ಎಮ್ ಆರ್ ಪಿಎಲ್ ವಿರುದ್ಧ ಹೋರಾಟ ತೀವ್ರಗೊಳಿಸಲು ಸಮಿತಿ ಸಭೆ ತೀರ್ಮಾನ

Update: 2022-09-22 14:36 GMT

ಬಜ್ಪೆ, ಸೆ.22:  ಎಮ್ಆರ್ ಪಿಎಲ್ ಮೂರನೇ ಹಂತದ ಕೋಕ್, ಸಲ್ಫರ್ ಘಟಕದ ನೇರ ಸಂತ್ರಸ್ತರಾಗಿರುವ ಜೋಕಟ್ಟೆ ಗ್ರಾಮಸ್ಥರ ಸಭೆಯು ನಾಗರಿಕ ಹೋರಾಟ ಸಮಿತಿ, ಜೋಕಟ್ಟೆ ಇದರ ನೇತೃತ್ವದಲ್ಲಿ ಬುಧವಾರ ಜೋಕಟ್ಟೆಯಲ್ಲಿ ನಡೆಯಿತು.

27 ಎಕರೆ ಭೂಸ್ವಾಧೀನ ಪಡಿಸಿ ಹಸಿರು ವಲಯ ನಿರ್ಮಿಸುವ ಸರಕಾರದ ಆದೇಶ ಜಾರಿಗೆ ತರಲು ಎಮ್ಆರ್ ಪಿಎಲ್ ಆಡಳಿತ ಅಸಹಕಾರ ತೋರುತ್ತಿರುವ ಕುರಿತು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಎಮ್ಆರ್ ಪಿಎಲ್ ಆಡಳಿತ ನಿರ್ದೇಶಕ ವೆಂಕಟೇಶ್ ಅವರು ಹಸಿರು ವಲಯ ನಿರ್ಮಾಣ ಆದೇಶದಲ್ಲಿ ಜಿಲ್ಲಾಡಳಿತದ ದಿಕ್ಕು ತಪ್ಪಿಸಲು ಯತ್ನಿಸುತ್ತಿದ್ದಾರೆ ಎಂದು  ಗ್ರಾಮಸ್ಥರು‌‌ ಸಭೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಅಲ್ಲದೆ, ಪರಿಸರ ಮಾಲಿನ್ಯದ ಪರಿಣಾಮ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕುರಿತು ಚರ್ಚೆ ನಡೆಯಿತು.

ಇತ್ತೀಚೆಗೆ ನಡೆಸಿದ ಹೋರಾಟದ ಬೇಡಿಕೆಗಳನ್ನು ಈಡೇರಿಸದೆ, ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಯ ವರ್ಗಾವಣೆ ನಡೆಸಿರುವುದು ಕಣ್ಣೊರೆಸುವ ತಂತ್ರ. ಹೋರಾಟವನ್ನು ತೀವ್ರಗೊಳಿಸುವ ಮೂಲಕ ಪರಿಹಾರ ಕ್ರಮಕ್ಕಾಗಿ ಸರಕಾರ ಹಾಗೂ ಸ್ಥಳೀಯ ಶಾಸಕ, ಸಂಸದರ ಮೇಲೆ ಒತ್ತಡವ‌ನ್ನು ತೀವ್ರಗೊಳಿಸಬೇಕು‌ ಎಂದು ಸಭೆ ಒಕ್ಕೊರಲ ಅಭಿಪ್ರಾಯ ವ್ಯಕ್ತಪಡಿಸಿತು.

ಅಕ್ಟೋಬರ್ ತಿಂಗಳಲ್ಲಿ ಎಮ್ ಆರ್ ಪಿ ಎಲ್ ಧ್ವಾರದ ಮುಂದೆ ಚಿಮಿಣಿ ದೀಪ ಪ್ರದರ್ಶನ, ಎಮ್ ಆರ್ ಪಿ ಎಲ್ ಮುಂಭಾಗ ಹಗಲು ರಾತ್ರಿ ಧರಣಿ, ಮೂಡಬಿದ್ರೆಯಲ್ಲಿ ಸ್ಥಳೀಯ ಶಾಸಕ ಉಮಾನಾಥ ಕೋಟ್ಯಾನ್ ಕಚೇರಿ ಮುಂಭಾಗ ಧರಣಿ ಹೀಗೆ ಮೂರು ಹಂತದ ಪ್ರತಿಭಟನೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಡಿವೈಎಫ್ಐ ರಾಜ್ಯಾಧ್ಯಕ್ಷ ಮು‌ನೀರ್ ಕಾಟಿಪಳ್ಳ, ಹೋರಾಟ ಸಮಿತಿಯ ಪ್ರಮುಖರಾದ ಪಂಚಾಯತ್ ಸದಸ್ಯ ಅಬೂಬಕ್ಕರ್ ಬಾವ, ಮನೋಜ್ ಜೋಕಟ್ಟೆ, ಶೇಖರ್ ನಿರ್ಮುಂಜೆ, ಹನೀಫ್, ಇಕ್ಬಾಲ್ ಜೋಕಟ್ಟೆ, ಲಾನ್ಸಿ ಡಿಸೋಜ, ರಾಜು ಜೋಕಟ್ಟೆ, ಪ್ರಶಾಂತ್ ಶೆಟ್ಟಿ, ಐತಪ್ಪ, ಚಂದ್ರಶೇಖರ ಜೋಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News