ದ.ಕ.ಜಿಲ್ಲೆ: ಬಂಧಿತ ಪಿಎಫ್‌ಐ ನಾಯಕರಿಗೆ ಪೊಲೀಸ್ ಕಸ್ಟಡಿ

Update: 2022-09-23 15:56 GMT

ಮಂಗಳೂರು, ಸೆ. 23: ನಿಷೇಧಿತ ಉಗ್ರ ಸಂಘಟನೆಗಳ ಚಟುವಟಿಕೆಗಳಿಗೆ ನೆರವು ನೀಡುತ್ತಿದ್ದ ಆರೋಪದ ಮೇರೆಗೆ ಗುರುವಾರ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಮತ್ತು ಕರ್ನಾಟಕ ಪೊಲೀಸ್ ತಂಡದಿಂದ ಬಂಧಿಸಲ್ಪಟ್ಟ ದ.ಕ.ಜಿಲ್ಲೆಯ ಐವರು ಪಿಎಫ್‌ಐ ನಾಯಕರನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ಕಸ್ಟಡಿಗೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಬೆಂಗಳೂರಿನ ಕೆ.ಜಿ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಸೆ.22ರಂದು ಪ್ರತ್ಯೇಕ ಪ್ರಕರಣ ದಾಖಲಿಸಿದ್ದ ಪೊಲೀಸರು ದ.ಕ.ಜಿಲ್ಲೆಯ ವಿವಿಧ ಕಡೆ ಗುರುವಾರ ಮುಂಜಾವ ಕಾರ್ಯಾಚರಣೆ ನಡೆಸಿದ್ದರು. ಅಲ್ಲದೆ ಪಿಎಫ್‌ಐ ಮುಖಂಡರಾದ ಸಾಮೆತ್ತಡ್ಕದ ಅಬ್ದುಲ್ ಖಾದರ್, ಬೋಳಂತೂರಿನ ಮುಹಮ್ಮದ್ ತಪ್ಶಿರ್, ಜೋಕಟ್ಟೆಯ ಎ.ಕೆ.ಅಶ್ರಫ್, ಕಾವೂರಿನ ನವಾಝ್, ಹಳೆಯಂಗಡಿಯ ಮೊಯ್ದಿನ್‌ರನ್ನು ವಶಕ್ಕೆ ಪಡೆದುಕೊಂಡಿದ್ದರು. ಈ ಐವರನ್ನೂ ಮಂಗಳೂರಿನಲ್ಲಿ ವೈದ್ಯಕೀಯ ತಪಾಸಣೆ ನಡೆಸಿದ ಪೊಲೀಸರು ಗುರುವಾರ ರಾತ್ರಿಯೇ ಬೆಂಗಳೂರಿಗೆ ಕರೆದೊಯ್ದಿದ್ದಾರೆ.

ಶುಕ್ರವಾರ ಬೆಂಗಳೂರಿನಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ ಮತ್ತೆ ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News