೇಡಿಕೆಗಳನ್ನು ಮುಂದಿಟ್ಟಿದ್ದೇವೆ. ಅಲ್ಲದೆ, ಮುಖ್ಯಮಂತ್ರಿಯವರು ಮಲೆನಾಡಿಗರ ಸಭೆ ಕರೆಯವುದಾಗಿ ಹೇಳಿದ್ದರೂ ಈವರೆಗೆ ಸಭೆ ಕರೆದಿಲ್ಲ ಎಂದು ತಿಳಿಸಿದರು.

ಮುಖ್ಯವಾಗಿ ಮಲೆನಾಡು ಭಾಗದಲ್ಲಿ ಅಡಿಕೆಯನ್ನು ಎಲೆಚುಕ್ಕಿ ರೋಗ ಕಾಡುತ್ತಿದ್ದು, ಅಡಿಕೆ ತೋಟವೇ ನಾಶವಾಗುತ್ತಿದೆ. ಇದಕ್ಕೆ ಇನ್ನೂ ಔಷಧಿಯನ್ನು ಕಂಡುಹಿಡಿಯಲಾಗಿಲ್ಲ. ಕೂಡಲೇ ನಷ್ಟ ಅನುಭವಿಸಿರುವ ಅಡಿಕೆ ಬೆಳೆಗಾರರ ನೆರವಿಗೆ ಬರಬೇಕು ಹಾಗೂ ಔಷಧಿ ಸಂಶೋಧನೆಗೆ ಉತ್ತೇಜನ ನೀಡಬೇಕು ಎಂದು ಒತ್ತಾಯಿಸಿದರು.

ಅರಣ್ಯ ಕಾಯ್ದೆಗಳಿಂದಾಗುತ್ತಿರುವ ಕಿರಿಕಿರಿಗಳನ್ನು ತಪ್ಪಿಸಿ, ಪಾರಂಪರಿಕ ಅರಣ್ಯ ಕಾಯ್ದೆ ಕಾಲಮಿತಿಯನ್ನು 75 ವರ್ಷಗಳಿಂದ 25 ವರ್ಷಕ್ಕೆ ಇಳಿಸಿ, ಅರಣ್ಯವಾಸಿಗಳಿಗೆ ಬದುಕಲು ಅವಕಾಶ ಮಾಡಿಕೊಡಬೇಕು ಎಂದು ಅವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಒಕ್ಕೂಟದ ಚರಣಕೋಡ್ರು, ದಿಗಂತ್ ಬಿಂಬೈಲ್, ತ್ರಿಮೂರ್ತಿ ಹೊಸ್ತೋಟ, ಆದೇಶ್ ಕೂಡ್ಲುಮಕ್ಕಿ, ಅವಿನಾಶ್ ಮಕಿಮನೆ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News