ಸೆ.23: ಮಸೂದ್, ಫಾಝಿಲ್ ಹತ್ಯೆ ಪ್ರಕರಣದ ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿ ಪ್ರತಿಭಟನೆ

Update: 2022-09-21 17:06 GMT

ಬೆಳ್ತಂಗಡಿ, ಸೆ. 21: ಸುಳ್ಯದ ಮಸೂದ್ ಮತ್ತು ಸುರತ್ಕಲ್‌ನ ಫಾಝಿಲ್ ಹತ್ಯೆ ಪ್ರಕರಣಗಳ ನಿಷ್ಪಕ್ಷಪಾತ ತನಿಖೆ ನಡೆಸಬೇಕು, ಸರಕಾರ ಅನುಸರಿಸುತ್ತಿರುವ ತಾರತಮ್ಯ ನೀತಿಯನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿ ಸೆ.23 ರಂದು ಸಂಜೆ 4 ಗಂಟೆಗೆ ಬೆಳ್ತಂಗಡಿ ಮಿನಿ ವಿಧಾನ ಸೌಧದ ಎದುರು ಪ್ರತಿಭಟನಾ ಸಭೆಯನ್ನು ಬೆಳ್ತಂಗಡಿ ತಾಲೂಕಿನ ಮುಸ್ಲಿಂ ಸಂಘಟನೆಗಳ ಸಂಯುಕ್ತ ಒಗ್ಗೂಡುವಿಕೆಯೊಂದಿಗೆ ನಡೆಸಲು ತೀರ್ಮಾನಿಸಲಾಗಿದೆ ಎಂದು ನ್ಯಾಯವಾದಿ ನವಾಝ್ ಶರೀಫ್ ಕಕ್ಕಿಂಜೆ ಹೇಳಿದರು.

ಜಮೀಯತುಲ್ ಫಲಾಹ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ವಿವರ‌ ನೀಡಿದರು.

ಎಲ್ಲಾ ವರ್ಗದ ಜನರೊಂದಿಗೆ ಸಮಾನವಾಗಿ ವ್ಯವಹರಿಸಬೇಕಾಗಿರುವುದು ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರಕಾರವೊಂದರ ಕರ್ತವ್ಯವಾಗಿರುತ್ತದೆ. ಆದರೆ ಪ್ರಸಕ್ತ ಆಡಳಿತ ಸರಕಾರವು ಒಂದು ನಿರ್ದಿಷ್ಟ ಸಮುದಾಯದೊಂದಿಗೆ ತಾರತಮ್ಯ ನೀತಿ ಅನುಸರಿಸುತ್ತಿರುವುದು ಸ್ಪಷ್ಟವಾಗಿದೆ. ಅಲ್ಲದೆ ಇಸ್ಲಾಂ ಧರ್ಮದ ಬಗ್ಗೆ ಅಲ್ಲಲ್ಲಿ ಅಪಪ್ರಚಾರಗಳನ್ನು ಮಾಡುತ್ತಾ, ಕಪೋಲಕಲ್ಪಿತ ಹೇಳಿಕೆಗಳನ್ನು ನೀಡಲಾಗುತ್ತಿದೆ. ಧಾರ್ಮಿಕ ಮತ್ತು ನೈತಿಕ ಮೌಲ್ಯಗಳನ್ನು ಬೋಧಿಸುವ ಮದರಸಗಳ ಬಗ್ಗೆ ಇಲ್ಲಸಲ್ಲದ ಆಪಾದನೆಗಳನ್ನು ಮಾಡಲಾಗುತ್ತಿದೆ. ಈ ಎಲ್ಲಾ ಹಿನ್ನೆಲೆಯಲ್ಲಿ ಈ ಸರಣಿ ಹತ್ಯೆ ಘಟನೆಗಳಿಗೆ ಸಂಬಂಧಿಸಿ ನ್ಯಾಯಯುತ ಕ್ರಮಕ್ಕೆ ಒತ್ತಾಯಿಸಿ "ಬೆಳ್ತಂಗಡಿ ತಾಲೂಕು ಮುಸ್ಲಿಂ ಸಂಘಟನೆಗಳ ಒಕ್ಕೂಟ" ಈ ಮೂಲಕ ಪ್ರತಿಭಟನೆ ನಡೆಸಲಾಗುತ್ತಿರುವುದಾಗಿ ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮುಸ್ಲಿಂ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಝೀರ್ ಬೆಳ್ತಂಗಡಿ, ಅಬ್ದುಲ್ ರಝಾಕ್, ಕೆ.ಎಸ್ ಅಬ್ದುಲ್ಲ ಕರಾಯ, ತಲ್‌ಹತ್ ಎಂ.ಜಿ, ಉಸ್ಮಾನ್ ಶಾಫಿ ಮತ್ತು ಉಮರ್ ಗುರುವಾಯನಕೆರೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News