60 ಕೋಟಿ ರೂ.ಮೌಲ್ಯದ ಸರಕಾರದ ಭೂಮಿ ದುರುಪಯೋಗ: ಕೃಷ್ಣಭೈರೇಗೌಡ

Update: 2022-09-21 17:49 GMT

ಬೆಂಗಳೂರು, ಸೆ.21: ಬೆಂಗಳೂರು ನಗರ ಲಗ್ಗೆರೆ ಗ್ರಾಮದಲ್ಲಿ ನಗರ ಭೂ ಮಿತಿ ಕಾನೂನಿನ ಅಡಿ ಕಳೆದುಕೊಂಡ ಭೂಮಿಯ ವಿಸ್ತೀರ್ಣದ ಬಗ್ಗೆ ಸುಳ್ಳು ಮಾಹಿತಿಗಳನ್ನು ನೀಡಿ, ಬಿಜೆಪಿಯ ಕೆ.ಗೋಪಿನಾಥ್ ಎಂಬವರು ಸುಮಾರು 60 ಕೋಟಿ ರೂ.ಮೌಲ್ಯದ ಸರಕಾರದ ಭೂಮಿಯನ್ನು ದುರುಪಯೋಗ ಪಡಿಸಿಕೊಂಡಿರುವುದು ಬೆಂಗಳೂರು ನಗರ ಜಿಲ್ಲಾಧಿಕಾರಿ ಸರಕಾರಕ್ಕೆ ಸಲ್ಲಿಸಿರುವ ತನಿಖಾ ವರದಿಯಲ್ಲಿ ಬಹಿರಂಗವಾಗಿದೆ ಎಂದು ಕಾಂಗ್ರೆಸ್ ಶಾಸಕ ಕೃಷ್ಣಭೈರೇಗೌಡ ಹೇಳಿದರು.

ಬುಧವಾರ ವಿಧಾನಸಭೆಯಲ್ಲಿ ನಿಯಮ 69ರ ಮೇರೆಗೆ ಸಾರ್ವಜನಿಕ ಮಹತ್ವದ ಜರೂರು ವಿಷಯಗಳ ಮೇಲಿನ ಅಲ್ಪ ಕಾಲಾವಧಿ ಚರ್ಚೆಯಲ್ಲಿ ವಿಷಯ ಪ್ರಸ್ತಾಪಿಸಿ ಮಾತನಾಡಿದ ಅವರು, ಕೇಂದ್ರ ಸರಕಾರವು ನಗರ ಪ್ರದೇಶದಲ್ಲಿ ನಗರ ಭೂ ಮಿತಿ ಕಾನೂನು ಜಾರಿಗೆ ತಂದ ಬಳಿಕ ಗೋಪಿನಾಥ್ ಅವರ ಬಳಿಯಿದ್ದ 16 ಎಕರೆ 10 ಗುಂಟೆ ಜಮೀನಿನ ಪೈಕಿ 12.10 ಎಕರೆ ಜಮೀನನ್ನು ಸರಕಾರ ಮುಟ್ಟುಗೋಲು ಹಾಕಿಕೊಂಡು, 1981ರಲ್ಲಿ ಸ್ಲಂ ಬೋರ್ಡ್‍ಗೆ ಬಡವರಿಗೆ ಮನೆಗಳನ್ನು ಕಟ್ಟಲು ಹಸ್ತಾಂತರಿಸಿತು ಎಂದರು.

ಇದನ್ನು ಪ್ರಶ್ನಿಸಿ ಅವರು ಕೆಎಟಿ ಮೊರೆ ಹೋದರು, 1990ರಲ್ಲಿ ಕೆಎಟಿಯೂ ಸರಕಾರದ ಕ್ರಮವನ್ನು ಎತ್ತಿ ಹಿಡಿಯಿತು. ಕೆಎಟಿ ಬಳಿಕ ಅವರು ಹೈಕೋರ್ಟ್‍ಗೆ ಹೋದರೂ ಅಲ್ಲಿಯೂ ಸರಕಾರದ ಕ್ರಮವನ್ನು ಎತ್ತಿ ಹಿಡಿಯಲಾಯಿತು. 1999ರಲ್ಲಿ ಸರಕಾರವು ನಗರ ಭೂ ಮಿತಿ ಕಾನೂನನ್ನು ಪರಿಷ್ಕರಿಸಿದಾಗ ಗೋಪಿನಾಥ್ ಅವರು ಸರಕಾರದ ಮುಂದೆ ತಾವು ಕಳೆದುಕೊಂಡಿರುವ ಭೂಮಿಗೆ ಪರಿಹಾರ ಕೋರಿ ಮನವಿ ಮಾಡಿದರು. ಆದರೆ, ಹೈಕೋರ್ಟ್ ಈ ಹಿಂದೆ ನೀಡಿರುವ ಆದೇಶದಲ್ಲಿ ಅವರಿಗೆ ಈಗಾಗಲೆ ಪರಿಹಾರ ಒದಗಿಸುವುದನ್ನು ತಿಳಿಸಿದೆ ಎಂದು ಕೃಷ್ಣಭೈರೇಗೌಡ ಹೇಳಿದರು.

ಆದರೂ, 2009ರಲ್ಲಿ ಸ್ಲಂ ಬೋರ್ಡ್‍ನಲ್ಲಿದ್ದ 4 ಎಕರೆ 20 ಗುಂಟೆ ಜಮೀನನ್ನು ಷರತ್ತುಬದ್ಧವಾಗಿ ಗೋಪಿನಾಥ್ ಅವರಿಗೆ ನೀಡಲಾಗಿದೆ. ಇದಲ್ಲದೆ, ತಾನು 12 ಎಕರೆ 10 ಗುಂಟೆ ಜಮೀನನ್ನು ಕಳೆದುಕೊಂಡಿದ್ದು, ಪರಿಹಾರವಾಗಿ ಬದಲಿ ಜಾಗ ಕೊಡುವಂತೆ ಈತ ಸಲ್ಲಿಸಿದ ಮನವಿ ಪುರಸ್ಕರಿಸಿ 11 ಎಕರೆ 30 ಗುಂಟೆ ಜಾಗವನ್ನು ಇವರಿಗೆ 2010ರಲ್ಲಿ ನೀಡಲಾಗಿದೆ. ಅಲ್ಲದೆ, ಸರಕಾರದಿಂದ ಪಡೆದಿರುವ ಜಾಗದಲ್ಲಿ ನಿವೇಶನಗಳನ್ನು ಮಾಡಿ ಜಿಪಿಎ ಮೂಲಕ ಮಾರಾಟವನ್ನು ಮಾಡಿದ್ದಾರೆ ಎಂದು ಅವರು ತಿಳಿಸಿದರು.

ಐದು ತಿಂಗಳು ಆಗಿದೆ ಜಿಲ್ಲಾಧಿಕಾರಿ ಸರಕಾರಕ್ಕೆ ವರದಿ ಸಲ್ಲಿಸಿ. ಸರಕಾರ ಈವರೆಗೆ ಯಾವುದೆ ಕ್ರಮ ಕೈಗೊಂಡಿಲ್ಲ. ಸರಕಾರದ ಜಮೀನನ್ನು ಸುಳ್ಳು ಮಾಹಿತಿ ನೀಡಿ ದುರುಪಯೋಗ ಪಡಿಸಿಕೊಂಡಿರುವ ಗೋಪಿನಾಥ್ ಸೇರಿದಂತೆ ಅವರಿಗೆ ಈ ಅಕ್ರಮಕ್ಕೆ ನೆರವಾಗಿರುವ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು ಮಾಡಬೇಕು ಎಂದು ಕೃಷ್ಣಭೈರೇಗೌಡ ಆಗ್ರಹಿಸಿದರು. ಜೆಡಿಎಸ್ ಹಿರಿಯ ಸದಸ್ಯ ಎ.ಟಿ.ರಾಮಸ್ವಾಮಿ ಅವರು ಈ ವಿಷಯದ ಕುರಿತು ಮಾತನಾಡಿದರು.

ಸರಕಾರದ ಭೂಮಿ ಉಳಿಸಲು ಅಗತ್ಯ ಕ್ರಮ: ಆರ್.ಅಶೋಕ್

ಲಗ್ಗೆರೆಯಲ್ಲಿನ 16 ಎಕರೆ ಜಮೀನಿಗೆ ಸಂಬಂಧಿಸಿದ ಈ ವಿಷಯ ಬಹಳ ವರ್ಷಗಳಿಂದ ನಡೆಯುತ್ತಿದೆ. 2011ರಲ್ಲಿ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ನಗರಾಭಿವೃದ್ಧಿ ಇಲಾಖೆಗೆ ತನಿಖೆ ಮಾಡಿ ವರದಿ ನೀಡುವಂತೆ ಸೂಚನೆ ನೀಡಲಾಗಿತ್ತು. ಅವರು ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ತನಿಖೆ ನಡೆಸಲು ಆದೇಶ ಮಾಡಿದರು. ಅಕ್ರಮಕ್ಕೆ ಸಂಬಂಧಿಸಿದ ವರದಿಯು ಈಗ ಸರಕಾರಕ್ಕೆ ಬಂದಿದೆ. ಕೃಷ್ಣಭೈರೇಗೌಡ ಅವರ ಬೇಡಿಕೆಗಳು, ನ್ಯಾಯಾಲಯದ ಆದೇಶ, ಬೆಂಗಳೂರು ಮೆಟ್ರೋಪಾಲಿಟಿನ್ ಟಾಸ್ಕ್ ಫೋರ್ಸ್‍ನಲ್ಲಿ ದಾಖಲಾಗಿರುವ ಒಂದು ಪ್ರಕರಣ ಎಲ್ಲವನ್ನು ಗಮನಿಸಿ, ಈ ಭೂಮಿ ಸರಕಾರಕ್ಕೆ ಉಳಿಸಲು ಅಗತ್ಯವಿರುವ ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News