ಪೌರ ಕಾರ್ಮಿಕರಿಗೆ ನೇರ ವೇತನ ಪಾವತಿಗೆ ಕ್ರಮ: ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ

Update: 2022-09-21 16:31 GMT

ಮಂಗಳೂರು, ಸೆ. 21: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಪೌರ ಕಾರ್ಮಿಕರಿಗೆ ನೇರ ವೇತನ ಪಾವತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಭರವಸೆ ನೀಡಿದ್ದಾರೆ.

ದ.ಕ ಜಿಲ್ಲಾ ಪೌರ ಕಾರ್ಮಿಕರ ಹಾಗೂ ನಾಲ್ಕನೇ ದರ್ಜೆ ನೌಕರರ ಸಂಘದ ವತಿಯಿಂದ ಬುಧವಾರ ಮಂಗಳೂರು ಪುರಭವನದಲ್ಲಿ ಆಯೋಜಿಸಲಾದ ಜಿಲ್ಲಾ ಮಟ್ಟದ ಪೌರ ಕಾರ್ಮಿಕರ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪಾಲಿಕೆ ವ್ಯಾಪ್ತಿಯಲ್ಲಿ ಸ್ವಚ್ಚತಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಕಾರ್ಮಿಕರನ್ನು ಖಾಯಂ ಮಾಡಬೇಕು ಎಂಬ ಬಗ್ಗೆ ಆಗ್ರಹವಿದೆ. ಈ ಬಗ್ಗೆ ರಾಜ್ಯ ಮಟ್ಟದಲ್ಲಿ ನಿರ್ಧಾರವಾಗಬೇಕಾಗಿದೆ. ಮುಖ್ಯಮಂತ್ರಿಯವರು ಈ ಬಗ್ಗೆ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ನೆರವೇರುವ ನಿರೀಕ್ಷೆಯಿದೆ ಎಂದು ಜಿಲ್ಲಾಧಿಕಾರಿ ಈ ಸಂದರ್ಭ ತಿಳಿಸಿದರು.

ಸ್ವಚ್ಚ ಭಾರತ್ ನಿಧಿಯಲ್ಲಿ ಪಾಲಿಕೆಯ ಎಲ್ಲಾ ವಾರ್ಡ್‌ಗಳಲ್ಲಿ ಕಾರ್ಮಿಕರಿಗೆ ನೆರವಾಗುವ ಪ್ರತ್ಯೇಕ ರೂಂ, ಶೌಚಾಲಯ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಜಾಗ ಇಲ್ಲದ ಕಡೆಯಲ್ಲಿ ಕಂಟೈನರ್ ಅಥವಾ ಹಳೆಯ ಬಸ್‌ಗಳನ್ನು ಪಡೆದು ಮಾದರಿ ಸ್ವರೂಪದಲ್ಲಿ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.

ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಮಾಜಿ ಅಧ್ಯಕ್ಷ ನಾರಾಯಣ್ ಅವರು ಉದ್ಘಾಟಿಸಿದರು. ಸಂಘದ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಮಾಜಿ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಮುಖ್ಯ ಅತಿಥಿಯಾಗಿದ್ದರು. ಸಾಧಕರು ಮತ್ತು ನಿವೃತ್ತ ಪೌರಕಾರ್ಮಿಕರಿಗೆ ಸಮ್ಮಾನ ಸಮಾರಂಭ ನೆರವೇರಿತು.

ಮನಪಾ ಸ್ಥಾಯಿ ಸಮಿತಿ ಅಧ್ಯಕ್ಷೆ ಹೇಮಲತಾ ರಘು ಸಾಲಿಯಾನ್, ಪ್ರತಿಪಕ್ಷ ನಾಯಕ ನವೀನ್ ಡಿಸೋಜ, ಮಾಜಿ ಮೇಯರ್ ಎಂ.ಶಶಿಧರ ಹೆಗ್ಡೆ, ಮಾಜಿ ಉಪಮೇಯರ್ ಸುಮಿತ್ರ, ಪ್ರಮುಖರಾದ  ಮನೋಜ್ ಕುಮಾರ್ ಕೋಡಿಕಲ್, ಡಾ.ರೀಟಾ ನೊರೊಹ್ನಾ, ದೇವದಾಸ್, ಕಾಂತಪ್ಪ ಅಲಂಗಾರು, ಸುಂದರ್, ದಾಸ್, ಯತಿರಾಜ್ ಮುಂತಾದವರು ಉಪಸ್ಥಿತರಿದ್ದರು. ಸಂಘದ ಜಿಲ್ಲಾ ಕಾರ್ಯದರ್ಶಿ ಎಸ್.ಪಿ. ಆನಂದ ಪ್ರಸ್ತಾವಿಸಿದರು. ರೋಹಿತ್ ಉಳ್ಳಾಲ್ ನಿರೂಪಿಸಿದರು.

ಬೆಳಗ್ಗೆಯಿಂದ ಸಂಜೆಯವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News