ಪಿ.ಬಿ. ಶ್ರೀನಿವಾಸ್ಎಂಬ ಅನನ್ಯ ಗಾಯಕ

Update: 2022-09-22 15:26 GMT

ಆಂಧ್ರದಲ್ಲಿ ಹುಟ್ಟಿದ ಪಿ.ಬಿ. ಶ್ರೀನಿವಾಸ್, ತೆಲುಗಿಗಷ್ಟೇ ಸೀಮಿತರಾಗದೆ ಭಾರತೀಯ ಹಲವು ಭಾಷೆಗಳನ್ನೂ ಕಲಿತರು. ಉರ್ದು, ಸಂಸ್ಕೃತ, ಇಂಗ್ಲಿಷ್‌ಗಳನ್ನೂ ಕಲಿತು ಕೈವಶ ಮಾಡಿಕೊಂಡರು. ಎಂಟು ಭಾಷೆಗಳ ಗಾಯಕರಾಗಿ, ಮೂರೂವರೆ ಸಾವಿರ ಹಾಡುಗಳನ್ನು ಹಾಡಿ ದಾಖಲೆಯನ್ನೇ ಸೃಷ್ಟಿಸಿದರು. ಅದರಲ್ಲೂ ಕನ್ನಡ ನಾಡಿನಲ್ಲಿ ಸುಮಾರು ಎರಡೂವರೆ ದಶಕಗಳ ಕಾಲ ಸ್ವರಸಾಮ್ರಾಟರಾಗಿ ಮೆರೆದರು. ಏಕಮೇವಾದ್ವಿತೀಯರಾಗಿ ಮಿಂಚಿದರು.

ಅಂದು ಬಾದಾಮಿ ಹೌಸ್ ಅಪರೂಪಕ್ಕೆ ಫುಲ್ ಆಗಿತ್ತು. ಮುಖ್ಯ ಅತಿಥಿಯಾಗಿ ಆಗಮಿಸುತ್ತಿದ್ದವರನ್ನು ಅಪಾರವಾಗಿ ಇಷ್ಟಪಡುತ್ತಿದ್ದ ಅಭಿಮಾನಿಗಳು ಅಲ್ಲಿದ್ದರು. ಅವರು ವಯೋವೃದ್ಧರಾದ್ದರಿಂದ, ಸಹಜವಾಗಿಯೇ ಆ ವ್ಯಕ್ತಿಯ ಬಗ್ಗೆ ಅಭಿಮಾನ, ಪ್ರೀತಿ, ಗೌರವ ಹೆಚ್ಚಾಗಿತ್ತು. ಅವರ ಮಾತುಗಳನ್ನು ಕೇಳಲು ಕಾತರಿಸುತ್ತಿತ್ತು. ಕಾಯುವಿಕೆಯ ಬೇಸರವನ್ನು ಹೋಗಲಾಡಿಸಲು, ಮರದ ದೊಡ್ಡ ಪೆಟ್ಟಿಗೆಯಂಥ ಸ್ಪೀಕರ್‌ಗಳಲ್ಲಿ ಹಳೆಯ ಕಾಲದ ಹಾಡುಗಳು ತೇಲಿಬರುತ್ತಿದ್ದವು.

ಜಯ ಭಾರತ ಜನನಿಯ ತನುಜಾತೆ...

ಹಕ್ಕಿಯು ಹಾರುತಿದೆ...

ನಾವಾಡುವ ನುಡಿಯೇ ಕನ್ನಡ ನುಡಿ...

ಕನ್ನದ ಕುಲದೇವಿ ಕಾಪಾಡು ಬಾ ತಾಯೆ...

ಇಳಿದು ಬಾ ತಾಯಿ ಇಳಿದು ಬಾ...

ಹಾಡೊಂದ ಹಾಡುವೆ ನೀ ಕೇಳು ಮಗುೆ...

ಗುಮ್ಮನ ಕರೆಯದಿರೆ ಅಮ್ಮಾ ನೀ...

ಜಯತು ಜಯ ವಿಠಲ...

ಹೃದಯವೀಣೆ ಮಿಡಿಯೆ ತಾನೆ...

ನೀರಿನಲ್ಲಿ ಅಲೆಯ ಉಂಗುರ...

ಪಂಚಮ ವೇದ ಪ್ರೇಮದ ನಾದ...

ಒಂದೊಂದು ಹಾಡೂ ಕೇಳುಗನನ್ನು ಕಲ್ಪನಾಲೋಕಕ್ಕೆ ಕರೆದುಕೊಂಡುಹೋಗುತ್ತಿತ್ತು. ನರನಾಡಿಗಳಿಗೆ ಇಳಿದು ನೆನಪುಗಳನ್ನು ನೇವರಿಸುತ್ತಿತ್ತು. ಸಾಹಿತ್ಯ, ಸಂಗೀತ ಮತ್ತು ಮಧುರವಾದ ಹಾಡುಗಾರಿಕೆಯಿಂದ ರೋಮಾಂಚನಗೊಳಿಸುತ್ತಿತ್ತು. ಜೊತೆಗೆ ಕನ್ನಡದ ಸೊಬಗನ್ನು, ಸಂಸ್ಕೃತಿಯ ಸಮೃದ್ಧಿಯನ್ನು ಸಾರುತ್ತಿತ್ತು. ತಣ್ಣಗೆ ಕೂತಿದ್ದವರ ತುಟಿಗಳು ತಮಗರಿವಿಲ್ಲದಂತೆಯೇ ತಡವರಿಸುತ್ತಿದ್ದವು.

ಹಾಡುಗಳ ಜಾದೂವೇ ಅಂಥದ್ದು. ಮೈ ಮನ ಮರೆಸುವ, ಮುದಗೊಳಿಸುವ ಮೋಡಿಯದ್ದು. ಅಂತಹ ಹಾಡುಗಳನ್ನು ಹಾಡಿದ ಹಾಡುಗಾರನ ಬಗ್ಗೆ ಪ್ರೀತಿ, ಗೌರವ ಹಾಡಿನಿಂದ ಹಾಡಿಗೆ ಇಮ್ಮಡಿಗೊಳ್ಳುತ್ತಿತ್ತು. ಅವರು ಬರುವುದು ತಡವಾಗಿ, ಕಾತರದಿಂದ ಕಾಯುತ್ತಿದ್ದಾಗ ಗುಲ್ಝಾರ್ ಅವರ ‘ಇಂತಿಝಾರ್ ಕಿ ಗಡಿ ಬಹುತ್ ಕಟಿನ್ ಹೈ’ ನೆನಪಾಗುತ್ತಿತ್ತು. ಸಹನೆಯ ಕಟ್ಟೆಯೊಡೆದಿತ್ತು- ‘‘ಏನ್ ಸ್ವಾಮಿ, ಕಾರ್ಯಕ್ರಮ ಇದ್ಯೋ ಇಲ್ವೋ, ಎಷ್ಟೊತ್ತು ಅಂತ ಕಾಯೋದು’’ ಎಂದು ಯಾರೋ ಒಬ್ಬರು ಎದ್ದು ನಿಂತೇಬಿಟ್ಟರು. ಎಲ್ಲರದೂ ಹೆಚ್ಚುಕಡಿಮೆ ಅದೇ ಕನವರಿಕೆ, ಕಾತರ... ಎಲ್ಲರೂ ಅವರನ್ನು ನೋಡಲಿಕ್ಕಾಗಿ... ಅವರ ಮಾತುಗಳನ್ನು ಕೇಳಲಿಕ್ಕಾಗಿ ಕಾದು ಕೂತವರೆ.

ಅವರೇ ಪಿ.ಬಿ. ಶ್ರೀನಿವಾಸ್. ಅಪ್ಪಟಕನ್ನಡ ಕಂಠದ ಅನನ್ಯ ಗಾಯಕ.

ಜರಿ ಪೇಟ ತೊಟ್ಟ, ಕುತ್ತಿಗೆಗೆ ಶಲ್ಯ ಸುತ್ತಿದ, ದಪ್ಪಕನ್ನಡಕ ಧರಿಸಿದ, ಹಣೆಗೆ ಉದ್ದ ನಾಮ ಎಳೆದ ಪಿಬಿಎಸ್ ಕಿಕ್ಕಿರಿದ ಸಭಾಭವನ ನೋಡಿ ಭಾವಪರವಶರಾದರು. ‘ಜನುಮ ಜನುಮದ ಅನುಬಂಧ, ಕರ್ನಾಟಕದ ಅನುಬಂಧ...’ ಎಂದು ಹಾಡುತ್ತಲೇ ಕನ್ನಡಿಗರು ತಮ್ಮ ಮೇಲಿಟ್ಟ ಅಭಿಮಾನ, ಪ್ರೀತಿ, ಗೌರವಗಳಿಗೆ ಕೃತಜ್ಞತೆ ಸಲ್ಲಿಸಿದರು. ಮಾತುಕತೆಗೆ ಮುಂದಾದರು.

ಆಂಧ್ರದಲ್ಲಿ ಹುಟ್ಟಿದ ಪಿ.ಬಿ. ಶ್ರೀನಿವಾಸ್, ತೆಲುಗಿಗಷ್ಟೇ ಸೀಮಿತರಾಗದೆ ಭಾರತೀಯ ಹಲವು ಭಾಷೆಗಳನ್ನೂ ಕಲಿತರು. ಉರ್ದು, ಸಂಸ್ಕೃತ, ಇಂಗ್ಲಿಷ್‌ಗಳನ್ನೂ ಕಲಿತು ಕೈವಶ ಮಾಡಿಕೊಂಡರು. ಎಂಟು ಭಾಷೆಗಳ ಗಾಯಕರಾಗಿ, ಮೂರೂವರೆ ಸಾವಿರ ಹಾಡುಗಳನ್ನು ಹಾಡಿ ದಾಖಲೆಯನ್ನೇ ಸೃಷ್ಟಿಸಿದರು. ಅದರಲ್ಲೂ ಕನ್ನಡ ನಾಡಿನಲ್ಲಿ ಸುಮಾರು ಎರಡೂವರೆ ದಶಕಗಳ ಕಾಲ ಸ್ವರಸಾಮ್ರಾಟರಾಗಿ ಮೆರೆದರು. ಏಕಮೇವಾದ್ವಿತೀಯರಾಗಿ ಮಿಂಚಿದರು.

1953ರಲ್ಲಿ ಆರೆನ್ನಾರ್ ಅವರ ‘ಜಾತಕ ಫಲ’ ಚಿತ್ರದ ಮೂಲಕ ಹಾಡಿನ ಹಾದಿಗೆ ಬಿದ್ದ ಪಿಬಿಎಸ್, ಹಿಂದಿರುಗಿ ನೋಡದೇ ನಡೆದದ್ದು 1980ರತನಕ. ನಿರಂತರ 27 ವರ್ಷಗಳತನಕ. ಡಾ.ರಾಜ್, ಅವರ ನಟನೆಯ ಚಿತ್ರಗಳಿಗೆ ಅವರೇ ಹಾಡುವತನಕ. ಎಸ್ಪಿ ಬಾಲಸುಬ್ರಮಣ್ಯಂ ಪ್ರವರ್ಧಮಾನಕ್ಕೆ ಬರುವತನಕ. ಪಿಬಿಎಸ್ ಪಕ್ಕದಲ್ಲಿ ಕೂತಿದ್ದ ನಿರೂಪಕರು, ‘‘ಇವರು ಇಂಡಸ್ಟ್ರಿಗೆ ಬಂದ ಕಾಲಕ್ಕೆ, ಆ ರಭಸಕ್ಕೆ ಆಗ ಹಾಡುತ್ತಿದ್ದ ಎ.ಆರ್. ರಾಜು ಅವರು ಅದೆಲ್ಲಿ ಮಾಯವಾದ್ರೋ ಗೊತ್ತಿಲ್ಲ. ಕಣ್ಣಿಗೆ ಕಾಣಂತೆ ಔಟ್ ಆಗ್ಬುಟ್ರು...’’ ಎಂದರು.

ತಕ್ಷಣ ಪಿಬಿಎಸ್, ‘‘ಒಂದೇ ಒಂದು ಸಣ್ಣ ಕರೆಕ್ಷನ್, ಅಲ್ಲ ಕ್ಲಾರಿಫಿಕೇಷನ್ನು... ಎ.ಆರ್. ರಾಜು ನನ್ನ ಒಳ್ಳೆಯ ಸ್ನೇಹಿತರು. ತಮಿಳಿನ ಅದ್ಭುತ ಗಾಯಕರು. ಇತ್ತ ತೆಲುಗಿನಲ್ಲಿ ಹಾಡುತ್ತಿದ್ದ ಘಂಟಸಾಲ ಕೂಡ. ನಾನು ಬಂದು ಅವರಿಗೆ ಅವಕಾಶವಿಲ್ಲದಂತೆ ಮಾಡಿದೆ ಅನ್ನೋದು ಅಷ್ಟು ಸರಿ ಅಲ್ಲ... ಯಾರ್ಯಾರು ಎಷ್ಟೆಷ್ಟು ದಿನ ಅನ್ನೋದು ನಮ್ಮ ಕೈಲಿಲ್ಲ, ಎಲ್ಲ ಅಲ್ಲಿ (ಆಕಾಶದ ಕಡೆ ಮುಖ ಮಾಡಿ) ಮೊದಲೇ ನಿರ್ಧಾರವಾಗಿರುತ್ತೆ. ಅವನ ಮುಂದೆ ನಮ್ಮದೇನು ಇಲ್ಲ...’’ ಎಂದ ಪಿಬಿಎಸ್ ಡಾ.ರಾಜ್ ಹಾಡಲು ಶುರು ಮಾಡಿ ಪಿಬಿಎಸ್‌ಗೆ ಅವಕಾಶವಿಲ್ಲದಂತಾಯಿತು ಮತ್ತು ಎ.ಆರ್. ರಾಜುರವರ ಅವಕಾಶವನ್ನು ಪಿಬಿಎಸ್ ಕಿತ್ತುಕೊಂಡರು ಎನ್ನುವ ಎರಡೂ ಅಪಸ್ವರಗಳಿಗೆ, ಗುಲ್ಲುಗಳಿಗೆ ಒಂದೇ ಉತ್ತರ ಕೊಟ್ಟು ಎಲ್ಲರನ್ನು ಚಕಿತಗೊಳಿಸಿದರು. ಹಾಗೆಯೇ, ‘‘ಪ್ರತಿಭೆ ಇರಬೇಕು, ನನ್ನ ಕೋರಿಕೆ ಏನಪ್ಪಾಅಂದ್ರೆ, ಪ್ರತಿಭೆಯಿದ್ರೆ ಸಾಲ್ದು, ಅವಕಾಶವಿರಬೇಕು. ಅವಕಾಶ ಅಂದ್ರೆ ಬರೀ ಅವಕಾಶ ಅಲ್ಲ, ವಿಜಯ ಅವಕಾಶ ಕೊಡು ಅಂತ ದೇವರಲ್ಲಿ ಕೇಳಿಕೊಳ್ತೇನೆ...’’ ಎಂದವರು ಮಾತಿನುದ್ದಕ್ಕೂ ತಾವು ಚಿತ್ರರಂಗಕ್ಕೆ ಬಂದಾಗಿನಿಂದ ಇಲ್ಲಿಯವರೆಗೆ ಯಾರ್ಯಾರು ಯಾವ್ಯಾವ ರೂಪದಲ್ಲಿ ಸಹಕರಿಸಿದರೋ, ಬೆಂಬಲಿಸಿದರೋ, ಉಪಕರಿಸಿದರೋ, ಉಪಚರಿಸಿದರೋ ಅವರನ್ನೆಲ್ಲ ನೆನೆಯುತ್ತ, ಕೃತಜ್ಞತೆ ಅರ್ಪಿಸುತ್ತ ಸಾಗಿದರು.

ಪಿಬಿಎಸ್‌ಗೆ ಸೆಪ್ಟಂಬರ್ ಲಕ್ಕಿ ತಿಂಗಳಂತೆ. ಯಾಕೆ ಅಂದರೆ, ‘‘ನೋಡಿ, ನೀವು ನನ್ನ ಕರೆದು ಸನ್ಮಾನಿಸುತ್ತಿರುವ ಈ ತಿಂಗಳು ಕೂಡ ಸೆಪ್ಟಂಬರ್ರೆ. ಅಷ್ಟೇ ಅಲ್ಲ ಇದೇ ತಿಂಗಳ 22ಕ್ಕೆ ನನಗೆ 80 ವರ್ಷವಾಗುತ್ತದೆ. ಹೆಚ್ಚೂ ಕಡಿಮೆ ನನ್ನ ಒಳ್ಳೆಯ ಕೆಲಸಗಳೆಲ್ಲ ಆಗಿರೋದು ಸೆಪ್ಟಂಬರ್ ತಿಂಗಳಿನಲ್ಲಿಯೇ...’’ ಎಂದ ಪಿಬಿಎಸ್, ‘‘ನಮ್ಮದು ಸಂಗೀತದ ಕುಟುಂಬ. ನನ್ನಮ್ಮ ನನ್ನ ಗುರು. ತಾಯಿ ಅಂದ್ರೆ ಭಾರೀ ಪ್ರೀತಿ, ನನ್ನ ಪಾಲಿನ ದೇವತೆ. ಅವರಿಂದ ಕಲಿತದ್ದು ಅಪಾರ. ಚಿಕ್ಕಂದಿನಿಂದಲೇ ಸಂಗೀತಾಭ್ಯಾಸ ಶುರುವಾಯಿತು. ತಾಯಿಯಿಂದ ಲಭಿಸಿದ ಸ್ವತ್ತು ಅಂದ್ರೆ ಸಂಗೀತವೇ. ಅವರು ನನ್ನ ಮೇಲಿಟ್ಟ ಪ್ರೀತಿ, ವಿಶ್ವಾಸ, ನಂಬಿಕೆ ನನ್ನ ಕೈ ಹಿಡಿಯಿತು. ಏನೇ ಹಾಡಿದ್ರು ಬಹಳ ಚೆನ್ನಾಗಿದೆ ಎಂದು ಪ್ರೋತ್ಸಾಹಿಸಿದ ಆ ಕಾರಣಕ್ಕೋ ನನ್ನ ಅದೃಷ್ಟವೋ... ‘ಅಮ್ಮಾ... ಅಮ್ಮಾ... ಅಮ್ಮ ಎಂದಾಗ ಏನೋ ಸಂತೋಷವೋ...’ ಹಾಡು ಹಾಡುವಾಗ ಎಂಥ ಖುಷಿಯಾಯಿತು ಅಂದ್ರೆ... ಗೀತರಚನೆಕಾರರು ಅಷ್ಟೇ ತುಂಬಾ ಅರ್ಥಪೂರ್ಣವಾಗಿ ರಚಿಸಿದ್ದಾರೆ. ಆದರೆ, ನಮ್ಮಪ್ಪನಿಗೆ ಸಂಗೀತದ ಬಗ್ಗೆ ಅಷ್ಟು ಗೊತ್ತಿರಲಿಲ್ಲ...’’

ಅರವತ್ತು ಎಪ್ಪತ್ತರ ದಶಕಗಳಲ್ಲಿ ಕನ್ನಡ ಚಿತ್ರರಂಗದ ದಿಗ್ಗಜರಲ್ಲೊಬ್ಬರಾದ ಬಿ.ಎಸ್. ರಂಗಾರವರ ಆಸ್ಥಾನ ಗಾಯಕರಂತಿದ್ದ ಪಿಬಿಎಸ್, ಮದ್ರಾಸಿನಲ್ಲಿ ತಯಾರಾಗುತ್ತಿದ್ದ ಕನ್ನಡ ಚಿತ್ರಗಳ ಬಗ್ಗೆ ಕನ್ನಡಿಗರಿಗೆ ಅಭಿಮಾನ ಬೆಳೆಸುವಲ್ಲಿ ತಮ್ಮ ಹಾಡುಗಳನ್ನು ಸಂಪರ್ಕ ಸೇತುವೆಯಂತೆ ಬಳಸಿದವರಲ್ಲಿ ಅಗ್ರಗಣ್ಯರು. ಸಾಮಾನ್ಯ ಕೇಳುಗನೊಬ್ಬ ಕೇವಲ ಹಾಡುಗಳನ್ನು ಕೇಳುತ್ತಲೇ ಕನ್ನಡದ ಬಗ್ಗೆ ಅಭಿಮಾನ, ಪ್ರೀತಿ ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಸಂಗೀತದ ಅಭಿರುಚಿಯನ್ನೂ ಬೆಳೆಸಿಕೊಂಡು, ಕನ್ನಡ ಪ್ರಜ್ಞೆಯನ್ನೂ ಜಾಗೃತಗೊಳಿಸಿಕೊಳ್ಳುವಂತೆ ಮಾಡಿದ್ದು ಸಾಮಾನ್ಯ ಸಂಗತಿಯಲ್ಲ. ಆ ನಿಟ್ಟಿನಲ್ಲಿ ನೋಡಿದರೆ, ಕನ್ನಡ ಸಂಸ್ಕೃತಿ ಮತ್ತು ಕನ್ನಡ ಚಿತ್ರೋದ್ಯಮದ ವಿಸ್ತರಣೆಗೆ ಪಿಬಿಎಸ್ ಕೊಟ್ಟ ಕೊಡುಗೆ ಅಮೂಲ್ಯವಾದುದು.

ಅಂತಹ ಹಾಡುಗಳು ಇಂತಹ ವ್ಯಕ್ತಿತ್ವ... ಈ ಕಾರಣಕ್ಕಾಗಿಯೇ ಅಂದು ಅಲ್ಲಿ ಸೇರಿದ್ದ ಪ್ರೇಕ್ಷಕರು ಪಿ.ಬಿ. ಶ್ರೀನಿವಾಸರಿಂದ ಭಾರೀ ನಿರೀಕ್ಷೆಯಲ್ಲಿದ್ದರು. ಅವರ ನೆನಪಿನ ಗಣಿಯನ್ನು ಅಗೆಯಲು, ಅರಿಯಲು ಅತಿ ಉತ್ಸುಕರಾಗಿದ್ದರು. ಅವರನ್ನು ಮಾತನಾಡಲು ಬಿಡದಂತೆ ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳಿ ರೇಜಿಗೆ ಹುಟ್ಟಿಸುತ್ತಿದ್ದರು. ಜೊತೆಗೆ ನಿರೂಪಕರು ಬೇರೆ ಹಾದಿ ತಪ್ಪಿಸುತ್ತಿದ್ದರು. ಬೇಜಾರಾದರೂ ತೋರ್ಪಡಿಸಿಕೊಳ್ಳದ ಪಿಬಿಎಸ್ ‘‘ವಯಸ್ಸಾಗ್ತಿದ್ಹಾಗೆ ಜ್ಞಾಪಕಶಕ್ತಿ ಯಾಕೆ ಕಡಿಮೆಯಾಗಬೇಕು ಅಂತ...’’ ಎಂದು ಎಲ್ಲರನ್ನು ನಗೆಗಡಲಲ್ಲಿ ತೇಲಿಸಿದರು. ನಡುವೆ ಯಾರೋ ಜ್ಞಾಪಿಸಿದ ಸಿದ್ಧಲಿಂಗಯ್ಯನವರ ‘ಬಂಗಾರದ ಮನುಷ್ಯ’ ಚಿತ್ರಕ್ಕಾಗಿ ಹಾಡಿದ ನಗು ನಗುತಾ ನಲಿ ನಲಿ, ಬಾಳ ಬಂಗಾರ ನೀನು... ಹಾಡುಗಳನ್ನು ನೆನಸಿಕೊಂಡು, ‘‘ಬಂಗಾರದ ಮನುಷ್ಯ ಚಿತ್ರವನ್ನು ರೆಕಾರ್ಡಿಂಗ್ ಸ್ಟುಡಿಯೋನಲ್ಲಿ ಮೊದಲ ಬಾರಿಗೆ ನೋಡಿದ ದಿನವೇ ಹೇಳಿದೆ, ಸಿದ್ಧಲಿಂಗಯ್ಯನವರೇ ಈ ಚಿತ್ರ ಸೂಪರ್ ಸಕ್ಸಸ್ ಆಗುತ್ತೆ, ಎರಡು ವರ್ಷ ಓಡುತ್ತೆ, ಮೂರನೇ ವರ್ಷಕ್ಕೆ ಮೂರು ವರುಷ ಹರುಷ ಅಂತೆಲ್ಲ ಈಗಲೇ ಪೋಸ್ಟರ್ ಮಾಡಿಸಿಟ್ಟುಕೊಳ್ಳಿ ಅಂತೇಳಿದ್ದೆ. ಹಾಗೇ ಆಯಿತು...’’ ಎಂದರು.

ಕನ್ನಡದಲ್ಲಿ ಪಿಬಿಎಸ್ ಹಾಡುವ ಕಾಲಕ್ಕೆ ಹಿಂದಿ ಚಿತ್ರರಂಗದಲ್ಲಿ ಭಾರೀ ಜನಪ್ರಿಯರಾಗಿದ್ದ ಮುಹಮ್ಮದ್ ರಫಿ, ಮನ್ನಾಡೆ, ಲತಾ ಮಂಗೇಶ್ಕರ್, ನೌಶಾದ್ ಬಗ್ಗೆ ಪಿಬಿಗೆ ಅತೀವ ಅಭಿಮಾನ, ಗೌರವ. ಅದರಲ್ಲೂ ಲತಾ ಮಂಗೇಶ್ಕರ್ ಮೆಚ್ಚಿನ ಗಾಯಕಿ. ಪಿಬಿಎಸ್‌ಗೊಂದು ಆಸೆ- ಲತಾ ಜೊತೆ ಹಾಡಬೇಕೆಂದು. ಅದೃಷ್ಟವೇ ಅರಸಿ ಬಂತು, ‘ನಾನ್ ಒರು ಪೆಣ್’ ಎಂಬ ತಮಿಳು ಚಿತ್ರವನ್ನು ಹಿಂದಿಯಲ್ಲಿ ‘ಮೈ ಭೀ ಲಡ್ಕಿ ಹೂಂ’ ಚಿತ್ರ ಮಾಡುವಾಗ, ಆ ಚಿತ್ರದಲ್ಲಿ ಲತಾ ಮಂಗೇಶ್ಕರ್ ಜೊತೆ ಹಾಡಲು ಪಿಬಿಎಸ್‌ಗೆ ಅವಕಾಶ ದೊರೆಯಿತು. ‘‘ಲತಾ ಜೊತೆ ಹಾಡಿದೆ, ನನ್ನ ಆಸೆ ಪೂರೈಸಿತು. ನನ್ನ ಕಂಠಕ್ಕೆ ಮಾರುಹೋಗಿ, ಸಿಕ್ಕಿದವರಿಗೆಲ್ಲ ಶಿಫಾರಸು ಮಾಡಿದರು’’ ಎಂದ ಪಿಬಿಎಸ್, ನೌಶಾದ್‌ರನ್ನು ನೆನಸಿಕೊಂಡರು ‘‘ಅವರ ಸಂಗೀತ ನನಗೆ ಭಾರೀ ಇಷ್ಟ. ಅವರೊಂದಿಗೆ ಮೂರು ತಾಸು ಕೂತು ಪ್ಯೂರ್ ಉರ್ದುವಿನಲ್ಲಿ ಮಾತನಾಡಿದ್ದೇನೆ. ಈ ಉರ್ದು ಕಲಿತಿದ್ದೊಂದು ವಿಶೇಷ... ಆಗ ರೇಡಿಯೋನಲ್ಲಿ ವಾರ್ತೆಗಳು ಬರ್ತಿದ್ದವು. ಯಾರೋ ಒಬ್ಬರು ತುಂಬಾ ಚೆನ್ನಾಗಿ ವಾರ್ತೆ ಓದ್ತಿದ್ರು. ಅದನ್ನು ಕೇಳಿ, ಆ ಭಾಷೆಯ ಬಗ್ಗೆ ನನಗೆ ಭಾರೀ ಪ್ರೀತಿ ಹುಟ್ಟಿತು. ಹತ್ತೇ ದಿನದಲ್ಲಿ ಓದುವುದನ್ನು, ಬರೆಯುವುದನ್ನು ಕಲಿತೆ. ಅಷ್ಟೇ ಅಲ್ಲ, ಎರಡು ಲಕ್ಷಕ್ಕೂ ಹೆಚ್ಚು ಗಝಲ್‌ಗಳನ್ನು ಬರೆದೆ, ಹಾಡಿದೆ. ಬಾಂಬೆನೋರಿಗೆ ಸೌತ್‌ನವರನ್ನು ಕಂಡರೆ ಅಷ್ಟಕ್ಕಷ್ಟೆ. ಆ ಅನುಭವ ನನಗೂ ಆಗಿದೆ. ನಾನೊಂದು ಸಲ ಬಾಂಬೆ ರೇಡಿಯೋಗೆ ಕಾರ್ಯಕ್ರಮ ಕೊಡಲು ಹೋಗಿದ್ದೆ. ಅಲ್ಲಿನವರು ಯಾವುದನ್ನು ಹಾಡ್ತೀರಾ ಅಂದ್ರು. ನಾನು ಗಝಲ್ ಅಂದೆ. ಅದಕ್ಕವರು ಉಡಾಫೆಯಿಂದ ನಕ್ಕು, ಯಾವುದಾದರೂ ಲೈಟ್ ಮ್ಯೂಸಿಕ್ ಸಾಂಗ್ ಹಾಡಿ ಹೋಗಿ ಎಂದು ಗೇಲಿ ಮಾಡಿ, ‘ಸಾಲಾ ಮದ್ರಾಸಿ’ ಎಂದು ಗೊಣಗುತ್ತಾ ಹೋದರು. ನನಗೆ ಸಿಟ್ಟು ಬಂತು, ನಾನು ಬಿಡದೆ ಗಝಲನ್ನೇ ಹಾಡಿದೆ. ಹಾಡಿದ ಮೇಲೆ ಗೇಲಿ ಮಾಡಿದ್ದವರೇ ಬಂದು ಕೈ ಕೊಟ್ಟು ಶಹಬ್ಬಾಸ್ ಎಂದು ಹೊಗಳಿ, ಕ್ಷಮೆ ಕೇಳಿದರು...’’

ಪಿ.ಬಿ. ಶ್ರೀನಿವಾಸ್ ಎಂದರೆ ಈಗ ಮೈಸೂರು ಜರಿಪೇಟದಿಂದ ಗುರುತಿಸಬಹುದು. ಆದರೆ ಆಗ? ಅವರ ಜನಪ್ರಿಯತೆಯ ಜೋರಿನ ಕಾಲದಲ್ಲಿ... ಟೋಪಿ, ಉಣ್ಣೆ ಟೋಪಿ. ‘‘ಅಪ್ಪತೀರಿದ ಬಳಿಕ ಟೋಪಿ ಬಳಸಲು ಶುರು ಮಾಡಿದೆ. ಅದಿಲ್ಲದೆ ನನ್ನನ್ನು ಗುರುತಿಸುವುದೇ ಅಸಾಧ್ಯವಾಯಿತು. ಯಾವಾಗಲೂ ಟೋಪಿ ಹಾಕುವುದನ್ನು ನೋಡಿ ಕೆಲವರು, ಅದರಲ್ಲೂ ಹಿಂದಿ ಚಿತ್ರರಂಗದವರು ಟೋಪಿವಾಲಾ ಎನ್ನುತ್ತಿದ್ದರು. ಕಪ್ಪು-ಬಿಳುಪು ಟೋಪಿ, ಆರ್ಡರ್ ಕೊಟ್ಟು ಮಾಡಿಸುತ್ತಿದ್ದೆ...’’ ಎಂದ ಪಿಬಿಎಸ್‌ಗೆ ಯಾರೋ ‘ಬಬ್ರುವಾಹನ ಚಿತ್ರದ ‘ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ..’ ಹಾಡನ್ನು ನೆನಪಿಸಿದರು.

‘‘ಮಗನಿಗೆ ಅವರು ಹಾಡಿಕೊಂಡ್ರು, ಅಪ್ಪನಿಗೆ ನಾನು ಹಾಡಿದೆ’’ ಎಂದು ಎಲ್ಲರನ್ನೂ ಚಿಂತನೆಗೆ ಹಚ್ಚಿದರು. ಹಾಗೆ ನೋಡಿದರೆ, ರಾಜಕುಮಾರ್ ನಾಯಕನಟರಾಗಿ ಪ್ರವರ್ಧಮಾನಕ್ಕೆ ಬರುತ್ತಿದ್ದ ಕಾಲದಲ್ಲಿ, ಅವರ ಧ್ವನಿಗೆ ಸರಿಸಮನಾಗಿ ಹೊಂದಿಕೊಂಡದ್ದು, ಅದೇ ರಾಜ್‌ರ ದನಿಯಾಗಿಹೋದದ್ದು, ಅಣ್ಣಾವ್ರ ಶರೀರ-ಪಿಬಿಎಸ್‌ರ ಶಾರೀರ ಎನ್ನುವುದು ಪ್ರಚಾರ ಪಡೆದದ್ದು... ಸಹಜ ಸುಂದರ. ಅವರ ನಟನೆ, ಇವರ ಗಾಯನ ಎರಡೂ ಒಟ್ಟೊಟ್ಟಿಗೆ ಒಂದರೊಳಗೊಂದು ಇಷ್ಟು ಕರಾರುವಾಕ್ಕಾಗಿ ಕಲೆತಿದ್ದು- ಕನ್ನಡ ಚಿತ್ರರಂಗದ ಮಟ್ಟಿಗೆ ಮತ್ತೊಂದು ಉದಾಹರಣೆಯಿಲ್ಲ.

ರಾಜ್ ಎಂದರೆ ಕನ್ನಡ ಎಂಬುದು ಜನಜನಿತ. ಅಂತಹ ಜನಜನಿತ ವ್ಯಕ್ತಿತ್ವದ ಒಂದು ಭಾಗವೇ ಆಗಿದ್ದ ಪಿಬಿಎಸ್‌ರವರದು ನಿಜಕ್ಕೂ ಅಪ್ಪಟ ಕನ್ನಡ ಕಂಠ. ಕನ್ನಡ ಸಂಸ್ಕೃತಿಯ ಪ್ರಾತಿನಿಧಿಕ ಕಂಠ.

ರಾಜ್ ಬಗ್ಗೆ ನೆನದಾಗಲೆಲ್ಲ ಕಣ್ತುಂಬಿಕೊಳ್ಳುತ್ತಿದ್ದ ಎಂಬತ್ತರ(ಸೆಪ್ಟಂಬರ್ 2010ಕ್ಕೆ) ವಯೋವೃದ್ಧ ಪಿಬಿಎಸ್, ‘‘ಅವರು ತೀರಿಕೊಂಡಾಗ ನಾನು ಮದ್ರಾಸಿನಲ್ಲಿದ್ದೆ. ವಿಷಯ ತಿಳಿದ ತಕ್ಷಣ ವಿಮಾನ ಹತ್ತಿ ಓಡೋಡಿ ಬಂದೆ, ಆ ನನ್ನ ಶರೀರದ ಅಂತಿಮ ದರ್ಶನ ಪಡೆಯೋಣ ಅಂತ. ಆದರೆ ಬೆಂಗಳೂರು ಪ್ರಕ್ಷುಬ್ಧಗೊಂಡಿತ್ತು. ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು, ಆತಂಕ, ದುಃಖ, ನೋವು, ಸಂಕಟಗಳಿಂದಲೇ ಪೊಲೀಸ್ ಸ್ಟೇಷನ್‌ಗೆ ಹೋಗಿ, ‘ನಾನು ಪಿ.ಬಿ. ಶ್ರೀನಿವಾಸ್ ಅಂತ, ಅವರ ಅಂತಿಮ ದರ್ಶನ ಪಡೀಬೇಕು, ಏನಾದ್ರು ವ್ಯವಸ್ಥೆ ಮಾಡಿ’ ಅಂತ ಬೇಡಿಕೊಂಡೆ. ಅವರು ತಕ್ಷಣ ವಾಹನ ವ್ಯವಸ್ಥೆ ಮಾಡಿ ಮಣ್ಣು ಮಾಡುವ ಸ್ಥಳಕ್ಕೆ ಕರೆದುಕೊಂಡುಹೋದರು. ಆದರೆ ಮುಖ ಮಾತ್ರ ಸಿಗಲಿಲ್ಲ. ಆ ಕೊರಗು ಹಾಗೆಯೇ ಉಳಿದಿದೆ...’’ ಎಂದು ಕಣ್ಣಲ್ಲಿ ನೀರು ತುಂಬಿಕೊಂಡರು. ನೆರೆದಿದ್ದವರನ್ನು ನೆನಪಿನ ಮಳೆಯಲ್ಲಿ ತೋಯಿಸಿದರು. ಅವತ್ತಿನ ಆ ಕಾರ್ಯಕ್ರಮವನ್ನು ನೆನಪಿನಲ್ಲಿ ಉಳಿಯುವಂತೆ ಮಾಡಿದರು.

Writer - ಬಸವರಾಜು ಮೇಗಲಕೇರಿ

contributor

Editor - ಬಸವರಾಜು ಮೇಗಲಕೇರಿ

contributor

Similar News