×
Ad

ಬಿಜೆಪಿ ಸರಕಾರದ ವಿರುದ್ಧ ಕಟ್ಟಡ ಕಾರ್ಮಿಕರಿಂದ ಪ್ರತಿಭಟನೆ

Update: 2022-09-22 19:49 IST

ಉಡುಪಿ, ಸೆ.22: ಸರಕಾರಿ ಮನೆ ಯೋಜನೆಗೆ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ನಿಧಿ ಬಳಸಲು ಹೊಂಚು ಹಾಕಿರುವ ಬಿಜೆಪಿ ಸರಕಾರದ ಸಚಿವರು ಮತ್ತು ಶಾಸಕರ ವಿರುದ್ಧ ಮತ್ತು ಕಡಿಮೆ ಬೆಲೆಯಲ್ಲಿ ಮರಳು ಪೂರೈಕೆಗೆ ಆಗ್ರಹಿಸಿ ಉಡುಪಿ ಜಿಲ್ಲಾ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಗುರುವಾರ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳ ಲಾಗಿತ್ತು.

ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದ ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಕೊಳಚೆ ನಿರ್ಮೂಲನೆ ಮಂಡಳಿ ಸೇರಿ ಇತರೆ ವಸತಿ ಯೋಜನೆಗಳ ಫಲಾನುಭವಿಗಳನ್ನು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಗೆ ಫಲಾನುಭವಿಗಳನ್ನಾಗಿ ನೋಂದಾಯಿಸುವ ಕ್ರಮವನ್ನು ಕೂಡಲೇ ಕೈಬಿಡಬೇಕು. ಈಗಾಗಲೇ ಕೊಳಚೆ ನಿರ್ಮೂಲನೆ ಮಂಡಳಿಗೆ ಪಾವತಿಸಲಾದ ೭೬ಕೋಟಿ ಹಣವನ್ನು ಕೂಡಲೇ ಮಂಡಳಿ ಖಾತೆಗೆ ವಾಪಾಸ್ಸು ಪಡೆಯಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಎಲ್ಲ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಹಾಗೂ ಕುಟುಂಬದವರಿಗೆ ರಾಜ್ಯ ಸರಕಾರದ ಆರೋಗ್ಯ ಸಂಜೀವಿನಿ ನಗದು ರಹಿತ ಸೇವೆಯನ್ನು ಕೂಡಲೇ ಜಾರಿಗೊಳಿಸಬೇಕು. ಎಸ್‌ಎಸ್‌ಪಿ ಪೋರ್ಟಲ್‌ನಲ್ಲಿ ಸಲ್ಲಿಸಿ ಬಾಕಿ ಇರುವ ೬೦ ಸಾವಿರ ಅರ್ಜಿಗಳನ್ನು ಕೂಡಲೇ ಇತ್ಯರ್ಥಪಡಿಸಿ ಹಣ ಜಮಾ ಮಾಡಬೇಕು. ಕಲ್ಯಾಣ ಮಂಡಳಿಯಲ್ಲ್ ನೈಜ್ಯ ಕಾರ್ಮಿಕರಿಗೆ ಪ್ರಾತಿನಿಧ್ಯ ಸಿಗಬೇಕು. ಕಾರ್ಮಿಕಸ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಅವರು ಆಗ್ರಹಿಸಿದರು.

ಕರಾವಳಿ ಜಿಲ್ಲೆಯಲ್ಲಿ ಮರಳು ಸಮಸ್ಯೆ ಮತ್ತಷ್ಟು ಬಿಗಡಾಯಿಸಿದ್ದು, ಸ್ಥಳೀಯ ವಾಗಿ ಅತೀ ಕಡಿಮೆ ವೆಚ್ಚದಲ್ಲಿ ಮರಳು ಸಿಗುವಂತೆ ಮಾಡಿದರೆ ಬಡವರಿಗೆ ಕಟ್ಟಡ ಕಟ್ಟಲು ಅತೀ ಕಡಿಮೆ ವೆಚ್ಚದಲ್ಲಿ ಸಾಧ್ಯವಾಗುತ್ತದೆ. ಇದರಿಂದ ಜಿಲ್ಲೆಯ ಆದಾಯ ಹೆಚ್ಚಿ ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳುತ್ತದೆ. ಆದುದರಿಂದ ಜಿಲ್ಲೆಯಲ್ಲಿ ಕಡಿಮೆ ದರದಲ್ಲಿ ಮರಳು ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಬಳಿಕ ಈ ಕುರಿತ ಮನವಿಯನ್ನು ಜಿಲ್ಲಾಧಿಕಾರಿ ಮೂಲಕ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಕಾರ್ಯದಶಿಗೆ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಉಡುಪಿ ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಶೇಖರ್ ಬಂಗೇರ, ಖಜಾಂಚಿ ಶಶಿಧರ್ ಗೊಲ್ಲ, ಮುಖಂಡರಾದ ರಾಮ ಕರ್ಕಡ, ಸುಭಾಶ್ ನಾಯ್ಕ್, ರಾಮ ಸಾಲ್ಯಾನ್, ವಾಮನ ಅಮೀನ್, ಗಣೇಶ್ ನಾಯ್ಕ್, ಶಶಿಕಲಾ, ಪ್ರತಿಮಾ, ಸೈಯ್ಯದ್ ಮೊದಲಾದವರು ಉಪಸ್ಥಿತರಿದ್ದರು.

ಕುಂದಾಪುರದಲ್ಲೂ ಕಟ್ಟಡ ಕಾರ್ಮಿಕರಿಂದ ಧರಣಿ

ಕುಂದಾಪುರ ತಾಲೂಕು ಕಚೇರಿಯ ಮುಂದೆಯೂ ಕುಂದಾಪುರ ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ನೇತೃತ್ವದಲ್ಲಿ ನೈಜ ಕಟ್ಟಡ ಕಾರ್ಮಿಕರು ಧರಣಿ ನಡೆಸಿದರು.

ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಾತನಾಡಿದರು. ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎಚ್.ನರಸಿಂಹ, ತಾಲೂಕು ಸಂಚಾಲಕ ಚಂದ್ರಶೇಖರ ವಿ., ಕಟ್ಟಡ ಕಾರ್ಮಿಕರ ಸಂಘದ ಉಪಾಧ್ಯಕ್ಷ ಚಿಕ್ಕ ಮೊಗವೀರ, ಸಂತೋಷ ಹೆಮ್ಮಾಡಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News