×
Ad

ನಗರಸಭೆಯ ಪೌರಕಾರ್ಮಿಕರಿಗೂ ಹುದ್ದೆಯಲ್ಲಿ ಬಡ್ತಿ: ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್

Update: 2022-09-23 19:18 IST

ಉಡುಪಿ, ಸೆ.23: ಉಡುಪಿ ನಗರಸಭೆಯಲ್ಲಿ ಪೌರಕಾರ್ಮಿಕರಿಗೂ ಹುದ್ದೆಯಲ್ಲಿ ಬಡ್ತಿ ನೀಡುವ ಕಾರ್ಯಕ್ರಮವನ್ನು ಈ ವರ್ಷದಿಂದ ಜಾರಿಗೊಳಿಸಿದ್ದು, ಕೆಲವರನ್ನು ‘ಡಿ’ ಗ್ರೂಪ್ ನೌಕರರಾಗಿ ನೇಮಕ ಮಾಡಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ.ಹೇಳಿದ್ದಾರೆ.

ಉಡುಪಿ ನಗರಸಭೆಯ ವತಿಯಿಂದ ನಗರದ ಅಜ್ಜರಕಾಡಿನ ಪುರಭವನದಲ್ಲಿ ಆಯೋಜಿಸಲಾಗಿದ್ದ ‘ಪೌರಕಾರ್ಮಿಕರ ದಿನಾಚರಣೆ-2022’ನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ನಗರಸ್ಥಳೀಯ ಸಂಸ್ಥೆಗಳಲ್ಲಿ ಇದುವರೆಗೆ ಪೌರಕಾರ್ಮಿಕನಾಗಿ ಸೇರಿದವನು ಪೌರ ಕಾರ್ಮಿಕನಾಗಿಯೇ ನಿವೃತ್ತಿ ಹೊಂದಬೇಕಿತ್ತು. ಆದರೆ ಉಡುಪಿ ನಗರಸಭೆ ಯಲ್ಲಿ ಅವರ ಸೇವಾ ವೃತ್ತಿಪರತೆ, ಅರ್ಹತೆಯನ್ನು ಪರಿಗಣಿಸಿ ಸ್ಯಾನಿಟರಿ ಸೂಪರ್‌ ವೈಸರ್, ಬಿಲ್ ಕಲೆಕ್ಟರ್ ಸೇರಿದಂತೆ ‘ಡಿ’ ಗ್ರೂಪ್ ಹುದ್ದೆಗೆ ಬಡ್ತಿ ನೀಡಲು ನಿರ್ಧರಿಸಲಾಗಿದೆ ಎಂದವರು ಹೇಳಿದರು.

ಪ್ರದಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಉಡುಪಿ ನಗರಸಭೆ ಹಾಗೂ ಇಲ್ಲಿನ ಸ್ವಚ್ಛತೆಯ ಇತಿಹಾಸದ ಕುರಿತಂತೆ ಉಲ್ಲೇಖಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದು ಉಡುಪಿಯ ಪೌರಕಾರ್ಮಿಕರಿಗೆ ಹೆಮ್ಮೆಯ ವಿಷಯ. ಸ್ವಚ್ಛತೆಗೆ ಸಂಬಂಧಿಸಿದಂತೆ ಉಡುಪಿ ನಗರಸಭೆಗೆ ಹಲವು ರಾಷ್ಟ್ರಮಟ್ಟದ ಪ್ರಶಸ್ತಿಗಳು ಬಂದಿವೆ. ಮೊನ್ನೆ ಮೊನ್ನೆ ಸ್ವಚ್ಛತೆಗೆ ರಾಜ್ಯದ ಇನ್ನೊವೇಷನ್ ಪ್ರಶಸ್ತಿಯನ್ನೂ ಉಡುಪಿ ಪಡೆದಿದೆ ಎಂದರು.

ಉಡುಪಿಯ ಸಾರ್ವಜನಿಕರು ನಮ್ಮ ಯೋಜನೆಗಳೊಂದಿಗೆ ಕೈಜೋಡಿಸುವಲ್ಲಿ ಪೌರಕಾರ್ಮಿಕರ ಪಾತ್ರ ದೊಡ್ಡದು. ಸ್ವಚ್ಛತೆಗೆ ಸಂಬಂಧಪಟ್ಟಂತೆ ನಗರದ ಕಸ ವಿಲೇವಾರಿ ಘಟಕವನ್ನು ಸರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡುವ ಅಗತ್ಯವಿದೆ ಎಂದು ಕೂರ್ಮಾರಾವ್ ತಿಳಿಸಿದರು.

ನಗರಸಭಾ ಅಧ್ಯಕ್ಷೆ ಸುಮಿತ್ರಾ ಆರ್.ನಾಯಕ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ ಸಾಲ್ಯಾನ್, ಸ್ಥಾಯಿ ಸಮಿತಿಯ ಅಧ್ಯಕ್ಷ ಡಿ.ಬಾಲಕೃಷ್ಣ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷ ಗಿರೀಶ್ ಕಾಂಚನ್, ನಗರಸಭೆಯ ಪರಿಸರ ಇಂಜಿನಿಯರ್ ಸ್ನೇಹಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪೌರಕಾರ್ಮಿಕ ದಿನಾಚರಣೆ ಪ್ರಯುಕ್ತ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು. ಪೌರಕಾರ್ಮಿಕರು  ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

ನಗರಸಭೆ ಪೌರಾಯುಕ್ತ ಡಾ.ಉದಯ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿ, ಪೌರಕಾರ್ಮಿಕರಿಂದಲೇ ನಗರಸಭೆಯನ್ನು ಗುರುತಿಸಲಾಗುತ್ತದೆ. ನಗರವನ್ನು ಸ್ವಚ್ಛವಾಗಿರಿಸುವ ಮೂಲಕ ಅವರು ನಗರದ ರಾಯಭಾರಿಗಳಾಗಿದ್ದಾರೆ ಎಂದರು. ಆರೋಗ್ಯಾಧಿಕಾರಿ ಕರುಣಾಕರ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News