ಮುಂದುವರಿದ 'PAYCM' ಪೋಸ್ಟರ್ ಅಭಿಯಾನ: ಕಾಂಗ್ರೆಸ್ ನಾಯಕರು ವಶಕ್ಕೆ, ಸಿಎಂ ನಿವಾಸಕ್ಕೆ ಭದ್ರತೆ

Update: 2022-09-23 15:24 GMT

ಬೆಂಗಳೂರು, ಸೆ.23: ರಾಜ್ಯ ಬಿಜೆಪಿ ಸರಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಆರೋಪಿ ‘ಪೇ ಸಿಎಂ’ ಕ್ಯೂಆರ್ ಕೋಡ್ ಪೋಸ್ಟರ್ ಅಂಟಿಸುವ ಅಭಿಯಾನ ಮುಂದುವರೆಸಿದ ಕಾಂಗ್ರೆಸ್ ನಾಯಕರನ್ನು ಪೊಲೀಸರು ವಶಕ್ಕೆ ಪಡೆದರು.

ಶುಕ್ರವಾರ ಇಲ್ಲಿನ ರೇಸ್‍ಕೋರ್ಸ್ ರಸ್ತೆಯಲ್ಲಿ ಜಮಾಯಿಸಿದ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಪರಿಷತ್ತಿನ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್, ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಶಾಸಕರಾದ ಪ್ರಿಯಾಂಕ್ ಖರ್ಗೆ ಸೇರಿದಂತೆ ಹಲವು ನಾಯಕರು ‘ಪೇ ಸಿಎಂ’ ಕ್ಯೂಆರ್ ಕೋಡ್ ಪೋಸ್ಟರ್ ಅಂಟಿಸಿದರು.

ಈ ವೇಳೆ ಮಧ್ಯಪ್ರವೇಶಿಸಿದ ಪೊಲೀಸರು ಪೋಸ್ಟರ್ ಗಳನ್ನು ತೆಗೆದು, ಕಾಂಗ್ರೆಸ್ ನಾಯಕರನ್ನು ವಶಕ್ಕೆ ಪಡೆದು ವಾಹನದಲ್ಲಿ ಇಲ್ಲಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ಕರೆದೊಯ್ದರು.

ಈ ವೇಳೆ ಪ್ರತಿಕ್ರಿಯಿಸಿದ ಸುರ್ಜೆವಾಲಾ, ಶೇ.40ರಷ್ಟು ಕಮಿಷನ್ ಸರಕಾರವು ಎಷ್ಟು ವಿಚಲಿತವಾಗಿಯೆಂದರೆ ಕರ್ನಾಟಕ ಪೊಲೀಸರಿಗೆ ಕಾನೂನು ಸುವ್ಯವಸ್ಥೆ ಕಾಪಾಡುವ ಬದಲು ಪೋಸ್ಟರ್ ಹರಿದು ವಿರೋಧ ಪಕ್ಷದ ನಾಯಕರನ್ನು ಬಂಧಿಸುವ ಕೆಲಸ ನೀಡಿದೆ ಎಂದು ಟೀಕಿಸಿದರು.

ಭದ್ರತೆ: ಕಾಂಗ್ರೆಸ್‍ನಿಂದ ಪೇಸಿಎಂ ಪೋಸ್ಟರ್ ಅಂಟಿಸುವ ಅಭಿಯಾನದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸರಕಾರಿ ನಿವಾಸ ಮತ್ತು ಕಚೇರಿಗೆ ಹೆಚ್ಚಿನ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. 

ರೇಸ್‍ಕೋರ್ಸ್ ರಸ್ತೆಯಲ್ಲಿರುವ ಮುಖ್ಯಮಂತ್ರಿ ನಿವಾಸ ರೇಸ್ ವ್ಯೂ ಕಾಟೇಜ್ ಎದುರು ಹೆಚ್ಚು ಭದ್ರತೆ ಕಲ್ಪಿಸಲಾಗಿದ್ದು, ಯಾವುದೇ ರೀತಿಯಲ್ಲಿಯೂ ಪೋಸ್ಟರ್ ಅಂಟಿಸುವ ಚಟುವಟಿಕೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಅದೇರೀತಿ, ಸಿಎಂ ಗೃಹ ಕಚೇರಿ ಕೃಷ್ಣಾ ಬಳಿಯೂ ಕಟ್ಟೆಚ್ಚರ ವಹಿಸಿದ್ದು, ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. 

Full View Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News